ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂ ವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || 98 ||
೯೧೭) ಅಕ್ರೂರಃ
ಭಗವಂತ ಎಂದೂ ಕ್ರೂರನಲ್ಲ. ಸಮಾಜದಲ್ಲಿ ಅನೇಕ ಕ್ರೂರ ಘಟನೆಗಳು ನಡೆಯುತ್ತವೆ. ಅದಕ್ಕೆ ಮೂಲ ಕಾರಣ ಮನುಷ್ಯನಲ್ಲಿರುವ ದುರಾಸೆ. ತನ್ನ ಆಸೆ ಈಡೇರದಿದ್ದಾಗ, ತಾನು ಅಂದುಕೊಂಡಂತೆ ಆಗದಿದ್ದಾಗ, ತನ್ನ ಕೆಲಸಕ್ಕೆ ಇನ್ನ್ಯಾರೋ ಅಡ್ಡಿಬಂದಾಗ ಮನುಷ್ಯ ಕ್ರೂರಿಯಾಗಿ ವರ್ತಿಸುತ್ತಾನೆ. ಆದರೆ ಭಗವಂತನಿಗೆ ಈಡೇರದ ಬಯಕೆ ಎನ್ನುವುದೊಂದಿಲ್ಲ. ಅವನು ಸತ್ಯಕಾಮ, ಸತ್ಯಸಂಕಲ್ಪ, ಪೂರ್ಣಕಾಮ. ಇಂತಹ ಭಗವಂತನಿಗೆ ಕೋಪವಿಲ್ಲ. ನಮಗೆ ಕ್ರೌರ್ಯವಾಗಿ ಕಾಣುವುದು ನಿಜವಾಗಿ ಕ್ರೂರತನವಲ್ಲ. ಅದರ ಹಿಂದೆ ಯಾವಾಗಲೂ ಪ್ರೀತಿ ಅಡಗಿರುತ್ತದೆ. ಭಗವಂತ ಎಂದೂ ನಿರ್ದಯನಲ್ಲ. ಅವನಿಗೆ ಯಾರ ಮೇಲೂ ಹಗೆ ಇಲ್ಲ ಆತ ಅಕ್ರೂರಃ.
೯೧೮) ಪೇಶಲಃ
ಸರ್ವಾಂಗ ಸುಂದರ, ಚೆಲುವ, ಮುದ್ದು ಮುದ್ದಾದ ರೂಪವುಳ್ಳ ಭಗವಂತ ಪೇಶಲಃ. ಭಗವಂತನ ಈ ಅಪೂರ್ವ ಸೌಂದರ್ಯವನ್ನು ಆತನ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಗುಣದ ಸೌಂದರ್ಯದ ಪರಾಕಾಷ್ಠೆಯನ್ನು ಶ್ರೀರಾಮ ನಮಗೆ ತೋರಿಸಿಕೊಟ್ಟಿದ್ದಾನೆ. ಇಂದ್ರಾದಿ ದೇವತೆಗಳಿಗೆ ಈಶನಾಗಿ ಪಾಲನೆ ಮಾಡುವ ಲಾವಣ್ಯ ಮೂರ್ತಿ ಭಗವಂತ ಪೇಶಲಃ.
೯೧೯) ದಕ್ಷಃ
ಜಗತ್ತಿನಲ್ಲಿ ಯಾವ-ಯಾವ ಕಾರ್ಯ ಯಾವ-ಯಾವ ಕಾಲದಲ್ಲಿ ಹೇಗೆ ಆಗಬೇಕೋ ಹಾಗೇ ಅದೇ ಕಾಲದಲ್ಲಿ ನಿಯಮಬದ್ಧವಾಗಿ ಮಾಡುವ ಸಾಮರ್ಥ್ಯವಿರುವ ಏಕೈಕ ಸ್ವರೂಪ ಭಗವಂತ ದಕ್ಷಃ.
೯೨೦) ದಕ್ಷಿಣಃ
ದಕ್ಷೆತೆಯ ಜೊತೆಗೆ ದಾಕ್ಷಿಣ್ಯ(ಸೌಜನ್ಯ) ಸೇರಿದಾಗ ಅದು ದಕ್ಷಿಣಃ. ಭಗವಂತ ಸೌಜನ್ಯದ ಖನಿ. ಆದ್ದರಿಂದ ದಕ್ಷಿಣಃ ಆತನಿಗೆ ಅನ್ವರ್ಥನಾಮ.
೯೨೧) ಕ್ಷಮಿಣಾಂವರಃ
ಭಗವಂತ ಕ್ಷಮಾಶೀಲರಲ್ಲಿ ಶ್ರೇಷ್ಠ. ನಾವು ಒಂದೊಂದು ಜನ್ಮದಲ್ಲಿ ಮಾಡುವ ಪಾಪ ನಮ್ಮ ಹತ್ತು ಜನ್ಮದಲ್ಲಿ ತೊಳೆಯಲು ಆಗದು. ಪ್ರತೀ ಜನ್ಮದಲ್ಲಿ ಪಾಪದ ಹೊರೆಯನ್ನು ಹೊತ್ತು ಸಾಗುವ ನಮ್ಮ ಪಾಪವನ್ನು ಕ್ಷಮಿಸಿ ಪಾಪದ ಹೊರೆಯಿಂದ ನಮ್ಮನ್ನು ಪಾರುಮಾಡುವ ಭಗವಂತ ಕ್ಷಮಾಮೂರ್ತಿ, ಆತ ಕ್ಷಮಿಣಾಂವರಃ
೯೨೨) ವಿದ್ವತ್ತಮಃ
ವಿದ್ವಾನ್ ಎಂದರೆ ತಿಳುವಳಿಕೆ ಉಳ್ಳವರು, ಜ್ಞಾನಿಗಳು. ಜ್ಞಾನಿಗಳಲ್ಲೆಲ್ಲಾ ಅತ್ಯಂತ ಉತ್ತಮ ಹಾಗೂ ಮಹಾ ಜ್ಞಾನಿ ಭಗವಂತ ವಿದ್ವತ್ತಮಃ.
೯೨೩) ವೀತಭಯಃ
ನಮ್ಮ ಭಯ ಕಳೆಯುವ, ಎಂದೂ ಭಯವಿರದ ಸರ್ವ ಸಮರ್ಥ ಭಗವಂತ ವೀತಭಯಃ.
೯೨೪) ಪುಣ್ಯಶ್ರವಣಕೀರ್ತನಃ
ಪುಣ್ಯಪ್ರದವಾದ ಶ್ರವಣ ಕೀರ್ತನಗಳವನು. ಭಗವಂತನ ಬಗ್ಗೆ ಕೇಳುವುದು, ಅವನ ಬಗ್ಗೆ ಮಾತನಾಡುವುದು, ಅವನತ್ತ ಮುಖ ಹಾಕಿ ನಡೆಯುವುದು ನಮ್ಮ ಬದುಕಿನ ಮಹಾ ಪಾವಿತ್ರ್ಯವಾದ ಕರ್ಮ. ಇದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ.
ಮುಂದುವರೆಯುವುದು....✍️💐
No comments:
Post a Comment