Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -41


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಉದ್ಭವ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || 41 ||

೩೭೫) ಉದ್ಭವಃ

ಇಡೀ ವಿಶ್ವ ಪ್ರಳಯಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ಭಗವಂತನೊಳಗಿರುತ್ತದೆ. ಸೃಷ್ಟಿ ಕಾಲದಲ್ಲಿ ಸ್ಪೋಟವಾಗಿ ಈ ಬ್ರಹ್ಮಾಂಡ ಭಗವಂತನ ನಾಭಿಯಿಂದ ಉದ್ಭವವಾಗುತ್ತದೆ. ಹೀಗೆ ನಾಮ ರೂಪಾತ್ಮಕವಾದ ಈ ಪ್ರಪಂಚವನ್ನು ಸೃಷ್ಟಿಸುವ ಭಗವಂತ ಉದ್ಭವಃ.

೩೭೬) ಕ್ಷೋಭಣಃ

ದುಷ್ಟರನ್ನು ಕ್ಷೋಭೆಗೊಳಿಸುವ ಭಗವಂತ ಕ್ಷೋಭಣಃ.

೩೭೭) ದೇವಃ

ಈ ನಾಮ ಎಲ್ಲರಿಗೂ ಚಿರ ಪರಿಚಿತ. ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಭಗವಂತನನ್ನು 'ದೇವ' ಎಂದು ಸಂಭೋದಿಸುತ್ತಾರೆ. ವಿಶೇಷವೆಂದರೆ ಚಿರಪರಿಚಿತವಾದ ಈ ನಾಮದ ಹಿಂದಿನ ಅರ್ಥ ಮಾತ್ರ ಎಲ್ಲರಿಗೂ ಅಪರಿಚಿತ! ಈಗ ದೇವ ಪದದ ಅರ್ಥವೇನು ಎನ್ನುವುದನ್ನು ನೋಡೋಣ.

 ದೇವಃ ಎನ್ನುವ ಪದ ಮೂಲತಃ 'ದಿವು' ಎನ್ನುವ ದಾತುವಿನಿಂದ ಹುಟ್ಟಿದ ಶಬ್ದ. ಪ್ರಾಚೀನ ದಾತು ಪಾಠದಲ್ಲಿ ಈ ಧಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.

ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ಧಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ.

೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.

೨) ವಿಜಿಗೀಶ : ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.

೩) ಕಾಂತಿ : ಕೇವಲ ಇಚ್ಛೆಯಿಂದ ಸೃಷ್ಟಿ ಮಾಡಬಲ್ಲವನು. ನಮಗೆ ಇಚ್ಚೆಯನ್ನು ಕೊಟ್ಟವ ಹಾಗೂ ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವನು.

೪) ಸ್ತುತಿ : ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.

೫) ವ್ಯವಹಾರ : ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವನು.

೬) ಕ್ರೀಡಾ : ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ.

೭) ಗತಿಶು : ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ'

ಹೀಗೆ ಅನೇಕ ಅರ್ಥಗಳನ್ನು 'ದೇವ' ಎನ್ನುವ ನಾಮದಲ್ಲಿ ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಭಲವಿದೆ. ಅದಕ್ಕಾಗಿ ಪುರಂದರ ದಾಸರು 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಭಲ ಒಂದಿದ್ದರೆ ಸಾಕೋ" ಎಂದು ಭಗವಂತನನ್ನು ವಿನೋದ ಮಾಡಿದ್ದಾರೆ".

೩೭೮) ಶ್ರೀಗರ್ಭಃ

'ಶ್ರೀ' ಎಂದರೆ ಸಂಪತ್ತು. ಎಲ್ಲಾ ಸಂಪತ್ತು ಭಗವಂತನ ಒಡಲಿಂದ ಉದ್ಭವವಾದದ್ದು. ಸಮಸ್ತ ವೇದಗಳು ಯಾರ ಗರ್ಭದಿಂದ ಉದ್ಭವವಾಯಿತೋ ಅವನು ಶ್ರೀಗರ್ಭಃ. ಸಮಸ್ತ ವೇದದ, ಸರ್ವ ಸಂಪತ್ತಿನ ಅಭಿಮಾನಿಯಾದ ಲಕ್ಷ್ಮಿಗೆ ನೆಲೆಯಾಗಿರುವ ಭಗವಂತ ಶ್ರೀಗರ್ಭಃ.

೩೭೯) ಪರಮೇಶ್ವರಃ

ಈಶ, ಈಶ್ವರ, ಪರಮೇಶ ಹಾಗೂ ಪರಮೇಶ್ವರ ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುವ ಪದಗಳು. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವವರು ಅಂತಃಕರಣ ಹಾಗೂ ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ, ರುದ್ರ ಹಾಗೂ ಬ್ರಹ್ಮ-ವಾಯು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೆಶ್ವರಃ.

೩೮೦) ಕರಣಂ

ಎಲ್ಲಕ್ಕೂ ಮುಖ್ಯ ಕಾರಣನು ಕರಣ. ಕರಣ-ಅಸಾಧಾರಣವಾದದ್ದು. ಉದಾಹರಣೆಗೆ ರೂಪವನ್ನು ನೋಡಲು ಕಣ್ಣು 'ಕರಣ'; ಕೇಳುವುದಕ್ಕೆ ಕಿವಿ 'ಕರಣ'. ಈ ನಾಮವನ್ನು ಒಡೆದು ನೋಡಿದರೆ ಕ+ರ+ಣ; ಇಲ್ಲಿ 'ಕ'ಎಂದರೆ ಆನಂದ, 'ರ' ಎಂದರೆ ಕ್ರೀಡೆ, 'ಣ' ಎಂದರೆ ಬಲ. ಆದ್ದರಿಂದ ಕರಣಂ ಎಂದರೆ ಆನಂದ ಸ್ವರೂಪ, ಬಲ ಸ್ವರೂಪ ಹಾಗು ಕ್ರೀಡಾ ಸ್ವರೂಪ ಭಗವಂತ.

೩೮೧) ಕಾರಣಂ

ಎಲ್ಲಕ್ಕೂ ನಿಮಿತ್ತಕಾರಣನು. ಕ+ಅರ+ಣ. ಇಲ್ಲಿ 'ಅರ' ಎಂದರೆ 'ನಾಶವಿಲ್ಲದ್ದು'. ಭಗವಂತ ಎಂದೂ ನಾಶವಿಲ್ಲದ ಆನಂದ ಸ್ವರೂಪ. ಆತನ ಕ್ರೀಡೆಯೇ ಈ ಜಗತ್ತಿನ ನಿಯಮನ. ಕ+ಆ+ರಣ- ಇಲ್ಲಿ 'ರಣ' ಎಂದರೆ ಘೋಷಣೆ. ಭಗವಂತ ಆನಂದ ಸ್ವರೂಪ ಎಂದು ವೇದಗಳಿಂದ ಘೋಷಿಸಲ್ಪಟ್ಟ ಅಸಾಧಾರಣ ಶಕ್ತಿ.

೩೮೨) ಕರ್ತಾ

ಎಲ್ಲವನ್ನೂ ಇನ್ನೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ಮಾಡಬಲ್ಲವ ಕರ್ತಾ. ನಾವು ಭಗವಂತನ ಮುಂದೆ ಕೇವಲ ಸೂತ್ರದ ಗೊಂಬೆಗಳಂತೆ. ನಮಗೆ ಸ್ವಾತಂತ್ರ್ಯವಿಲ್ಲ, ಸೂತ್ರದಾರ ಆಡಿಸುವಂತೆ ಆಡುತ್ತೇವೆ. ಮನಸ್ಸಿಗೆ ಸ್ಫೂರಣ ಕೊಡುವ ನಿಜವಾದ ಕರ್ತ ಭಗವಂತ.

೩೮೩) ವಿಕರ್ತಾ

ವಿವಿಧವಾದ ಸೃಷ್ಟಿಯನ್ನು ಮಾಡುವವನು ವಿಕರ್ತಾ. ಭಗವಂತನ ಸೃಷ್ಟಿ ವಿಸ್ಮಯ ಹಾಗು ವೈವಿದ್ಯಪೂರ್ಣ. ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಮರದ ಒಂದು ಎಲೆಯಂತೆ ಇನ್ನೊಂದು ಎಲೆ ಇರುವುದಿಲ್ಲ. ಒಬ್ಬ ಮನುಷ್ಯನಂತೆ ಇನ್ನೊಬ್ಬನಿರುವುದಿಲ್ಲ. ಹೀಗೆ ವೈವಿಧ್ಯಪೂರ್ಣ ಸೃಷ್ಟಿಯನ್ನು ನಿರ್ಮಿಸಿದ ಭಗವಂತ ವಿಕರ್ತಾ.

೩೮೪) ಗಹನಃ

ಭಗವಂತ ಅತ್ಯಂತ ನಿಗೂಢನಾದವನು. ಆತ ಮಾಡಿದ ಸೃಷ್ಟಿ ಮಾತ್ರ ನಮಗೆ ಕಾಣುತ್ತದೆ ಆದರೆ ಆತ ಕಾಣಿಸುವುದಿಲ್ಲ. ಆತನನ್ನು ತಿಳಿಯಬೇಕಾದರೆ ಶಾಸ್ತ್ರದ ಒಳಹೊಕ್ಕು ಪ್ರಯತ್ನಿಸಬೇಕು.

೩೮೫) ಗುಹಃ

ಹೃದಯ ಗುಹೆಯಲ್ಲಿ ಅವಿತವನು-ಹ್ರತ್ಕಮಲ ಮಧ್ಯ ನಿವಾಸಿ . ಆತ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಜೀವದ ಸಾಧನೆ ಪೂರ್ತಿಯಾಗುವ ತನಕ ಆತ ಕಾಣಿಸಿಕೊಳ್ಳುವುದಿಲ್ಲ. ಆತ್ಮ ಸಾಕ್ಷಾತ್ಕಾರವಾದ ಮೇಲೆ ಜೀವ ಸ್ವರೂಪದಿಂದ ಆತನನ್ನು ನೋಡಬಹುದು.

ಮುಂದುವರೆಯುವುದು....

No comments:

Post a Comment