ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||
46) ಅಪ್ರಮೇಯಃ
ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾಧ್ಯವಾದವ ಎಂದರ್ಥ! ಉದಾಹರಣೆಗೆ - ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು. ಒಂದು ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಭಿನ್ನ ಅಲ್ಲ. ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ.
47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!
ಹೃಷೀಕಗಳಿಗೆ ಈಶ ಹೃಷೀಕೇಶ. ಇಲ್ಲಿ ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡಬೇಕು. ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ" ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ (ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ - Pineal Gland, Pituitary Gland,Thyroid
and parathyroid, Adrenal Glands,Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ ಸಮ್ಮಿಲನ ಮಾಡುವ ಕ್ರಿಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ). ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ.
48) ಪದ್ಮನಾಭಃ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ, ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49) ಅಮರಪ್ರಭುಃ
"ಮರರು" ಅಂದರೆ ಮರಣ ಹೊಂದುವವರು. "ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ಧರೂ ಕೂಡ , ಅವರಿಗೂ ಹಲವು ಕಲ್ಪಗಳ ನಂತರ ಮರಣ ಮತ್ತು ಮೋಕ್ಷವಿದೆ. ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ. ಇಲ್ಲಿ ಅಮರಪ್ರಭು ಎಂದರೆ ಮುಕ್ತಿ ಪಡೆದ ಜೀವ ಹಾಗೂ ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.
50) ವಿಶ್ವಕರ್ಮಾ
ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ (Architect). ಪ್ರಾಚೀನ ಗ್ರಂಥಗಳಲ್ಲಿ ಈ ವಿಶ್ವವನ್ನು ಐವತ್ತೈದು ಅವಯವಗಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ಹಣ್ಣುಗಳಿರುವ ಒಂದು ಮರವನ್ನಾಗಿ ವರ್ಣಿಸಿದ್ದಾರೆ. ಇಲ್ಲಿ ಪ್ರವೃತ್ತಿ ಎಂದರೆ ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ, ಹಾಗೂ ನಿವೃತ್ತಿ ಎಂದರೆ ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೋಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ. ಭಗವಂತನ ಈ ಅಪೂರ್ವ ವಿನ್ಯಾಸದ ಹಿಂದಿರುವ ಐವತ್ತೈದು ಪ್ರಮುಖ ಅಂಗಗಳನ್ನು ಮರದ ಉದಾಹರಣೆಯೊಂದಿಗೆ ವರ್ಣಿಸಿದ್ದಾರೆ.
ಬನ್ನಿ, ಈ ಅಪೂರ್ವ ವಿನ್ಯಾಸವನ್ನು ಸಂಕ್ಷಿಪ್ತವಾಗಿ ನೋಡೋಣ.
1) ಏಕಾಯನಹಃ - ಈ ವಿಶ್ವಕ್ಕೆ ಮೂಲ-ಪ್ರಕೃತಿ. ಇದನ್ನೇ ಇಲ್ಲಿ ಮರವೆಂದು ಕರೆದಿರುವುದು.
2-3 ) ವಿಫಲಹಃ -ಮೇಲೆ ಹೇಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಈ ಮರದಲ್ಲಿರುವ ಎರಡು ಹಣ್ಣುಗಳು.
4 -6 ) ತ್ರಿಮೂಲಹಃ -ಸತ್ವ , ರಜಸ್ಸು ಮತ್ತು ತಮಸ್ಸು ಎಂಬ ಮೂರು ಮೂಲಗಳು.
7-10 ) ಚತುರಸಹಃ -ಧರ್ಮ , ಅರ್ಥ , ಕಾಮ , ಮತ್ತು ಮೋಕ್ಷವೆಂಬ ನಾಲ್ಕು ರಸಗಳು.
11-15 ) ಪಂಚಶಿಖಃ -ಮಣ್ಣು , ನೀರು , ಬೆಂಕಿ , ಗಾಳಿ ಮತ್ತು ಆಕಾಶವೆಂಬ ಪಂಚಭೂತಗಳು. (ಅಥವಾ-ಶಬ್ದ , ಸ್ಪರ್ಶ ,ರೂಪ , ರಸ ಮತ್ತು ಗಂಧ)
16-21 ) ಷಡಾತ್ಮ - ಆರು ಸ್ವಭಾವಗಳಾದ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ) ಮತ್ತು ವ್ಯಾಧಿ, ಹಾಗೂ ಆರು ಬೆಳವಣಿಗೆಯ ಹಂತಗಳಾದ-ಅಸ್ತಿ(ಗರ್ಭ ಪ್ರವೇಶಿಸುವ ಹಂತ ), ಜಾಯತೆ (ಹುಟ್ಟುವ ಹಂತ), ವರ್ಧತೆ (ಬೆಳವಣಿಗೆಯ ಹಂತ), ವಿಪರಿಣಮತೆ( ದೇಹದ ಬದಲಾವಣೆಯ ಹಂತ) ಅಪಕ್ಷೀಯತೆ (ಮುದಿತನ) ಮತ್ತು ಕೊನೆಯದಾಗಿ ನಷ್ಯತೆ .
22-28) ಸಪ್ತತ್ವಕ್ -ಏಳು ತೊಗಟೆಗಳಾದ ತ್ವಕ್ (ಚರ್ಮದ ಹೊರ ಪದರು), ಚರ್ಮ(ಒಳಚರ್ಮ), ಮಾಂಸ , ರಕ್ತ , ಮೇದಸ್ಸು ,ಮಜ್ಜ ಮತ್ತು ಅಸ್ತಿ.
29-36) ಅಷ್ಟವಿಟಪಹಃ -ಎಂಟು ಬಗೆಯ ಜೀವಜಾತಗಳು (ಉದಾಹರಣೆಗೆ- ದೇವತೆಗಳು, ರಾಕ್ಷಸರು,ಮನುಷ್ಯರು, ಧಾನವರು.. ಇತ್ಯಾದಿ).
37-45 ) ನವಾಕ್ಷಹಃ -ಒಂಬತ್ತು ಪೊಟರೆಗಳಾದ ನವದ್ವಾರಗಳು (ಕಣ್ಣು, ಕಿವಿ , ಮೂಗು , ಬಾಯಿ ,ಮಲ-ಮೂತ್ರ ದ್ವಾರ)
45-55) ದಶಸ್ಚದಹಃ -ಹತ್ತು ಎಲೆಗಳು- ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯಗಳು.
ಇಂತಹ ವಾಸ್ತುಶಿಲ್ಪದ ಈ ವಿಶಿಷ್ಟವಾದ ವಿಶ್ವವನ್ನು ವಿನ್ಯಾಸಗೊಳಿಸಿರುವ ಭಗವಂತ ವಿಶ್ವಕರ್ಮ.
ಈ ಪ್ರಪಂಚದಲ್ಲಿ ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಭಗವಂತನ ಅದ್ವಿತೀಯ ಅಖಂಡ ವಿನ್ಯಾಸಕ್ಕೆ ಉತ್ತಮ ಉದಾಹರಣೆ ಮನುಷ್ಯನ ಬೆರಳಚ್ಚು (Finger print) ಒಬ್ಬನ ಬೆರಳಚ್ಚು ಇನ್ನೊಬ್ಬನಿಗಿಂತ ಭಿನ್ನ ! ಇದು ಸಾಮಾನ್ಯ ವಿನ್ಯಾಸವಲ್ಲ.
ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಈ ನಾಮದಲ್ಲಿ ನೋಡಬಹುದು. ವಿಶ್ವ ಅನ್ನುವ ಶಬ್ದಕ್ಕೆ 'ಎಲ್ಲಾ' ಎನ್ನುವ ಅರ್ಥವಿದೆ, ಅದ್ದರಿಂದ ವಿಶ್ವಕರ್ಮ ಎಂದರೆ ಸರ್ವ-ಕರ್ಮಗಳ ನಿಯಾಮಕ ಭಗವಂತ.
ಪುರಾಣದಲ್ಲಿ ಕಾಣುವ ದೇವ ಶಿಲ್ಪಿ-ವಿಶ್ವಕರ್ಮ. ದೇವಸ್ಥಾನ ಮತ್ತು ಮನೆಯ ವಾಸ್ತು ವಿನ್ಯಾಸವನ್ನು ದೇವಶಿಲ್ಪಿಯ ಒಳಗೆ ನಿಂತು ನಮಗೆ ಕರುಣಿಸಿದ ಭಗವಂತ ವಿಶ್ವಕರ್ಮ ಇತ್ಯಾದಿ.
51) ಮನುಃ
ಮನ್ವಂತರಗಳನ್ನು ಮನು ಎಂದೂ ಕರೆಯುತ್ತಾರೆ. ಮನ್ವಂತರಗಳು ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ ಮನು, 2) ಸ್ವರೋಚಿಶ ಮನು, 3) ಉತ್ತಮ ಮನು, 4) ತಪಾಸ ಮನು 5) ರೈವತ ಮನು, 6) ಚಕ್ಷುಶ ಮನು, 7) ವೈವಸ್ವತ ಮನು (ಈಗ ನಡೆಯುತ್ತಿರುವುದು) , 8) ಸಾವರಣಿ ಮನು, 9) ದಕ್ಷ ಸಾವರಣಿ ಮನು, 10) ಬ್ರಹ್ಮ ಸಾವರಣಿ ಮನು, 11) ಧರ್ಮ ಸಾವರಣಿ ಮನು, 12) ಮೇರು ಸಾವರಣಿ ಮನು, 13) ದೇವ ಸಾವರಣಿ ಮನು, 14) ಇಂದ್ರ ಸಾವರಣಿ ಮನು.
1 ಮಾನವ ವರ್ಷ = ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).
360 ಮಾನವ ವರ್ಷ = ದೇವತೆಗಳ 360 ದಿನ = 1 ದೇವ ವರ್ಷ.
1200 ದೇವ ವರ್ಷ = 4,32,000 ಮಾನವ ವರ್ಷ = 1 ಕಲಿಯುಗದ ಅವಧಿ.
2400 ದೇವ ವರ್ಷ = 8,64,000 ಮಾನವ ವರ್ಷ = 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ = 12,96,000 ಮಾನವ ವರ್ಷ = 1 ತ್ರೇತಾ ಯುಗದ ಅವಧಿ.
4800 ದೇವ ವರ್ಷ = 17,28,000 ಮಾನವ ವರ್ಷ = 1 ಕೃತ ಯುಗದ ಅವಧಿ.
12,000 ದೇವ ವರ್ಷ = 43,20,000 ಮಾನವ ವರ್ಷ = 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ', ಒಂದು ಮನುವಿನ ವರ್ಷ.
1000 ಮಹಾಯುಗ = 1 ದಿನ ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ದಿನ ಕಲ್ಪ = 1 ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವಧಿ 100 ಬ್ರಹ್ಮ ವರ್ಷ = 43,20,000 x 1000 x 720 x 100 =
31,104,000,00,00,000 (31,104 ಸಾವಿರ ಕೋಟಿ) ಮಾನವ ವರ್ಷ !!
ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ )
ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ ಮತ್ತು ಮನ್ವಂತರಗಳಲ್ಲಿ ಇದ್ದು) , ಮನುವಾಗಿ ಎಲ್ಲವನ್ನೂ ಬಲ್ಲ ಭಗವಂತ !
52) ತ್ವಷ್ಟಾ
ತ್ವಷ್ಟೃ ಅಂದರೆ ಉಳಿಯಿಂದ ಮರವನ್ನು ಕೆತ್ತುವ ಶಿಲ್ಪಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಹಿಂದೆ ವಿಶ್ವಕರ್ಮ ನಾಮಕನಾಗಿ ಭಗವಂತನನ್ನು ಶ್ರೇಷ್ಠ ವಿನ್ಯಾಸಕಾರನಾಗಿ ನೋಡಿದ್ದೇವೆ. ಇಲ್ಲಿ ತ್ವಷ್ಟೃ ಅಂದರೆ ಮಣ್ಣು , ನೀರು ಮತ್ತು ಬೆಂಕಿಯೆಂಬ ಉಳಿಯಿಂದ, ಅದ್ಭುತ ಸೌಂದರ್ಯದಿಂದ ಕೂಡಿದ ಈ ವಿಶ್ವವನ್ನು ಕೆತ್ತಿದ ಅಪೂರ್ವ ಶಿಲ್ಪಿ ಎಂದರ್ಥ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸಂಹರಿಸುವ ಭಗವಂತ ತ್ವಷ್ಟಾ.
53) ಸ್ಥವಿಷ್ಠಃ
ಸ್ಥವಿಷ್ಠ ಅಂದರೆ ಸ್ಥೂಲಕಾಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ವಿವಿಧತೆಯಾತ್-ವಿಷ್ಟಥಿ. ಅಂದರೆ ಆಕಾಶದಂತೆ ಸ್ಥೂಲನಾಗಿರುವವ ಆದರೆ ಅನಂತ ರೂಪದಲ್ಲಿ ಅನಂತ ವಸ್ತುವಿನಲ್ಲಿ ಅದ್ವಿತೀಯ, ಅನನ್ಯ, ಅನುಪಮ ರೂಪಕನಾಗಿ ತುಂಬಿರುವವನು. ಈ ರೀತಿ ಅಖಂಡವಾಗಿ ಉಹಿಸಲೂ ಅಸಾಧ್ಯವಾದ ಅದ್ಭುತ ಕಾಯನಾದ ಭಗವಂತ ಸ್ಥವಿಷ್ಠ.
54) ಸ್ಥವಿರೋ ಧ್ರುವಃ
ಸ್ಥವಿರೋ ಧ್ರುವ ಅಂದರೆ- ಮೇಲೆ ಹೇಳಿರುವ ಇಷ್ಟೊಂದು ವೈವಿಧ್ಯತೆಗಳಿಂದ ಎಲ್ಲಾ ಆಕಾರದಲ್ಲೂ ಇದ್ದು ನಿರ್ವಿಕಾರನಾಗಿರುವ ಭಗವಂತ. ಎಲ್ಲಕ್ಕಿಂತ ಮೊದಲಿದ್ದ ಅಚಲ ತತ್ವ.
ಮುಂದುವರೆಯುವುದು....