ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗಧಾದರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||
ಸರ್ವಪ್ರಹರಣಾಯುಧಃ ಓಂ ನಮಃ ಇತಿಃ||
೯೯೪) ಶಂಖಭೃತ್
ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯಲ್ಲಿ, ಮನೆಯ ಮೂಲೆ-ಮೂಲೆಯಿಂದ, ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದಕ್ಕೆ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ ಇದೆ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಇದೇ ಕಾರಣಕ್ಕಾಗಿ ದೇವಸ್ಥಾನಗಳಲ್ಲಿ ಘಂಟಾನಾದವನ್ನು ಮಾಡುತ್ತಾರೆ. ಘಂಟೆಯನ್ನು ನಿಧಾನವಾಗಿ ಓಂ.ಽಽ..ಓಂ ಎನ್ನುವ ನಾದ ಬರುವಂತೆ ಮೆಲ್ಲಗೆ ಹೊಡೆಯಬೇಕು, ಶಂಖವನ್ನು ಓ..ಽಽ..ಮ್ ಎನ್ನುವಂತೆ ನಾದ ಮಾಡಬೇಕು ಹಾಗೂ ಯುದ್ಧರಂಗದಲ್ಲಿ ಶಂಖನಾದ ಎದುರಿನ ಸೈನ್ಯಕ್ಕೆ ಸಿದ್ಧತೆಯ ಸಂಕೇತ ಹಾಗು ತಮ್ಮ ಸೇನೆಗೆ ಸಿದ್ಧವಿರುವಂತೆ ಆಜ್ಞೆ. ಶಂಖದ ಅಭಿಮಾನಿ ದೇವತೆ ಲಕ್ಷ್ಮಿ. ಆಕೆ ಸಂಪತ್ತಿನ ದೇವತೆಯಾದ ವೇದಮಾನಿನಿ. ಈ ಕಾರಣಕ್ಕಾಗಿ ಶಂಖ 'ಅರ್ಥ'ದ ಸಂಕೇತ ಕೂಡಾ ಹೌದು. ಶಂಖವನ್ನು ತೊಟ್ಟ ಭಗವಂತ ಶಂಖಭೃತ್.
೯೯೫) ನಂದಕೀ
ನಂದಕ ಎನ್ನುವ ಖಡ್ಗವನ್ನು ಹಿಡಿದ ಭಗವಂತ ನಂದಕೀ. ಖಡ್ಗದ ಅಭಿಮಾನಿ ದೇವತೆ ರಮೆ(ಭೂ ಮಾತೆ). ನಂದಕ ಎಂದರೆ ಆನಂದ. ದುಷ್ಟ ಶಕ್ತಿಯನ್ನು ಸಂಹಾರ ಮಾಡಿ ನಮಗೆ ಆನಂದ ಕೊಡುವ ಖಡ್ಗ ಹಿಡಿದ ಭಗವಂತ ನಂದಕೀ.
೯೯೬) ಚಕ್ರೀ
ಅಧರ್ಮ ನಾಶಕ್ಕಾಗಿ, ಧರ್ಮ ಸಂಸ್ಥಾಪನೆಗಾಗಿ ಚಕ್ರ ಹಿಡಿದ ಭಗವಂತ ಚಕ್ರೀ. ಚಕ್ರ ಧರ್ಮದ ಸಂಕೇತ. ಚಕ್ರದ ಅಭಿಮಾನಿ ದೇವತೆ ದುರ್ಗೆ.
೯೯೭) ಶಾರ್ಙಧನ್ವಾ
ಶಾರ್ಙ್ಗವೆಂಬ ಬಿಲ್ಲನ್ನು ಹೊತ್ತ ಭಗವಂತ ಶಾರ್ಙ್ಗಧನ್ವಾ. ಬಿಲ್ಲಿನ ಅಭಿಮಾನಿ ದೇವತೆ ಬಲ ಸ್ವರೂಪಿ ಪ್ರಾಣದೇವರು. ಶಾರ್ಙ ಎಂದರೆ ತುತ್ತ ತುದಿ. ಆಯುದಗಳಲ್ಲೇ ಅತ್ಯಂತ ಹಿರಿದಾದ ಆಯುದ ಶಾರ್ಙ್ಗ.
೯೯೮) ಗದಾಧರಃ
ಸಂಯಮದ ಸಂಕೇತವಾದ ಗದೆಯನ್ನು ಧರಿಸಿದ ಭಗವಂತ ಗದಾಧರಃ. ಗದೆ ಸ್ವಚ್ಛಂದ ಕಾಮದ ನಿಯಂತ್ರಣದ ಸಂಕೇತ. ಗದೆಯ ಅಭಿಮಾನಿ ದೇವತೆ 'ಪ್ರಾಣ'.
೯೯೯) ರಥಾಂಗಪಾಣಿಃ
ಮಹಾಭಾರತ ಯುದ್ಧದಲ್ಲಿ ರಥದ ಗಾಲಿಯನ್ನು ಆಯುಧವಾಗಿ ಹಿಡಿದ ಭಗವಂತ ರಥಾಂಗಪಾಣಿಃ. ಇದು ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು ಭೀಷ್ಮ ಪಿತಾಮಹರ ನಡುವೆ ಯುದ್ಧ ಪ್ರಾರಂಭವಾದಾಗ ನಡೆದ ಒಂದು ಘಟನೆ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ ತನ್ನ ಎರಡೂ ಕೈಗಳನ್ನು ಜೋಡಿಸಿ ಹೀಗೆ ಹೇಳುತ್ತಾನೆ:
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ; ನೀನಲ್ಲದೆ ನಮಗೆ ಗತಿ ಇನ್ಯಾರು?" ಎನ್ನುತ್ತಾನೆ. ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ.
ರಥಾಂಗರು ಎಂದರೆ ಪಾಂಡವರು ಅಥವಾ ಧರ್ಮ ಯುದ್ಧ ಮಾಡುವವರು, ಅಂಥವರಿಗೆ 'ಆಣಿ' ಅಂದರೆ ಆಧಾರವಾಗಿ ನಿಲ್ಲುವ ಭಗವಂತ ರಥಾಂಗಪಾಣಿಃ.
೯೯೯) ಅಕ್ಷೋಭ್ಯಃ
ಯಾರೂ ಮಣಿಸಲಾಗದ, ಕಂಗೆಡಿಸಲಾಗದ, ಯಾವ ಸಂಧರ್ಭದಲ್ಲೂ ಎದೆಗೆಡದ, ಎಂದೂ ನಿರ್ದಾರ ಬದಲಿಸದ ಸರ್ವಸಮರ್ಥ ಭಗವಂತ ಅಕ್ಷೋಭ್ಯಃ.
೧೦೦೦) ಸರ್ವಪ್ರಹರಣಾಯುಧಃ
ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವಾಗಿ ತೊಟ್ಟ ಭಗವಂತ ಸರ್ವಪ್ರಹರಣಾಯುಧಃ.
|| ಸರ್ವಪ್ರಹರಣಾಯುಧೋಂ ನಮಃ ಇತಿ ||
ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವನ್ನಾಗಿ ತೊಟ್ಟವನೆ ಓಂಕಾರವಾಚ್ಯನಾದವನು ಎನ್ನುತ್ತ ಇದು ಅವನಿಗೆ ಅರ್ಪಿತವಾಗಿದೆ.
ಸರ್ವಪ್ರಹರಣಾಯುಧ: = ಎಲ್ಲ ಶಸ್ತ್ರಾಸ್ತ್ರವನ್ನು ಆಯುಧವಾಗಿ ತೊಟ್ಟವನು, ಓಂಕಾರವಾಚ್ಯ ಭಗವಂತ.
ಸರ್ವ + ಪ್ರಹರಣ (ಪ್ರ + ಹರಣ) + ಆಯುಧ = ಸರ್ವಪ್ರಹಣಾಯುಧ:.
ಸರ್ವ = ಸಮಗ್ರ, ಸಂಪೂರ್ಣ, ಎಲ್ಲಾ, ಇಡೀಯ, ಎಲ್ಲವನ್ನೂ, ಎಲ್ಲೆಡೆ, ಎಲ್ಲರೂ, ಪ್ರತೀ, ಒಟ್ಟಾರೆಯಾಗಿ, ಇತ್ಯಾದಿ.,
ಪ್ರಹರಣ = ಹೊಡೆತ, ಒಯ್ಯುವುದು, ಆಘಾತ, ಓಡಿಸಿಕೊಂಡು ಹೋಗುವುದು, ಏಟು, ಯುದ್ಧ, ಆಯುಧ, ಅಸ್ತ್ರ, ಶಸ್ತ್ರ ಒಗೆಯುವುದು, ಇತ್ಯಾದಿ.,
ಆಯುಧ = ಶಸ್ತ್ರ, ಅಸ್ತ್ರ, ಆಯುಧ, ಇತ್ಯಾದಿ.,
ಪ್ರ = ಶ್ರೇಷ್ಠತೆ, ಅತಿಶಯ, ಹೆಚ್ಚಿಗೆ, ಪ್ರಾಥಮ್ಯ, ಸ್ಪಷ್ಟತೆ, ಉತ್ಪತ್ತಿ, ಶಕ್ತಿ, ಪ್ರಕಾಶ, ನಿರ್ಮಲವಾಗಿರುವಿಕೆ, ಸ್ಪುಟವಾಗಿರುವಿಕೆ, ಸ್ವಚ್ಛತೆ, ಗತಿ, ಗಮನ, ಆರಂಭ, ಉಪಕ್ರಮ, ಉತ್ಕರ್ಷ, ಇತ್ಯಾದಿ.,
ಹರಣ = ನಾಶಪಡಿಸುವುದು, ಭಾಗಿಸುವುದು, ಹಿಡಿಯುವುದು, ಕಳ್ಳತನ, ಒಯ್ಯುವುದು, ಸಾಗಿಸುವುದು, ಭುಜ, ಹೆಗಲು, ಸ್ವೀಕಾರ, ಇತ್ಯಾದಿ.,
ಸಹಸ್ರನಾಮ ಸ್ತೋತ್ರದಲ್ಲಿ ಹೇಳಿರುವವುಗಳು ಮಾತ್ರ ಭಗವಂತನಿಗೆ ಇರುವ ಆಯುಧಗಳು ಎಂಬ ನಿಯಮವಿಲ್ಲ. ಪ್ರಹಾರ ಮಾಡುವ ಸಮಸ್ತ ಆಯುಧಗಳೂ ಭಗವಂತನಿಗೆ ಇವೆ. ಹುಲ್ಲುಕಡ್ಡಿಯೂ ಕೆಲವೊಮ್ಮೆ ಆಯುಧವಾಗುತ್ತದೆ. ಆದುದರಿಂದ ಭಗವಂತ "ಸರ್ವಪ್ರಹರಣಾಯುಧ:" ಎಂದು ಕರೆಯಲ್ಪಡುತ್ತಾನೆ.
ಭಗವಂತನು ಸತ್ಯಸಂಕಲ್ಪನಾದುದರಿಂದ ಸರ್ವೇಶ್ವರನು ಎಂಬುದನ್ನು ತೋರಿಸುವುದಕ್ಕಾಗಿ ಸ್ತೋತ್ರದ ಅಂತ್ಯದಲ್ಲಿ "ಸರ್ವಪ್ರಹರಣಾಯುಧ:" ಎಂದು ಹೇಳಿದೆ.
ಸರ್ವರೀತಿಯ ಧ್ವಂಸಕಾರಕವಾದ ಶಕ್ತಿಶಾಲಿ ಅಸ್ತ್ರ ಶಸ್ತ್ರ ಉಳ್ಳವನು ಭಗವಂತ. ಇದು ಎಲ್ಲವನ್ನೂ, ಎಲ್ಲ ಸಂದರ್ಭಗಳಲ್ಲೂ ಗೆಲ್ಲುವವನು ಎಂದು ಸೂಚಿಸುತ್ತದೆ. ಆದುದರಿಂದ ಭಗವಂತನನ್ನು "ಸರ್ವಪ್ರಹರಣಾಯುಧ:" ಎಂದು ಕರೆಯುತ್ತಾರೆ.
ತನ್ನಲ್ಲಿ ನಿಷ್ಠೆಯುಳ್ಳ ಭಕ್ತರ ಅನಿಷ್ಟಗಳನ್ನೂ ನಿರ್ಮೂಲನಗೊಳಿಸುವ ಅಸಂಖ್ಯಾತವೂ - ನಿಸ್ಸೀಮಶಕ್ತಿಯುತವೂ ಆದ ಸ್ವೋಚಿತವಾದ ಇತರ ದಿವ್ಯಾಯುಧಗಳೂ ಸದಾ ಸರ್ವಪ್ರದೇಶಗಳಲ್ಲಿಯೂ ಇರುವ ಭಗವಂತ "ಸರ್ವಪ್ರಹರಣಾಯುಧ:".
*"ಯಥೇಚ್ಛಯೈವ ಸರ್ವಂ ತು ಮನಸಾ ದೇಹತೋಪಿ ವಾ| ಕರ್ತುಂ ಶಕ್ತೋಪಿ ಚಾಸ್ತ್ರಾದ್ಯಾ ಲೀಲೈವಾನಂತಶಕ್ತಿನ:||"* ಅನಂತ ಶಕ್ತಿಸಂಪನ್ನನಾದ ಭಗವಂತನು ತನ್ನ ದೇಹದಿಂದಲೇ ಅಥವಾ ಮನಸ್ಸಿನಿಂದಲೇ ಎಲ್ಲವನ್ನೂ ತನ್ನ ಇಚ್ಛಾನುಗುಣವಾಗಿ ನಡೆಸಲು ಸಮರ್ಥನಾದರೂ ಲೀಲೆಯಿಂದಷ್ಟೇ ಅಸ್ತ್ರಶಸ್ತ್ರಾದಿಗಳನ್ನು ಧರಿಸುವನು. ಆದುದರಿಂದ ಭಗವಂತನನ್ನು "ಸರ್ವಪ್ರಹರಣಾಯುಧ:" ಎಂದು ಕರೆಯುತ್ತಾರೆ.
ಕಾಲ ಎನಿಸುವ ಭಗವಂತನು ನಡೆಸುವ ವಿಶ್ವದ ಸಂಹಾರದಲ್ಲಿ ರುದ್ರನು ನಿಮಿತ್ತಮಾತ್ರ - ಎಂದು ತಿಳಿಸುವ ಭಾಗವತದಿಂದ ರುದ್ರನು ಕಾಲಾಖ್ಯ ಭಗವಂತನ ಆಯುಧದಂತೆ ಇರುವನೆಂದು ಸೂಚಿತವಾಗುವುದು. ಆದುದರಿಂದ ಭಗವಂತನಿಗೆ "ಸರ್ವಪ್ರಹರಣಾಯುಧ:" ಎಂದು ಹೆಸರು.
ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವಾಗಿ ತೊಟ್ಟವನು;
ಪ್ರಹಾರ ಮಾಡಲು ಯೋಗ್ಯವಾಗಿರುವ ಸಮಸ್ತ ಆಯುಧಗಳೂ ಇರುವವನು;
ಓಂಕಾರ ವಾಚ್ಯನಾದವನು;
ಭಕ್ತರ ತೊಂದರೆಗಳನ್ನು ತನ್ನ ಆಯುಧಗಳ ಪ್ರಹಾರದಿಂದ ನಿವಾರಿಸುವವನು;
ಯಾವನ ಸಂಕಲ್ಪಮಾತ್ರದಿಂದ ದರ್ಭ, ಇಷೀಕ, ನಖ - ಇವೇ ಮುಂತಾದ ಯಾವುದೇ ಪದಾರ್ಥವು ಯಾರಿಗೆ ಆಯುಧವಾಗಬಹುದೋ - ಅವನು;
ಪೂರ್ಣನಾದ ತನ್ನಿಂದ ಕೂಡಿದ ಆಯುಧಗಳನ್ನು ಹೊಂದಿರುವವನು;
ಸರ್ವ ಎನಿಸುವ ದುರ್ಗಾದೇವಿ ಯಾರ ಚಕ್ರರೂಪದ ಆಯುಧವಾಗಿರುವಳೋ ಅಂತಹವನು;
ಸರ್ವ ಪಾಪಗಳನ್ನು ಪರಿಹರಿಸುವವನು;
ಸಕಲ ಅಸ್ತ್ರಶಸ್ತ್ರಗಳೂ ಯುದ್ಧ ಮಾಡಲು ಸಾಧನಗಳಾಗುವಂತೆ ಅನುಗ್ರಹಿಸುವವನು;
ರುದ್ರನು ಎಲ್ಲರ ಸಂಹಾರದಲ್ಲಿ ಯಾರ ಆಯುಧದಂತೆ ಇರುವನೋ ಅಂತಹವನು;
ಆದುದರಿಂದ ಭಗವಂತನಿಗೆ "ಸರ್ವಪ್ರಹರಣಾಯುಧ:" ಎಂದು ಹೆಸರು.
"ಪಾದಮೂಲಂ ಪ್ರಪನ್ನಾನಾಂ ಭಕ್ತಾನಾಂ ಚಾಪಿ ನಿತ್ಯಶ:| ಅಸಂಖ್ಯೇಯಾನ್ಯಮರ್ಯಾದ ಸಾಮರ್ಥ್ಯಾನ್ಯಾತ್ಮನ: ಸದಾ ಸರ್ವತ್ರ ಸರ್ವಥಾ ಸರ್ವಪ್ರಕಾರಾಶ್ರಿತ ರಕ್ಷಣೇ| ದೀಕ್ಷಿತಾನ್ಯುಚಿತಾನ್ಯನ್ಯಾನ್ಯನನ್ತಾನ್ಯಾಯುಧಾನಿ ಹಿ| ಯಸ್ಯ ಸನ್ತಿ ಸ ವೈ ನಿತ್ಯಂ ಸರ್ವಪ್ರಹರಣಾಯುಧ:| ದ್ವಾದಶಾರ್ಣೋ ಮಹಾಮಂತ್ರ: ಸರ್ವದು:ಖವಿನಾಶಕ:||".
"ಪ್ರಹರಂತ್ಯೇಭಿರಿತಿ ಪ್ರಹರಣಾನಿ ತಾದೃಶಾನಿ ಆಯುಧಾನಿ ಪ್ರಹರಣಾಯುಧಾನಿ| ಪೂರ್ಣತ್ವಾತ್ ಸರ್ವ: ಭಗವಾನ್ ತೇನ ಸಹಿತಾನಿ ಪ್ರಹರಣಾಯುಧಾನಿ ಯಸ್ಯ ಸ: ಸರ್ವಪ್ರಹರಣಾಯುಧ:||".
"ಸರ್ವಾಣಿ ಪ್ರಹರಣಾನಿ ಅಸ್ತ್ರಶಸ್ತ್ರಾಣಿ ಆಯುಧಾನಿ ಯುದ್ಧಸಾಧನಾನಿ ಯಸ್ಮಾತ್ ಸ: ಸರ್ವಪ್ರಹರನಾಯುಧ:||".
"ಸರ್ವ: ರುದ್ರ: ಪ್ರಹರಣೇ ಸರ್ವೇಷಾಂ ಸಂಹಾರೇ ಆಯುಧಮಿವ ಯಸ್ಯ ಸ: ಸರ್ವಪ್ರಹರಣಾಯುಧ:||".
*"ಓಂ ಸರ್ವಪ್ರಹರಣಾಯುಧಾಯ ನಮ:"* - ಎಂಬ ಈ ನಾಮಮಂತ್ರ ಜಪವ ಸರ್ವದು:ಖಗಳನ್ನೂ ವಿನಾಶಗೊಳಿಸುತ್ತದೆ.
*"ಸರ್ವಪ್ರಹರಣಾಯುಧ: ಓಂ ನಮ: ಇತಿ"*
ಎಲ್ಲಾ ಶಸ್ತ್ರಾಸ್ತ್ರಗಳನ್ನು ಆಯುಧವನ್ನಾಗಿ ತೊಟ್ಟವನೇ *"ಓಂ"* ಕಾರ ವಾಚ್ಯನಾದವನು ಎನ್ನುತ್ತ, ಈ "ಶ್ರೀವಿಷ್ಣುಸಹಸ್ರನಾಮ ಚಿಂತನೆ" ಕಾರ್ಯವು ಅವನಿಗೇ ಅರ್ಪಿತವಾಗಿದೆ.
******************
*||ಬೃಹತೀಸಹಸ್ರದಲ್ಲಿ*
*ಶ್ರೀವಿಷ್ಣುಸಹಸ್ರನಾಮ||*
*||ಓಂ ಸರ್ವಪ್ರಹಣಾಯುಧಾಯ ನಮ: ಓಂ||*
*ಓಂ ಯೂಯಂ ಪಾತ ಸ್ವಸ್ತಿಭಿ: ಸದಾ ನ:|| ಏಷ ಸ್ತೋಮೋ ಮಹ ಉಗ್ರಾಯ ವಾಹೇ ದುರೀವಾತ್ಯೋ ನ ವಾಜಯನ್ನಧಾಯಿ|| ಇಂದ್ರ ತ್ವಾಯಮರ್ಕ ಈಟ್ಟೇ ವಸೂನಾಂ ದಿವೀವ ಧ್ಯಾಮಧಿ: ನ ಶ್ರೋಮತಂ ಧಾ:||*
ತಾತ್ಪರ್ಯ:-
ಬೃಹತೀಸಹಸ್ರ ಪ್ರತಿಪಾದ್ಯನೇ, ನಿನ್ನ ಅನಂತರೂಪಗಳೆಲ್ಲವೂ ಜಗತ್ಕಲ್ಯಾಣಕ್ಕಾಗಿಯೇ ಮೀಸಲಾದವು. ನೀನು ಸುಖಗಳ ಪಾಲಿನಿಂದ ನಮ್ಮನ್ನು ಸದಾ ಸಂತೋಷಗೊಳಿಸುತ್ತಿರು. ನೀನು ಕೊಡುವುದರಲ್ಲಿ ಅನಂತಬಾಹು. ಕೊಡುವ ವಸ್ತೂ ಕೂಡ ಎಲ್ಲರ ನಡುವೆ ಎದ್ದುಕಾಣುವಷ್ಟು ಪೂರಾ ವಿಶೇಷವಾದುದು. ವೇಗವಾಗಿ ಓಡುವ ಇಂದ್ರನಿಗೆ ಕುದುರೆಯನ್ನು ಕೊಟ್ಟರೆ ನಿನ್ನ ಆಗಮನ ಇನ್ನೂ ಸರಾಗ. ಅದರಲ್ಲೂ ದಾನಿಯಾದ ನಿನಗೆ ಭಕ್ತರ ಮನೆಗೆ ಬರುವುದೇ ಸಂಭ್ರಮ. ಯುದ್ಧಕ್ಕೆ ಹೊರಡುವವನಿಗೆ ಕುದುರೆ ಸಿಕ್ಕರೆ ಜಯವೇ ಸಿಕ್ಕಷ್ಟು ಸಂತೋಷ. ಹಾಗೆಯೇ ದಾನಿಯಾದ ನಿನಗೆ ನಮ್ಮ ಸ್ತೋತ್ರವನ್ನು ಕಂಡಾಗ ಇನ್ನೂ ಸಂತೋಷ. ನಾವು ಸ್ತೋತ್ರ ಮಾಡಿಯಾಗಿದೆ. ಸಾಧನಾಧ್ಯಾಯ ಮುಗಿದಂತೆ. ಇನ್ನು ಫಲಾಧ್ಯಾಯ ನಿನ್ನಿಂದ ಪ್ರಾರಂಭವಾಗಬೇಕು. ಪೂಜಕನಾದ ನಾನು ವಾಸದ ಮನೆಗಳನ್ನು ಬೇಡುತ್ತೇನೆ. ನನ್ನನ್ನು ನಂಬಿದ ಕುಟುಂಬದವರಿಗೆ, ಶಿಷ್ಯರಿಗೆ ಸುಖವಾಗಿ ವಾಸಿಸುವಷ್ಟು, ಸಜ್ಜನರು ಸಮಾಧಾನದಿಂದ ಇರುವಷ್ಟು ವಾಸ ಮಾಡುವಂತೆ ಅನ್ನಾದಿಗಳೂ ಕೂಡ ನನಗೆ, ನನ್ನ ನಂಬಿದವರಿಗೆ, ಹಸಿದು ಹಾತೊರೆಯುವವರಿಗೆ, ಮಂಗಳವೆಂದು ಬಂದವರಿಗೂ ಅನಾಯಾಸವಾಗಿ ಅನ್ನವಾಗುವಷ್ಟು ನೀಡು. ಹರಿಯೇ, ನೀನು ಗಗನದಲ್ಲಿ ಸೂರ್ಯನನ್ನು ಎತ್ತರಕ್ಕೆ ಏರಿಸಿ, ಎಲ್ಲರೂ ನೋಡುವಂತೆ ಮಾಡಿಲ್ಲವೇ? ಹಾಗೆ ನನಗೂ ಸಹ ಎಲ್ಲರೂ ಗುರುತಿಸುವಂತೆ ಶ್ರವಣಾದಿ ಸಂಪತ್ತುಗಳನ್ನು, ಜ್ಞಾನಗಳನ್ನು ಕೊಟ್ಟಿರುವಿ, ಕೊಡುತ್ತಿರುವಿ.
*ನಾಮನಿರ್ವಚನ:-*
*"ಯೂಯಂ ಪಾತ ಸ್ವಸ್ತಿಭಿ: ಸದಾ ನ:"* ಸದಾ = ಎಂದೆಂದೂ, ನ: = ನಮ್ಮನ್ನು, ಸ್ವಸ್ತಿಭಿ: = ಮಂಗಳ ಪರಂಪರೆಯಿಂದ, ಯೂಯಂ = ನಿಮ್ಮ ಹಲವಾರು ರೂಪಗಳು, ಪಾತ = ಕಾಪಾಡಲಿ, ಎಂಬ ಈ ಮಂತ್ರಭಾಗವು, ಸರ್ವ = ಎಲ್ಲ ದುರ್ಜನರಿಂದ, ಪ್ರಹರಣ = ಹಣವನ್ನು ಕಿತ್ತು, ಆಯು: = ಜೀವನವನ್ನು ಸಹ ಭಕ್ತರಿಗೆ ಧ = ಧರಿಸುವುದರಿಂದ/ನೀಡುವುದರಿಂದ, ವಿಷ್ಣುವನ್ನು "ಸರ್ವಪ್ರಹರಣಾಯುಧ:" ಎಂದು ಸಾರಿದೆ. ಹರಿಯು ಸರ್ವಪ್ರಹರಣ = ಸಂಪತ್ತನ್ನು, ಆಯು = ಅದನ್ನು ಅನುಭವಿಸುವ ಆಯುಸ್ಸನ್ನು, ಧ = ಕೊಡುವುದರಿಂದ ವಿಷ್ಣುವಿಗೆ "ಸರ್ವಪ್ರಹರಣಾಯುಧ:" ಎಂಬ ಸೂಕ್ತನಾಮವಿದೆ. ಸರ್ವೇಭ್ಯೋಸುರೇಭ್ಯೋ ಧನಾಧಿಕಮಾಹೃತ್ಯ ಸರ್ವೇಭ್ಯೋ ಭಕ್ತೇಭ್ಯ: ಪ್ರಕರ್ಷೇಣ ದಾತುಂ ಆಹರತೀತಿ ಸರ್ವಪ್ರಹರಣ:, ಗಮ್ಯತೇ ಪ್ರಾಪ್ಯತೇ ಇತ್ಯಾಯುರ್ಜೀವನಮ್, ಆಯು: ಆಯುಷ್ಯಂ ಧತ್ತ ಇತ್ಯಾಯುಧ: ಸರ್ವಪ್ರಹರಣಶ್ಚಾಸಾವಾಯು ದಶ್ಚ
"ಸರ್ವಪ್ರಹರಣಾಯುಧ:" ಅತ್ರ ವರ್ಣಿತ:.
ಬೃಹತೀ ಸಹಸ್ರವು ಯಾಗಕ್ಕೆ ಸಂಬಂಧಿಸಿದ್ದು.
"ಯೇನ ಅಧೀತಂ ತಸ್ಯ ಇಷ್ಟಂ ಭವತಿ" ಅಧ್ಯಯನ ಮಾಡಿದವನಿಗೆ ಯಾಗ ಮಾಡಿದಷ್ಟೇ ಫಲವಿದೆ ಎಂದು ಅರ್ಥ.
ಹೀಗಾಗಿ ಶ್ರದ್ಧಾಭಕ್ತಿಗಳಿಂದ ಅಧ್ಯಯನ ಮಾಡಿದಾಗ ಅಪಾರ ಫಲ ನಿಶ್ಚಿತ.
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣು ಪ್ರೀತನಾಗಲಿ ಎಂದು ಆಶಿಸುತ್ತಾ, ಹರಿಸ್ಮರಣೆಯೊಂದಿಗೆ ಹಯಗ್ರೀವನಲ್ಲಿ ಸಮರ್ಪಿಸುತ್ತಿದ್ದೇವೆ.