ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || 21 ||
೧೯೦) ಮರೀಚಿಃ
ಸೂರ್ಯ ಕಿರಣಗಳಲ್ಲಿದ್ದು, ಪ್ರಾಣ ಶಕ್ತಿಯನ್ನು ವಿಶ್ವದ ಜೀವ ಜಾತಕ್ಕೆ ಕೊಡುವವ ಮರೀಚಿಃ. ಇನ್ನು 'ಮರಿ' ಎಂದರೆ ನೀರು ತುಂಬಿದ ಮೋಡ. ಮೋಡಗಳಿಗೆ ಚಲನೆಯನ್ನು ಕೊಟ್ಟು ಮಳೆ ಬರಿಸುವವ "ಮರೀಚಿಃ".
ಗೀತೆಯಲ್ಲಿ ಹೇಳುವಂತೆ:
ಯದಾದಿತ್ಯ ಗತಂ ತೇಜೋ ಜಗದ್ ಭಾಸಯತೇ_ಖಿಲಮ್ ||
ಯಚ್ಚಂದ್ರಮಸಿ ಯಚ್ಚ ಗೌನ ತತ್ ತೇಜೋ ವಿದ್ಧಿ ಮಾಮಕಮ್ ||
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೇ ಬೆಳಕೆಂದು ತಿಳಿ".
ಈ ರೀತಿ ಜೀವರಲ್ಲಿ ತುಂಬಿರುವ ಬೆಳಕಿನ ಕುಡಿಯಾದ ಭಗವಂತ "ಮರೀಚಿಃ".
ಊಟದ ಸಮಯದಲ್ಲಿ ನಮ್ಮ ಅಂತಃಕರಣ ಜಾಗೃತಿಗಾಗಿ "ಗೋವಿಂದ" ಸ್ಮರಣೆ ಮಾಡುತ್ತೇವೆ.
ಇಂದ್ರ ಗೋವರ್ಧನ ಪರ್ವತವನ್ನೆತ್ತಿದ ಭಗವಂತನನ್ನು, ಗೋವಿಂದ ಎಂದು ಕರೆಯುತ್ತಾನೆ. ಭೂಮಿಯ ಮೇಲೆ ಅನಂತ ರೂಪದಲ್ಲಿ ಇಳಿದು ಬಂದ ಭಗವಂತ "ಗೋವಿಂದಃ".
೧೯೧). ದಮನ
ಸೂರ್ಯಕಿರಣರೂಪನಾದ ಭಗವಂತ, ಮೋಡಗಳ ರೂಪದಲ್ಲಿ ನೀರನ್ನು ಕೊಡುವ ಭಗವಂತ, ಪ್ರಳಯ ಕಾಲದಲ್ಲಿ ಅದೇ ಸೂರ್ಯಕಿರಣದ ಮೂಲಕ, ನೀರಿನ ಮೂಲಕ (ಜಲಪ್ರಳಯ) ಎಲ್ಲವನ್ನು ದಮನ ಮಾಡಿ ಯೋಗ ನಿದ್ರೆಯನ್ನು ಅನುಭವಿಸುತ್ತಾನೆ.
ಸಜ್ಜನರಿಗೆ ಭಗವಂತ 'ದಮ' ಅಂದರೆ ಇಂದ್ರಿಯ ನಿಗ್ರಹ ಶಕ್ತಿಯನ್ನು ಕರುಣಿಸುವವ. ದುರ್ಜನರ ದಮನ (ನಾಶ) ಮಾಡುವ ಭಗವಂತ "ದಮನಃ".
೧೯೨) ಹಂಸ
ದೋಷಹೀನ; ಸಾರರೂಪ; ಸಂಸಾರದುಃಖವನ್ನು ನಾಶಗೊಳಿಸುವವನು. ಎಲ್ಲರಿಗೂ ಅಂತರ್ಯಾಮಿಯಾಗಿರುವವನು. ಎಲ್ಲೆಡೆಯೂ ತುಂಬಿರುವವನು ಆದ ಭಗವಂತ " ಹಂಸ".
೧೯೩) ಸುಪರ್ಣ
ಗರುಡನಲ್ಲಿ ಅಂತರ್ಯಾಮಿಯಾಗಿರುವವನು; ದುಃಖವಿರದ ಪರಿಪೂರ್ಣಾನಂದ ಸ್ವರೂಪನು; ಜೀವರಿಗೆ ಸಾಧನೆಯಿಂದ ಪೂರ್ಣತೆಯನ್ನೀಯುವವನು; ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣಾನಂದವನ್ನೀಯುವವನು "ಸುಪರ್ಣಃ".
೧೯೪) ಭುಜಗೋತ್ತಮ
ಗರುಡನ ಹೆಗಲೇರಿ ಸಾಗುವ ಹಿರಿಯ ತತ್ವ ; ಹಾವುಗಳಲ್ಲಿ ಸನ್ನಿಹಿತನಾದ ಪುರುಷೋತ್ತಮ.
೧೯೫) ಹಿರಣ್ಯನಾಭ
ಹಿರಣ್ಯ ಅಂದರೆ ಚಿನ್ನ. ಆದ್ದರಿಂದ ಹಿರಣ್ಯನಾಭ ಎಂದರೆ ಚಿನ್ನದ ಮೊಟ್ಟೆಯಂತಿರುವ ಈ ಬ್ರಹ್ಮಾಂಡವನ್ನು ತನ್ನ ಹೊಕ್ಕುಳಲ್ಲಿ ಹೊತ್ತವನು ಎಂದರ್ಥ. ಬ್ರಹ್ಮಾಂಡದ ಇನ್ನೊಂದು ಹೆಸರು ವಿರಾಟ; ಅಂದರೆ ಥಳ-ಥಳ ಹೊಳೆಯುವ ಚಿನ್ನದ ಮೊಟ್ಟೆ. ಭೂಮಿಯಿಂದ ಅತೀ ದೂರದಲ್ಲಿ ನಿಂತು ಭೂಮಿಯನ್ನು ನೋಡಿದರೆ, ಭೂಮಿ ಕೂಡಾ ನಕ್ಷತ್ರದಂತೆ ಹೊಳೆಯುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಚಿನ್ನದ ಮೊಟ್ಟೆಯಂತಹ ಈ ಬ್ರಹ್ಮಾಂಡದ ನಿರ್ಮಾಣ ಮಾಡಿದ ಭಗವಂತ ಹಿರಣ್ಯನಾಭಃ ಇನ್ನು ಹಿರಣ್ಯ ಎಂದರೆ ಹಿತವೂ, ರಮಣೀಯವೂ ಎಂದರ್ಥ. ಭಗವಂತ ಎಲ್ಲರಿಗೂ ಹಿತವೂ ರಮಣೀಯವೂ ಆಗಿ ಎಲ್ಲರೊಳಗೆ ಬಿಂಬರೂಪನಾಗಿದ್ದಾನೆ.
೧೯೬) ಸುತಪಾ
ಸುತಪಾಃ ಅಂದರೆ ಸಮೀಚೀನವಾದ ತಪಸ್ಸು ಮಾಡುವವ. ಇಲ್ಲಿ ತಪಸ್ಸು ಎಂದರೆ ಒಂದು ಸಂಗತಿಯನ್ನು ಆಳವಾಗಿ ಚಿಂತಿಸಿ ಅದರ ತಳಸ್ಪರ್ಶಿ ಚಿಂತನ ಮಾಡುವುದು ಎಂದರ್ಥ. ಎಲ್ಲಾ ವಿಷಯಗಳನ್ನು ಗ್ರಹಿಸುವ, ತಳಸ್ಪರ್ಶಿಯಾದ ಜ್ಞಾನವುಳ್ಳವ ಸುತಪಾಃ.
ಇನ್ನು ಈ ನಾಮವನ್ನು ಒಡೆದು ನೋಡಿದಾಗ ಸುತ+ಪಾ, ಇಲ್ಲಿ ಸುತ ಅಂದರೆ ಮಕ್ಕಳು, ಪಾ ಅಂದರೆ ಪಾಲಿಸುವವನು. ಎಲ್ಲರೂ ಭಗವಂತನ ಮಕ್ಕಳೇ. ಭಗವಂತನಿಗೆ ಮೇಲು-ಕೀಳು ಎನ್ನುವ ಭೇದವಿಲ್ಲ. ತನ್ನೆಲ್ಲಾ ಮಕ್ಕಳನ್ನು ನಿಷ್ಪಕ್ಷಪಾತವಾಗಿ ಅವರವರ ಪೂರ್ವಕರ್ಮಕ್ಕನುಸಾರವಾಗಿ ಫಲಕೊಟ್ಟು ಸಲಹುವವನು ಸುತಪಾಃ. ಇನ್ನು ಸು+ತ+ಪಾ-ಸುತಪಾ. ಇಲ್ಲಿ ಸು ಅಂದರೆ ಸಮೀಚೀನವಾದ ಆನಂದ ಸ್ವರೂಪ, ತ ಅಂದರೆ ತತಿ ಅಂದರೆ ಹಬ್ಬುವುದು(ಜ್ಞಾನದ ಮೂಲಕ), ಪಾ ಅಂದರೆ ಸರ್ವ ಪಾಲಕನಾದ ಆನಂದ ಸ್ವರೂಪ. ಆದ್ದರಿಂದ ಸುತಪಾಃ ಅಂದರೆ ಸತ್, ಚಿತ್, ಆನಂದ - ಸಚ್ಚಿದಾನಂದರೂಪಿಯಾದ ಭಗವಂತ.
೧೯೭) ಪದ್ಮನಾಭ
ಈ ಬ್ರಹ್ಮಾಂಡವನ್ನು ತಾವರೆಗೆ ಹೋಲಿಸಿದ್ದಾರೆ. ಯಾರ ನಾಭಿಯಿಂದ ಈ ಪದ್ಮಾಕಾರವಾದ ಭುವನ ಸೃಷ್ಟಿಯಾಯಿತೋ ಅವನು ಪದ್ಮನಾಭಃ
೧೯೮) ಪ್ರಜಾಪತಿ
ಪ್ರಜಾಪತಿ ಎಂದರೆ ಸಮಸ್ತ ಜೀವಜಾತಗಳ ಪತಿ ಎನ್ನುವುದು ಒಂದು ಅರ್ಥ. ಇಲ್ಲಿ 'ಪತಿ' ಎಂದರೆ 'ರಕ್ಷಕ'. ಚತುರ್ಮುಖ ಬ್ರಹ್ಮನಿಗೂ ಪ್ರಜಾಪತಿ ಎನ್ನುತ್ತಾರೆ. ಜೀವ ಸ್ವರೂಪದ ಅಭಿಮಾನಿ ದೇವತೆಯಾದ ಬ್ರಹ್ಮ ಪ್ರಜಾಪತಿ ಹೌದು, ಆದರೆ ಚತುರ್ಮುಖನೂ ಕೂಡ ಒಬ್ಬ ಪ್ರಜೆ. ಸಮಸ್ತ ಜೀವಜಾತಗಳೊಂದಿಗೆ ಚತುರ್ಮುಖನನ್ನೂ ರಕ್ಷಿಸುವ ಭಗವಂತ ಪ್ರಜಾಪತಿಃ ಇನ್ನು 'ಪ್ರಜಾ' ಎಂದರೆ 'ಜ್ಞಾನ' , ಭಗವಂತ ಜ್ಞಾನದ ರಕ್ಷಕ. ನಮ್ಮಲ್ಲಿ "ಸಂತಾನವಿಲ್ಲದವರಿಗೆ ವೇದಶಾಸ್ತ್ರ ಹೇಳಬಾರದು" ಎನ್ನುವ ಅಪನಂಬಿಕೆ ಇದೆ. ಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖ ಇರುವುದು ನಿಜ. ಆದರೆ ಅಲ್ಲಿ ಮಕ್ಕಳು ಎಂದರೆ ಶಿಷ್ಯವರ್ಗ. ಯಾರು ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಹೇಳಲಾರರೋ, ಅಂಥವರಿಂದ ಜ್ಞಾನದ ರಕ್ಷಣೆ ಆಗದು, ಅವರಿಗೆ ವೇದ ಶಾಸ್ತ್ರ ಪಾಠ ಹೇಳಬಾರದು ಎಂದರ್ಥ. ನಮಗೆ ಸಂತಾನವಿದ್ದಾಕ್ಷಣ ಸದ್ಗತಿ ದೊರೆಯುವುದಿಲ್ಲ. ಸದ್ಗತಿ ನಾವು ಮಾಡುವ ಕರ್ಮದ ಮೇಲೆ ನಿರ್ಧಾರವಾಗುತ್ತದೆ. ಇನ್ನು ಪುರಾಣದಲ್ಲಿ "ಅಪುತ್ರಸ್ಯ ಗತಿರ್ನಾಸ್ತಿ" ಎಂದಿದೆ, ಇದನ್ನು "ಸಂತಾನವಿಲ್ಲದವರಿಗೆ ಮೋಕ್ಷವಿಲ್ಲ" ಎಂದು ಅಪಾರ್ಥ ಮಾಡುತ್ತಾರೆ. ಆದರೆ ನಿಜವಾದ ಅರ್ಥ " ನಾವು ಗಳಿಸಿದ ಜ್ಞಾನವನ್ನು ಮುಂದಿನ ಪೀಳಿಗೆಯ ಪ್ರಜಾ ಅಥವಾ ಪ್ರಜ್ಞೆ ಉಳ್ಳವರಿಗೆ ಕೊಡದೇ ಸತ್ತರೆ ಅಂತವರಿಗೆ ಸದ್ಗತಿ ಸಿಗದು" ಎಂಬುದಾಗಿದೆ. ಭಗವಂತ ಪ್ರಜಾ(ಜ್ಞಾನ) ರಕ್ಷಕ, ಹಾಗೂ ಜ್ಞಾನವನ್ನು ದಾನ ಮಾಡುವವರನ್ನು ಆತ ಉದ್ಧಾರ ಮಾಡುತ್ತಾನೆ. ಜ್ಞಾನದಾನ ಭಗವಂತನ ಜ್ಞಾನ ರಕ್ಷಣೆಯ ಅವಿಭಾಜ್ಯ ಅಂಗ. ಜ್ಞಾನ ರಕ್ಷಣೆಗಾಗಿ ಶ್ರೀಕೃಷ್ಣ, ಶರಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರಿಂದ, ಧರ್ಮರಾಯನಿಗೆ ಜ್ಞಾನದ ಉಪದೇಶ ಮಾಡಿಸಿ, ಜ್ಞಾನದ ರಕ್ಷಣೆ ಹಾಗೂ ಭೀಷ್ಮಾಚಾರ್ಯರ ಉದ್ಧಾರ ಮಾಡುತ್ತಾನೆ. ಈ ರೀತಿ ಜ್ಞಾನದ ಒಡೆಯ ಹಾಗೂ ಜ್ಞಾನದ ರಕ್ಷಕನಾದ ಭಗವಂತ ಪ್ರಜಾಪತಿಃ.
No comments:
Post a Comment