ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || 40 ||
೩೬೫) ವಿಕ್ಷರಃ
'ಕ್ಷರ' ಎನ್ನುವ ಪದದ ಒಂದು ಅರ್ಥ "ನಿರಂತರವಾಗಿ ಕೊಡುವುದು" ಹಾಗೂ ಇನ್ನೊಂದು ಅರ್ಥ "ನಾಶವಾಗುವುದು". ವಿಕ್ಷರ ಎಂದರೆ ವಿವಿಧ ಫಲವನ್ನೀಯುವವನು ಹಾಗೂ ನಾಶವಿಲ್ಲದವನು ಎಂದರ್ಥ. ಭಗವಂತ ನಿರಂತರವಾಗಿ ಬಯಸಿದ್ದನ್ನು ಕೊಡುವ ನಾಶವಿಲ್ಲದ ಶಕ್ತಿ. "ಕೇಳಿದರೆ ಕೇಳಬೇಕು-ಭಗವಂತನನ್ನು ಕೇಳಬೇಕು" ಇನ್ನೊಬ್ಬರನ್ನು ಕೇಳಿದರೆ ಅವರೆಷ್ಟು ಕೊಟ್ಟಾರು? ನಿರಂತರವಾಗಿ ಭಕ್ತರು ಕೇಳಿದ್ದನ್ನು ಕೊಡುವ ಭಗವಂತ ವಿಕ್ಷರಃ. ನಾವು ಭಗವಂತನಲ್ಲಿ ಕೇಳುವಾಗ "ನನಗೆ ಇದು ಬೇಕು , ನನಗೆ ಅದು ಬೇಕು ಎಂದು ಕೇಳದೆ "ಓ ಭಗವಂತ ನನಗೆ ಏನು ಬೇಕು ಎನ್ನುವುದು ನನಗೆ ಗೊತ್ತಿಲ್ಲ, ನನಗೇನು ಬೇಕೋ ಅದನ್ನು ಕೊಡು ಎಂದು ಕೇಳಬೇಕು". ಹೀಗೆ ಅನಂತ ಕಾಲದಲ್ಲಿ ನಿರಂತರವಾಗಿ ಕೊಡುವ ಭಗವಂತ ಕೊಟ್ಟ ಫಲವನ್ನು ದುರುಪಯೋಗ ಮಾಡಿಕೊಂಡರೆ ಅದನ್ನು ಕಸಿದುಕೊಳ್ಳುತ್ತಾನೆ ಎನ್ನುವ ಎಚ್ಚರ ಅಗತ್ಯ!
೩೬೬) ರೋಹಿತಃ
ಭಗವಂತ ಕೆಂಪು ಬಣ್ಣದವನು ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಉಪನಿಷತ್ತಿನಲ್ಲಿ ಹೇಳುವಂತೆ: "ಅಜಂ ಏಕಮ್ ಲೋಹಿತ-ಶುಕ್ಲ-ಕೃಷ್ಣಂ" ಅಂದರೆ ಒಂದು ಅಜ ಅದಕ್ಕೆ ಮೂರು ಬಣ್ಣಗಳು! ಇಲ್ಲಿ ಅಜ ಎಂದರೆ 'ಆಡು' ಅಲ್ಲ. ಅಜ ಎಂದರೆ 'ಹುಟ್ಟಿಲ್ಲದ ಆದಿ ತತ್ವ'. ಮೂರು ಬಣ್ಣಗಳಾದ ಕೆಂಪು-ಬಿಳಿ-ಕಪ್ಪು ಕ್ರಮವಾಗಿ ಸೃಷ್ಟಿ-ಸ್ಥಿತಿ-ಸಂಹಾರವನ್ನು ಸೂಚಿಸುತ್ತವೆ. ಸೃಷ್ಟಿಗೆ ಕಾರಣನಾದ ಭಗವಂತನ ಬಣ್ಣ ಕೆಂಪು, ಆದ್ದರಿಂದ ಆತ ರೋಹಿತಃ.
೩೬೭) ಮಾರ್ಗಃ
ಭಗವಂತ ಜ್ಞಾನಿಗಳು ಹುಡುಕುವ ತತ್ವ; ಮುಕ್ತಿಗೆ ಹೆದ್ದಾರಿ. ಎಲ್ಲರೂ ಕೊನೆಗೆ ಕಂಡು ಹುಡುಕಬೇಕಾದ ಶಕ್ತಿ. ಸಂಸಾರ ಸಾಗರವನ್ನು ದಾಟಿಸುವ ದೋಣಿಯೂ ಅವನೇ, ಹೋಗಿ ಸೇರಬೇಕಾದ ದಡವೂ ಅವನೇ. ಅವನನ್ನು ಸೇರುವ ಒಂದೇ ಒಂದು ಮಾರ್ಗ ಶರಣಾಗತಿ. ಆಗ ಆತ ಮುಕ್ತಿಯ ದಾರಿ ತೋರುತ್ತಾನೆ. ಆತನನ್ನು ಸೇರುವ ದಾರಿಯನ್ನು ನಮ್ಮ ಹೊರಗೆ ಹುಡುಕಿದರೆ ಸಿಗುವುದಿಲ್ಲ. ನಮ್ಮ ಹೊರಪ್ರಪಂಚವನ್ನು ಬಿಟ್ಟು ನಮ್ಮೊಳಗಿರುವ ಭಗವಂತನನ್ನು ನೋಡುವ ಪ್ರಯತ್ನ ನಮ್ಮನ್ನು ಭಗವಂತನತ್ತ ಕೊಂಡೊಯ್ಯಬಲ್ಲುದು.
೩೬೮) ಹೇತುಃ
ಎಲ್ಲಕ್ಕೂ ಕಾರಣಕರ್ತ. ಇಡೀ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ-ಎಲ್ಲಕ್ಕೂ ಕಾರಣಕರ್ತ ಭಗವಂತ ಹೇತುಃ.
೩೬೯) ದಾಮೋದರಃ
ಮೇಲ್ನೋಟಕ್ಕೆ ದಾಮೋದರ ಎಂದರೆ ತಾಯಿಯಿಂದ ಹೊಟ್ಟೆಗೆ ಹಗ್ಗ ಬಿಗಿಸಿಕೊಂಡವನು. ಇದು ಭಗವಂತನ ಕೃಷ್ಣಾವತಾರದ ಬಾಲ್ಯಕ್ಕೆ ಸಂಭಂದಪಟ್ಟ ಕಾಲಬದ್ಧ ಘಟನೆಗನುಗುಣವಾದ ಅರ್ಥ; ಆದರೆ ಭಗವಂತ ಮೂಲತಃ ದಾಮೋದರ, ಆದ್ದರಿಂದ ಈ ನಾಮಕ್ಕೆ ವಿಶಿಷ್ಟವಾದ ಅರ್ಥವಿದೆ. ಆತ ದಾಮ+ಉದರ; ಇಲ್ಲಿ ದಾಮ ಎಂದರೆ 'ದಮ' ಉಳ್ಳವರಿಗೆ ಒಲಿಯುವವನು. ದಮ ಎಂದರೆ 'ಮದ' ಎನ್ನುವ ಪದದ ವಿರುದ್ದ ಪದ. 'ಮದ' ಇಲ್ಲದಿರುವುದು 'ದಮ' ಅಂದರೆ ಇಂದ್ರಿಯಗಳನ್ನು ಸ್ವಾದೀನದಲ್ಲಿಟ್ಟುಕೊಳ್ಳುವುದು. ಉದರ ಎಂದರೆ ಉತ್+ಅರ; 'ಅರ' ಎಂದರೆ ದೋಷ, ಉದರ ಎಂದರೆ ಸರ್ವ ದೋಷಗಳನ್ನು ದಾಟಿನಿಂತ ಪರಿಪೂರ್ಣವಾದ ವಸ್ತು. ಆದ್ದರಿಂದ ದಾಮೋದರ ಎಂದರೆ ಇಂದ್ರಿಯ ನಿಗ್ರಹ ಉಳ್ಳವರು ತಿಳಿಯಬಹುದಾದ, ಅಳತೆಗೆ ಸಿಗದ, ಎಂದೂ ನಾಶವಿಲ್ಲದ, ಎಲ್ಲಕ್ಕಿಂತ ಮಿಗಿಲಾದ ಅಮಿತವನ್ನು ಕೊಡಬಲ್ಲ, ದೋಷರಹಿತವಾದ ತತ್ವ.
೩೭೦) ಸಹಃ
ಭಗವಂತ ಎಂದೂ ತಾಳ್ಮೆಗೆಡುವುದಿಲ್ಲ. ಆತ ಸಹನೆಯ ಮೂರ್ತಿ. ದುಷ್ಟ ಶಕ್ತಿಯನ್ನು ಗೆದೆಯುವ ಭಗವಂತ ಭಕ್ತರ ಅಪರಾಧವನ್ನು ಕ್ಷಮಿಸುವ ಕರುಣಾಳು. ಇಂತಹ ಭಗವಂತ "ಸಹಃ"
೩೭೧) ಮಹೀಧರಃ
ನಿಘಂಟಿನಲ್ಲಿ ಮಹೀಧರ ಪದದ ಅರ್ಥವನ್ನು ಹುಡುಕಿದರೆ ಭೂಮಿಯನ್ನು ಹೊತ್ತ ಬೆಟ್ಟಗಳು ಎನ್ನುವ ಅರ್ಥವನ್ನು ಕಾಣಬಹುದು. ಬೆಟ್ಟಗಳು ಭೂಮಿಯ ಮೇಲಿದ್ದರೂ ಸಹ ಭೂಮಿಯ ಸ್ಥಿರತೆಯನ್ನು ಕಾಪಾಡಲು ಬೆಟ್ಟಗಳು ಅತ್ಯಗತ್ಯ. ಆದರೆ ಇದು ಕೇವಲ ಲೌಕಿಕ ಅರ್ಥ. ನಿಜವಾಗಿ ಈ ಭೂಮಿಯನ್ನು ಹೊತ್ತವನು ಯಾರು? ಭೂಮಿ ಆಕಾಶದಲ್ಲಿ ಸಂಕರ್ಷಣ ಶಕ್ತಿಯಿಂದ ನಿಂತಿದೆ. ಈ ಸಂಕರ್ಷಣ ಶಕ್ತಿ (ಶೇಷ ಶಕ್ತಿ) ವಾತಾವರಣದಲ್ಲಿ (ವಾಯು ಶಕ್ತಿ) ನಿಂತಿದೆ. ಇವೆಲ್ಲವನ್ನು ಭಗವಂತ ಹೊತ್ತಿದ್ದಾನೆ. ಹೀಗೆ ಭೂಮಿಯನ್ನು ಈ ಸಂಪೂರ್ಣ ಜಗತ್ತನ್ನು ಧರಿಸಿರುವ ಭಗವಂತ ಮಹೀಧರಃ. "ನಾನು", "ನನ್ನಿಂದ" ಎನ್ನುವ ಅಹಂಕಾರವನ್ನು ಬಿಟ್ಟು, ನಮ್ಮೆಲ್ಲರನ್ನೂ, ಈ ಪ್ರಕೃತಿಯನ್ನು ಹೊತ್ತ ಸರ್ವ ಸಮರ್ಥ ಶಕ್ತಿ ಭಗವಂತ ಎಂದು ತಿಳಿದಾಗ ಮಾತ್ರ ಈ ಸತ್ಯ ಹೊಳೆಯುತ್ತದೆ.
೩೭೨) ಮಹಾಭಾಗಃ
ನಾವು ಪೂಜೆಯಲ್ಲಿ ಅರ್ಪಿಸುವ ಪೂಜಾ ದ್ರವ್ಯಗಳ ಮುಖ್ಯ ಭಾಗ ಸೇರುವುದು ಭಗವಂತನನ್ನು.
ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ |
ನತು ಮಾಮಭಿಜಾನಂತಿ ತತ್ವೇನಾತಸ್ಚ್ಯವಂತಿ ತೇ ||
ನಾವು ಪೂಜೆ ಮಾಡುವಾಗ ನಮಗೆ ಈ ಎಚ್ಚರ ಬೇಕು. ತಿಳಿದು ಮಾಡಿದಷ್ಟು ಉತ್ತಮ. ಯಾವ ದೇವತೆಗಳೂ ಭಗವಂತನಿಗೆ ಅರ್ಪಿಸದ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದಿಲ್ಲ.
ಭಗವಂತ ಮಹಾ ಭಾಗ್ಯ ಕೂಡಾ ಹೌದು. ಇಲ್ಲಿ ಭಾಗ್ಯ ಎಂದರೆ ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ.
೩೭೩) ವೇಗವಾನ್
ಭಗವಂತನ ವೇಗ ನಮ್ಮ ಮನಸ್ಸಿನ ವೇಗಕ್ಕಿಂತ ಮಿಗಿಲು. ಆತನನ್ನು ಹೊರ ಪ್ರಪಂಚದಲ್ಲಿ ಬೆನ್ನೆಟ್ಟುವುದು ಅಸಾಧ್ಯ. ಇಂತಹ ಭಗವಂತ ನಮ್ಮ ಅಂತರಂಗದಲ್ಲೇ ಇರುತ್ತಾನೆ. ಆದ್ದರಿಂದ ಆತನನ್ನು ಹೊರ ಪ್ರಪಂಚದಲ್ಲಿ ಹುಡುಕಾಡದೆ ನಮ್ಮೊಳಗೆ ಹುಡುಕಬೇಕು.
೩೭೪) ಅಮಿತಾಶನಃ
ಅಮಿತ+ಅಶನ ಅಂದರೆ ತುಂಬಾ ತಿನ್ನುವವ! ಭಗವಂತ ಎಲ್ಲವನ್ನೂ ತಿನ್ನುತ್ತಾನೆ, ಆದರೆ ಏನನ್ನೂ ತಿನ್ನುವುದಿಲ್ಲ! ನಾವು ಭಗವಂತನಿಗೆ ಅರ್ಪಿಸುವ ವಸ್ತುವನ್ನು ಆತ ಸ್ವೀಕರಿಸುತ್ತಾನೆ ಆದರೆ ಅದು ನಮಗೆ ತಿಳಿಯುವುದಿಲ್ಲ.
ಭಗವಂತ ಅಮಿತ+ಆಶಾ+ನ; ಅಮಿತವಾದ ಆಸೆಯಲ್ಲಿ ಬದುಕುವ ನಮ್ಮ ಆಸೆಯನ್ನು ಪೂರೈಸುವವ ಹಾಗೂ ನಮಗೆ ಬಯಕೆಗಳೇ ಇಲ್ಲದಂತೆ ಮಾಡಿ ಮೋಕ್ಷವನ್ನು ಕರುಣಿಸುವವ.
ಮುಂದುವರೆಯುವುದು...
No comments:
Post a Comment