ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋದುಂಬರೋsಶ್ಚತ್ಥಶ್ಚಾಣೂರಾಂಧ್ರನಿಷೂದನಃ || 88 ||
೮೨೨) ಸುಲಭಃ
ಭಗವಂತ ನಮ್ಮೊಳಗೇ ಇದ್ದಾನೆ, ಆತ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು ನಮ್ಮಲ್ಲಿ ಮೂಡಿದಾಗ ಭಗವಂತ ಭಕ್ತರಿಗೆ ಸುಲಭನಾಗುತ್ತಾನೆ. ಇದನ್ನು ಪ್ರಹಲ್ಲಾದ ನಮಗೆ ತೋರಿಸಿಕೊಟ್ಟಿದ್ದಾನೆ. ನಾವು ಪ್ರಹಲ್ಲಾದ-ದ್ರುವನಂತೆ ನಿಷ್ಕಲ್ಮಶವಾದ ಭಕ್ತಿಯಿಂದ ಮಗುವಿನಂತೆ ಭಗವಂತನನ್ನು ಭಜಿಸಿದರೆ ಆತ ಸುಲಭಃ.
೮೨೩) ಸುವ್ರತಃ.
ಭಕ್ತನ ರಕ್ಷಣೆಯೇ ಭಗವಂತನ ವ್ರತ. ರಾಮಾಯಣದಲ್ಲಿ ಶ್ರೀರಾಮ ಈ ರೀತಿ ಹೇಳಿದ್ದಾನೆ. "ನಾನು ನಿನ್ನವ, ನನ್ನನ್ನು ಕೈಬಿಡಬೇಡ ಎಂದು ಯಾರು ಒಂದು ಭಾರಿ ನನ್ನ ಹತ್ತಿರ ಭಕ್ತಿಯಿಂದ ಬೇಡಿಕೊಳ್ಳುತ್ತಾರೋ ಅಂತವರನ್ನು ಎಂದೂ ಕೈಬಿಡುವುದಿಲ್ಲ" ಇದು ಭಗವಂತನ ವ್ರತ. ಇದನ್ನೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಈ ರೀತಿ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||
ಅಂದರೆ "ಯಾವುದೋ ಬೇಡವಾದ ವಿಷಯ ಚಿಂತನೆ ಬಿಟ್ಟು, ನನ್ನನ್ನು ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು". ಈ ರೀತಿ ಯಾರು ಭಗವಂತನನ್ನು ನಂಬಿ ಬರುತ್ತಾರೋ ಆತ ಅಂತವರ ಕೈ ಎಂದೂ ಬಿಡಲಾರ. ಇದು ಅವನ ವ್ರತ. ಇಂತಹ ಸು-ವ್ರತವುಳ್ಳ ಭಗವಂತ ಸುವ್ರತಃ.
೮೨೪) ಸಿದ್ಧಃ
ನಾವು ಯಾವಾಗಲೂ ಶ್ರೀಮಂತರಾಗಬೇಕು, ಇಲ್ಲದ್ದನ್ನು ಪಡೆಯುಬೇಕು ಎನ್ನುವ ಬಯಕೆಯಲ್ಲಿ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಆದರೆ ನಮ್ಮೊಳಗೇ ಸಿದ್ಧನಾಗಿರುವ ಭಗವಂತನನ್ನು ಅರಿಯುವ ಪ್ರಯತ್ನ ಎಂದೂ ಮಾಡುವುದಿಲ್ಲ. ಭಗವಂತನನ್ನು ಸಾಧಿಸಬೇಕಾಗಿಲ್ಲ. ಆತ ನಮ್ಮೊಳಗೇ ಸದಾ ಸಿದ್ಧನಾಗಿದ್ದಾನೆ, ಆತ ಸಿದ್ಧಃ.
೮೨೫) ಶತ್ರುಜಿತ್
ಈ ಹಿಂದೆ ಹೇಳಿದಂತೆ ಧರ್ಮವನ್ನು ದ್ವೇಷಿಸುವವರು ಭಗವಂತನ ಶತ್ರುಗಳು. ಇಂತಹ ಅರಿಗಳನ್ನು ಗೆದ್ದ ಭಗವಂತ ಶತ್ರುಜಿತ್
೮೨೬) ಶತ್ರುತಾಪನಃ
ಅರಿಗಳನ್ನು ಪರಿಪರಿಯಾಗಿ ಗೋಳಾಡಿಸುವ ಭಗವಂತ ಶತ್ರುತಾಪನಃ !
೮೨೭) ನ್ಯಗ್ರೋಧಃ
ಆಲದ ಮರದಲ್ಲಿ ಸನ್ನಿಹಿತನಾಗಿರುವ ಭಗವಂತ ನ್ಯಗ್ರೋಧಃ.
೮೨೮) ಉದುಂಬರಃ
ಅತ್ತಿಯ ಮರದಲ್ಲಿ ವಿಶೇಷತಃ ಸನ್ನಿಹಿತನಾದ ಭಗವಂತ ಉದುಂಬರಃ.
೮೨೯) ಅಶ್ವತ್ಥಃ
ಅರಳಿಯಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಅಶ್ವತ್ಥಃ.
೮೩೦) ಚಾಣೂರಾಂಧ್ರನಿಸೂದನಃ
ಚಾಣೂರನೆಂಬ ರಾಕ್ಷಸನನ್ನು ಕೊಂದವ, ಅಜ್ಞಾನದಲ್ಲಿ ಸುಖವನ್ನು ಕಾಣುವವರನ್ನು ಮುಗಿಸುವವನು, ಕುರುಡಲ್ಲಿ ಜನಿಸಿದ ಅಜ್ಞಾನಿಗಳಾದ ದುರ್ಯೋಧನಾದಿಗಳನ್ನು ಮುಗಿಸಿದ ಭಗವಂತ ಚಾಣೂರಾಂಧ್ರನಿಸೂದನಃ.
ಮುಂದುವರೆಯುವುದು...✍️💐
No comments:
Post a Comment