Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -14


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ  |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ || 14 ||

123) ಸರ್ವಗಃ

ಸರ್ವಗಃ ಎಂದರೆ  ಎಲ್ಲಾ  ಕಡೆ  ಇರುವ, ಪರಿಪೂರ್ಣ ಜ್ಞಾನವುಳ್ಳ, ಎಲ್ಲವನ್ನೂ  ತಿಳಿದಿರುವ, ಕೊನೆಗೆ ಎಲ್ಲವನ್ನೂ ಸಂಹಾರ ಮಾಡುವ ಭಗವಂತ.

124) ಸರ್ವವಿದ್ಭಾನುಃ

ಸರ್ವವಿತ್+ಭಾನು. ಇಲ್ಲಿ ಸರ್ವವಿತ್ ಎಂದರೆ ಎಲ್ಲವನ್ನೂ ಪಡೆದ ಸತ್ಯಸಂಕಲ್ಪ ಆಪ್ತಕಾಮ. ಭಾನು  ಎಂದರೆ ಎಲ್ಲಾ ಬೆಳಕನ್ನು ಬೆಳಗಿಸುವ ಮೂಲ ಕಾರಣನಾದ ಸೂರ್ಯ. ಸರ್ವವಿದ್ಭಾನುಃ ಎಂದರೆ ಸತ್ಯಸಂಕಲ್ಪ ಹಾಗೂ  ಎಲ್ಲಾ ಬೆಳಕನ್ನು ಪ್ರೇರೇಪಿಸುವ ಮೂಲ ಬೆಳಕು.

125) ವಿಷ್ವಕ್ಸೇನಃ

ಭಗವಂತನ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆತನ ಸೇನೆ ಪ್ರಪಂಚದ ಮೂಲೆ ಮೂಲೆಗಳಲ್ಲಿ, ಅಂಡಾಂಡ-ಪಿಂಡಾ೦ಡಗಳಲ್ಲಿ,  ಇಡೀ ಬ್ರಹ್ಮಾಂಡದಲ್ಲಿ ವ್ಯಾಪಿಸಿ ನಿಂತಿದೆ. ಭಗವಂತ ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ,  ಹಾಗೂ ಆತನ ಸುತ್ತ  ಅವನ ಪರಿವಾರ ದೇವತೆಗಳು ವ್ಯಾಪಿಸಿದ್ದಾರೆ. ಕಣ್ಣಿನಲ್ಲಿ ಸೂರ್ಯ, ಕಿವಿಯಲ್ಲಿ ಚಂದ್ರ , ಮೂಗಿನಲ್ಲಿ ವಾಯು, ನಾಲಿಗೆಯಲ್ಲಿ ವರುಣ, ಬಾಯಲ್ಲಿ ಅಗ್ನಿ, ಕೈಯಲ್ಲಿ ಇಂದ್ರ, ಕಾಲಲ್ಲಿ ಜಯಂತ, ಹೀಗೆ ಸಮಸ್ತ ಇಂದ್ರಿಯಗಳಲ್ಲಿ ಭಗವಂತನ ಸೇನೆ ತುಂಬಿದೆ. ಪಂಚಭೂತಗಳಿಂದ ಮತ್ತು ಪಂಚ ಕೋಶಗಳಿಂದ (ಅನ್ನಮಯ ಕೋಶ, ಪ್ರಾಣಮಯ ಕೋಶ ,ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ) ಆದ  ನಮ್ಮ ದೇಹದಲ್ಲಿ ನೆಲೆಸಿರುವ ಎಲ್ಲಾ ದೇವತೆಗಳನ್ನು, ಪುಂಡರೀಕಾಕ್ಷನಾಗಿ,  ಲಕ್ಷ್ಮಿ ಜೊತೆಗಿದ್ದು, ಆ ಭಗವಂತ ನಿಯಂತ್ರಿಸುತ್ತಿರುತ್ತಾನೆ. ಸೂರ್ಯಮಂಡಲದಲ್ಲಿದ್ದು, ಸೂರ್ಯ ಕಿರಣದೊಂದಿಗೆ ಈ ಬ್ರಹ್ಮಾಂಡದಲ್ಲಿ  ವ್ಯಾಪಿಸಿರುವ ಭಗವಂತನನ್ನು  ವಿಷ್ವಕ್ಸೇನ ಎನ್ನುತ್ತಾರೆ.

126) ಜನಾರ್ದನಃ

ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಎಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. 
'ಜನ' ಅನ್ನುವ  ಪದಕ್ಕೆ ಅನೇಕ ಅರ್ಥಗಳಿವೆ.
೧. ಜನ ಎಂದರೆ ದುರ್ಜನ.  ಜನಾರ್ದನ ಎಂದರೆ ದುರ್ಜನ ನಾಶಕ.
೨. ಜನ ಎಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ.
೩.  ಜನ ಎಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು.
೪. ಜನ ಎಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ  ಪ್ರಾರ್ಥನೆ ಸ್ವೀಕರಿಸಿ ಅವರ ಅಭೀಷ್ಟವನ್ನು  ಪೂರೈಸುವವನು.

127) ವೇದಃ

ಭಗವಂತ ಸಮಸ್ತ ವೇದಗಳಿಂದ ಪ್ರತಿಪಾದ್ಯನಾದವನು. ಅವನು ಆನಾದಿನಿತ್ಯ, ಎಲ್ಲವನ್ನೂ ತಿಳಿದವನು, ಎಲ್ಲವನ್ನು  ನಮಗೆ ತಿಳಿಯುವಂತೆ ಮಾಡುವವನು, ನಮಗೆ ಜ್ಞಾನದ ಜೊತೆಗೆ ಸ್ಮರಣಶಕ್ತಿ ದಯಪಾಲಿಸುವ ಭಗವಂತ ವೇದಃ

128) ವೇದವಿತ್

ಭಗವಂತ ಗೀತೆಯಲ್ಲಿ ತಾನೇ ಹೇಳುವಂತೆ,  ಆತ ಮಾತ್ರ  ವೇದದ  ಸಂಪೂರ್ಣ  ಅರ್ಥವನ್ನು ತಿಳಿದವನು. ವೇದಗಳಲ್ಲಿ  ಭಗವಂತನ ಅನಂತ ಗುಣಗಳನ್ನು ಹೇಳಿದ್ದಾರೆ. ಆದರೆ ನಮಗೆ ಎಲ್ಲವೂ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ಬುದ್ಧಿ ಸೀಮಿತ ಮತ್ತು ಅನುಭವವಿಲ್ಲದೆ ಯಾವುದೂ ಅರ್ಥವಾಗುವುದಿಲ್ಲ. ವೇದಮಂತ್ರಗಳಿಗೆ ಕನಿಷ್ಠ ಮೂರು ಅರ್ಥಗಳಿವೆ. ಆದರೆ ಎಲ್ಲವನ್ನೂ ತಿಳಿದವನು ಕೇವಲ ಭಗವಂತನೊಬ್ಬನೆ. ಸಾಮಾನ್ಯರಾದ ನಾವು ನಮ್ಮ ಜೀವಿತ ಕಾಲದಲ್ಲಿ ವೇದದ ಅಲ್ಪ-ಸ್ವಲ್ಪ ಅರ್ಥವನ್ನು ಮಾತ್ರ ತಿಳಿಯಲು ಸಾಧ್ಯ. ಈ ರೀತಿ ವೇದದ ಸಂಪೂರ್ಣ  ಅರ್ಥವನ್ನು ತಿಳಿದ  ಭಗವಂತ ವೇದವಿತ್.

129) ಅವ್ಯಂಗಃ .

ಮೇಲ್ನೋಟಕ್ಕೆ ಅವ್ಯಂಗ ಎಂದರೆ ಪರಿಪೂರ್ಣವಾದ ಅಂಗ ಎಂದರ್ಥ. ಇಲ್ಲಿ ವ್ಯಂಗ ಎಂದರೆ ವಿಕಲಾಂಗ. ಭಗವಂತನ ಒಂದೊಂದು ಅಂಗವೂ ಅವನ ಸ್ವರೂಪ, ಆದ್ದರಿಂದ ಆತ ಅವ್ಯಂಗ. ಇನ್ನು 'ಅವಿ' ಎಂದರೆ ಸೂರ್ಯ, 'ಅವಿಹಿ' ಎಂದರೆ ಅಗ್ನಿ. ಸೂರ್ಯ ಆಕಾಶದಲ್ಲಿ , ವಾಯು ಉಸಿರಿನಲ್ಲಿ ಹಾಗೂ ಅಗ್ನಿ ಭೂಮಿಯಲ್ಲಿ ಭಗವಂತನ ಮೂರು ಜ್ಯೋತಿರ್ಮಯ ಸ್ವರೂಪಗಳು. ಹಿಂದೆ ಋಷಿಗಳು ಸಾಮಾನ್ಯವಾಗಿ ಭಗವಂತನನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತಿದ್ದರು. ಅಗ್ನಿ ಮುಖೇನ  ಉಪಾಸನೆ ಸರ್ವೇ ಸಾಮಾನ್ಯ. ಆದ್ದರಿಂದ ಗಾಯತ್ರಿ ಹೀಗೆ ಹೇಳುತ್ತದೆ:
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ |
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಹೀಗೆ   ಮೂರು ರೂಪದಲ್ಲಿ ಜಗತ್ತನ್ನು ರಕ್ಷಣೆ ಮಾಡುವ ಭಗವಂತ ಅವ್ಯಂಗಃ .

130) ವೇದಾಂಗಃ

ವೇದಗಳ ಅಂಗಗಳು ಯಾರನ್ನು ಪ್ರತಿಪಾದಿಸುತ್ತವೆಯೋ ಅವನು ವೇದಾಂಗ. ಈಗ ವೇದದ ಆರು
ಮುಖ್ಯ ಅಂಗಗಳನ್ನು ನೋಡೋಣ.
೧. ಶಿಕ್ಷಾ : ಶಿಕ್ಷಾ ಎಂದರೆ ಶಿಕ್ಷಣ. ನಮ್ಮ ಧ್ವನಿಯಿಂದ ನಮ್ಮ ಅನುಭವದಿಂದ ವೇದಮಂತ್ರಗಳನ್ನು  ಉಚ್ಚರಿಸುವುದು  ಹೇಗೆ ಎಂದು ತಿಳಿಸುವ ಶಾಸ್ತ್ರ-ಶಿಕ್ಷಾ.  ಸಂಸ್ಕೃತದಲ್ಲಿ ನಾವು ಉಚ್ಛಾರವನ್ನು ಸ್ವಲ್ಪ ತಪ್ಪಾಗಿ ಹೇಳಿದರೆ  ಅದು ವ್ಯತಿರಿಕ್ತ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ ಫಲ ಮತ್ತು ಪಲ. ಇಲ್ಲಿ ಫಲ ಎಂದರೆ ಹಣ್ಣು, ಪಲ ಎಂದರೆ ಮಾಂಸ. ಆದ್ದರಿಂದ ನಾವು ತುಂಬಾ ಎಚ್ಚರವಾಗಿ ವೇದಮಂತ್ರಗಳನ್ನು ಉಚ್ಚರಿಸಬೇಕು. ಇದಕ್ಕಾಗಿ ತಪ್ಪನ್ನು ಕ್ಷಮಿಸುವಂತೆ  ಪ್ರಾಯಶ್ಚಿತ ಮಂತ್ರವನ್ನು ಜಪದ ಕೊನೆಗೆ   ಹೇಳುತ್ತೇವೆ.
ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ-ಎಂದು ಹೇಳಿ, ಈ ಕೆಳಗಿನಂತೆ ಮೂರು ಬಾರಿ  ಹೇಳುತ್ತೇವೆ.
| ಅಚ್ಯುತಾಯ ನಮಃ  | ಅನಂತಾಯ ನಮಃ  | ಗೋವಿಂದಾಯ ನಮಃ  |
|ಅಚ್ಯುತಾನಂತ ಗೋವಿಂದೇಭ್ಯೋ ನಮಃ  | .
೨. ಕಲ್ಪ: ಕಲ್ಪ ಯಾವ ಮಂತ್ರವನ್ನು ಯಾವ ವಿಧಾನದಲ್ಲಿ ಉಪಯೋಗಿಸಿ ಆರಾಧನೆ ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ.
೩. ವ್ಯಾಕರಣ: ಶಬ್ದವನ್ನು ಸರಿಯಾಗಿ ಉಚ್ಛಾರ ಮಾಡುವುದಕ್ಕೆ ಬೇಕಾದ ಅಂಶಗಳನ್ನು ವ್ಯಾಕರಣ ತಿಳಿಸುತ್ತದೆ.
೪. ನಿರುಕ್ತ: ಶಬ್ದವನ್ನು ಒಡೆದಾಗ ಅದು ಯಾವ ಯಾವ ಧಾತುವಿನಿಂದ ಹುಟ್ಟಿದೆ, ಅದರ  ಅರ್ಥ ವಿಸ್ತಾರ ಏನು ಎನ್ನುವುದನ್ನು ನಿರುಕ್ತ ತಿಳಿಸುತ್ತದೆ.
೫. ಜ್ಯೋತಿಷ: ಜ್ಯೋತಿಷ -ಪುಣ್ಯ ಕರ್ಮ ಮಾಡಲು ಯಾವ ಕಾಲ ಹೆಚ್ಚು ಪ್ರಾಶಸ್ತ್ಯವಾದ ಕಾಲ ಎಂದು ತಿಳಿಸುತ್ತದೆ. ವಾತಾವರಣದಲ್ಲಿ ಕೆಲವೊಮ್ಮೆ ಪ್ರತಿಬಂಧಕ ಶಕ್ತಿಗಳಿರುತ್ತವೆ ಹಾಗೂ ಇನ್ನು ಕೆಲವೊಮ್ಮೆ ಅನುಕೂಲಕರ ಶಕ್ತಿಗಳಿರುತ್ತವೆ. ವಾತಾವರಣದಲ್ಲಿ ಅನುಕೂಲಕರ ಶಕ್ತಿಗಳಿರುವಾಗ ಮಾಡಿದ ಕರ್ಮ ಕೈಗೂಡುತ್ತದೆ. ಇದನ್ನು ತಿಳಿಸುವ ಶಾಸ್ತ ಜ್ಯೋತಿಷ.
೬. ಛಂದಸ್ಸು: ಭಗವಂತನ ಗುಣಗಾನ ಮಾಡುವ ಮಂತ್ರಗಳು ಶೃತಿಬದ್ಧವಾಗಿ, ಲಯಬದ್ಧವಾಗಿ ಹೇಗೆ ಹೇಳಬೇಕು ಎನ್ನುವುದನ್ನು ಛಂದಸ್ಸು ತಿಳಿಸುತ್ತದೆ.
ಆದ್ದರಿಂದ ಈ ಮೇಲಿನ  ಆರು ಅಂಶಗಳು ವೇದದಲ್ಲಿ ಯಾರಿಗೋಸ್ಕರ ಇವೆಯೋ  ಅವನು ವೇದಾಂಗಾ.

131) ವೇದವಿತ್

ಈ ನಾಮ ಒಂದೇ ಶ್ಲೋಕದಲ್ಲಿ ಎರಡನೇ ಬಾರಿ ಬಂದಿದೆ. ಇಲ್ಲಿ ವೇದ ಎಂದರೆ ಜ್ಞಾನ  ಹಾಗೂ ವಿತ್  ಎಂದರೆ ಜ್ಞಾನಿ.  ಭಗವಂತ ಜ್ಞಾನವುಳ್ಳವನೂ  ಹೌದು, ಹಾಗೂ ಜ್ಞಾನ ಸ್ವರೂಪನೂ  ಹೌದು. ಜ್ಞಾನವೂ ಅವನೇ,  ಜ್ಞಾನಿಯೂ ಅವನೇ. ವೇದವನ್ನು ನಮಗೆ ಋಷಿ-ಮುನಿಗಳ ಮೂಲಕ  ಕೊಟ್ಟವನು ಮತ್ತು ವೇದಗಳಿಂದ ಪ್ರತಿಪಾದ್ಯನಾದವನು ವೇದವಿತ್.

132) ಕವಿಃ

ನಾವು ದೇವರ ಪೂಜೆ ಪ್ರಾರಂಭದಲ್ಲಿ ಗಣಪತಿ ಸ್ತೋತ್ರ ಹೇಳುತ್ತೇವೆ.
"ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ" ಎನ್ನುವ ಗಣಪತಿ ಸ್ತೋತ್ರದಲ್ಲಿ ಗಣಪತಿಯನ್ನು ಕವಿಗಳ ಕವಿ ಎಂದು ವರ್ಣಿಸಿದ್ದಾರೆ. ಅದೇ ರೀತಿ "ಗಣಗಳಲ್ಲಿ ಶ್ರೇಷ್ಠನಾದ, ಕವಿಗಳ ಕವಿಯಾದ ನೀನು ನನ್ನಲ್ಲಿ ಬಂದು ಕೂಡು" ಎಂದು ಪೂಜೆ ಪ್ರಾರಂಭದಲ್ಲಿ  ಹೇಳುತ್ತೇವೆ. ಏನಿದರ ಅರ್ಥ?  ಭಗವಂತನನ್ನು ಗಣಪತಿ ಎಂದು ಕರೆಯಲು ಕಾರಣವೇನು? ಪೂಜೆಯನ್ನು ಗಣಪತಿ ಸ್ತೋತ್ರದಿಂದ ಯಾಕೆ ಪ್ರಾರಂಭಿಸಬೇಕು?
ಗಣಪತಿ ಆಕಾಶ ತತ್ವ ದೇವತೆ. ಆತ ಜೀವಗಣ, ಇಂದ್ರಿಯಗಣ,  ಜ್ಞಾನಗಣ ಮತ್ತು ಭೂತಗಣ. ಇಡೀ ವಿಶ್ವ ಆಕಾಶದಿಂದ ಪ್ರಾರಂಭವಾಗುತ್ತದೆ. ಗಣಪತಿ ಪಂಚಭೂತಗಳ ಒಡೆಯ. ಪಂಚಭೂತಗಳಿಂದಾದ  ಈ ನಮ್ಮ ದೇಹ ಮತ್ತು ಇಂದ್ರಿಯಗಳ ಅದಿಪತಿ ಆತ. ಇಂದ್ರಿಯಗಳ ಒಡೆಯನಾದ  ಆತನನ್ನು ಮೊದಲು ಸ್ಮರಿಸಿ, "ಬಾರಯ್ಯ , ನನ್ನ ಇಂದ್ರಿಯಗಳಲ್ಲಿ ಕುಳಿತು, ನನ್ನ  ಕೈಯಿಂದ  ನಿನ್ನ  ಪೂಜೆಯನ್ನು  ಮಾಡುವಂತೆ, ನನ್ನ ಕಣ್ಣಿನಿಂದ  ನಿನ್ನನ್ನು  ನೋಡುವಂತೆ,  ನನ್ನ ಬಾಯಿಯಿಂದ ನಿನ್ನ ಗುಣಗಾನ ಮಾಡುವಂತೆ ಮಾಡು. ಎಂದು ಪ್ರಾರ್ಥಿಸಿ ಕೊಳ್ಳುತ್ತೇವೆ.
ಭಗವಂತ   ಅನಾದಿಕವಿ ಹಾಗೂ ಚತುರ್ಮುಖ ಬ್ರಹ್ಮ ಆದಿಕವಿ. ಇಲ್ಲಿ ಕವಿ ಎಂದರೆ   ಎಲ್ಲವನ್ನೂ ಬಲ್ಲವನು (omniscient) ಎಂದರ್ಥ.
ಇದಲ್ಲದೆ ಇನ್ನೂ ಅನೇಕ ಅರ್ಥ ಕವಿ ಎನ್ನುವ ಪದಕ್ಕಿದೆ. ಶಬ್ದ ಸೃಷ್ಟಿಮಾಡುವವನು, ಶಬ್ದಾರ್ಥ ಸಂಬಂಧ ತಿಳಿದವನು, ಶಬ್ದಗಳಿಗೆ ಹೊಸ ಆಯಾಮ ಕೊಡುವವನು ಇತ್ಯಾದಿ. ಜನಸಾಮಾನ್ಯರಾದ    ನಾವು ದೈನಂದಿನ ಕಾರ್ಯದಲ್ಲಿ ಅನೇಕ ಶಬ್ದಗಳನ್ನು ಅರ್ಥ ತಿಳಿಯದೇ ಉಪಯೋಗಿಸುತ್ತೇವೆ. ನಮ್ಮ ಈಗಿನ  ಶಿಕ್ಷಣ ಪದ್ದತಿ ಕೂಡ ಇದಕ್ಕೆ ಮೂಲ ಕಾರಣ. ಉದಾಹರಣೆಗೆ ಪತ್ರ ಬರೆಯುವಾಗ, "ನಾನು ಕ್ಷೇಮ, ನಿಮ್ಮ ಯೋಗ-ಕ್ಷೇಮದ  ಬಗ್ಗೆ ತಿಳಿಸಿ"  ಎಂದು ಬರೆಯುತ್ತೇವೆ. ಇಲ್ಲಿ  ಯೋಗ-ಕ್ಷೇಮ ಎಂದರೆ ಏನು ಎನ್ನುವುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದೇ ಇಲ್ಲ!!  ಇಲ್ಲದ್ದನ್ನು  ಪಡೆಯುವುದು ಯೋಗ (ಅಪ್ರಾಪ್ತಂ ಪ್ರಾಪ್ತಿಹೀ ಯೋಗಃ ). ಪಡೆದದ್ದನ್ನು  ಉಳಿಸಿಕೊಳ್ಳುವುದು ಕ್ಷೇಮ. ಶಬ್ದದ ಅಂತರಾಳದ ಅರ್ಥವನ್ನು ಅರಿತು  ಮಾತನಾಡುವವರು ಕವಿಗಳು. ಭಗವಂತ ಕವಿಗಳ ಕವಿ, ಸರ್ವನಾಮರೂಪಾತ್ಮಕನಾದ  ಸರ್ವಜ್ಞ.  ಸಂಸ್ಕೃತದ  ಏಕಾಕ್ಷರ ಕೋಶದಲ್ಲಿ ನೋಡಿದರೆ  ಆ ,ಕ, ಯ, ಪ್ರ, ವಿ, ಸಂ, ಭೂ, ಮಾ, ಸಾ , ಹಾ .. ಇತ್ಯಾದಿ  ಏಕಾಕ್ಷರಗಳು  ಭಗವಂತನ ಗುಣವನ್ನು ವರ್ಣಿಸುತ್ತವೆ. ಇಲ್ಲಿ 'ಕ'  ಎಂದರೆ   ಆನಂದ, 'ವ'  ಎಂದರೆ ಜ್ಞಾನ, 'ವಿ' ಎಂದರೆ ವಿಶಿಷ್ಟವಾದ ಜ್ಞಾನ. ಆದ್ದರಿಂದ ಕವಿ ಎಂದರೆ 'ವಿಶಿಷ್ಟವಾದ ಜ್ಞಾನಾನಂದ ಸ್ವರೂಪ'.

ಮುಂದುವರೆಯುವುದು....

No comments:

Post a Comment