Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -29


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || 29 ||

೨೬೭) ಸುಭುಜ

ಸುಭುಜ ಎಂದರೆ ಸುಂದರವಾದ ತೋಳುಳ್ಳವನು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ವೇದವ್ಯಾಸರು ಹೇಳುವಂತೆ "ಭಗವಂತನ ತೋಳುಗಳಿಗೆ ಈ ಜಗತ್ತಿನ ರಕ್ಷಣೆಯಲ್ಲದೆ ಇನ್ನೇನೂ ಕೆಲಸವಿಲ್ಲ!" ನಿರಂತರ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ಭಗವಂತನನ್ನು ಸುಭುಜ ಎನ್ನುತ್ತಾರೆ.

ನಮ್ಮ ತೋಳಿಗೂ ಹಾಗೂ ದೇಹದ ಎತ್ತರಕ್ಕೂ ಸಂಭಂದವಿದೆ. ವ್ಯಕ್ತಿಯ ಎರಡು ಕೈಗಳನ್ನು ಚಾಚಿದಾಗ ಅದರ ಒಟ್ಟು ಉದ್ದ ಒಂದು ಮಾರು. ಒಂದು ಮಾರು ಎಂದರೆ ನಾಲ್ಕು ಮೊಳ. ಒಂದು ಮೊಳ ಎಂದರೆ ಇಪ್ಪತ್ನಾಲ್ಕು ಅಂಗುಲ. ವ್ಯಕ್ತಿಯ ಎತ್ತರ ಒಂದು ಮಾರು=ನಾಲ್ಕು ಮೊಳ=ತೊಂಬತ್ತಾರು ಅಂಗುಲ=ಹತ್ತು ಗೇಣು ಉದ್ದವಿದ್ದರೆ ಆತ ಸುಭುಜ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿತ್ವವನ್ನು ಕೇವಲ ಭಗವಂತನ ಅವತಾರದಲ್ಲಿ ಮಾತ್ರ ನೋಡುತ್ತೇವೆ. ಸಾಮಾನ್ಯ ಮಾನವನಲ್ಲಿ ಈ ಮಾಪನ ನೂರಕ್ಕೆ ನೂರು ಸಮನಾಗಿರುವುದಿಲ್ಲ. ಇಷ್ಟೇ ಅಲ್ಲದೆ ವ್ಯಕ್ತಿಯ ಪಾದ ಕೂಡ ದೇಹದ ಎತ್ತರದ ಏಳನೇ ಒಂದರಷ್ಟು ಉದ್ದವಿರುತ್ತದೆ. ಭೂಭುಜರು ಎಂದರೆ ಭೂಮಿಯಲ್ಲಿ ಆಡಳಿತ ಮಾಡುವ ಕ್ಷತ್ರಿಯರು, ಸುಭುಜ ಎಂದರೆ ಜಗತ್ತಿನ ಪಾಲನೆ ಹಾಗೂ ಸಂಹಾರಕರ್ತ. ಎಂದೂ ಕೆಟ್ಟದ್ದನ್ನು ಬಯಸದ ಸುಖವನ್ನು ಮಾತ್ರ ಭೋಗಿಸುವ ಭಗವಂತ ಸುಭುಜ.

೨೬೮) ದುರ್ಧರ

ಭಗವಂತನನ್ನು ನಮ್ಮ ಮನಸ್ಸಿನಲ್ಲಿ ಧಾರಣೆ ಮಾಡುವುದು ಸುಲಭದ ಕೆಲಸವಲ್ಲ. ಆತನನ್ನು ನಮ್ಮ ಒಳಗಣ್ಣಿನಿಂದ ನೋಡಬೇಕಾದರೆ ಬಹಳ ಕಷ್ಟ. ಇದಕ್ಕಾಗಿ ಹಠಬೇಕು. ಧ್ಯಾನ ಮಾಡದೆ ಆತ ಮನಸ್ಸಿಗೆ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ನಾವು ಧ್ಯಾನಕ್ಕೆ ಕುಳಿತಾಗ ನಮಗೆ ಧ್ಯಾನಕ್ಕೆ ಬಾಧಕವಾದ ನೂರಾರು ಸಂಗತಿಗಳು ಕಾಣಿಸುತ್ತವೆ. ಇದಕ್ಕೆ ಕಾರಣವೇನೆಂದರೆ ನಾವು ನಮ್ಮೊಳಗೆ ಬೇಡವಾದ ನೂರಾರು ವಿಚಾರಗಳನ್ನು ತುಂಬಿಸಿ ಮನಸ್ಸನ್ನು ಬೇಡವಾದ ರೀತಿಯಲ್ಲಿ ತರಬೇತಿಗೊಳಿಸಿರುತ್ತೇವೆ. ಮನಸ್ಸು ನಮ್ಮ ತರಬೇತಿಗೆ ತಕ್ಕಂತೆ ಪೋಳಾಗಿರುತ್ತದೆ ಹಾಗೂ ಅದನ್ನು ಭಗವಂತನತ್ತ ಒಮ್ಮೆಗೆ ತಿರುಗಿಸುವುದು ಕಷ್ಟ. ಹಠ ಬಿಡದೆ ನಿರಂತರ ದೇವರ ಜ್ಞಾನ ನಮಗೆ ದೇವರ ದರ್ಶನ ಮಾಡಬಲ್ಲದು. ಧ್ಯಾನಕ್ಕೆ ಕುಳಿತಾಗ ನಮಗೆ ಕೆಟ್ಟ ವಿಚಾರ ಬಂದರೆ ಅದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಒಳಗೆ ತುಂಬಿರುವ ಕೆಟ್ಟ ವಿಚಾರ ಹೊರ ಹೋಗುವಾಗ ಹೀಗಾಗುತ್ತದೆ. ಒಮ್ಮೆ ಒಳಗೆ ತುಂಬಿದ್ದ ಕೊಳೆ ಹೊರ ಹೋದ ಮೇಲೆ ಮನಸ್ಸು ನಿರ್ಮಲವಾಗುತ್ತದೆ ಹಾಗೂ ಈ ಸ್ಥಿತಿಯಲಿ ಧ್ಯಾನ ಸುಲಭ. ಮನಸ್ಸಿನ ಕೊಳೆಯನ್ನು ತೆಗೆಯುವ ಏಕೈಕ ಸಾಧನ ನಿರಂತರ ಭಗವದ್ ಚಿಂತನೆ. ಪ್ರತಿಯೊಂದು ಕರ್ಮದಲ್ಲಿ, ಪ್ರತಿಯೊಂದು ವಸ್ತುವಿನಲ್ಲಿ ಭಗವಂತನನ್ನು, ಆತನ ವಿಶಿಷ್ಟ ಸೃಷ್ಟಿಯನ್ನು ಕಾಣುವ ಪ್ರಯತ್ನ ಮಾಡಿದರೆ ಫಲ ನಿಶ್ಚಯ. ಭಗವಂತನನ್ನು ಕಾಣುವುದು ಒಂದು ಜನ್ಮದ ಸಾಧನೆಯಲ್ಲ ಅದಕ್ಕಾಗಿ ಅನೇಕಾನೇಕ ಜನ್ಮದ ಸಾಧನೆ ಅಗತ್ಯ. ಆದರೆ ಪ್ರತಿ ಜನ್ಮದ ಸಾಧನೆಯ ಒಂದು ಹೆಜ್ಜೆ ಕೂಡಾ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:

ನೇಹಾಭಿಕ್ರ ಮನಾಶೋ_ಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್

ಅಂದರೆ ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ. ಈ ಧರ್ಮದ ತುಣುಕು ಕೂಡಾ ದೊಡ್ಡ ಆಘಾತ ಅಥವಾ ಭಯದಿಂದ ನಮ್ಮನ್ನು ಪಾರುಮಾಡಬಲ್ಲದು.

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ

ಅಂದರೆ ಸಾವಿರಾರು ಮಂದಿಯಲ್ಲಿ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿ ಮುಟ್ಟಿದವರಲ್ಲಿ ಯಾರೋ ಒಬ್ಬ ಭಗವಂತನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ. ಆದ್ದರಿಂದ ಭಗವಂತನನ್ನು ನೋಡುವುದು ದುರ್ಧರ. ಸರ್ವಾಂಗ ಸುಂದರನಾದ ಆತನನ್ನು ನೋಡಬೇಕಾದರೆ ಎಷ್ಟೋ ಜನ್ಮದ ಕರ್ಮ ಬೇಕು.

೨೬೯) ವಾಗ್ಮೀ

ವಾಗ್ಮೀ ಎಂದರೆ ಮಾತು ಬಲ್ಲ ಮಾತುಗಾರ. ನಿಜವಾದ ವಾಗ್ಮಿ ಮಿತಭಾಷಿಯಾಗಿದ್ದು ಹೆಚ್ಚು ಮಾತನಾಡುವುದಿಲ್ಲ ಆದರೆ ಆಡುವ ಮಾತನ್ನು ಎಲ್ಲಿ ಹೇಗೆ ಎಷ್ಟು ಮಾತನಾಡಬೇಕೆಂದು ತಿಳಿದಿರುತ್ತಾರೆ. ಮಾತು ನಮಗೆ ಗೊತ್ತಿರುವ ವಿಷಯವನ್ನು ಅಭಿವ್ಯಕ್ತ ಮಾಡುವ ಸಾಧನ. ಎಲ್ಲವನ್ನೂ ತಿಳಿದವ ಮಾತ್ರ ಎಲ್ಲಾ ವಿಷಯವನ್ನು ನಿರರ್ಗಳವಾಗಿ ಮಾತನಾಡಬಲ್ಲ. ಕೆಲವೊಮ್ಮೆ ವಿಷಯ ತಿಳಿದಿದ್ದರೂ ಮಾತನಾಡುವುದು ಕಷ್ಟ! ಭಗವಂತನೊಬ್ಬನೇ ಎಲ್ಲವನ್ನೂ ತಿಳಿದವ, ಎಲ್ಲರ ನಾಲಿಗೆಯಲ್ಲಿ ಕುಳಿತು ನುಡಿಸುವವನೂ ಅವನೇ. ಸಾಧಕನ ಅತೀ ದೊಡ್ಡ ಬಯಕೆ ದೇವರ ಜೊತೆ ಮಾತನಾಡಬೇಕು ಎನ್ನುವುದು. ಆದರೆ ಅದಕ್ಕಾಗಿ ಕಲ್ಪಗಳನ್ನೇ ಕಾಯಬೇಕಾಗಬಹುದು. ಸಮಸ್ತ ವೇದವನ್ನು ಬ್ರಹ್ಮನಿಗೆ ಮೊಟ್ಟಮೊದಲು ಉಪದೇಶ ಮಾಡಿದ ಭಗವಂತನ ಇನ್ನೊಂದು ಹೆಸರು 'ವಾಗೀಶ' ಅಂದರೆ ಮಾತುಗಳ ಒಡೆಯ. ಎಲ್ಲಾ ವೇದಗಳನ್ನು ನೀಡಿದ, ಎಲ್ಲರೊಳಗಿದ್ದು ಎಲ್ಲಾ ನುಡಿಗಳನ್ನು ನುಡಿಸುವ ಮಾತುಗಾರ ಭಗವಂತ ವಾಗ್ಮೀ.

೨೭೦) ಮಹೇಂದ್ರ

ಸಂಸ್ಕೃತದಲ್ಲಿ 'ಇಂದ್ರ' ಎಂದರೆ ಸರ್ವಸಮರ್ಥ. ಭಗವಂತ ಸರ್ವಸಮರ್ಥ ಪರಮೇಶ್ವರ. ದೇವತೆಗಳ ರಾಜ 'ಇಂದ್ರನಿಗೆ' ಆ ಪದವಿಯನ್ನು ಕೊಟ್ಟ ಭಗವಂತ ಮಹೇಂದ್ರ. ಒಡೆಯರಿಗೂ ಒಡೆಯ; ಸಮರ್ಥರಿಗೂ ಸಮರ್ಥ ಭಗವಂತ ಮಹೇಂದ್ರ.

ಪ್ರಕಾಶನ ಎಂದರೆ ಎಲ್ಲವನ್ನೂ ಬೆಳಗುವವನು. ಗೀತೆಯಲ್ಲಿ ಹೇಳುವಂತೆ :

ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್

ಅಗ್ನಿ, ನಕ್ಷತ್ರ ಹಾಗೂ ಪ್ರಪಂಚದ ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ ಭಗವಂತ. ಈ ನಾಮವನ್ನು ಒಡೆದು ನೋಡಿದರೆ 'ಪ್ರಕಾ+ಅಶನ' ಎಂದರೆ ಸರ್ವೋತ್ಕ್ರಷ್ಟವಾದ ಆನಂದ ಸ್ವರೂಪ. ಪ್ರಕಾಶರು ಎಂದರೆ ಮುಕ್ತಿ ಯೋಗ್ಯ ಜ್ಞಾನಿಗಳು. ಅವರಿಗೆ 'ನಯತಿ' ಎಂದರೆ ಮೋಕ್ಷವನ್ನು ಕೊಡುವವನು ಪ್ರಕಾಶನ.

೨೭೧) ವಸುದ

ವಸುದ ಎಂದರೆ ಸಂಪತ್ತನ್ನು ಕೊಡುವವ. ಹಿಂದೆ ಹೇಳಿದಂತೆ ಸಂಪತ್ತಿನಲ್ಲಿ ಎರಡು ವಿಧ. ಒಂದು ಬಾಹ್ಯ ಸಂಪತ್ತು ಹಾಗೂ ಇನ್ನೊಂದು ಅಂತರಂಗದ ಸಂಪತ್ತು. ಜ್ಞಾನ ಅಂತರಂಗದ ಸಂಪತ್ತು. ನಮಗೆ ನಮ್ಮ ಕರ್ಮಕ್ಕನುಗುಣವಾಗಿ ಬಡತನ-ಶ್ರೀಮಂತಿಕೆ, ಜ್ಞಾನ-ಅಜ್ಞಾನ ಕೊಡುವ ಭಗವಂತ ವಸುದ. ಜ್ಞಾನ ಗಳಿಸಬೇಕಾದರೆ ನಮಗೆ ಇಚ್ಚಾಶಕ್ತಿ, ಗ್ರಹಣಶಕ್ತಿ ಹಾಗೂ ಧಾರಣಶಕ್ತಿ ಬೇಕು. ಎಲ್ಲವನ್ನೂ ಕೊಡುವ ಭಗವಂತ ವಸುದ. ಗೀತೆಯಲ್ಲಿ ಹೇಳುವಂತೆ: ಮತ್ತಃ ಸ್ಮೃತಿರ್ಜ್ಞಾನ ಮಪೋಹನಂ ಚ - ಎಂದರೆ 'ನೆನಪು, ಅರಿವು, ಮರೆವು ಎಲ್ಲಾ ಭಗವಂತನ ಕೊಡುಗೆ'. ಅಷ್ಟೇ ಅಲ್ಲದೆ ಭಗವಂತನನ್ನು ನಂಬಿದ ಭಕ್ತರ ಯೋಗ-ಕ್ಷೇಮದ ಹೊಣೆ ಭಗವಂತನದ್ದು.

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್

ಜ್ಞಾನದ ಬಾಗಿಲನ್ನು ತೆರೆದು ಮೋಕ್ಷವನ್ನು ಕರುಣಿಸುವ, ಭಕ್ತರ ಯೋಗ-ಕ್ಷೇಮದ ಹೊಣೆ ಹೊತ್ತಿರುವ ಭಗವಂತ ವಸುದ.

೨೭೨) ವಸು.

ದೇವತೆಗಳಲ್ಲಿ ವಸು ಎನ್ನುವ ಗಣವಿದೆ ಹಾಗೂ ಅವರನ್ನು ಅಷ್ಟವಸುಗಳೆನ್ನುತ್ತಾರೆ. ಇವರಲ್ಲಿ ಅಗ್ನಿ ಪ್ರಮುಖನಾದವನು. ಅಗ್ನಿಯಲ್ಲಿ ಭಗವಂತನ ಮುಖ್ಯ ಪ್ರತೀಕವಿದೆ. ಭೂಮಿಯಲ್ಲಿ ಭಗವಂತನ ಉಪಾಸನೆಯನ್ನು ಪ್ರಮುಖವಾಗಿ ಅಗ್ನಿಸ್ತರದಲ್ಲಿ ಮಾಡುತ್ತಾರೆ. ಅಗ್ನಿಗೆ ಈ ಸ್ಥಾನವನ್ನು ಕೊಟ್ಟ ಭಗವಂತ ವಸುಃ. ಭಕ್ತರಿಗೆ ಹಿರಿಯ ಸಂಪತ್ತಾದ ಹಾಗು ಆಕಾಶದಲ್ಲಿ ತುಂಬಿ ನಿಂತರುವ ಭಗವಂತ ವಸು.

೨೭೩) ನೈಕರೂಪ

ನೈಕರೂಪ ಎಂದರೆ ಅನಂತ ರೂಪ. ಭಗವಂತ ಒಬ್ಬೊಬ್ಬರೊಳಗೆ ಬಿಂಬರೂಪನಾಗಿ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ:

ತಸ್ಯಾಂತೆ ಸುಶಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಠಿತಂ

ಅಂದರೆ ನಮ್ಮ ಹೃದಯ ಮಧ್ಯದಲ್ಲಿ ಸೂಜಿಮೊನೆಯಷ್ಟು ಸೂಕ್ಷ್ಮವಾದ ಅತ್ಯಂತ ಪವಿತ್ರವಾದ ಸ್ಥಾನದಲ್ಲಿ ಭಗವಂತನಿದ್ದಾನೆ. ಇಡೀ ಬ್ರಹ್ಮಾಂಡವನ್ನು ಯಾವ ಶಕ್ತಿ ನಿಯಂತ್ರಿಸುತ್ತದೋ ಅದೇ ಸರ್ವಸಮರ್ಥ ಶಕ್ತಿ ನಮ್ಮ ಹೃತ್ಕಮಲದಲ್ಲಡಗಿದೆ. ಇದೇ ಶಕ್ತಿ ಇಡೀ ವಿಶ್ವದಲ್ಲಿ ತುಂಬಿರುವ ಸಮಗ್ರ ಶಕ್ತಿ. ಹೀಗೆ ಬಿಂಬರೂಪಿಯಾಗಿ ಅನಂತರೂಪಿಯಾಗಿರುವ ಭಗವಂತ ನೈಕರೂಪ.

೨೭೪) ಬೃಹದ್ರೂಪ

ಬೃಹತ್ ಎಂದರೆ ನಮಗೆ ಕಾಣುವ ಬೆಳಕುಗಳಲ್ಲೆಲ್ಲಾ ಅತ್ಯಂತ ದೊಡ್ಡ ಬೆಳಕಾದ 'ಸೂರ್ಯ'. ಇಡೀ ಬ್ರಹ್ಮಾಂಡಕ್ಕೆ ಬೆಳಕು ನೀಡುವ ಸೂರ್ಯನೊಳಗಿರುವ ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿ ಕೂಡಾ ಹೌದು. ಇದನ್ನೇ ಗಾಯತ್ರಿ ಉಪಾಸನೆಯಲ್ಲಿ ಹೀಗೆ ಹೇಳಿದ್ದಾರೆ:

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್

ಬ್ರಹ್ಮಾಂಡ ಹಾಗೂ ಪಿಂಡಾಂಡದ ಸಮನ್ವಯ ಗಾಯತ್ರಿಯಲ್ಲಿದೆ. ಯಾವ ಶಕ್ತಿ ಸೂರ್ಯಮಂಡಲದಲ್ಲಿ ಬೃಹತ್ ಆಗಿ ಇಡೀ ವಿಶ್ವಕ್ಕೆ ಜೀವದಾನ ಮಾಡುತ್ತಿದೆಯೋ ಅದೇ ಶಕ್ತಿ ನನ್ನೊಳಗಿದ್ದು ಸದ್ಬುದ್ಧಿಯನ್ನು ಕೊಡಲಿ, ವಿಶ್ವಕ್ಕೆ ಬದುಕನ್ನು ನೀಡುವ ಶಕ್ತಿ ನನ್ನೊಳಗಿದ್ದು ನನ್ನ ಇಂದ್ರಿಯವನ್ನು ಒಳ್ಳೆಯ ವಿಷಯದತ್ತ ಪ್ರೇರೇಪಿಸಲಿ, ಒಳ್ಳೆಯದಕ್ಕೊಸ್ಕರ ಬದುಕುವಂತೆ ಮಾಡಲಿ ಎನ್ನುವುದೇ ಈ ಪ್ರಾರ್ಥನೆ. ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಅವತಾರಪುರುಷ ಭಗವಂತ ಕಾಣಿಸಿಕೊಂಡಿದ್ದಾನೆ. ವಾಮನ ರೂಪಿಯಾಗಿ ಬಂದು ಬ್ರಹದ್ರೂಪಿಯಾದ ನಾರಾಯಣ, ವೈವಸ್ವತ ಮನುವಿಗೆ ಚಿಕ್ಕ ಮೀನಿನ ರೂಪದಲ್ಲಿ ಕಾಣಿಸಿಕೊಂಡು ನಂತರ ಮಹಾ ಮತ್ಸ್ಯವಾಗಿ ದರ್ಶನಕೊಟ್ಟ ಭಗವಂತ ಹಾಗೂ ಅರ್ಜುನನ ಸಾರಥಿಯಾಗಿ ತನ್ನ ವಿಶ್ವರೂಪವನ್ನು ತೋರಿದ ಕೃಷ್ಣ, ತಾಯಿಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ ಭಗವಂತ ಬೃಹದ್ರೂಪ.

೨೭೫) ಶಿಪಿವಿಷ್ಟ

'ಶಿಪಿ' ಎನ್ನುವ ಪದ ಅರ್ವಾಚೀನ ಸಂಸ್ಕೃತ ಭಾಷೆಯಲ್ಲಿ ಪ್ರಚಲಿತದಲ್ಲಿಲ್ಲ. ಇದು ವೈದಿಕ ಪದ. ಶಿಪಿ ಎಂದರೆ ಪ್ರಾಣಿಗಳು. ಶಿಪಿವಿಷ್ಟಃ ಎಂದರೆ ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ. ಇದೊಂದು ವಿಶಿಷ್ಟವಾದ ಯಾಜ್ಞಿಕ ಉಪಾಸನೆ. ವೇದದಲ್ಲಿ ವಿಶೇಷವಾಗಿ ಐದು ಪ್ರಾಣಿಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳೆಂದರೆ ಅಶ್ವ, ಗೋವು, ಕುರಿ, ಆಡು ಹಾಗೂ ಮನುಷ್ಯ. ಈ ಪಂಚ ಪ್ರಾಣಿಗಳಲ್ಲಿ ಪಂಚರೂಪದಲ್ಲಿ ಭಗವಂತ ಸನ್ನಿಹಿತನಾಗಿದ್ದಾನೆ. ಪುರುಷ ಸೂಕ್ತದಲ್ಲಿ ಈ ಐದು ಪ್ರಾಣಿಗಳ ಉಲ್ಲೇಖವಿದೆ.

ತಸ್ಮಾದಶ್ವಾ ಅಜಾಯನ್ತ ಯೇ ಕೇ ಚೋಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ
ಯತ್ಪುರುಷಂ ವ್ಯದಧುಃ

ಈ ಐದು ಪ್ರಾಣಿಗಳಲ್ಲಿ ಭಗವಂತನ ಸೃಷ್ಟಿಯ ವೈಶಿಷ್ಟ್ಯ ಕಾಣಬಹುದು. ಅಶ್ವ ಹಾಗೂ ಎತ್ತು ಮನುಷ್ಯನ ಸಂಚಾರದ ಸಾಧನವಾಗಿದ್ದರೆ, ದನ ಯಜ್ಞದ ಮೂಲ ದ್ರವ್ಯವಾದ ಹಾಲು-ಮೊಸರು-ಬೆಣ್ಣೆ-ತುಪ್ಪವನ್ನು ಕೊಡುವ ಸಾಕು ಪ್ರಾಣಿ. ಅಶ್ವ ತನ್ನ ಜೀವದ ಪಣತೊಟ್ಟು ಯಜಮಾನನ ರಕ್ಷಣೆ ಮಾಡುವ ವಿಶಿಷ್ಟ ಪ್ರಾಣಿ. ಅಶ್ವದಲ್ಲಿ ಕಾಣುವ ಇನ್ನೊಂದು ವಿಶೇಷ ಲಕ್ಷಣವೆಂದರೆ ಅದು ಈ ಪ್ರಪಂಚದಂತೆ ನಿರಂತರ ಚಲನೆಯಲ್ಲಿರುತ್ತದೆ. ಅದು ಎಂದೂ ಚಲನೆ ರಹಿತವಾಗಿರುವುದಿಲ್ಲ. ಇದಕ್ಕಾಗಿ ಈ ಪ್ರಪಂಚವನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ಅಶ್ವತ್ಥ ಮರ ಕೂಡಾ ಎಂದೂ ಚಲನೆ ರಹಿತವಾಗಿರುವುದಿಲ್ಲ. ಅಶ್ವ ನಿರಂತರ ಎಷ್ಟೇ ದೂರವಾದರೂ ಆಯಾಸವಿಲ್ಲದೆ ಚಲಿಸಬಲ್ಲದು. ಚಲನೆ ಅದರ ಸಹಜ ಕ್ರಿಯೆ. ಅಶ್ವ ಮನುಷ್ಯನ ಚಾಪಲ್ಯದ ಸಂಕೇತ ಕೂಡಾ ಹೌದು. ಅದಕ್ಕಾಗಿ ಹಿಂದೆ ಅಶ್ವಮೇಧ ಯಾಗ ಮಾಡಿ ಕುದುರೆಯನ್ನು ಬಲಿ ಕೊಡುತ್ತಿದ್ದರು ಹಾಗೂ ಆನಂತರ ತಮ್ಮ ಚಾಪಲ್ಯದಿಂದ ಮುಕ್ತಿಯನ್ನು ಪಡೆದು ರಾಜರ್ಷಿಯಾಗಿ ಬದುಕುತ್ತಿದ್ದರು.

ಮಾಂಸಾಹಾರಿಗಳು ತಾವು ತಿನ್ನುವ ಆಹಾರವನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಾಮಾನ್ಯ ಹಾಗೂ ಶಾಸ್ತ್ರ ಸಮ್ಮತ. ಆಡು ಸೋಮಯಾಗದಲ್ಲಿ ಪ್ರಮುಖ ದ್ರವ್ಯ. ಆದರೆ ಸೋಮಯಾಗವನ್ನು ಕೇವಲ ಮಾಂಸಾಹಾರಿಗಳು ಮಾತ್ರ ಮಾಡಬಹುದು. ಆಡಿನ ಹಾಲನ್ನು ಈಗಲೂ ಆಹಾರವಾಗಿ ಉಪಯೋಗಿಸುತ್ತಾರೆ. ಇನ್ನು ಕುರಿ ಪ್ರಮುಖವಾಗಿ ಮನುಷ್ಯನ ಬಟ್ಟೆಯ ಸಾಧನ. ವೈದಿಕ ಸಂಪ್ರದಾಯ ಬೆಳೆದುಬಂದಿದ್ದು ಹಿಮಾಲಯದಲ್ಲಿ. ಅದಕ್ಕಾಗಿ 'ಸಿಂಧೂ ಕಣಿವೆಯ ಸಂಸ್ಕೃತಿ' ಎನ್ನುವ ಹೆಸರು ಬಂದಿರುವುದು. ಈ ಸಿಂಧೂ ಎನ್ನುವ ಹೆಸರು ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಆಗಿ ನಂತರ ಬ್ರಿಟೀಷರಿಂದ 'ಇಂದು' ಆಗಿ ಇದೀಗ ಇಂಡಿಯಾ ಆಗಿದೆ!

ಈ ಸಿಂಧೂ ಕಣಿವೆಯಲ್ಲಿ ಕೊರೆಯುವ ಚಳಿಗೆ ಮನುಷ್ಯನ ರಕ್ಷಣೆ 'ಕುರಿಯಿಂದ' ತಯಾರಾದ ಬಟ್ಟೆಯಿಂದಾಗುತ್ತಿತ್ತು. ಹೀಗೆ ಈ ಮೇಲಿನ ನಾಲ್ಕು ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ ಶಿಪಿವಿಷ್ಟ.

೨೭೬) ಪ್ರಕಾಶನ.

ಪ್ರಕಾಶನ ಎಂದರೆ ಎಲ್ಲವನ್ನೂ ಬೆಳಗುವವನು. ಗೀತೆಯಲ್ಲಿ ಹೇಳುವಂತೆ 
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್
ಅಗ್ನಿ, ನಕ್ಷತ್ರ ಹಾಗೂ ಪ್ರಪಂಚದ ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ ಭಗವಂತ. ಈ ನಾಮವನ್ನು ಒಡೆದು ನೋಡಿದರೆ 'ಪ್ರಕಾ+ಅಶನ' ಎಂದರೆ ಸರ್ವೋತ್ಕ್ರಷ್ಟವಾದ ಆನಂದ ಸ್ವರೂಪ. ಪ್ರಕಾಶರು ಎಂದರೆ ಮುಕ್ತಿ ಯೋಗ್ಯ ಜ್ಞಾನಿಗಳು. ಅವರಿಗೆ 'ನಯತಿ' ಎಂದರೆ ಮೋಕ್ಷವನ್ನು ಕೊಡುವವನು ಪ್ರಕಾಶನ.

ಮುಂದುವರೆಯುವುದು...

No comments:

Post a Comment