ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||
141) ಭ್ರಾಜಿಷ್ಣುಃ
ಭ್ರಾಜಿಷ್ಣು ಎಂದರೆ ಬೆಳಕಿನ ಪುಂಜವಾಗಿ ಪ್ರಕಾಶಿಸುವವನು ಎಂದರ್ಥ. ಗೀತೆಯಲ್ಲಿ ಕೃಷ್ಣ ಹೇಳುವಂತೆ:
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ||ಅ-೧೦, ಶ್ಲೋ-೨೧||
ಅಂದರೆ ರವಿಯಲ್ಲಿ ರವಿಯಾಗಿ ಪ್ರತೀ ಕಿರಣದಲ್ಲಿ ನಾನಿದ್ದೇನೆ ಎಂದರ್ಥ.
ಇನ್ನು ಈ ಪದವನ್ನು ಒಡೆದರೆ ಭ್ರಾ+ವಿಷ್ಣು, ಇಲ್ಲಿ 'ಭ್ರಾ' ಎಂದರೆ 'ಭರಣ'. ಆದ್ದರಿಂದ ಭ್ರಾಜಿಷ್ಣು ಎಂದರೆ ಎಲ್ಲವನ್ನೂ ಧರಿಸಿದವನು, ಈ ಪದವನ್ನು ಮುಂದಕ್ಕೆ ಒಡೆದರೆ, ಭ+ಆಜಿ+ಷ್ಣು. ಇಲ್ಲಿ ‘ಆಜಿ’ ಎಂದರೆ ಯುದ್ಧ, ‘ಭ’ ಎಂದರೆ ಗೆಲ್ಲುವಂತೆ ಮಾಡುವವನು, ‘ಷ್ಣು’ ಎಂದರೆ ಎಲ್ಲರ ಒಳಗೆ ನಿಂತು ಪ್ರೇರಣೆ ಮಾಡುವವ. ಆದ್ದರಿಂದ ಭ್ರಾಜಿಷ್ಣು ಎಂದರೆ , ನಾವು ನಮ್ಮ ಒಳಗೇ ಇರುವ ವೈರಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಇತ್ಯಾದಿ ವೈರಿಗಳ ವಿರುದ್ಧ ಹೋರಾಟದಲ್ಲಿ ನಮಗೆ ಗೆಲುವನ್ನು ತಂದು ಕೊಡುವವನು. ಇದು ನಮಗೆ ಭಗವಂತ ಕೊಡುವ ಶಿಕ್ಷಣ. ದೇವತೆಗಳು ನಮ್ಮನ್ನು ಪರೀಕ್ಷೆಗೆ ಒಡ್ಡಿ ನಮಗೆ ಶಿಕ್ಷಣ ಕೊಡುತ್ತಾರೆ. ಇಂತಹ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಹೊರಬರಲು ಭಗವಂತ ನಮಗೆ ಸದಾ ಸಹಕಾರವನ್ನು ಕೊಡುತ್ತಾನೆ. ಆದ್ದರಿಂದ ಇದು ಶಿಕ್ಷೆ ಅಲ್ಲ ಶಿಕ್ಷಣ. ಇಂತಹ ಭಗವಂತ ಭ್ರಾಜಿಷ್ಣು
142) ಭೋಜನಂ
ಭಗವಂತ ಅನ್ನವೂ ಹೌದು, ಉಣ್ಣುವವನೂ ಹೌದು!!
ಗೀತೆಯಲ್ಲಿ ಹೇಳುವಂತೆ:
ಬ್ರಹ್ಮಾರ್ಪಣಂ ಬ್ರಹ್ಮಹವಿಃ, ಬ್ರಹ್ಮಾಗ್ನೌಬ್ರಹ್ಮಣಾ ಹುತಮ್ |
ಬ್ರಹ್ಮೈವತೇನ ಗಂತವ್ಯಂ, ಬ್ರಹ್ಮಕರ್ಮ ಸಮಾಧಿನಾ ||ಅ-೪,ಶ್ಲೋ-೨೪||
ಅಂದರೆ ಅರ್ಪಣವೂ ಭಗವಂತ, ಅರ್ಪಿಸುವ ಹವಿಸ್ಸೂ ಭಗವಂತ. ಭಗವಂತನ ಸನ್ನಿಧಾನವಿಲ್ಲದ ಯಾವ ವಸ್ತುವೂ ಇಲ್ಲ. ಅನ್ನವೂ ಭಗವಂತ, ಅನ್ನವನ್ನು ತಿನ್ನುವವನೂ ಭಗವಂತ. ನಮಗೆ ತಿನ್ನುವ ಯೋಗ ಬಂದಿದ್ದೂ ಭಗವಂತನಿಂದ. ಈ ರೀತಿ ಎಲ್ಲರಿಗೂ ಆನಂದವನ್ನು ಕೊಡುವ(ಭೋಜಯತಿ) ಭಗವಂತನನ್ನು
ಭೋಜನಂ ಎನ್ನುತ್ತಾರೆ.
Note: ಇಲ್ಲಿ ಅನ್ನ ಎಂದರೆ ಅಕ್ಕಿಯಿಂದ ಮಾಡಿದ ಅನ್ನ ಮಾತ್ರವಲ್ಲ. ಸಂಸ್ಕೃತದಲ್ಲಿ ಅನ್ನ ಎಂದರೆ ತಿನ್ನುವಂತಹ ವಸ್ತು (Eatables) ಎಂದರ್ಥ.
143) ಭೋಕ್ತಾ
ಭೋಕ್ತಾ ಎಂದರೆ ಆಹಾರವನ್ನು ಸ್ವೀಕರಿಸುವವ. ಜಗತ್ತಿನ ಎಲ್ಲಾ ಸಾರವನ್ನೂ ಸ್ವೀಕರಿಸುವವ.
ಗೀತೆಯಲ್ಲಿ ಹೇಳುವಂತೆ:
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ | (ಅ-೯ ಶ್ಲೋ ೨೪)
ಯಜ್ಞದಲ್ಲಿ ನಾವು ಮಾಡುವ ಎಲ್ಲಾ ಆಹುತಿಯನ್ನು ಸ್ವೀಕರಿಸುವವ ಆ ಭಗವಂತ. ಆದ್ದರಿಂದ ಆತ ಯಜ್ಞ, ಯಜ್ಞಪುರುಷ, ಯಜ್ಞಭಾವನ, ಯಜ್ಞಭೋಕ್ತ. ನಾವು ದೇವರಿಗೆ ಅರ್ಪಿಸುವ ನೈವೇದ್ಯ/ಹವಿಸ್ಸನ್ನು ನಮಗೆ ಕೊಟ್ಟವನೂ ಅವನೇ ಸ್ವೀಕರಿಸುವವನೂ ಅವನೇ. ಹೀಗೆ ಆನಂದ ಭೋಕ್ತ ನಾದ ಭಗವಂತನನ್ನು ನಾವು ಭೋಕ್ತಾ ಎನ್ನುವ ನಾಮದಿಂದ ಉಪಾಸನೆ ಮಾಡುತ್ತೇವೆ.
144) ಸಹಿಷ್ಣುಃ
ಸಹಿಷ್ಣು ಎಂದರೆ ಸಹನೆ ಉಳ್ಳವನು ಎಂದರ್ಥ. ಯಾವುದಕ್ಕೂ ಮಣಿಯದ, ತಾಕತ್ತಿದ್ದರೂ ಇನ್ನೊಬ್ಬರ ತಪ್ಪನ್ನು ಕ್ಷಮಿಸುವ, ಮಹತ್ತಾದ ಗುಣ ಸಹಸ್ಸು. ನಾವು ಮಾಡುವ ಕಾರ್ಯದ ಹಿಂದಿನ ಭಾವ ಪಾಪ ಅಥವಾ ಪುಣ್ಯಗಳನ್ನು ನಿರ್ಧರಿಸುತ್ತದೆ. ಸಾಮಾಜಿಕವಾಗಿ ಕಾಣುವ ಕೆಟ್ಟ ಕೆಲಸವನ್ನು ಮಾಡಿದ ನಮ್ಮ ಭಾವಕ್ಕನು- ಗುಣವಾಗಿ, ನಮ್ಮನ್ನು ಭಗವಂತ ಕ್ಷಮಿಸಿ, ಪಾಪದ ಲೇಪದಿಂದ ವಿಮುಕ್ತನಾಗಿಸುತ್ತಾನೆ. ಭಗವಂತ 'ಸರ್ವ ಭಕ್ತಾಪರಾಧ ಸಹಿಷ್ಣು' ಆತನ ಕ್ಷಮಾಗುಣಕ್ಕೆ ಅಜಾಮಿಳನ ಕಥೆ ಉತ್ತಮ ದೃಷ್ಟಾಂತ.
ಅಜಾಮಿಳ ಒಬ್ಬ ಬ್ರಾಹ್ಮಣ. ಸರಳ, ಮಿತಭಾಷಿ, ಸಾತ್ತ್ವಿಕ, ವಿದ್ವಾಂಸನಾಗಿದ್ದ . ಗುರು, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ತನ್ನ ಕೈ ಹಿಡಿದ ಹೆಂಡತಿಯನ್ನೂ ಪ್ರೀತಿಸುತ್ತಿದ್ದ. ಒಂದು ದಿನ ಆತ ಕಾಡಿನಲ್ಲಿ ಸುಂದರಿಯಾದ ಒಬ್ಬಳು ಹೆಣ್ಣನ್ನು, ಅರೆನಗ್ನ ಸ್ಥಿತಿಯಲ್ಲಿ ನೋಡಿ ಆಕರ್ಷಣೆಗೊಳಪಟ್ಟ. ತನ್ನ ಹೆಂಡತಿ ಮತ್ತು ತಂದೆ ತಾಯಿಯರನ್ನು ಮರೆತು, ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಲೋಕವನ್ನು ಮರೆತ. ಆಕೆಯನ್ನು ಸಂತೋಷಪಡಿಸಲು ಮಾಡಬಾರದ ಕೆಲಸವನ್ನೆಲ್ಲಾ ಮಾಡಿದ. ಕುಡುಕನಾದ, ಕಳ್ಳತನ ಮಾಡಿದ ಜೂಜಾಡಿದ. ಕಾಡಿನಲ್ಲಿ ಆಕೆಯೊಂದಿಗೆ ಸಂಸಾರ ಬೆಳೆಯಿತು, ಮಕ್ಕಳಾದವು. ಕೊನೆಯ ಮಗನ ಹೆಸರು 'ನಾರಾಯಣ'. ಒಂದು ರಾತ್ರಿ ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾ- ಯಿತು. ಅವರ ಕೈಯಲ್ಲಿ ಯಮಪಾಶ! ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗ ನಾರಾಯಣನನ್ನು ಕೂಗಿ ಕರೆದ! - ಆಗ ಮಗನ ಬದಲು ಪ್ರತ್ಯಕ್ಷರಾದ ವಿಷ್ಣು ದೂತರು, ಹಳಿತಪ್ಪಿ ಚಲಿಸುತ್ತಿದ್ದ ಆತನನ್ನು ಪುನಃ ಸರಿಯಾದ ದಾರಿಯಲ್ಲಿ ತಂದು ಉದ್ಧಾರ ಮಾಡುತ್ತಾರೆ. ನಂತರದ ದಿನಗಳಲ್ಲಿ ಆತ ಮಹಾತ್ಮನಾಗಿ ಬದುಕುತ್ತಾನೆ.
ನಮ್ಮಲ್ಲಿ ಸಾತ್ವಿಕತೆ ಮತ್ತು ಜ್ಞಾನ ಅನೇಕ ಜನ್ಮಗಳ ಫಲದಿಂದ ಬಂದಿರುತ್ತದೆ. ಯಾವೊದೋ ಕೆಟ್ಟ ಕಾರಣದಿಂದ ನಾವು ದಾರಿತಪ್ಪಿದಾಗ, ಕರುಣಾಮಯನಾದ ಭಗವಂತ ನಮ್ಮನ್ನು ಶಿಕ್ಷಿಸುವ ಬದಲು ಕ್ಷಮಿಸಿ ಉದ್ಧಾರ ಮಾಡುತ್ತಾನೆ. ಎಂತಹ ತಪ್ಪನ್ನೂ ಕೂಡ ಕ್ಷಮಿಸುವ ಕಾರುಣ್ಯಮೂರ್ತಿ ಆ ಭಗವಂತ. ಆತ ನಮಗೆ ಕೊಡುವ ದುಃಖ ತಾಯಿ ತನ್ನ ಮಗುವನ್ನು ತಿದ್ದಲು ಕೊಡುವ ಶಿಕ್ಷೆಯಂತೆ. ಆತನ ಶಿಕ್ಷೆ ಕಾರುಣ್ಯದ ರಕ್ಷೆ. ಆತ ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರ ಅಪರಾಧವನ್ನೂ ಸಹಿಸುವ ಭಗವಂತ ಸಹಿಷ್ಣು.
145) ಜಗದಾದಿಜಃ
ಜಗದಾದಿಜ ಎಂದರೆ ಸೃಷ್ಟಿಯ ಮೊದಲು ಇದ್ದವ ಹಾಗೂ ಜಗತ್ತನ್ನು ಸೃಷ್ಟಿಸುವ ಮೊದಲು ಚತುರ್ವ್ಯೂಹ ಮೂರ್ತಿಗಳಾದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ಎನ್ನುವ ನಾಲ್ಕು ರೂಪದಲ್ಲಿ ತನ್ನನ್ನು ತಾನು ಸೃಷ್ಟಿ ಮಾಡಿಕೊಂಡವ. ಇಲ್ಲಿ ಸೃಷ್ಟಿಯಾಗುವುದು ಎಂದರೆ ಇದ್ದದ್ದು ಕಾಣುವ ರೂಪ- ತಳೆಯುವುದು . ಭಗವಂತ ಮೊದಲು ಪುರುಷನಾಮಕ ರೂಪವನ್ನು ಧರಿಸಿ , ನಂತರ ಮಹಾತತ್ವದ ಸೃಷ್ಟಿ ಮಾಡಿದ. ಆನಂತರ ಅಹಂಕಾರ ತತ್ವ(ಶಿವ)ದ ಸೃಷ್ಟಿಯಾಯಿತು. ಅಹಂಕಾರ ತತ್ವದಿಂದ ಪಂಚಭೂತಗಳ ಸೃಷ್ಟಿಯಾಯಿತು. ಪಂಚಭೂತಗಳಿಂದ ಪ್ರಪಂಚ ಪುರುಷನ ಸೃಷ್ಟಿ ಹಾಗೂ ಬ್ರಹ್ಮಾಂಡ ಸೃಷ್ಟಿಯಾಯಿತು. ಬ್ರಹ್ಮಾಂಡದಿಂದ ಪಿಂಡಾಂಡ ಸೃಷ್ಟಿಯಾಯಿತು. ಭಗವಂತ ಒಂದೊಂದು ಪಿಂಡಾಂಡದಲ್ಲಿ ಬಿಂಬ ರೂಪಿಯಾಗಿ ನೆಲೆಸಿದ.
ಸೂಕ್ಷ್ಮ ಸೃಷ್ಟಿ ಭಗವಂತನ ನಾಭಿ ಕಮಲ. ಈ ಸೂಕ್ಷ್ಮ ಪ್ರಪಂಚವನ್ನು ಚತುರ್ಮುಖ ಮಹಾತತ್ವದಿಂದ ವಿಸ್ತಾರಗೊಳಿಸಿ, ಸ್ಥೂಲ ಪ್ರಪಂಚ ಸೃಷ್ಟಿ ಮಾಡಿದ. ಮಹಾತತ್ವದಿಂದ ಅಹಂಕಾರ ತತ್ವದ ಒಡೆಯನಾಗಿ ಶಿವ ಬಂದ. ಶಿವನಿಂದ ಅಹಂಕಾರ ತತ್ವದ ಮೂರು ರೂಪಗಳ ಸೃಷ್ಟಿಯಾಯಿತು. ಅವುಗಳೆಂದರೆ: ೧. ಸಾತ್ವಿಕ ಅಹಂಕಾರ ತತ್ವ ೨.ರಾಜಸ ಅಹಂಕಾರ ತತ್ವ ೩.ತಾಮಸ ಅಹಂಕಾರ ತತ್ವ. ಸಾತ್ವಿಕ ಮತ್ತು ರಾಜಸ ಅಹಂಕಾರ ತತ್ವದಿಂದ ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ ಹಾಗೂ ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ತಾಮಸ ಅಹಂಕಾರತತ್ವದಿಂದ ಪಂಚ ಭೂತಗಳ ಹಾಗೂ ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ಈ ರೀತಿ ನಮಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಯಿತು.
ಈ ಜಗತ್ತಿಗೆ ಮೂಲ ಕಾರಣನಾಗಿ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ ಎಲ್ಲರ ಜನಕನಾದ ಭಗವಂತ ಜಗದಾದಿಜ.
146) ಅನಘಃ
ಅಘ ಎಂದರೆ ಪಾಪ, ದುಃಖ, ವ್ಯಸನ ಇತ್ಯಾದಿ . ಇಲ್ಲಿ ವ್ಯಸನ ಎಂದರೆ ಚಾಳಿ ಅಥವಾ ಚಟ. ಭಗವಂತನಿಗೆ ಯಾವ ಪಾಪದ ಲೇಪವೂ ಇಲ್ಲ. ಆತ ಸಂಹಾರ ಮಾಡುವುದು ಕಾರುಣ್ಯದಿಂದ ಹೊರತು ದ್ವೇಷ- ದಿಂದಲ್ಲ. ಉದಾಹರಣೆಗೆ ಕೃಷ್ಣ ದ್ರೋಣಾಚಾರ್ಯರನ್ನು "ಅಶ್ವತ್ಥಾಮ ಸತ್ತ" ಎಂದು ಧರ್ಮರಾಯನಲ್ಲಿ ಹೇಳಿಸಿ ಕೊಲ್ಲುತ್ತಾನೆ. ಇದರ ಹಿಂದಿರುವ ಕಾರುಣ್ಯ ಅಪಾರವಾದದ್ದು. ದುರ್ಯೋದನನಂತಹ ದುಷ್ಟ, ಸಮಾಜಕಂಟಕ, ದ್ರೋಹಿಯ- ಅನ್ನದ ಋಣಕ್ಕೋಸ್ಕರ, ಪ್ರತಿದಿನ ಹತ್ತು ಸಾವಿರ ಸೈನಿಕರನ್ನು ಸಾಯಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ದ್ರೋಣರನ್ನು, ಪಾಪದ ಕಡಲಿನಿಂದ ರಕ್ಷಿಸಲು ಭಗವಂತ ಆತನನ್ನು ಸಾಯಿಸಿ ರಕ್ಷಿಸುತ್ತಾನೆ. ಇಲ್ಲಿ ಭಗವಂತ ನಿರ್ವಿಕಾರ ಹಾಗೂ ನಿರ್ಲಿಪ್ತ. ಆತನಿಗೆ ಸಾಯಿಸುವುದು ವ್ಯಸನವಲ್ಲ ಹಾಗೂ ದುಃಖ-ಪಾಪದ ಲೇಪ ಅವನಿಗಿಲ್ಲ. ಇಂತಹ ಭಗವಂತ ಅನಘ.
147) ವಿಜಯಃ
ಅರ್ಜುನನನ್ನು 'ವಿಜಯ'ಎಂದು ಕರೆಯುತ್ತಾರೆ. ಹೆಚ್ಚು ಯುದ್ಧಗಳಲ್ಲಿ ಪಾಲ್ಗೊಂಡು ಕಪ್ಪ-ಕಾಣಿಕೆ ಸಂಗ್ರಹಿಸಿದ್ಧರಿಂದ ಆತನಿಗೆ ಈ ಅನ್ವರ್ಥ ನಾಮ. ಸೂಕ್ಷ್ಮವಾಗಿ ನೋಡಿದರೆ ಅತೀ ಹೆಚ್ಚು ಸಂಪತ್ತು ಹಾಗೂ ಅತಿದೊಡ್ಡ ವಿಜಯ ಪಾಂಡವರಿಗೆ ಭೀಮಸೇನ ಜರಾಸಂಧ ನನ್ನು ಜಯಿಸಿದಾಗ ಬಂದಿರುವುದು. ಆದರೂ ರೂಢಿಯಲ್ಲಿ ಅರ್ಜುನನನ್ನು 'ವಿಜಯ', 'ಧನಂಜಯ' ಎಂದು ಕರೆಯುತ್ತಾರೆ. ಅರ್ಜುನನಲ್ಲಿ 'ನರ' ನಾಮಕ ಭಗವಂತನ ಸನ್ನಿಧಾನವಿದ್ದದರಿಂದ, ಆಂಜನೇಯ ರೂಪಿ ಪ್ರಾಣದೇವರು ಆತನ ರಥದ ದ್ವಜದಲ್ಲಿದ್ದದರಿಂದ, ಅರ್ಜುನ ವಿಜಯನಾದ. ಭಾಗವತದಲ್ಲಿ ಹೇಳುವಂತೆ ಅರ್ಜುನನ ಹಾಗೂ ಭೀಮನ ಒಳಗೆ ಕುಳಿತು, ವಿಜಯ ಸಾರಥಿಯಾಗಿ, ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ನಿಜವಾದ ವಿಜಯ. ಪಾಂಡವರನ್ನು ಹೆಜ್ಜೆ ಹೆಜ್ಜೆಗೂ ವಿಜಯ ಪಥದತ್ತ ಕೊಂಡೊಯ್ದ ಭಗವಂತ ವಿಜಯ.
ಇಷ್ಟೇ ಅಲ್ಲದೆ, ರಾಮಾವತಾರದಲ್ಲಿ ರಾವಣ-ಕುಂಭಕರ್ಣರನ್ನು, ನರಸಿಂಹ ಅವತಾರಿಯಾಗಿ ಹಿರಣ್ಯ- ಕಷಿಪುವನ್ನು, ವರಾಹ ಅವತಾರದಲ್ಲಿ ಹಿರಣ್ಯಾಕ್ಷನನ್ನು, ಹೀಗೆ ಅನೇಕ ರಾಕ್ಷಸರನ್ನು ವಿಶಿಷ್ಟವಾದ ರೂಪದಲ್ಲಿ ಜಯಿಸಿದ ಭಗವಂತ ವಿಜಯ.
148 ) ಜೇತಾ
ಜೇತೃ ಎಂದರೆ ಎಲ್ಲವನ್ನು ಗೆದ್ದವನು. ಮೇಲೆ ವಿಜಯ ನಾಮದಲ್ಲಿ ನೋಡಿದಂತೆ ಭಗವಂತ ಎಲ್ಲರನ್ನೂ ಗೆದ್ದವನು. ಎಲ್ಲರನ್ನೂ ಗೆದ್ದು, ಎಲ್ಲರಿಗಿಂತ ಎತ್ತರದಲ್ಲಿದ್ದು, ನಮ್ಮನ್ನು ಎತ್ತರಕ್ಕೇರಿಸುವ ಅರಿಗಳನ್ನು ಗೆದ್ದ ಭಗವಂತ ಜೇತಾ.
149) ವಿಶ್ವಯೋನಿಃ
ಈ ನಾಮ ಹಿಂದೊಮ್ಮೆ ಬಂದಿದೆ. ಇಲ್ಲಿ 'ವಿ' , 'ಶ್ವ' ಎಂದರೆ ಹಕ್ಕಿಯ ಮೇಲೆ ಕೂರುವವ, ಹಾಗೂ ಯೋನಿ ಎಂದರೆ ಎಲ್ಲಕ್ಕೂ ಕಾರಣಕರ್ತ, ಜಗದ ಜನಕ ಎಂದರ್ಥ.
ಗೀತೆಯಲ್ಲಿ ಹೇಳುವಂತೆ:
ಮಮ ಯೋನಿರ್ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ (ಅ-೧೪, ಶ್ಲೋ ೩)
ಬ್ರಹ್ಮ ಶಬ್ದ ವಾಚ್ಯಳಾದ ಚಿತ್ತ್ ಪೃಕೃತಿ ಯಾರ ಪತ್ನಿಯೋ, ಇಡೀ ವಿಶ್ವವು ಯಾರ ಅಭಿವ್ಯಕ್ತಿಗೆ ಕಾರಣವೋ, ಅವನು ವಿಶ್ವಯೋನಿ. ಈ ರೀತಿ ಮುಖ್ಯಪ್ರಾಣಾಂತರ್ಗತನಾದ ನಾರಾಯಣನನ್ನು ವಿಶ್ವಯೋನಿ ಎನ್ನುತ್ತಾರೆ.
150) ಪುನರ್ವಸುಃ
ಇಲ್ಲಿ ವಸು ಎಂದರೆ ಸಂಪತ್ತು. ಭಗವಂತ ಒಮ್ಮೆ ಬಡತನ ಕೊಟ್ಟರೆ ಪುನಃ ಸಂಪತ್ತನ್ನು ಕೊಡುತ್ತಾನೆ. ದೇವತೆಗಳ ಸಂಪತ್ತನ್ನೆಲ್ಲಾ ಅಪಹಾರ ಮಾಡಿದ ಬಲಿಯನ್ನು ಸೋಲಿಸಿ, ದೇವತೆಗಳಿಗೆ ಅವರ ಸಂಪತ್ತನ್ನು ಪುನಃ ಹಿಂತಿರುಗಿಸಿದ ಭಗವಂತ, ತಲೆಯನ್ನು ತನ್ನ ಪಾದ ಪೀಠವನ್ನಾಗಿ ಮಾಡಿದ ಬಲಿಯನ್ನು ಮುಂದಿನ ಮನ್ವಂತರದಲ್ಲಿ ಇಂದ್ರನನ್ನಾಗಿ ಮಾಡಿದ.
ಹೀಗೆ ಒಮ್ಮೆ ಜ್ಞಾನವನ್ನು, ಇನ್ನೂಮ್ಮೆ ಅಜ್ಞಾನವನ್ನು, ಒಮ್ಮೆ ಸಂಪತ್ತನ್ನೂ, ಇನ್ನೊಮ್ಮೆ ಬಡತನವನ್ನು ಕೊಟ್ಟು, ನಮ್ಮನ್ನು ಪರಿಣತರನ್ನಾಗಿ ಮಾಡುವ ಭಗವಂತ ಪುನರ್ವಸುಃ.
ಮುಂದುವರೆಯುವುದು....
No comments:
Post a Comment