ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7 ||
55) ಅಗ್ರಾಹ್ಯಃ
ಭಗವಂತ ಅನಂತ ವಿಶ್ವದಲ್ಲಿ ಅನಂತ ರೂಪದಲ್ಲಿ ತುಂಬಿದ್ದರೂ ಕೂಡ ಆತ ನಿರ್ವಿಕಾರ! ಇದನ್ನು ಹೇಗೆ ಊಹಿಸುವುದು ಅನ್ನುತೀರ? ಇಲ್ಲ , ಮನುಷ್ಯನ ಮನಸ್ಸಿನಿಂದ ಅವನನ್ನು ಸಂಪೂರ್ಣ ಗ್ರಹಿಸಲು ಅಸಾಧ್ಯ. ಏಕೆಂದರೆ ಆತ ಅಗ್ರಾಹ್ಯ - ಗ್ರಹಿಸಲು ಅಸಾಧ್ಯವಾದವನು. ಇಷ್ಟೇ ಅಲ್ಲ ಅವನು ಅಗ್ರ-ಅಹ್ಯ ಅಂದರೆ , ಎಲ್ಲಕ್ಕಿಂತ ಮೊದಲು ಇದ್ದವನು ಮತ್ತು ಎಲ್ಲಕ್ಕಿಂತ ಶ್ರೇಷ್ಠನಾದವನು ಅದ್ದರಿಂದ ಅವನು ಅಗ್ರಾಹ್ಯ.
56 ) ಶಾಶ್ವತಃ
ಭಗವಂತ ಎಂದೂ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವವನು.
ಅದ್ದರಿಂದ ಅವನು ಶಾಶ್ವತ.
57) ಕೃಷ್ಣಃ
ಕೃಷ್ಣ ಎನ್ನುವುದು ಮೇಲ್ನೋಟಕ್ಕೆ ವಸುದೇವ ದೇವಕಿಯರಲ್ಲಿ ಅವತರಿಸಿದ ಭಗವಂತನ ಹೆಸರು. ಆದರೆ ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ ಹೌದು. ಗರ್ಗಾಚಾರ್ಯರು, ತಾಯಿ ಯಶೋದೆಯಲ್ಲಿ ಮಗುವಿನ ಹೆಸರಿಡುವಾಗ ಹೀಗೆ ಹೇಳುತ್ತಾರೆ "ಈ ಮಗುವಿಗೆ ನಾನು ಹೆಸರಿಡುತ್ತಿಲ್ಲ. ಈ ಜಗತ್ತಿನಲ್ಲಿ ಇರುವ ಎಲ್ಲಾ ಹೆಸರೂ ಇವನದೇ, ಇವನಿಗೆ ಇರುವ ಹೆಸರನ್ನೇ ನಿಮಗೆ ನೆನಪಿಸುತ್ತಿದ್ದೇನೆ, ಈತ ಶ್ಯಾಮ, ಸುಂದರ, ವಾಸುದೇವ, ಶ್ರೀ ಕೃಷ್ಣ " ಎಂದು ಹೇಳಿ ನಾಮಕರಣ ಮಾಡುತ್ತಾರೆ. ಚತುರ್ವಂಶ ಮೂರ್ತಿಗಳಲ್ಲಿ ಇಪ್ಪತ್ನಾಲ್ಕುನೆ ರೂಪವೂ "ಕೃಷ್ಣ" . ಧರ್ಮ ದೇವತೆಯಲ್ಲಿ ಹುಟ್ಟಿದ ಒಂದು ರೂಪ "ಕೃಷ್ಣ" (ನರ, ನಾರಾಯಣ, ಹರಿ, ಕೃಷ್ಣ). ಭಗವಂತನ ಸಹಸ್ರ ರೂಪದಲ್ಲಿ ಕೃಷ್ಣ ರೂಪ ಕೂಡಾ ಒಂದು.
ಮೇಲಿನ ಐದು ಸಂದರ್ಭಗಳಲ್ಲಿ "ಕೃಷ್ಣ" ನಾಮಕನಾದ ಭಗವಂತನನ್ನು ಕಾಣುತ್ತೇವೆ. ಮೂಲತಃ ಕೃಷ್ಣ ಎಂದರೆ ಕಪ್ಪು, ನೀಲ ಮೇಘ ಶ್ಯಾಮ. ಈ ನೀಲ ಕಪ್ಪು ಅಂದದ ಪ್ರತೀಕ ಹಾಗೂ ಜ್ಞಾನದ ಪ್ರತೀಕ ಕೂಡ ಹೌದು. ದ್ರೌಪದಿ ಆ ಕಾಲದ ಅತ್ಯಂತ ಸೌಂದರ್ಯವತಿ. ಅದ್ದರಿಂದ ಆಕೆಯನ್ನು ಕೃಷ್ಣೆ ಎಂದು ಕರೆಯುತ್ತಿದ್ದರು.
ದ್ರೋಣಾಚಾರ್ಯರು ಬಿಳಿ ಗಡ್ಡದ ಶ್ವೇತ ವಸ್ತ್ರಧಾರಿಯಾಗಿದ್ದ ಕಪ್ಪಗಿನ ಆಕರ್ಷಕ ವ್ಯಕ್ತಿ. ಇಲ್ಲಿ ನೀಲ ಕಪ್ಪು ಜ್ಞಾನದ ಸಂಕೇತ. ಅತೀ ಕೋಪಬಂದಾಗ ನಾವು ಕೆಂಪಾಗಿ ಕಾಣುತ್ತೇವೆ. ಅದೇ ರೀತಿ ಸಂಪೂರ್ಣ ಜ್ಞಾನಿ ನೀಲವಾಗಿ ಕಾಣುತ್ತಾನೆ. ಅದ್ದರಿಂದ ಪರಿಪೂರ್ಣ ಜ್ಞಾನಿ ಭಗವಂತ ತನ್ನ ಅವತಾರದಲ್ಲಿ ಕಾಣಿಸಿದ್ದು ನೀಲಮೇಘ ಶ್ಯಾಮನಾಗಿ. ಇದೇ ರೀತಿಯಲ್ಲಿ ಇನ್ನೂ ಹಲವೂ ರೂಪದಲ್ಲಿ ಕೃಷ್ಣ ಎನ್ನುವ ನಾಮದ ಅರ್ಥವನ್ನು ಹುಡುಕಬಹುದು.
ಕೃಷ್ಣ ಹುಟ್ಟುವ ಮೊದಲು ದೇವಕಿಯ ಗರ್ಭದಲ್ಲಿ ಸಂಕರ್ಷಣ (ಬಲರಾಮ) ಇದ್ದ. ಸಂಕರ್ಷಣನನ್ನು ಸಂಕರ್ಷಿಸಿ ಆನಂತರ ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟಿದ ಕಾರಣಕ್ಕೆ ಆತನನ್ನು ಕೃಷ್ಣ ಎನ್ನುತ್ತಾರೆ.
ಆತ ಹುಟ್ಟಿದ ಮೇಲೆ ಮಾಡಿದ ಪ್ರತಿಯೊಂದು ಕೆಲಸವೂ ಕರ್ಷಣವೇ. ಪೂತನಿ, ಶಕಟಾಸುರ, ಕೇಶಿ, ಕಂಸ .. ಹೀಗೆ ದುಷ್ಟ ಶಕ್ತಿಗಳನ್ನೆಲ್ಲವನ್ನು ಕರ್ಷಣೆ ಮಾಡಿದವ ಕೃಷ್ಣ. ಹಾಗೆ ಜ್ಞಾನ ಮೂರ್ತಿಯಾದ ಆತ ಹಕ್ಕಿಗಳು , ಹಸುಗಳು, ಗೋಪಾಲಕರು, ಗೋಪಿಕೆಯರು ಹಾಗೂ ಯಮುನಾ ನದಿಯನ್ನೂ ಕೂಡ ತನ್ನ ಸೌಂದರ್ಯದಿಂದ ಆಕರ್ಷಸಿ ಉತ್ಕರ್ಷಣೆ ಮಾಡಿದವ. ಅದ್ದರಿಂದ ಆತ 'ಕೃಷ್ಣ'. ಅರ್ಜುನನ ರಥದಲ್ಲಿ ನಿಂತು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಕರ್ಷಣೆ ಮಾಡಿದ. ಹೀಗೆ ಅಸುರರನ್ನು ನಿಗ್ರಹಿಸಿ ಭೂ ಭಾರವನ್ನು ಕರ್ಷಣೆ ಮಾಡಿ, ಸಜ್ಜನರ ಹಾಗೂ ಧರ್ಮದ ಉದ್ಧಾರಕ್ಕಾಗಿ ಅವತರಿಸಿದ ಭಗವಂತ 'ಕೃಷ್ಣ' .
ಇನ್ನು ಕೃಷ್ಣ ಪದವನ್ನು ಒಡೆದರೆ ಕೃಷಿ+ಣ=ಕೃಷ್ಣ . ಕೃಷಿ ಅಂದರೆ ಭೂಮಿ, ಣ ಅಂದರೆ ಬಲ ಅಥವ ಆನಂದ. ಅದ್ದರಿಂದ ಕೃಷ್ಣ ಎಂದರೆ ಧರ್ಮವನ್ನು ಬಲಪಡಿಸಲು ಭೂಮಿಯಲ್ಲಿ ಅವತರಿಸಿದ ಆನಂದಸ್ವರೂಪ ಭಗವಂತ.
58) ಲೋಹಿತಾಕ್ಷಃ
ಲೋಕ+ಹಿತ+ಅಕ್ಷ - ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳು ಕಣ್ಣು ಉಳ್ಳವನು ಎಂದರ್ಥ. ಈ ನಾಮದ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ಧ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ ಬರುತ್ತಿದ್ದಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ. ಇದನ್ನು ನೋಡಿದ ಬೀಷ್ಮ ತನ್ನ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ:
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ; ನೀನಲ್ಲದೆ ನಮಗೆ ಗತಿ ಇನ್ನ್ಯಾರು? "ಎನ್ನುತ್ತಾನೆ. ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ. ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ, ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು, ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು ಪೂರ್ತಿ ಮಾಡುವುದು ಕಂಡುಬರುತ್ತದೆ. ಇಂತಹ ಅರಳುಗಣ್ಣಿನ ಭಗವಂತ ಲೋಹಿತಾಕ್ಷ !
59) ಪ್ರತರ್ದನಃ
ಭಾಷೆಯಲ್ಲಿ, ಬರವಣಿಗೆಯಲ್ಲಿ, 'ಸಂಕ್ಷಿಪ್ತ ' (Abbreviation) ಉಪಯೋಗಿಸುವುದು ಮೂಲತಃ ಬಂದಿದ್ದು ಸಂಸ್ಕೃತದಿಂದ. ಸಂಸ್ಕೃತ ಗ್ರಂಥಗಳಲ್ಲಿ ವಿಶೇಷವಾಗಿ ಪದದ ಸಂಕ್ಷಿಪ್ತ ರೂಪವನ್ನು ಉಪಯೋಗಿಸುತ್ತಾರೆ .
ಪ್ರತರ್ದನ ಎನ್ನುವ ಪದವನ್ನು ಈ ಕೆಳಗಿನಂತೆ ಬಿಡಿಸಬಹುದು.
1) ಪ್ರ+ತರ್ದನ 2) ಪ್ರ+ತರ್ದ+ನಯತಿ
ಪ್ರ+ತರ್ದನ- ಇಲ್ಲಿ 'ಪ್ರ' ಎನ್ನುವುದು ಪ್ರಕ್ರುಷ್ಟರು ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ. ಪ್ರತರ್ದನಃ ಅಂದರೆ ಪ್ರಕ್ರುಷ್ಟರಿಗೆ ಹಿಂಸೆ ಕೊಡುವ ದುಷ್ಟ ಶಕ್ತಿಯನ್ನು ನಿರ್ಮೂಲ ಮಾಡುವವನು ಎಂದರ್ಥ.
ಪ್ರ+ತರ್ದ+ನಯತಿ- ಇಲ್ಲಿ 'ಪ್ರ' ಎನ್ನುವುದು ಪ್ರಹ್ಲಾದ ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ. ತರ್ದ ಎಂದರೆ ಹಿಂಸೆ. ನಯತಿ ಎಂದರೆ ಹೋಗಲಾಡಿಸಿದವನು. ಅದ್ದರಿಂದ ಪ್ರತರ್ದನಃ ಎಂದರೆ ಪ್ರಹ್ಲಾದನಿಗೆ ಹಿಂಸೆ ಕೊಟ್ಟಂತಹ ಹಿರಣ್ಯಕಶಿಪುವನ್ನು ಮರ್ದಿಸಿ ಆತನ ಕಷ್ಟವನ್ನು ಪರಿಹರಿಸಿ ಲೋಕವನ್ನು ಹಿಂಸೆಯಿಂದ ಪಾರುಮಾಡಿದವನು.
60) ಪ್ರಭೂತಃ
ಭೂಮ ಎಂದರೆ ಪರಿಪೂರ್ಣತೆ. ಪ್ರಭೂತಿ ಎಂದರೆ ಭೂತಿಗಲ್ಲಿ ಪ್ರಕ್ರುಷ್ಟವಾದ ಸ್ಥಿತಿ. ಪ್ರಭೂತ ಎಂದರೆ ಪರಿಪೂರ್ಣವಾದ ಆನಂದಸ್ವರೂಪನಾದ, ಗುಣಗಳಿಂದ ತುಂಬಿ ತುಳುಕುವ ಭಗವಂತ.
61) ತ್ರಿಕಕುಬ್ಧಾಮ
ತ್ರಿ+ ಕಕುತ್+ ಧಾಮ= ತ್ರಿಕಕುಬ್ಧಾಮ ; ಇಲ್ಲಿ ‘ತ್ರಿ’ ಅಂದರೆ ಮೂರು, ‘ಕಕುತ್’ ಅಂದರೆ ಶಿಖೆ ಅಥವಾ ತುತ್ತ-ತುದಿ, ಧಾಮ ಎಂದರೆ ನೆಲೆಸಿರುವವನು. ತ್ರಿಕಕುಬ್ಧಾಮ ಎಂದರೆ ಮೂರು ಶಿಖೆಗಳಲ್ಲಿ ನೆಲೆಸಿರುವವನು.
ಈಗ ನಾವು ಮೂರು ಶಿಖೆಗಳು ಯಾವುದೆಂದು ನೋಡೋಣ.
ಮೂರು ಲೋಕಗಳು - ಭೂಮಿ , ಅಂತರಿಕ್ಷ ಮತ್ತು ಸ್ವರ್ಗ. ಈ ಮೂರು ಲೋಕಗಳ ತುದಿಯಲ್ಲಿ ಮೂರು ಸ್ಥಾನಗಳು. ಭೂಮಿಯಲ್ಲಿ ‘ಶ್ವೇತದ್ವೀಪ’, ಅಂತರಿಕ್ಷದಲ್ಲಿ ‘ಅನಂತಾಸನ’, ಸ್ವರ್ಗದಲ್ಲಿ ‘ವೈಕುಂಠ’. ಮೂರು ತೇಜೋಮಯ ಮೂರ್ತಿಗಳು-ಬ್ರಹ್ಮ, ವಿಷ್ಣು, ಮಹೇಶ್ವರ. ಓಂಕಾರದ ಮೂರು ಅಕ್ಷರಗಳು -ಅ, ಉ, ಮ್.
ಈ ಮೇಲಿನ ಮೂರು ಅಕ್ಷರದಿಂದಾದ ಮೂರು ಪದಗಳು ‘ಭೂಃ, ಭುವಃ ಸ್ವಃ (ಭೂರ್ಭುವಃ ಸ್ವಃ )’, ಈ ಪದಗಳಿಂದಾದ ಮೂರು ಪಾದಗಳು- “ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್”. ಮೂರು ಪಾದಗಳಿಂದಾದ ಮೂರು ವರ್ಗ (ಸೂಕ್ತಗಳಲ್ಲಿ ಶ್ರೇಷ್ಠವಾದ ಪುರುಷ ಸೂಕ್ತದಲ್ಲಿ ಮೂರು ವರ್ಗಗಳಿವೆ. ಒಂದರಿಂದ-ಐದು ಮೊದಲ ವರ್ಗ, ಆರರಿಂದ-ಹತ್ತು ಎರಡನೇ ವರ್ಗ, ಹನ್ನೊಂದರಿಂದ-ಹದಿನಾರು ಮೂರನೇ ವರ್ಗ). ಸೂಕ್ತಗಳಿಂದಾದ ಅತ್ಯಂತ ಶ್ರೇಷ್ಠವಾದ ಮೂರು ವೇದಗಳು “ಋಗ್ವೇದ, ಯಜುರ್ವೇದ ಮತ್ತು ಸಾಮವೇದ”.
ಅದ್ದರಿಂದ ತ್ರಿಕಕುಬ್ಧಾಮ ಅಂದರೆ: ಮೂರು ಲೋಕದಲ್ಲಿ ನೆಲೆಸಿರುವವನು, ಮೂರು ಲೋಕದಲ್ಲಿರುವ ಮೂರು ನಿತ್ಯ ಸ್ಥಾನದಲ್ಲಿ ನೆಲೆಸಿರುವವನು,ಅಲ್ಲಿ ನೆಲೆಸಿರುವ ಮೂರು ತೇಜೋಮಯ ಮೂರ್ತಿಗಳಲ್ಲಿ ನೆಲೆಸಿರುವವನು.
ಮೂರು ಅಕ್ಷರಗಳಿಂದಾದ ಓಂಕಾರದಲ್ಲಿ ಪ್ರತಿಪಾದ್ಯನಾದವನು, ಮೂರು ವ್ಯಾಹುತಿಗಳಿಂದ ವಾಚ್ಯನಾದವನು, ಗಾಯತ್ರಿಯ ಮೂರು ಪಾದಗಳಲ್ಲಿ ವಾಚ್ಯನಾದವನು, ಪುರುಷ ಸೂಕ್ತದ ಮೂರು ವರ್ಗದಿಂದ ವಾಚ್ಯನಾದವನು
ಮೂರು ವೇದದಿಂದ ವಾಚ್ಯನಾದವನು.
ಒಟ್ಟಾರೆ ತ್ರಿಕಕುಬ್ಧಾಮ ಎಂದರೆ ಮೂರು ಲೋಕದಲ್ಲಿ, ತ್ರಿಮೂರ್ತಿ ರೂಪನಾಗಿ, ಸಮಸ್ತ ಶಬ್ದ ಭಂಡಾರ ಮತ್ತು ಸಮಸ್ತ ಶಾಸ್ತ್ರದಿಂದ ವಾಚ್ಯನಾದ ಭಗವಂತ.
62) ಪವಿತ್ರಂ
ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು "ಪವಿತ್ರ" . ಆದರೆ ಈ ಬೌದ್ಧಿಕ ಶರೀರ ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು ಅನೇಕ ! ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ. ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪವಿತ್ರವಾದ ಮೋಕ್ಷವನ್ನು ಕರುಣಿಸುವ ಭಗವಂತ "ಪವಿತ್ರಂ"
63) ಮಙ್ಗಲಂ (ಮಂಗಲಂ) ಪರಮ್
ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಸಾಮಾನ್ಯವಾಗಿ ಮಧುವೆಗೆ ಕಲ್ಯಾಣ ಎನ್ನುತ್ತಾರೆ. ಮಧುವೆಯ ನಂತರ ಧರಿಸುವ ತಾಳಿಯನ್ನು "ಮಂಗಳ ಸೂತ್ರ" ಎನ್ನುತ್ತಾರೆ. ಆದರೆ ಎಲ್ಲಾ ಮಧುವೆಯು ಮಂಗಲವಲ್ಲ! ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ ಅಂತಹ ಮಧುವೆ ಮಾತ್ರ ಕಲ್ಯಾಣ. ನಮ್ಮನ್ನು ಅಧಃಪತನಕ್ಕೆ ಒಯ್ಯುವ ಮಧುವೆ ಅಮಂಗಲ. ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವ ಇಹಕರ್ಮ ಮಂಗಲ. (ಪಾಂಡವರು ಮಾಡಿದ ಕರ್ಮ); ತನ್ನ ಸ್ವಾರ್ಥಕ್ಕಾಗಿ ಮಾಡುವ ಪರಕರ್ಮ ಅಮಂಗಲ. ಕೇವಲ ಮೇಲಕ್ಕೇರುವುದು ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ - ಅದೇ ಮೋಕ್ಷ. ಆದ್ದರಿಂದ ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
ಮುಂದುವರೆಯುವುದು.....
No comments:
Post a Comment