ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಪದ್ಮನಾಭೋsರವಿಂದಾಕ್ಷಃ ಪದ್ಮಗರ್ಭಃ ಶರೀರಭ್ಥತ್ |
ಮಹರ್ದ್ಧಿರ್ಋದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || 38 ||
೩೪೮) ಪದ್ಮನಾಭಃ
ಸೃಷ್ಟಿಯ ಮೊದಲು ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡ ಸಂಪೂರ್ಣವಾಗಿ ಭಗವಂತನೊಳಗೆ ಸೇರಿರುತ್ತದೆ. ಸೃಷ್ಟಿಕಾಲದಲ್ಲಿ ಅದು ಭಗವಂತನ ನಾಭಿಯಿಂದ ಕಮಲರೂಪದಲ್ಲಿ ಹೊರಬರುತ್ತದೆ. ಈ ಬ್ರಹ್ಮಾಂಡ ಅಂಡ ರೂಪದಲ್ಲಿ ಅಥವಾ ಕಮಲದ ಮೊಗ್ಗಿನ ರೂಪದಲ್ಲಿ ಸೃಷ್ಟಿಯಾಗುತ್ತದೆ. ಈ ಕಮಲ ರೂಪಿ ಬ್ರಹ್ಮಾಂಡದಲ್ಲಿ ಹದಿನಾಲ್ಕು ಎಸಳುಗಳಿರುತ್ತವೆ, ಅವೇ ಹದಿನಾಲ್ಕು ಲೋಕಗಳು. ಹೀಗೆ ತನ್ನ ನಾಭಿಯಿಂದ ಕಮಲರೂಪಿ ಬ್ರಹ್ಮಾಂಡ ಸೃಷ್ಟಿ ಮಾಡುವ ಭಗವಂತ ಪದ್ಮನಾಭಃ.
೩೪೯) ಅರವಿಂದಾಕ್ಷಃ
ಅರವಿಂದ ಎಂದರೆ ದಳಗಳು. ಮೇಲೆ ಹೇಳಿದಂತೆ ಭಗವಂತ ಕಮಲದ ಮೊಗ್ಗಿನಂತಹ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ; ಆ ಕಮಲ ಅರಳಿದಾಗ ಹದಿನಾಲ್ಕು ಲೋಕವಾಯಿತು; ಆ ನಂತರ ಈ ಅರಳಿನಿಂತ ಬ್ರಹ್ಮಾಂಡದೊಳಗೆ ಸ್ವಯಂ ತಾನೇ ತುಂಬಿದ. ಇಂತಹ ಭಗವಂತ ಅರವಿಂದಾಕ್ಷಃ.
'ರವಿ' ಎಂದರೆ ಸೂರ್ಯ 'ಅರವಿ' ಎಂದರೆ ಕತ್ತಲು; 'ದಾ' ಎಂದರೆ 'ಧ್ಯತಿ ಅಥವಾ 'ನಾಶ' ; ಅಕ್ಷ ಎಂದರೆ ಕಣ್ಣು. ಆದ್ದರಿಂದ ಅರವಿಂದಾಕ್ಷಃ ಎಂದರೆ ಕತ್ತಲನ್ನು ನಾಶಮಾಡುವ ಸೂರ್ಯ ಹಾಗು ಚಂದ್ರರೆಂಬ ಎರಡು ಕಣ್ಣುಗಳನ್ನು ಈ ಜಗತ್ತಿಗೆ ಕೊಟ್ಟವನು. ಹೀಗೆ ನಮ್ಮ ಒಳಗೆ ಹಾಗೂ ಹೊರಗಿರುವ ಕತ್ತಲನ್ನು ನಿವಾರಿಸುವ ಭಗವಂತ ಅರವಿಂದಾಕ್ಷಃ.
೩೫೦) ಪದ್ಮಗರ್ಭಃ
ಸೃಷ್ಟಿಗೆ ಮೊದಲು ಸಂಪೂರ್ಣ ಬ್ರಹ್ಮಾಂಡ ಹಾಗೂ ಜೀವ ಜಂತುಗಳು ಸೂಕ್ಷ್ಮರೂಪದಲ್ಲಿ ಭಗವಂತನ ಉದರದಲ್ಲಿದ್ದು, ಸೃಷ್ಟಿ ಕಾಲದಲ್ಲಿ ಎಲ್ಲವೂ ಆತನ ನಾಭಿಯಿಂದ ಪದ್ಮ ರೂಪದಲ್ಲಿ ಹೊರ ಚಿಮ್ಮುತ್ತದೆ. ಹೀಗೆ ಇಡೀ ಬ್ರಹ್ಮಾಂಡವನ್ನು ತನ್ನ ಉದರದಲ್ಲಿ ಧರಿಸಿದ ಭಗವಂತ ಪದ್ಮಗರ್ಭಃ. ಚತುರ್ಮುಖನ ಗರ್ಭದೊಳಗೆ ನಿಂತು ಈ ಸೃಷ್ಟಿಯನ್ನು ನಡೆಸುವ ಭಗವಂತ ಪದ್ಮಗರ್ಭಃ
೩೫೧) ಶರೀರಭೃತ್
ಶರೀರಭೃತ್ ಎಂದರೆ ಶರೀರವನ್ನು ಧಾರಣೆ ಮಾಡುವವನು. ಭಗವಂತ ನಮ್ಮೊಳಗೆ ಪ್ರಾಣದೇವರೊಂದಿಗೆ ಪ್ರವೇಶಿಸುವುದು 'ಹುಟ್ಟು' ಹಾಗೂ ನಮ್ಮ ಶರೀರದಿಂದ ನಿರ್ಗಮಿಸುವುದು 'ಸಾವು'. ಭಗವಂತ ನಮ್ಮ ಶರೀರದಿಂದ ಹೊರಟನೆಂದರೆ ನಮ್ಮ ಪ್ರಾಣಪಕ್ಷಿ ಹಾರಿಹೋಗುತ್ತದೆ; ಈ ಶರೀರ ಶವವಾಗುತ್ತದೆ.
ಶರೀರ ಎನ್ನುವುದಕ್ಕೆ ಇನ್ನೊಂದು ಅರ್ಥ ಬ್ರಹ್ಮಾಂಡ. ಹೀಗೆ ನಮ್ಮ ಶರೀರವನ್ನು ಹಾಗೂ ಸಂಪೂರ್ಣ ಬ್ರಹ್ಮಾಂಡವನ್ನು ಧಾರಣೆ ಮಾಡಿದ ಭಗವಂತ, ಅನಾದಿನಿತ್ಯವಾದ ಜೀವರನ್ನು ಸದಾ ಧಾರಣೆ ಮಾಡಿರುತ್ತಾನೆ. ಇಂತಹ ಭಗವಂತ ಶರೀರಭೃತ್.
೩೫೨) ಮಹರ್ದ್ಧಿಃ
ಮಹರ್ದ್ಧಿಃ ಎಂದರೆ ಪೂರ್ಣತೆಯ ಪರಾಕಾಷ್ಠೆ. ಪೂರ್ಣತೆಯಲ್ಲಿ ಎರಡು ವಿಧ; ಒಂದು ಸಾಪೇಕ್ಷವಾದ ಪೂರ್ಣತೆ ಹಾಗು ಇನ್ನೊಂದು ನಿರಪೇಕ್ಷವಾದ ಅಥವಾ ಅನಂತವಾದ ಪೂರ್ಣತೆ. ಬಿಂದಿಗೆಯಲ್ಲಿ ನೀರನ್ನು ತುಂಬಿಸಿದರೆ ಅದು ಪೂರ್ಣ ಆದರೆ ಭಗವಂತನ ಪೂರ್ಣತೆ ಸಮುದ್ರದಂತೆ (ಇಲ್ಲಿ ಸಮುದ್ರ ಎನ್ನುವುದು ಕೇವಲ ದೃಷ್ಟಾಂತ); ಅನಂತವಾದ ಪೂರ್ಣತೆ.
೩೫೩) ಋದ್ಧಃ
ಎಲ್ಲಾ ಸಮೃದ್ದಿಗಳಿಂದ ಪೂರ್ಣನಾದವನು ಋದ್ಧ. ಒಂದು ಅಮೂಲ್ಯವಾದ ಗಿಡಮೂಲಿಕೆಯನ್ನೂ ಕೂಡಾ ಋದ್ಧ ಎನ್ನುತ್ತಾರೆ; ಹಾಗೆ ಕುಟ್ಟಿ ಮಾಡಿದ ತೌಡು ಮಿಶ್ರಿತ ಪೋಷಕಾಂಶಗಳಿಂದ ಕೂಡಿದ ಅಕ್ಕಿ ಕೂಡಾ ಋದ್ಧ. ಗಿಡಮೂಲಿಕೆಯಲ್ಲಿ, ಕುಟ್ಟಣದ ಅಕ್ಕಿಯಲ್ಲಿ ಭಗವಂತನ ವಿಶೇಷವಾದ ವಿಭೂತಿ ಅಡಗಿದೆ. ಆತ ಪರಿಪೂರ್ಣ ಅದಕ್ಕಾಗಿ ಋದ್ಧಃ.
೩೫೪) ವೃದ್ಧಾತ್ಮಾ
ಭಗವಂತ ಇಂದ್ರಿಯಗಳಿಗೆ ಎಟುಕದವನು. ಆತನ ದೇಹ ಎಲ್ಲಾ ಕಡೆ ಆಕಾಶದಂತೆ ತುಂಬಿದೆ. ಆಕಾಶಕ್ಕೂ ಭಗವಂತನಿಗೂ ಇರುವ ಒಂದು ವ್ಯತ್ಯಾಸ ಎಂದರೆ ಆಕಾಶಕ್ಕೆ ಆತ್ಮವಿಲ್ಲ ಭಗವಂತನಿಗೆ ಇದೆ. ಭಗವಂತನ ದೇಹ ಪಂಚಭೂತಗಳಿಂದಾದದ್ದಲ್ಲ. ಅದು ಜ್ಞಾನಾನಂದಗಳಿಂದಾದ ಶರೀರ. ಮನುಷ್ಯ ತನ್ನ ಸಾಧನೆ ಮುಖೇನ ತನ್ನ ಸ್ವರೂಪವನ್ನು ತಿಳಿದಾಗ ಮಾತ್ರ ಈ ಸಂಗತಿ ಅರ್ಥವಾಗುತ್ತದೆ. ಭಗವಂತನ ಬಣ್ಣ ಆಕಾರ ಎಲ್ಲವೂ ಜ್ಞಾನಾನಂದಮಯವಾದದ್ದು. ಆತ ತುಂಬಿದ ಅನಾದಿಮೂರ್ತಿ. ಹೀಗೆ ಜ್ಞಾನಾನಂದಮಯವಾದ ಶರೀರ ಮತ್ತು ಆತ್ಮದಿಂದ ಎಲ್ಲೆಡೆ ವ್ಯಾಪ್ತನಾಗಿರುವ ಭಗವಂತ ವೃದ್ಧಾತ್ಮಾ.
ವೃದ್ಧರು ಎಂದರೆ ತಲೆ ಹಣ್ಣಾದವರು. ಇಲ್ಲಿ ತಲೆ ಎಂದರೆ ಒಳಗಿನ ತಲೆ. ಹಣ್ಣಾಗುವುದು ಎಂದರೆ ಜ್ಞಾನದ ಉತ್ತುಂಗಕ್ಕೇರುವುದು; ಆದ್ದರಿಂದ ವೃದ್ಧಾ ಎಂದರೆ ಜ್ಞಾನಿ. ಹೀಗೆ ಸ್ವಯಂ ಪೂರ್ಣಜ್ಞಾನಿ ಹಾಗೂ ಯಾರಲ್ಲಿ ಜ್ಞಾನವಿದೆ ಅವರನ್ನು ಪ್ರೀತಿಸುವ ಭಗವಂತ ವೃದ್ಧಾತ್ಮಾ.
೩೫೫) ಮಹಾಕ್ಷಃ
ಎಲ್ಲೆಡೆಯೂ ಕಣ್ಣಿಟ್ಟವನು; ಸರ್ವಗತವಾದ ಕಣ್ಣಿನವನು; ಭಗವಂತನಿಗೆ ತಿಳಿಯದಂತೆ ಯಾವುದೇ ಕ್ರಿಯೆ ನಡೆಯಲು ಅಸಾಧ್ಯ. ಭಗವಂತ ಸರ್ವಗತವಾದ ಇಂದ್ರಿಯಗಳುಳ್ಳವನು.
೩೫೫) ಗರುಡಧ್ವಜಃ
ಗರುಡನ ಮೇಲೇರಿ ವಿಹರಿಸುವವನು. ಗರುಡಾರೂಢ ಭಗವಂತನ ಅನೇಕ ರೂಪದ ಉಪಾಸನೆ ನಮ್ಮಲ್ಲಿ ರೂಢಿಯಲ್ಲಿದೆ. ಇದರಲ್ಲಿ ಒಂದು "ಶ್ರೀಕರ" ರೂಪ. ಎರಡು ಕೈಗಳಿಂದ ಸುವರ್ಣವನ್ನೀಯುವ ಗರುಡಾರೂಢ ಭಗವಂತನ ಮೂರ್ತಿ. ಇಲ್ಲಿ "ಸು-ವರ್ಣ" ಎಂದರೆ ಅಕ್ಷರಗಳ ಮೂಲಕ ಅಕ್ಷರನಾದ ಭಗವಂತನನ್ನು ತಿಳಿಯುವ ಜ್ಞಾನ. ಇಂತಹ ಭಗವಂತನ ಅರಿವನ್ನು ಕೊಡತಕ್ಕ ರೂಪ ಗರುಡಾರೂಢ ಸಂಸ್ಥಿತಿ.
ನಮ್ಮ ದೇಹವನ್ನು ನಿಯಂತ್ರಿಸುವ ಅನೇಕ ಶಕ್ತಿಗಳನ್ನು ಪ್ರಾಚೀನರು ಗುರುತಿಸಿದರು. ಮುಖ್ಯವಾಗಿ ನಾಲ್ಕು ಪುರುಷರು ನಮ್ಮ ದೇಹವನ್ನು ನಿಯಂತ್ರಿಸುತ್ತಾರೆ. ಶರೀರ ನಿಯಂತ್ರಿಸುವ 'ಶರೀರಪುರುಷ' ಶಿವ; ಪ್ರಾಣಮಯ ಕೋಶವನ್ನು ನಿಯಂತ್ರಿಸಿ ನಮ್ಮ ಮಾತನ್ನು ನಿಯಂತ್ರಿಸುವ "ಛಂದಪುರುಷ" ಶೇಷ; ನಮ್ಮ ಮನೋಮಯ ಕೋಶವನ್ನು ನಿಯಂತ್ರಿಸುವ "ವೇದ ಪುರುಷ" ಗರುಡ. ಆದ್ದರಿಂದ ಗರುಡ "ವೇದ-ಜ್ಞಾನದ" ಸಂಕೇತ. ಗರುಡಧ್ವಜ ಎಂದರೆ ಸಾಕ್ಷಾತ್ ವೇದಗಳ ಮೇಲೆ ಸವಾರಿ ಮಾಡಿಕೊಂಡು ಬರುವವ. ಇಂತಹ ಭಗವಂತನನ್ನು ತಿಳಿಯ ಬೇಕಾದರೆ ವೇದದ ಅರಿವೊಂದೇ ನಮಗಿರುವ ಮಾರ್ಗ.
ಮುಂದುವರೆಯುವುದು...
No comments:
Post a Comment