ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || 31 ||
೨೮೪) ಅಮೃತಾಂಶೂದ್ಭವ.
ಅಮೃತಾಂಶು ಎಂದರೆ ಅಮೃತದ ಕಿರಣಗಳುಳ್ಳ ಚಂದ್ರ. ಚಂದ್ರನನ್ನು ಸೃಷ್ಟಿ ಮಾಡಿದ ಶಕ್ತಿ ಅಮೃತಾಂಶೂದ್ಭವ. ಪೌರಾಣಿಕವಾಗಿ, ಸಪ್ತರ್ಷಿಗಳಲ್ಲಿ ಒಬ್ಬನಾದ ಅತ್ರಿ ಮುನಿ ಹಾಗೂ ಆತನ ಹೆಂಡತಿ ಅನುಸೂಯೆ ತಪಸ್ಸಿನಲ್ಲಿ ತಮಗೆ ತ್ರಿಮೂರ್ತಿಗಳೇ ಮಕ್ಕಳಾಗಬೇಕು ಎಂದು ಪ್ರಾರ್ಥಿಸಿದಾಗ, ನಾರಾಯಣ-ದತ್ತನಾಗಿ, ಶಿವ-ದುರ್ವಾಸನಾಗಿ ಅವತರಿಸುತ್ತಾರೆ. ಬ್ರಹ್ಮನಿಗೆ ಭೂಲೋಕದಲ್ಲಿ ಅವತಾರವಿಲ್ಲ. ಅದಕ್ಕಾಗಿ ಚಂದ್ರನಲ್ಲಿ ಸನ್ನಿಹಿತನಾಗಿ ಸೋಮನಾಗಿ ಅತ್ರಿಯಲ್ಲಿ ಜನಿಸುತ್ತಾನೆ. ದತ್ತಾತ್ರಯ ಎಂದರೆ ದತ್ತ, ದುರ್ವಾಸ ಹಾಗು ಸೋಮ.
ಇನ್ನೊಂದು ರೀತಿಯಲ್ಲಿ ನೋಡಿದಾಗ ಅಮೃತರು ಎಂದರೆ ಮೃತಿ ಇಲ್ಲದ ಮುಕ್ತರು. ಮುಕ್ತರನ್ನು ಹುಟ್ಟು-ಸಾವುಗಳ ಸಂಕೋಲೆಯಿಂದ ಬಿಡಿಸಿ ಮರು ಹುಟ್ಟು ಇಲ್ಲದ ಉನ್ನತ ಸ್ಥಿತಿ ಕೊಟ್ಟ ಭಗವಂತ ಅಮೃತಾಂಶೂದ್ಭವ.
೨೮೫) ಭಾನು.
'ಭಾ' ಎಂದರೆ ಜ್ಞಾನ, ಬೆಳಕು, ಆನಂದ, ಇತ್ಯಾದಿ. ಜಗತ್ತಿನಲ್ಲಿರುವ ಎಲ್ಲಾ ಜ್ಞಾನಾನಂದಗಳು ಯಾರಿಗೆ ಸೇರಿವೆಯೋ ಅವನು ಭಾನು. ಜಗತ್ತನ್ನು ಬೆಳಗುವವನು, ಸೂರ್ಯನಲ್ಲಿ, ಸೂರ್ಯಕಿರಣದಲ್ಲಿ ಸನ್ನಿಹಿತನಾದ ಭಗವಂತ ಭಾನು.
೨೮೬) ಶಶಬಿಂದು.
ಮೇಲ್ನೋಟಕ್ಕೆ ಶಶಬಿಂದು ಎಂದರೆ 'ಮೊಲದ ಬಿಂದು'. ಇದು ಯಾವುದೇ ನಿರ್ದಿಷ್ಟ ಅರ್ಥವನ್ನು ಕೊಡುವುದಿಲ್ಲ. ಕಾಡಿನಲ್ಲಿದ್ದಾಗ ಶ್ರೀರಾಮಚಂದ್ರ ಮೊಲದ ಭೇಟೆಯಾಡುತ್ತಾನೆ. ಆಗ ಆ ಮೊಲದ ಒಂದು ಹನಿ ನೆತ್ತರು ಆತನ ಮೇಲೆ ಬೀಳುತ್ತದೆ. ಮೊಲದ ನೆತ್ತರಿನಿಂದ ತೊಯ್ದ ಶ್ರೀರಾಮನನ್ನು "ಶಶಬಿಂದು" ಎಂದು ಕರೆದರು ಎನ್ನುವುದು ಮೇಲ್ನೋಟದ ಅರ್ಥ. ಆದರೆ ಈ ನಾಮದಲ್ಲಿ ಇನ್ನೂ ಅರ್ಥಪೂರ್ಣವಾದ ವಿಷಯವಿದೆ. 'ಶಶ' ಎಂದರೆ ಆನಂದದ-ಆನಂದ ಅಂದರೆ ಮಹದಾನಂದ, 'ಬಿಂದು' ಎಂದರೆ ಅವಯವ. ಭಗವಂತನ ಸರ್ವ ಅವಯವ ಆನಂದಪೂರ್ಣ. ಸ್ವಯಂ ಆನಂದಪೂರ್ಣನಾಗಿದ್ದು ನಮ್ಮನ್ನು ಪರಮಾನಂದದ ಸ್ಥಿತಿಗೆ ಕೊಂಡೊಯ್ಯುವ ಭಗವಂತ ಶಶಬಿಂದು.
೨೮೭) ಸುರೇಶ್ವರ.
ನಮ್ಮಲ್ಲಿ ಸತ್ಕರ್ಮ ಮಾಡಿಸಿ ನಮ್ಮನ್ನು ಊರ್ಧ್ವಮುಖ ನಡೆಸಿ ಉದ್ದಾರ ಮಾಡುವವರು ಸುರರು. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಎಲ್ಲಾ ದೇವತೆಗಳನ್ನು ನಿಯಂತ್ರಿಸುವ ಪರಮೇಶ್ವರನಾದ ಭಗವಂತ ಸುರೇಶ್ವರ. ಇಂದ್ರಾದಿ ದೇವತೆಗಳು ನಮಗೆ ಸುಖ ಕೊಡಬೇಕಾದರೆ ನಮ್ಮಲ್ಲಿ ಕರ್ಮಫಲ ಬೇಕು ಹಾಗೂ ಭಗವಂತನ ಅನುಗ್ರಹ ಬೇಕು. ನಮಗೆ ಯಾವ ಗ್ರಹ-ದೇವತೆಗಳೂ ತೊಂದರೆ ಕೊಡುವುದಿಲ್ಲ. ನಮ್ಮ ಕರ್ಮಕ್ಕನುಸಾರವಾಗಿ ನಮ್ಮ ಗ್ರಹಗತಿ ನಿರ್ಧಾರವಾಗುತ್ತದೆ. ಕೆಲವರಿಗೆ 'ಶನಿಕಾಟ' ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಯಾವ ದೇವತೆಗಳೂ ನಮಗೆ 'ಕಾಟ' ಕೊಡುವುದಿಲ್ಲ. ಗ್ರಹಗತಿ ಕೇವಲ ನಮ್ಮ ಪ್ರಾರಬ್ದಕರ್ಮವನ್ನು ಹೇಳುತ್ತದೆ. ನಮ್ಮನ್ನು ನಿಯಂತ್ರಿಸುವ ಸರ್ವ ದೇವತೆಗಳ ಈಶ್ವರ ಎಲ್ಲವುದರ ಸೂತ್ರಧಾರ. ನಮ್ಮ ಜೀವನ ಒಂದು ನಾಟಕ ಹಾಗು ಇಲ್ಲಿ ನಾವು 'ಪಾತ್ರಧಾರಿಗಳು'. ಈ ನಾಟಕ ಸೂತ್ರಧಾರನ ನಿಯಮದಂತೆ ನಡೆಯುತ್ತದೆ. ಸೂತ್ರಧಾರನ ನಿಯಮದ ಚೌಕಟ್ಟಿನಲ್ಲಿ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸುವುದೊಂದೇ ನಮ್ಮ ಕರ್ತವ್ಯ. ಇಷ್ಟು ತಿಳಿದು ಬದುಕಿದರೆ ನಾವು ನಮ್ಮ ಜೀವನವನ್ನು ಸಂಪೂರ್ಣ ಆನಂದಿಸಬಹುದು.
ನಮ್ಮನ್ನು ನಿಯಂತ್ರಿಸುವ ಸುರರನ್ನು ನಿಯತ್ರಿಸುವವರು ಬ್ರಹ್ಮಾದಿಗಳು. ಈ ಬ್ರಹ್ಮಾದಿಗಳ ಒಡೆಯ ಭಗವಂತ . ನಾವು ಸುಖಪಡುವುದು ದುಃಖಪಡುವುದು ಎಲ್ಲವೂ ಆತನಿಂದ ಹಾಗೂ ಇದು ಭಗವಂತನ ಶಿಕ್ಷಣ ಕ್ರಮ. ನಮ್ಮ ಎಲ್ಲಾ ಪೂಜೆಗಳನ್ನು ಸ್ವೀಕರಿಸುವವನು ಹಾಗೂ ನಡೆಸುವವನು ಆ 'ಸುರೇಶ್ವರ'. ಗೀತೆಯಲ್ಲಿ ಸ್ವಯಂ ಭಗವಂತನೇ ಈ ಮಾತನ್ನು ಹೇಳಿದ್ದಾನೆ "ಅಹಂ ಹಿ ಸರ್ವ ಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ". ಹೀಗೆ ಸರ್ವ ಬ್ರಹ್ಮಾದಿ ದೇವತೆಗಳ ಒಡೆಯನಾಗಿದ್ದು ಎಲ್ಲರ ಸುಖದ ಈಶ್ವರನಾದ ಭಗವಂತ ಸುರೇಶ್ವರ.
೨೮೮) ಔಷಧಂ
ಇಡೀ ವಿಶ್ವದಲ್ಲಿ ಎಲ್ಲಾ ರೋಗಗಳಿಗೆ, ಮೂಲಭೂತವಾಗಿ ಸಂಸಾರ ಬಂಧನವೆಂಬ ರೋಗಕ್ಕೆ ಔಷಧ ಕೇವಲ ಭಗವಂತ. ಆತ ಭವರೋಗ ವೈದ್ಯ. ಅವನೇ ವೈದ್ಯ, ಅವನೇ ಔಷಧ! ಈ ನಾಮವನ್ನು ಒಡೆದು ನೋಡಿದರೆ ಔಷ+ಧ. ಇಲ್ಲಿ ಔಷ ಎಂದರೆ ಉಷ ಎಂದರೆ ಉಷ್ಣ ಅಥವಾ ಸುಡುವಂತಹದ್ದು ಎನ್ನುವ ಅರ್ಥವನ್ನು ಕೊಡುತ್ತದೆ. ಔಷರು ಎಂದರೆ ಸಂಸಾರ ತಾಪತ್ರಯದಲ್ಲಿ ಸುಟ್ಟು ಹೋಗುತ್ತಿರುವವರು. 'ಧ' ಎಂದರೆ ರಕ್ಷಕ ಅಥವಾ ಗುಣಪಡಿಸುವವ. ಔಷಧಂ ಎಂದರೆ ಸಂಸಾರ ಸಾಗರದಲ್ಲಿ ಸಿಲುಕಿ ಬೆಂದು ಬಸವಳಿದ ಜೀವರ ರಕ್ಷಕನಾದ ವೈದ್ಯ ಹಾಗೂ ಸ್ವಯಂ ಔಷಧ.
೨೮೯) ಜಗತಃ ಸೇತುಃ.
ಭಗವಂತ ಜಗತ್ತಿನಿಂದ ಮೋಕ್ಷದ ಕಡೆಗೆ ಬಿಗಿದ ಸೇತುವೆ. ಅವನೇ ಜಗತ್ತೆಂಬ ಕಡಲಿನ ಆಚೆಯ ದಡ . 'ಸೇತು' ಎಂದರೆ ಬಂಧನ ಶಕ್ತಿ. ನಮ್ಮನ್ನು ಈ ಸಂಸಾರವೆಂಬ ಬಂಧನದಲ್ಲಿ ಹಾಕಿದವನೂ ಅವನೇ. ಸಂಸಾರ ಸಾಗರವನ್ನು ದಾಟಲು ಸೇತುವು ಅವನೇ. ದಾಟಿದ ನಂತರ ಸೇರಬೇಕಾದ ಗಮ್ಯವು ಅವನೇ. ಇಂತಹ ಭಗವಂತ ಜಗತಃ ಸೇತುಃ.
೨೯೦) ಸತ್ಯಧರ್ಮಪರಾಕ್ರಮ.
ಭಗವಂತನಲ್ಲಿ ಎರಡು ಮುಖ್ಯವಾದ ಗುಣಗಳನ್ನು ಹೇಳುತ್ತಾರೆ. ಅವುಗಳೆಂದರೆ ಧರ್ಮ ಮತ್ತು ಪರಾಕ್ರಮ. ಇಲ್ಲಿ ಧರ್ಮ ಎಂದರೆ ಧಾರಣ ಶಕ್ತಿ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವುದು ಪರಾಕ್ರಮ. ಭಗವಂತನ ಮಹಿಮೆ ಯಥಾರ್ಥವಾದದ್ದು ಆದ್ದರಿಂದ ಆತ ಸತ್ಯಧರ್ಮಪರಾಕ್ರಮಃ. ಭಗವಂತ ಸತ್ಯ ಅಂದರೆ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಕರ್ತ. ಆತ ನಮಗೆ ಜ್ಞಾನವನ್ನು ಕೊಡುವವ. ಭಾಗವತದಲ್ಲಿ ಹೇಳುವಂತೆ "ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ ಸತ್ಯಂ ಪರಮ್ ಧೀಮಹಿ". ಸತ್ಯ ನಾಮಕನಾದ ಭಗವಂತನನ್ನು ತನ್ನ ಹೃದಯದಲ್ಲಿ ಹೊತ್ತ ಭಕ್ತರಿಗೆ ಜ್ಞಾನವೆಂಬ ಪರಾಕ್ರಮವನ್ನು ಕೊಟ್ಟು ಅನ್ಯಾಯದ ವಿರುದ್ದ ಹೋರಾಡುವ ಪರಾಶಕ್ತಿಯಾದ ಭಗವಂತ ಸತ್ಯಧರ್ಮಪರಾಕ್ರಮಃ.
ಮುಂದುವರೆಯುವುದು....
No comments:
Post a Comment