Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ - 23


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋ‌உನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || 23 ||

೨೧೦) ಗುರು
ಪ್ರತಿಯೊಬ್ಬ ಜ್ಞಾನದಾತನ ಒಳಗೆ ಜ್ಞಾನ ಸ್ವರೂಪನಾಗಿದ್ದು, ಜ್ಞಾನ ಅಭಿವ್ಯಕ್ತ ಮಾಡುವ ಭಗವಂತ ಗುರು. ಎಲ್ಲಾ ವೇದ ವಿದ್ಯೆಗಳನ್ನು ಉಪದೇಶಿಸಿರುವ ಭಗವಂತ ಗುರುಃ.

ಸರ್ವೋತ್ಕೃಷ್ಟವಾದ ಜ್ಞಾನ. ಭಗವಂತ ಸರ್ವವನ್ನೂ ಬಲ್ಲ ಸರ್ವಜ್ಞ.

೨೧೧) ಗುರುತಮ
"ಕೃಷ್ಣಂ ವಂದೇ ಜಗದ್ಗುರುಂ". ಭಗವಂತನಿಗಿಂತ ದೊಡ್ಡ ಗುರು ಇನ್ನೊಬ್ಬನಿಲ್ಲ. ಬ್ರಹ್ಮಾದಿ ದೇವತೆಗಳಿಗೂ ಗುರುವಾದ ಭಗವಂತ ಗುರುತಮ.

೨೧೨) ಧಾಮ
ಧಾಮ ಎಂದರೆ ಆಶ್ರಯ, ಮನೆ ಹಾಗೂ ತೇಜಸ್ಸು ಎನ್ನುವ ಅರ್ಥಗಳನ್ನು ಕೊಡುತ್ತದೆ. ನಾವೆಲ್ಲರೂ ಕೊನೆಗೆ ಒಂದು ದಿನ ಸೇರಬೇಕಾದ ಮನೆ ಭಗವಂತ. ಆತ ಎಲ್ಲರ ಆಶ್ರಯದಾತ. ಅದಕ್ಕಾಗಿ ದಾಸವರೇಣ್ಯರು "ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ" ಎಂದಿದ್ದಾರೆ. ಈ ನಾಮವನ್ನು ಒಡೆದು ನೋಡಿದರೆ ಧಾ+ಅಮ=ಧಾಮ. ಇಲ್ಲಿ 'ಧಾ' ಎಂದರೆ ಧಾರಕ, 'ಅಮ' ಎಂದರೆ ಅಮಿತ ಅಥವಾ ಮಿತಿ ಇಲ್ಲದ. ಧಾರಕವಾದ ಅನೇಕ ಶಕ್ತಿಗಳು ಈ ಪ್ರಪಂಚದಲ್ಲಿವೆ. ದೇವತೆಗಳಿಗೆ ಇಂದ್ರ ಧಾರಕ, ಇಂದ್ರನಿಗೆ ಗರುಡ-ಶೇಷ-ರುದ್ರರು ಧಾರಕರು ಹಾಗೂ ಅವರಿಗೆ ಬ್ರಹ್ಮ-ವಾಯು ಧಾರಕರಾಗಿದ್ದಾರೆ. ಬ್ರಹ್ಮ-ವಾಯುವನ್ನು ಮಾತೆ ಲಕ್ಷ್ಮಿ ಧಾರಣೆ ಮಾಡಿದ್ದಾಳೆ. ಈ ಎಲ್ಲರ ಧಾರಕ ಶಕ್ತಿ ಮಿತವಾದದ್ದು. ಸರ್ವಾಧಾರಕನಾದ ಭಗವಂತ ಅಮಿತ ಧಾರಕನಾದ ಜ್ಞಾನಾನಂದ ಸ್ವರೂಪ.

೨೧೩) ಸತ್ಯ
ಸತ್ಯ ನಾಮದ ಸ್ಥೂಲವಾದ ಅರ್ಥ "ಸದ್ಗುಣಗಳಿಂದ ಪರಿಪೂರ್ಣನಾದವ". ಭಗವಂತನೊಬ್ಬನೇ ಸಂಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ

ಅಂದರೆ ಅದೂ ಪೂರ್ಣ ಹಾಗೂ ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ.

ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಭಗವಂತ ಸತ್ಯ. ಭಾಗವತ ಮಂಗಲಾಚರಣೆಯಲ್ಲಿ ಹೇಳುವಂತೆ:

ಧಾಮ್ನಾಸ್ವೇನ ಸದಾ ನಿರಸ್ತ-ಕುಹಕಂ ಸತ್ಯಂ ಪರಂ ಧೀಮಹೀ..

ಅಂದರೆ ಭಗವಂತ ಸತ್-ಚಿತ್-ಆನಂದ ಸ್ವರೂಪ. ಅದಕ್ಕಾಗಿ ಭಗವಂತನನ್ನು "ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ" ಎಂದಿದ್ದಾರೆ.

ಸೃಷ್ಟಿ, ಸ್ಥಿತಿ, ಸಂಹಾರ, ನಿಯಾಮನ, ಜ್ಞಾನ, ಅಜ್ಞಾನ, ಬಂಧ ಮತ್ತು ಮೋಕ್ಷ ಈ ಎಂಟು ಅಸಾಧಾರಣ ಕ್ರಿಯೆಯುಳ್ಳ ಭಗವಂತ ಸತ್ಯಃ.

೨೧೪) ಸತ್ಯಪರಾಕ್ರಮ
ಇಲ್ಲಿ 'ಪರರು' ಎಂದರೆ ಶತ್ರುಗಳು ಅಥವಾ ದುಷ್ಟರು. ಪರಾಕ್ರಮ ಎಂದರೆ ಶತ್ರುಗಳನ್ನು ಬಗ್ಗುಬಡಿಯುವ ಸಾಮರ್ಥ್ಯ. ಭಗವಂತನ ಪರಾಕ್ರಮ ‘ಸಂಪೂರ್ಣ’ ಅಥವಾ ‘ಸತ್ಯ’. ನಮ್ಮೊಳಗಿರುವ ಕಾಮ-ಕ್ರೋಧ-ಮಧ-ಮತ್ಸರ ಇತ್ಯಾದಿ ಶತ್ರುಗಳನ್ನು ನಿರ್ಮೂಲ ಮಾಡಬೇಕಾದರೆ ನಾವು ಭಗವಂತನಲ್ಲಿ ಶರಣಾಗಬೇಕು. ನಮ್ಮೊಳಗಿರುವ ಈ ಶತ್ರುಗಳು ನಮ್ಮ ಇಂದ್ರಿಯಗಳನ್ನು ಕೆಟ್ಟ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸುತ್ತವೆ. ಇದರಿಂದ ಕಣ್ಣು ಕೆಟ್ಟದ್ದನ್ನು ನೋಡುತ್ತದೆ, ಕಿವಿ ಕೆಟ್ಟದ್ದನ್ನು ಕೇಳಲು ಹಂಬಲಿಸುತ್ತದೆ, ಬಾಯಿ ಕೆಟ್ಟ ಮಾತನ್ನು ಆಡುತ್ತದೆ! ಹೀಗೆ ನಮ್ಮ ವ್ಯಕ್ತಿತ್ಟವನ್ನು ಈ ಶತ್ರುಗಳು ನಮ್ಮಿಂದ ದೂರ ತಳ್ಳುತ್ತವೆ. ನಾವು ನಮ್ಮೊಳಗಿರುವ ಈ ಶತ್ರುಗಳನ್ನು ಗೆಲ್ಲಬೇಕಾದರೆ ಸತ್ಯಪರಾಕ್ರಮಿಯಾದ ಭಗವಂತನಲ್ಲಿ ಶರಣಾಗಬೇಕು. "ನನಗೆ ನನ್ನೊಳಗಿರುವ ಶತ್ರುಗಳನ್ನು ಸೋಲಿಸುವ ಶಕ್ತಿ ಇಲ್ಲ, ನೀನೇ ಸರ್ವ ವಿಘ್ನಗಳನ್ನು ನಿವಾರಿಸಿ, ಈ ಶತ್ರುಗಳಿಂದ ನನ್ನನ್ನು ಪಾರುಮಾಡಿ, ಸತ್ಯದ ದಾರಿಯಲ್ಲಿ ಮುನ್ನೆಡೆಸು" ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. "ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ." ಭಗವಂತನೊಬ್ಬನೇ ಸರ್ವ ವಿಘ್ನಗಳ ನಾಶಕ ಹಾಗೂ ಸತ್ಯಪರಾಕ್ರಮಿ. ಈ ರೀತಿ ನಮ್ಮೊಳಗಿನ ಹಾಗೂ ಹೊರಗಿನ ದುಷ್ಟರನ್ನು ಬಗ್ಗು ಬಡಿಯಲು ನಾವು ಶರಣಾಗಬೇಕಾದ ಭಗವಂತ ಸತ್ಯಪರಾಕ್ರಮಃ

೨೧೫) ನಿಮಿಷ
ನಿಮಿಷ ಎಂದರೆ ಕಣ್ಮುಚ್ಚಿ ನಿದ್ರಿಸುವವ. ಇಲ್ಲಿ ಭಗವಂತನ ಪ್ರಳಯಕಾಲದ ಯೋಗನಿದ್ರೆಯನ್ನು ನಿಮಿಷ ಎಂದಿದ್ದಾರೆ.

೨೧೬) ಅನಿಮಿಷ
ಮೇಲಿನ ನಿಮಿಷ ಎನ್ನುವ ಪದದ ತದ್ವಿರುದ್ದ ನಾಮ ಅನಿಮಿಷ. ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ! ಆತನಿಗೆ ನಿದ್ರೆಯೇ ಇಲ್ಲ. ಅಂದರೆ ಭಗವಂತ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.

೨೧೭) ಸ್ರಗ್ವೀ
ಸ್ರಗ್ವೀ ಎಂದರೆ ಮಾಲೆ ತೊಟ್ಟವನು ಎಂದರ್ಥ. ಭಗವಂತನನ್ನು ಪಂಕಜ-ನಾಭ, ಪಂಕಜ-ನೇತ್ರ, ಪಂಕಜ-ಅಂಘ್ರಿ, ಪಂಕಜ-ಮಾಲಿ ಎನ್ನುತ್ತಾರೆ. ಈ ಬ್ರಹ್ಮಾಂಡವನ್ನು ನಾಭಿಯಲ್ಲಿ ಧರಿಸಿದವನು ಪಂಕಜ-ನಾಭ, ಈ ಜಗದ ನೇತಾರ ಪಂಕಜ-ನೇತ್ರ, ಈ ಬ್ರಹ್ಮಾಂಡ ಭಗವಂತನ ಕಾಲಿನ ಒಂದು ಧೂಳಿನ ಕಣ ಅದ್ದರಿಂದ ಆತ ಪಂಕಜ-ಅಂಘ್ರಿ ಹಾಗೂ ಅನಂತ ಕೋಟಿ ಬ್ರಹ್ಮಾಂಡಗಳ ಸರಮಾಲೆಗಳ ಸೃಷ್ಟಾರ ಪಂಕಜ-ಮಾಲಿ ಅಥವಾ ಸ್ರಗ್ವೀ. ಸ್ರಗ್ವೀ ಅಂದರೆ ಇನ್ನೊಂದು ಅರ್ಥ ತುಳಸೀ ಮಾಲೆ ತೊಟ್ಟವನು. ಭಗವಂತನಿಗೆ ಲಕ್ಷ್ಮೀ ಸಾನ್ನಿಧ್ಯವಿರುವ ತುಳಸೀಮಾಲೆ ಅತ್ಯಂತ ಪ್ರಿಯ. ಕೃಷ್ಣಾವತಾರದಲ್ಲಿ ಸದಾ ವನಮಾಲೆಯನ್ನು ತೊಟ್ಟ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿದ ಯಾವ ಮಾಲೆಯೂ ಇಷ್ಟ.

೨೧೮) ವಾಚಸ್ಪತಿ
ವಾಗ್ದೇವತೆಯ ಒಡೆಯ ಅಥವಾ ಎಲ್ಲಾ ವಾಕ್ ಗಳಿಗೆ ಪತಿ. ಅನೇಕ ಭಾಷೆಗಳನ್ನು ತಿಳಿದು ಮಾತನಾಡುವವ ವಾಚಸ್ಪತಿಯಲ್ಲ. ಪ್ರಾಣಿಗಳಿಗೂ ಅವುಗಳದ್ದೇ ಆದ ಭಾಷೆ ಇದೆ. ಆದರೆ ಅದು ನಮಗೆ ಅರ್ಥವಾಗುವುದಿಲ್ಲ. ಭಾಷೆ ನಾಲ್ಕು ಮಜಲುಗಳಿಂದ ಬೆಳೆದಿದೆ. ಪರಾ, ಪಶ್ಯಂತಿ, ಮಧ್ಯಮ ಹಾಗೂ ವೈಖರಿ. ಇಲ್ಲಿ ಪರಾ ಅತ್ಯಂತ ಸೂಕ್ಷ್ಮವಾದ ಭಾಷೆಯ ಸ್ಥಿತಿ. ಮನಸ್ಸಿನ ಯೋಚನೆಗನುಗುಣವಾಗಿ ನಾಭಿಯಲ್ಲಿ ಉಂಟಾಗುವ ಕಂಪನ-'ಪರಾ'. 'ಪಶ್ಯಂತಿ' ಎಂದರೆ ನಾಭಿಯಿಂದ ಹೊರಟ ಸೂಕ್ಷ್ಮ ಭಾಷೆ ಹೃದಯದಲ್ಲಿ ಅಭಿವ್ಯಕ್ತವಾಗುವ ಸ್ಥಿತಿ. ಆ ನಂತರ ಕುತ್ತಿಗೆ ಮೂಲಕ ಹೊರಹೊಮ್ಮುವ ಭಾಷೆಯ ಸ್ಥಿತಿ 'ಮಧ್ಯಮ'. ಕೊನೆಯದಾಗಿ ಬಾಯಿಯ ಮೂಲಕ ಹೊರಹೊಮ್ಮುವ ಶಬ್ದ 'ವೈಖರಿ'. ಹೀಗೆ ಪ್ರಾಣಿ-ಪಕ್ಷಿಗಳಿಂದ ಹಿಡಿದು, ಭಾಷೆಯ ವಿವಿಧ ಮಜಲನ್ನು ತಿಳಿದಿರುವ ಭಗವಂತ ವಾಚಸ್ಪತಿ. ಈ ಕಾರಣಕ್ಕಾಗಿ ಭಗವಂತನನ್ನು ನಾವು ಯಾವ ಭಾಷೆಯಲ್ಲಿ ಕೂಡಾ ಉಪಾಸನೆ ಮಾಡಬಹುದು. ಆತ ನಮ್ಮ ನಾಭಿ-ಹೃದಯ ಭಾಷೆಯನ್ನೂ ಕೂಡ ಅರ್ಥೈಸಬಲ್ಲ.

೨೧೯)ಉದಾರಧೀ
ಉದಾರಧೀಃ ಎಂದರೆ ಉತ್ಕೃಷ್ಟವಾದ ಅರಿವಿನ ಅಲೆ ಅಥವಾ ಸರ್ವೋತ್ಕೃಷ್ಟವಾದ ಜ್ಞಾನ. ಭಗವಂತ ಸರ್ವವನ್ನೂ ಬಲ್ಲ ಸರ್ವಜ್ಞ.

ಮುಂದುವರೆಯುವುದು...

No comments:

Post a Comment