ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ |
ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ || 20 ||
೧೮೨) ಮಹೇಷ್ವಾಸಃ
ಮಹೇಷ್ವಾಸ(ಮಹಾ+ಇಷು+ಆಸ) ಅಂದರೆ ಮಹಾನ್ ಬಿಲ್ಲು ಹೊತ್ತ ಬಿಲ್ಲೋಜ. ಭಗವಂತನ ಅವತಾರದಲ್ಲಿ ಈ ನಾಮಕ್ಕೆ ಸಂಬಂಧಪಟ್ಟ ಕೆಲವು ನಿದರ್ಶನಗಳನ್ನು ಕಾಣುತ್ತೇವೆ. ಸೀತಾ ಸ್ವಯಂವರದಲ್ಲಿ ಶ್ರೀರಾಮ ಶಿವನ ಧನುಸ್ಸನ್ನು ಮುರಿದಿರುವುದು, ಬಿಲ್ಲ ಹಬ್ಬದಲ್ಲಿ ಶ್ರೀಕೃಷ್ಣ ಕಂಸ ಪೂಜಿಸುತ್ತಿದ್ದ ಶಿವಧನುಸ್ಸನ್ನು ಮುರಿದು, ಕಂಸನ ಸಂಹಾರ ಮಾಡಿರುವುದು, ಶ್ರೀರಾಮ ಪರಶುರಾಮನಿಂದ ಪಡೆದ ವೈಷ್ಣವ ಧನುಸ್ಸನ್ನು ಧರಿಸಿ, ರಾವಣ-ಕುಂಭಕರ್ಣರ ಸಂಹಾರ ಮಾಡಿರುವುದು, ಇತ್ಯಾದಿ.
ಈ ಮೇಲಿನ ಸಂದರ್ಭಗಳಲ್ಲಿ ಯಾರೂ ಎತ್ತಲು ಆಗದ ಶಿವ ಧನುಸ್ಸನ್ನು ಹರಿ ಹೇಗೆ ಎತ್ತಿದ ? ಆ ಬಿಲ್ಲು ಎಷ್ಟು ದೊಡ್ಡದಿತ್ತು ? ಇತ್ಯಾದಿ ಪ್ರಶ್ನೆಗಳು ನಮಗೆ ಬರುತ್ತದೆ. ಬಿಲ್ಲು ಸಾಮಾನ್ಯವಾಗೇ ಇದ್ದರೂ, ಅದರಲ್ಲಿ ಶಿವಶಕ್ತಿ ಸನ್ನಿಧಾನವಿದ್ದುದರಿಂದ, ಯಾರಿಂದಲೂ ಅದನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಹೇಳಿದಂತೆ, ಶಿವಶಕ್ತಿ-ವಿಷ್ಣುಶಕ್ತಿಗಳು ಹಾಲಿನಲ್ಲಿರುವ ಬೆಣ್ಣೆಯಂತೆ, ಎರಡು ಅನ್ಯೋನ್ಯ ಶಕ್ತಿಗಳು. ಧನುರ್ಧಾರಣೆ ಈ ಶಕ್ತಿಗಳ ಸಮಾಗಮದ ಸಂಕೇತ.
ಈ ರೀತಿ ಮಹಾನ್ ಧನುಸ್ಸನ್ನು ಮುರಿದವ, ಮಹಾನ್ ಧನುಸ್ಸನ್ನು ಹಿಡಿದು ದುಷ್ಟಶಕ್ತಿಗಳ ಸಂಹಾರ ಮಾಡಿದವ, ಅರ್ಜುನನ ಒಳಗೆ ನರನಾಮಕನಾಗಿದ್ದು, ಗಾಂಢೀವ ಧನುಸ್ಸಿನಿಂದ ಧರ್ಮಸಂಸ್ಥಾಪನೆ ಮಾಡಿದ ಭಗವಂತ ಮಹೇಷ್ವಾಸಃ.
೧೮೩) ಮಹೀಭರ್ತಾ
ಇಲ್ಲಿ ಮಹೀ ಎಂದರೆ ಭೂಮಿ. ಭರ್ತಾ ಎಂದರೆ ಧರಿಸಿದವ ಅಥವಾ ಪತಿ.
ಭಗವಂತನನ್ನು ಭೂ ಮಾತೆಯ ಪತಿ ಎನ್ನುತ್ತಾರೆ. ಈ ಭೂಮಿಯನ್ನು ಸಂಕರ್ಷಣ ಶಕ್ತಿಯ ಮೂಲಕ ಹಿಡಿದಿಟ್ಟು ನಿರಂತರ ಸಲಹುವವನು ಮಹೀಭರ್ತಾ.
೧೮೪) ಶ್ರೀನಿವಾಸಃ
'ಶ್ರೀ' ಅಂದರೆ ಸಿರಿ, ಸಂಪತ್ತು, ಮಾತೆ ಲಕ್ಷ್ಮಿ, ವೇದ ವಿದ್ಯೆಗಳು, ಇತ್ಯಾದಿ. ಭಗವಂತ ಮಾತೆ ಶ್ರೀಲಕ್ಷ್ಮಿಯನ್ನು ನಿರಂತರ ತನ್ನ ಹೃದಯದಲ್ಲಿ ಧರಿಸಿರುತ್ತಾನೆ. ಎಲ್ಲಾ ಸಂಪತ್ತುಗಳ, ಅಮೂಲ್ಯವಾದ ವೇದ-ವಿದ್ಯೆಗಳ ನೆಲೆಯಾದ ಭಗವಂತ-ಶ್ರೀನಿವಾಸಃ
೧೮೫) ಸತಾಂಗತಿಃ
ಸಾತ್ವಿಕರಿಗೆ ಸಜ್ಜನರಿಗೆ ಸದಾ ಆಶ್ರಯದಾತನಾದ ಭಗವಂತ ಸತಾಂಗತಿಃ.
ಭಗವಂತ ಎಲ್ಲರಿಗೂ ಆಶ್ರಯದಾತ, ಆದರೆ ಆಶ್ರಯದ ಅರಿವು ಇರುವುದು ಕೇವಲ ಸಜ್ಜನರಿಗೆ ಮಾತ್ರ. ಅರಿವೇ ಇರವು. ಆಶ್ರಯದ ಅರಿವಿಲ್ಲದಿದ್ದರೆ ನಾವು ಅಭದ್ರತೆಯ ಭಯದಲ್ಲಿ ಬದುಕುತ್ತೇವೆ. ಆದರೆ ಜ್ಞಾನಿಗಳು ಭಗವಂತನ ಆಶ್ರಯವನ್ನು ಸದಾ ಅನುಭವಿಸುತ್ತಿರುತ್ತಾರೆ. ಏನೇ ಬಂದರೂ ಭಗವಂತನಿದ್ದಾನೆ ಎನ್ನುವ ಅಚಲ ವಿಶ್ವಾಸದಲ್ಲಿ ಸಂತೋಷವಾಗಿ ಬದುಕುತ್ತಾರೆ.
೧೮೬) ಅನಿರುದ್ಧಃ
ಈ ಹಿಂದೆ ನಾವು ಭಗವಂತನ ಚತುರ್ಮೂರ್ತಿ ರೂಪದ ಬಗ್ಗೆ ವಿಶ್ಲೇಷಿಸಿದ್ದೇವೆ. ಸೃಷ್ಟಿಯ ಆರಂಭದಲ್ಲಿ ಭಗವಂತ ನಾಲ್ಕು ಕ್ರಿಯೆಗಳನ್ನು ಪ್ರತಿನಿಧಿಸುವ ನಾಲ್ಕು ರೂಪದಲ್ಲಿ ವ್ಯಕ್ತವಾಗುತ್ತಾನೆ. ಅವುಗಳೆಂದರೆ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ. ವಾಸುದೇವ ಮೋಕ್ಷಪ್ರದವಾದ ರೂಪ, ಸಂಕರ್ಷಣ ಸಂಹಾರಪ್ರದವಾದ ರೂಪ, ಪ್ರದ್ಯುಮ್ನ ಸೃಷ್ಟಿಕಾರಣ ರೂಪ ಹಾಗು ಅನಿರುದ್ಧ ಸ್ಥಿತಿಕಾರಣ ರೂಪ.
ಜಗತ್ತಿನ ಸ್ಥಿತಿ ಅಥವಾ ರಕ್ಷಣೆಗೆ ಭಗವಂತ ತಾಳಿದ ರೂಪ ಅನಿರುದ್ಧ ರೂಪ. ಬಾಹ್ಯಪ್ರಜ್ಞೆಯ ತಡೆ ಇಲ್ಲದೆ, ಬಾಹ್ಯಪ್ರಜ್ಞೆಯನ್ನು ಅನುಭವಿಸುವ ಭಗವಂತನ ರೂಪ ಅನಿರುದ್ಧ ರೂಪ. ಹೀಗೆ ನಮ್ಮ ದೇಹದಲ್ಲಿರುವ ಪಂಚಪ್ರಾಣಗಳ ಚಲನೆಗೆ ಕಾರಣ ಶಕ್ತಿಯಾದ ಭಗವಂತ "ಅನಿರುದ್ಧ".
೧೮೭) ಸುರಾನಂದಃ
ಸುರರು ಅಂದರೆ ದೇವತೆಗಳು. ದೇವತೆಗಳ ಒಳಗಿದ್ದು ಅವರಿಗೆ ನಿರಂತರ ದುಃಖ ಸ್ಪರ್ಶವಿಲ್ಲದ ಆನಂದವನ್ನು ಕೊಡುವವನು. ಮುಕ್ತರಿಗೆ, ಮುಕ್ತಿ ಯೋಗ್ಯರಾದವರಿಗೆ ಆನಂದವನ್ನು ಕೊಡುವ ಭಗವಂತ ಸುರಾನಂದಃ
೧೮೮) ಗೋವಿಂದಃ
ಎಚ್ಚರ ಸ್ಥಿತಿಯಲ್ಲಿ ನಮ್ಮ ಆಜ್ಞಾಚಕ್ರದಲ್ಲಿ ಮೂರನೇ ಕಣ್ಣಾಗಿ ಕುಳಿತವನು ಗೋವಿಂದ. ಒಳಗಣ್ಣಿನಿಂದ ನಮಗೆ ಮಾರ್ಗದರ್ಶನ ಮಾಡುವ ಶಕ್ತಿ. ಅದಕ್ಕಾಗಿ ಪ್ರಾತಃಕಾಲದಲ್ಲಿ "ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ " ಎಂದು ಪ್ರಾರ್ಥನೆ ಮಾಡುತ್ತೇವೆ. ಅಂದರೆ "ನಮ್ಮ ಆಜ್ಞಾಚಕ್ರದಲ್ಲಿ ಕುಳಿತು ನಮಗೆ ಮಾರ್ಗದರ್ಶನ ಮಾಡು" ಎಂದರ್ಥ. ಊಟದ ಸಮಯದಲ್ಲಿ ನಮ್ಮ ಅಂತಃಕರಣ ಜಾಗೃತಿಗಾಗಿ "ಗೋವಿಂದ" ಸ್ಮರಣೆ ಮಾಡುತ್ತೇವೆ.
ಇಂದ್ರ ಗೋವರ್ಧನ ಪರ್ವತವನ್ನೆತ್ತಿದ ಭಗವಂತನನ್ನು, ಗೋವಿಂದ ಎಂದು ಕರೆಯುತ್ತಾನೆ. ಭೂಮಿಯ ಮೇಲೆ ಅನಂತ ರೂಪದಲ್ಲಿ ಇಳಿದು ಬಂದ ಭಗವಂತ "ಗೋವಿಂದಃ".
೧೮೯) ಗೋವಿದಾಂಪತಿಃ
ವೇದಗಳನ್ನು ತಿಳಿದವನು, ವೇದಗಳನ್ನು ಸಲಹುವವನು, ದೇವತೆಗಳ ಅಧಿಪತಿಯಾದ ಭಗವಂತ "ಗೋವಿದಾಂಪತಿಃ".
ಮುಂದುವರೆಯುವುದು....
No comments:
Post a Comment