ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || 35 ||
೩೨೦) ಅಚ್ಯುತಃ
ಭಗವಂತನ ಈ ನಾಮ ಸಹಸ್ರನಾಮದಲ್ಲಿ ಮೂರು ಭಾರಿ ಪುನರುಕ್ತಿಯಾಗಿದೆ. ನಮ್ಮಲ್ಲಿ ಯಾವುದೇ ಮಂತ್ರ, ಜಪ ಪಾರಾಯಣ ಮಾಡಿ ಮುಗಿಸಿದ ಮೇಲೆ ಸ್ವರ-ವರ್ಣದ ಲೋಪದ ಪ್ರಾಯಶ್ಚಿತಕ್ಕಾಗಿ ಹೇಳುವ ಪ್ರಾಯಶ್ಚಿತ ಮಂತ್ರದಲ್ಲಿನ ಮೂರು ನಾಮಗಳಲ್ಲಿ ಈ ನಾಮವೂ ಒಂದು. ‘ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ’ ಚ್ಯುತಿ ಇಲ್ಲದ ಅಚ್ಚುತ ನಾಮಕ ಭಗವಂತ ನಮ್ಮ ಸರ್ವಉಚ್ಚಾರ ದೋಷಹರ. ಇಷ್ಟೇ ಅಲ್ಲದೆ ಪುರಾಣದಲ್ಲಿ ವೇದವ್ಯಾಸರು ಹೇಳಿದಂತೆ :
"ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಬೀಶಿತಾಃ ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂವದಾಮ್ಯಹಂ" ಎಂದರೆ ಭಗವಂತನ ಈ ನಾಮೋಚ್ಚಾರಣೆಯಿಂದ ಸರ್ವ ರೋಗಗಳು ಹೆದರಿ ಬಿಟ್ಟೋಡುತ್ತವೆ ಇದು ಸತ್ಯ. ಇದಕ್ಕಾಗಿ ನಮಗೆ ಭಗವಂತನಲ್ಲಿ ಅಗಾಧವಾದ ನಂಬಿಕೆ ಹಾಗೂ ಸ್ವೀಕರಿಸುವ ಸಾಮರ್ಥ್ಯ ಬೇಕು. ಪರಿಪೂರ್ಣನಾದ ಭಗವಂತ ಸರ್ವ ರೋಗಹರ. ಹೀಗೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ ಅಚ್ಯುತಃ.
೩೨೧) ಪ್ರಥಿತಃ
ಪ್ರಥಿತಃ ಎಂದರೆ ವಿಖ್ಯಾತನಾದವನು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಯಸ್ಮಾತ್ ಕ್ಷರಮತೀತೋ_ಹಮಕ್ಷರಾದಪಿ ಚೋತ್ತಮಃ
ಅತೋ_ಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ
ಅಂದರೆ "ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು. ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದೇ ಹೆಸರಾಗಿದ್ದೇನೆ". ಹೀಗೆ ಸರ್ವ ಆತ್ಮಗಳಲ್ಲಿ ಶ್ರೇಷ್ಠ ಆತ್ಮ, ಸರ್ವ ವೇದ ವಾಚ್ಯ ಹಾಗೂ ಸರ್ವ ಶಬ್ದ ವಾಚ್ಯ ಭಗವಂತ ಪ್ರಥಿತಃ.
೩೨೨) ಪ್ರಾಣಃ
ಭಗವಂತ 'ಸರ್ವಪ್ರೇರಕ' ಶಕ್ತಿ. ಎಲ್ಲರ ಒಳಗಿದ್ದು ಎಲ್ಲರನ್ನೂ ಪ್ರೇರಣೆಮಾಡುವ, ಎಲ್ಲ ಚಲನೆಯನ್ನು ನಿಯಂತ್ರಿಸುವ ಶಕ್ತಿ. ಈ ಜಗತ್ತಿಗೆ ಮೊದಲು ಚಲನೆಯನ್ನು ಕೊಟ್ಟವ ಭಗವಂತ. ಈ ಹಿಂದೆ ಹೇಳಿದಂತೆ 'ಣ' ಎಂದರೆ ಬಲ ಹಾಗೂ ಆನಂದ ಎನ್ನುವ ಅರ್ಥವನ್ನು ಕೊಡುತ್ತದೆ. ಪರಿಪೂರ್ಣವಾದ ಆನಂದ ಹಾಗೂ ಬಲ ಸ್ವರೂಪ ಭಗವಂತ ಪ್ರಾಣಃ.
೩೨೩) ಪ್ರಾಣದಃ
ಪ್ರಾಣದಃ ಎಂದರೆ ಪ್ರಾಣವನ್ನು ಕೊಡುವವ. ಜಗತ್ತಿನ ನಿಯಾಮಕ ಶಕ್ತಿಯಾದ ಪ್ರಾಣನನ್ನು ನಮಗೆ ಕೊಟ್ಟವ. ಪ್ರಾಣನಿಗೆ ಉಪನಿಷತ್ತಿನಲ್ಲಿ 'ಪ್ರಾತಃ' ಎಂದಿದ್ದಾರೆ. ಅಂದರೆ ಭಗವಂತನ ಗುಣವನ್ನು ಬಿತ್ತರಿಸುವ ಶಕ್ತಿ. ಇಂತಹ ಜಗದ್ಗುರುವನ್ನು ಜಗತ್ತಿಗೆ ಕೊಟ್ಟ ಭಗವಂತ ಪ್ರಾಣದಃ.
೩೨೪) ವಾಸವಾನುಜಃ
ವಾಸವಾನುಜಃ ಎಂದರೆ ಇಂದ್ರನ ತಮ್ಮ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಇಲ್ಲಿ ‘ವಾಸವ’ ಎಂದರೆ ವಸುಗಳ ಸಮುದಾಯ. ವಸುಗಳೆಂದರೆ ಅಷ್ಟವಸುಗಳಲ್ಲ, "ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಇಂತಹ ದೇವತೆಗಳು ಪ್ರಾರ್ಥನೆ ಮಾಡಿದಾಗ, ಪ್ರಾರ್ಥನೆಗನುಗುಣವಾಗಿ ಜ್ಞಾನಿಗಳ ಅನುಕೂಲಕ್ಕಾಗಿ ಭೂಮಿಯಲ್ಲಿ ಅವತರಿಸುವ ಭಗವಂತ ವಾಸವಾನುಜಃ.
೩೨೫) ಅಪಾಂನಿಧಿಃ
ಅಪಾಂನಿಧಿಃ ಎಂದರೆ "ನೀರಿನ ನೆಲೆ". ನೀರಿನ ನೆಲೆಯಾದ ಕಡಲಿನಲ್ಲಿ, ಕಡಲಿನ ದೇವತೆಯಾದ ವರುಣನಲ್ಲಿ, ಸಮಸ್ತ ಜಲರಾಶಿಯಲ್ಲಿ ಸನ್ನಿಹಿತನಾದ ಭಗವಂತ ಅಪಾಂನಿಧಿಃ. 'ಆಪ್' ಎಂದರೆ ಪಾನ ಮಾಡುವ ವಸ್ತು. ನಾವು ಬದುಕುವುದಕ್ಕೊಸ್ಕರ ಪಾನ ಮಾಡುವ ವಸ್ತು 'ನೀರು'. ಜ್ಞಾನಿಗಳು ಸದಾ ಪಾನ(ಶ್ರವಣ) ಮಾಡುವ ವಸ್ತು ಭಗವಂತನ 'ಅನಂತ ಗುಣ'. ಅನಂತ ಗುಣಗಳ ನೆಲೆ ಭಗವಂತನೊಬ್ಬನೆ. ಇನ್ನು ನಾವು ಮಾಡುವ ಸತ್ಕರ್ಮ ಕೊನೆಗೆ ಸೇರುವುದು ಭಗವಂತನನ್ನು. ಇದಕ್ಕಾಗಿ ಪ್ರತೀ ಪೂಜೆಯ ಕೊನೆಗೆ "ಕೃಷ್ಣಾರ್ಪಣಮಸ್ತು" ಎನ್ನುತ್ತೇವೆ. ಆದ್ದರಿಂದ ಸರ್ವ ಸತ್ಕರ್ಮಗಳ ನೆಲೆ ಭಗವಂತ. ಹೀಗೆ ಕರ್ಮಗಳ, ಗುಣಗಳ, ದೇವತೆಗಳ ಹಾಗೂ ನೀರಿನ ನೆಲೆಯಾದ ಭಗವಂತ ಅಪಾಂನಿಧಿಃ.
೩೨೬) ಅಧಿಷ್ಟಾನಮ್
ಅಧಿಷ್ಟಾನಮ್ ಎಂದರೆ ಎಲ್ಲವುದಕ್ಕೂ ಆಧಾರ. ಪ್ರತಿಯೊಂದು ವಸ್ತುವಿನ ಮೂಲಾಧಾರ ಭಗವಂತ. ಭೂಮಿಯನ್ನು "ಶೇಷ" ಹೊತ್ತಿದ್ದಾನೆ. ಶೇಷನನ್ನು "ವಾಯು" ಹೊತ್ತಿದ್ದಾನೆ, ವಾಯುವಿಗೆ ಪೂರ್ಣಾಧಾರ ಭಗವಂತ. ಹೀಗೆ ಎಲ್ಲ ವಿಶ್ವಕ್ಕೂ ಆಧಾರವಾದ, ಎಲ್ಲಕ್ಕೂ ಅಧಿಕವಾದ ಸ್ಥಾನದಲ್ಲಿರುವ ಭಗವಂತ ಅಧಿಷ್ಟಾನಮ್.
೩೨೭) ಅಪ್ರಮತ್ತಃ
ಅಪ್ರಮತ್ತಃ ಎಂದರೆ ಎಂದೂ ಎಚ್ಚರ ತಪ್ಪದವನು. ಭಗವಂತ ಎಂದೂ ಎಚ್ಚರ ತಪ್ಪುವುದಿಲ್ಲ, ಎಂದೂ ಪ್ರಮಾದ ಮಾಡುವುದಿಲ್ಲ. ಸದಾ ನಮ್ಮನ್ನು ಪ್ರಮಾದದಿಂದ ಪಾರುಮಾಡುವ ಭಗವಂತ ಗುಣಾತೀತ ಹಾಗೂ ಆನಂದಮಯ.
೩೨೮) ಪ್ರತಿಷ್ಠಿತಃ
ಭಗವಂತ ತನ್ನಲ್ಲೇ ತಾನು ನೆಲೆನಿಂತವನು; ಎಲ್ಲವೂ ಆತನಲ್ಲಿ ಪ್ರತಿಷ್ಟಿತ. ಪ್ರತಿಯೊಂದು ಜೀವರೊಳಗೂ ಭಗವಂತ ಬಿಂಬರೂಪದಲ್ಲಿ ಪ್ರತಿಷ್ಠಿತ. ನಮ್ಮೊಳಗೆ ನಮ್ಮ ಅತರ್ಯಾಮಿಯಾಗಿದ್ದು, ನಮ್ಮ ಸ್ವರೂಪದೊಳಗೆ ನಮ್ಮ ಬಿಂಬರೂಪನಾಗಿ ಅತ್ಯಂತ ಸಮೀಪದಲ್ಲಿರುವವನು ಆತ. ಹೀಗೆ ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ ಪ್ರತಿಷ್ಟಿತನಾಗಿರುವ ಭಗವಂತ ಪ್ರತಿಷ್ಠಿತಃ.
ಮುಂದುವರೆಯುವುದು....
No comments:
Post a Comment