ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ. || 15 ||
ಈ ಶ್ಲೋಕದಲ್ಲಿ ಭಗವಂತನನ್ನು ಅಧ್ಯಕ್ಷ ಎನ್ನುತ್ತಾರೆ. ಇಲ್ಲಿ ಅಧ್ಯಕ್ಷ ಎಂದರೆ ಎಲ್ಲರನ್ನೂ ನೋಡುವವ, ಎಲ್ಲರ ಮೇಲೆ ನಿಗಾ ಇರಿಸುವವ, ಪ್ರತಿಯೊಂದು ಕ್ರಿಯೆಯನ್ನು ನಿರ್ವಹಿಸುವವ ಎಂದರ್ಥ.
133) ಲೋಕಾಧ್ಯಕ್ಷಃ
ಭಗವಂತ ಲೋಕಾಧ್ಯಕ್ಷ. ಇಲ್ಲಿ ಲೋಕ ಎಂದರೆ ಈ ಭೂಲೋಕ, ಈ ಬ್ರಹ್ಮಾಂಡ, ಈ ಪಿಂಡಾ೦ಡ. ಆತ ಎಲ್ಲವುದರ ಅಧ್ಯಕ್ಷ.
134) ಸುರಾಧ್ಯಕ್ಷಃ
ಸುರರು ಎಂದರೆ ದೇವತೆಗಳು. ಈ ಬ್ರಹ್ಮಾಂಡ ಹಾಗೂ ಪಿಂಡಾ೦ಡದಲ್ಲಿ ಅನೇಕ ದೇವತೆಗಳಿದ್ದಾರೆ. ಈ ಹಿಂದೆ ಹೇಳಿದಂತೆ, ನಮ್ಮ ದೇಹದ ಒಳಗೆ ಹಾಗೂ ಹೊರಗೆ ದೇವತೆಗಳು ಭಗವಂತನ ನಿಯಮದಂತೆ ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೆ. ದೇಹದ ಹೊರಗೆ ಸೂರ್ಯ ಬೆಳಕಿನ ದೇವತೆಯಾದರೆ, ಆತನೇ ದೇಹದಲ್ಲಿ ಕಣ್ಣಿನ ದೇವತೆ. ಸೋಮ ದೇಹದ ಹೊರಗೆ ಶಬ್ದದ ದೇವತೆ ಹಾಗೂ ದೇಹದಲ್ಲಿ ಕಿವಿಯ ದೇವತೆ. ವರುಣ ನೀರಿನ ದೇವತೆ ಹಾಗೂ ಬಾಯಲ್ಲಿ ನೀರೂರಿಸುವ ನಾಲಗೆಯ ಅಭಿಮಾನಿ ದೇವತೆ. ಇದೇ ರೀತಿ ಅಗ್ನಿ-ಮಾತಿನ, ಇಂದ್ರ-ಕೈಯ, ಇಂದ್ರನ ಮಗ ಯಜ್ಞ-ಕಾಲಿನ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಬಂಧಪಟ್ಟ ಅಂಗದ ದೇವತೆ. ಇವರಲ್ಲದೆ ಇಂದ್ರ ಮತ್ತು ಕಾಮರು ಮನಸ್ಸಿನ, ಗರುಡ-ಶೇಷ-ರುದ್ರರು ಮನಸ್ಸು-ಬುದ್ಧಿ-ಅಹಂಕಾರದ ದೇವತೆಗಳು. ಸರಸ್ವತಿ-ಭಾರತಿ-ಪಾರ್ವತಿಯರು ವಾಕ್ ದೇವಿಯರು. ಇನ್ನು ಬ್ರಹ್ಮ-ವಾಯು ಚಿತ್ತದ ದೇವತೆಗಳು. ಈ ರೀತಿ ದೇಹದ ಪ್ರತಿಯೊಂದು ಇಂದ್ರಿಯ ನಿರ್ವಹಣೆ ಒಬ್ಬೊಬ್ಬ ದೇವತೆಗಳ ಅಧೀನ. ಇಂತಹ ಸುರರ ಅದಿಪತಿಯಾದ ಭಗವಂತ ಸುರಾಧ್ಯಕ್ಷ.
135) ಧರ್ಮಾಧ್ಯಕ್ಷಃ
ಭಗವಂತನ ಪ್ರತೀ ಅವತಾರ ಈ ಭೂಮಿಯಲ್ಲಿ ಧರ್ಮಸಂಸ್ಥಾಪನೆಗಾಗಿ ಆಗಿದೆ. ಇಡೀ ಲೋಕವನ್ನು ಧಾರಣೆ ಮಾಡಿ ಈ ಭೂಮಿಯಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಧರ್ಮಾಧ್ಯಕ್ಷ. ಇನ್ನು ಆದಿಶೇಷ ಮತ್ತು ಪ್ರಾಣದೇವರನ್ನೂ ಕೂಡ ಧರ್ಮ ಎನ್ನುತ್ತಾರೆ. ದೇಹದ ಒಳಗೆ ಪ್ರಾಣಶಕ್ತಿಯಾಗಿ, ದೇಹದ ಹೊರಗೆ ವಾತಾವರಣದಲ್ಲಿ ತುಂಬಿರುವ ಪ್ರಾಣದೇವರು, ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ(ಶೇಷ). ಇವರಿಬ್ಬರ ಮುಖಾಂತರ ಈ ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಧರ್ಮಾಧ್ಯಕ್ಷ.
136) ಕೃತಾಕೃತಃ
ಎರಡು ತದ್ವಿರುದ್ದ ಅರ್ಥವಿರುವ ಪದಗಳಿಂದ ಈ ನಾಮವಾಗಿದೆ. ಒಂದು ಕೃತ(ಕರ್ತ) ಹಾಗೂ ಇನ್ನೊಂದು ಅಕೃತ (ಅಕರ್ತ). ಭಗವಂತ ಸೃಷ್ಟಿಕರ್ತ, ಆದರೆ ಆತನಿಗೆ ಯಾವುದೇ ಪುಣ್ಯ ಪಾಪಗಳ ಲೇಪವಿಲ್ಲ. ಎಲ್ಲವನ್ನೂ ಮಾಡುವವ ಆತ, ಆದರೆ ಯಾವುದರ ಲೇಪವೂ ಅವನಿಗಿಲ್ಲ. ನಮ್ಮೊಳಗಿದ್ದು, ನಮ್ಮಿಂದ ಎಲ್ಲವನ್ನೂ ಮಾಡಿಸಿ, ಪುಣ್ಯ-ಪಾಪಗಳಿಗೆ ನಮ್ಮನ್ನು ಭಾದ್ಯರನ್ನಾಗಿ ಮಾಡಿ, ತಾನು ನಿರ್ಲಿಪ್ತನಾಗಿ ದೂರ ನಿಲ್ಲುವ ಭಗವಂತ ಕೃತಾಕೃತಃ. ಭಗವಂತನಿಗೆ ಸ್ವಯಂ ಕೃತದ ಅಗತ್ಯವಿಲ್ಲ, ಆದರೆ ಭಕ್ತರ ಅಭಿಲಾಷೆಗಾಗಿ ಅವತಾರವನ್ನು ಧರಿಸುತ್ತಾನೆ, ಭಕ್ತರ ಅಭೀಷ್ಟವನ್ನು ಪೂರೈಸುತ್ತಾನೆ. ಇಂತಹ ಭಗವಂತ ಕೃತಾಕೃತಃ
137) ಚತುರಾತ್ಮಾ
ಭಗವಂತನು ನಾಲ್ಕು ರೂಪಗಳಲ್ಲಿ ಈ ಜಗತ್ತನ್ನು ನಿಯಂತ್ರಿಸುತ್ತಾನೆ. ನಮ್ಮ ಬದುಕಿನಲ್ಲಿ ಸಹಜವಾದ ಸ್ಥಿತಿ ಮೂರು. ಎಚ್ಚರ-ಕನಸು-ನಿದ್ದೆ. ಈ ಮೂರು ಸ್ಥಿತಿಗಳನ್ನು ಎಲ್ಲರೂ ನಿರಂತರ ಅನುಭವಿಸುತ್ತಾರೆ. ಆದರೆ ಈ ಮೂರನ್ನೂ ಮೀರಿದ ನಾಲ್ಕನೇ ಸ್ಥಿತಿ ತುಂಬಾ ಪ್ರಮುಖವಾದದ್ದು. ಅದೇ ತುರೀಯ ಸ್ಥಿತಿ.
೧.ಎಚ್ಚರ ನಿಯಂತ್ರಣಕ್ಕಾಗಿ ನಮ್ಮ ಆಜ್ಞಾಚಕ್ರದಲ್ಲಿ ವಿಶ್ವ ನಾಮಕನಾಗಿ ಕುಳಿತ ಭಗವಂತ ಓಂಕಾರದ ಮೊದಲ ಅಕ್ಷರನಾಮಕ (ಆ-ಆಪ್ತಿ) ವಿಶ್ವಾತ್ಮ.
೨.ವಿಶುದ್ಧಿಚಕ್ರದ ತುದಿಯಲ್ಲಿ ಕಿರುನಾಲಿಗೆಯ ಕೆಳಗೆ ಇಂದ್ರಯೋನಿಯಲ್ಲಿ, ಎಚ್ಚರಾವಸ್ಥೆಯಲ್ಲಿ ಸೆರೆ ಹಿಡಿದ ಪಡಿಯಚ್ಚನ್ನು, ನಾವು ಮಲಗಿದ್ದಾಗ ನಮಗೆ ಕನಸಿನ ಮೂಲಕ ತೋರಿಸುವ ಭಗವಂತ ತೈಜಸಾತ್ಮ.
೩.ಮನಸ್ಸಿನ ನಿಯಂತ್ರಣದಿಂದ ಆಚೆಗೆ ಇರುವ ನಿದ್ರಾವಸ್ಥೆಯನ್ನು ನಿಯಂತ್ರಿಸುವ ಭಗವಂತ ಪ್ರಾಜ್ಞಾತ್ಮ.
೪.ನಮ್ಮ ಎಚ್ಚರ-ಕನಸು ಮನಸ್ಸಿನ ವ್ಯವಹಾರವಾದರೆ, ನಿದ್ದೆ ಮನಸ್ಸಿನ ನಿಯಂತ್ರಣವಿಲ್ಲದೆ, ಆತ್ಮವೇ ತನ್ನನ್ನು ತಾನು ಅನುಭವಿಸುವ ಸ್ಥಿತಿ. ಎಚ್ಚರದಲ್ಲೂ, ಕನಸಿನಲ್ಲೂ, ಎಲ್ಲಾ ಸ್ಥಿತಿಯಲ್ಲೂ, ಮನಸ್ಸಿನ ಹತೋಟಿಯನ್ನು ದಾಟಿನಿಲ್ಲುವ ನಾಲ್ಕನೇ ಸ್ಥಿತಿ ತುರೀಯಾವಸ್ಥೆ. ಈ ಸ್ಥಿತಿಯಲ್ಲಿ ನಾವು ನಮ್ಮನ್ನು ಬಂಧಿಸಿದ ಆ ಹದಿನೈದು ಬೇಲಿಗಳನ್ನು ದಾಟಿ ನಿಂತು, ಜ್ಞಾನಾನಂದಮಯವಾದ ನಮ್ಮ ಸ್ವರೂಪವನ್ನು ನೋಡುತ್ತೇವೆ. ಈ ಸ್ಥಿತಿಯಲ್ಲಿ ನಾವು ಕೇವಲ ಪ್ರತಿಬಿಂಬ ಎನ್ನುವ ಸತ್ಯವನ್ನು ತಿಳಿಯುತ್ತೇವೆ, ಹಾಗೂ ಮೂಲಬಿಂಬ ಭಗವಂತ ಎನ್ನುವ ಸತ್ಯದ ಅರಿವಾಗುತ್ತದೆ. ಈ ಸ್ಥಿತಿಯಲ್ಲಿ ನಾವು ದೇವರನ್ನು ನೋಡಬಹುದು ಹಾಗೂ ದೇವರಲ್ಲಿ ಮಾತನಾಡಬಹುದು. ನಮ್ಮ ಸ್ವರೂಪ ದೃಷ್ಟಿಯಿಂದ ಭಗವಂತನನ್ನು ಕಾಣುವ ಈ ನಾಲ್ಕನೇ ಸ್ಥಿತಿಯನ್ನು ತುರೀಯಾವಸ್ಥೆ ಎನ್ನುತ್ತೇವೆ.
ಈ ರೀತಿ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಈ ನಾಲ್ಕು ಸ್ಥಿತಿಗಳಲ್ಲಿ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.
ಇದಲ್ಲದೆ ಪ್ರಪಂಚದ ಅನುಭವಕ್ಕಾಗಿ ನಾಲ್ಕು ಬಗೆಯ ದೇಹವನ್ನು ಭಗವಂತ ಜೀವರಿಗೆ ಕರುಣಿಸಿದ್ದಾನೆ.
೧. ಕಣ್ಣಿಗೆಕಾಣುವ ಪಂಚ ಭೂತಗಳಿಂದಾದ ಸ್ಥೂಲ ಶರೀರ.
೨. ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ (Arial body). ಸೂಕ್ಷ್ಮ ಶರೀರ ಸ್ಥೂಲ ದೇಹವನ್ನು ತ್ಯೆಜಿಸಿದಾಗ ಮಾನವನ ಸ್ಥೂಲ ಶರೀರ ಸಾಯುತ್ತದೆ.
೩. ಸೃಷ್ಟಿಗೆ ಮೊದಲು ಅನಾದಿಯಾಗಿ ಬಂದ ಲಿಂಗರೂಪಿ ಶರೀರ.
೪. ಸ್ವರೂಪಭೂತವಾದ ಶರೀರ.
ಈ ರೀತಿ ಪ್ರಪಂಚದ ಅನುಭವಕ್ಕಾಗಿ ಸ್ಥೂಲ, ಸೂಕ್ಷ್ಮ, ಲಿಂಗ ಹಾಗೂ ಸ್ವರೂಪ ಎನ್ನುವ ನಾಲ್ಕು ಬಗೆಯ ಶರೀರವನ್ನು ಕೊಟ್ಟ ಭಗವಂತ ಚತುರಾತ್ಮಾ.
ಜೀವ ಸೃಷ್ಟಿಯಲ್ಲಿ ಚತುರ್ವಿಧ.
೧. ಜರಾಯುಜ: ಗರ್ಭದಲ್ಲಿ ಸಂಪೂರ್ಣ ಬೆಳವಣಿಗೆಯಾಗಿ ಹುಟ್ಟುವುದು (ಉದಾ: ಮನುಷ್ಯ ,ಹಸು ಇತ್ಯಾದಿ)
೨. ಅಂಡಜ: ಮೊಟ್ಟೆಯ ರೂಪದಲ್ಲಿ ಭೂಮಿಗೆ ಬಂದು, ನಂತರ ಮೊಟ್ಟೆಗೆ ಕಾವು ಕೊಟ್ಟಾಗ ಸಂಪೂರ್ಣ ಬೆಳೆದು, ಮೊಟ್ಟೆಯೊಡೆದು ಹುಟ್ಟುವುದು (ಉದಾ: ಕೋಳಿ, ಕಾಗೆ ಇತ್ಯಾದಿ)
೩. ಸ್ವೇದಜ: ನೀರಿನ ಪಸೆ, ಬೆವರಿನಿಂದ ಹುಟ್ಟುವುದು (ಉದಾ: ವೈರಸ್, ಬ್ಯಾಕ್ಟೀರಿಯ ಇತ್ಯಾದಿ).
೪. ಉದ್ಬಿಜ : ಬೀಜ ರೂಪದಲ್ಲಿದ್ದು, ಬೀಜ ಒಡೆದು ಬೆಳೆಯುವವು (ಉದಾ: ವೃಕ್ಷ)
ಈ ರೀತಿ ಅಂಡಜ-ಸ್ವೇದಜ-ಉದ್ಬಿಜ ಮತ್ತು ಜರಾಯುಜ ಎನ್ನುವ ನಾಲ್ಕು ಬಗೆಯಲ್ಲಿ ಜೀವಜಾತದ ಸೃಷ್ಟಿ ಮಾಡುವ ಭಗವಂತ ಚತುರಾತ್ಮಾ.
138) ಚತುರ್ವ್ಯೂಹಃ
ಭಗವಂತ ನಾಲ್ಕು ವ್ಯೂಹ(ಗುಂಪು ಅಥವಾ ಸಮುದಾಯ)ದಿಂದ ಉಪಾಸ್ಯನಾಗಿದ್ದಾನೆ.
೧. ಸೃಷ್ಟಿಗೆ ಕಾರಣನಾದ ಪ್ರದ್ಯುಮ್ನ,
೨. ಸ್ಥಿತಿಗೆ ಕಾರಣನಾದ ಅನಿರುದ್ಧ,
೩. ಸಂಹಾರಕ್ಕೆ ಕಾರಣನಾದ ಸಂಕರ್ಷಣ,
೪. ಮೋಕ್ಷಪ್ರದನಾದ ವಾಸುದೇವ.
ಜೀವವು ಮೊದಲು ಅನಿರುದ್ಧನನ್ನು ಸೇರಿ ಅನ್ನಮಯಕೋಶದಿಂದ ಸಂಬಂಧವನ್ನು ಕಳಚಿಕೊಳ್ಳುತ್ತದೆ. ನಂತರ ಪ್ರದ್ಯುಮ್ನನನ್ನು ಸೇರಿ ಮನೋಮಯ ಕೋಶದ ಸಂಬಂಧವನ್ನು ಕಳಚಿಕೊಂಡು, ಸಂಕರ್ಷಣನಿಂದ ವಿಜ್ಞಾನಮಯಕೋಶದ ಬಿಡುಗಡೆಯನ್ನು ಪಡೆದು, ಕೊನೆಗೆ ವಾಸುದೇವನನ್ನು ಸೇರಿ ಸ್ವಯಂ ಆನಂದಮಯನಾಗುತ್ತಾನೆ. ಈ ರೀತಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ಎನ್ನುವ ನಾಲ್ಕು ವ್ಯೂಹಗಳಿಂದ ಉಪಾಸ್ಯನಾದ ಭಗವಂತ ಚತುರ್ವ್ಯೂಹ.
ಭಗವಂತ ಪ್ರಪಂಚದಲ್ಲಿ ನಾಲ್ಕು ವರ್ಣದ ಸೃಷ್ಟಿಗೆ ಕಾರಣಕರ್ತ. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಜಾತಿ ಪದ್ಧತಿ ಜನರಿಂದ ಬಂದ ಪದ್ಧತಿ. ಆದರೆ ವರ್ಣ ಭಗವಂತನ ಸೃಷ್ಟಿ. ನಾಲ್ಕು ವರ್ಣವನ್ನು ನಾವು ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಣಬಹುದು. ಅವುಗಳೆಂದರೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.
೧. ಬ್ರಾಹ್ಮಣ: ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ಮಾಡುವ ಜ್ಞಾನಿಗಳು (Intellects)
೨. ಕ್ಷತ್ರಿಯ: ರಕ್ಷಣೆ ಮತ್ತು ವ್ಯವಸ್ಥಾಪಕ ಗುಣ ಇರುವವರು (Defence & Administrators)
೩. ವೈಶ್ಯ: ಉತ್ಪಾದನೆ ಮತ್ತು ವಿತರಣೆಯಲ್ಲಿ ಚಾಣಾಕ್ಷರು (Production and Sale)
೪. ಶೂದ್ರ: ಶುಶ್ರೂಷೆ ಅಥವಾ ಸೇವೆಯಲ್ಲಿ ಚಾಣಾಕ್ಷರು (Service)
ಈ ಮೇಲಿನ ನಾಲ್ಕು ವರ್ಣಗಳನ್ನು ಒಂದೇ ಕುಟುಬದಲ್ಲಿ ನೋಡಬಹುದು. ಹಾಗೂ ಅವರವರ ಜೀವ ಗುಣಕ್ಕೆ ಸರಿಹೊಂದುವ ಕೆಲಸವನ್ನು ಮಾಡುವವರು ಶೀಘ್ರ ಯಶಸ್ಸನ್ನು ಕಾಣುತ್ತಾರೆ. ಈ ರೀತಿ ಈ ಪ್ರಪಂಚ ನಡೆಯಲು ಅನಿವಾರ್ಯವಾಗಿ ಬೇಕಾಗುವ ನಾಲ್ಕು ವರ್ಣಗಳನ್ನು ನಿರ್ಮಿಸಿದ ಭಗವಂತ ಚತುರ್ವ್ಯೂಹ.
139) ಚತುರ್ದಂಷ್ಟ್ರ
ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನನು ಹೇಳುವಂತೆ:
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ |
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ || 11.25 ||
ಅಂದರೆ “ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೋರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ, ನೆಮ್ಮದಿ ಇಲ್ಲವಾಗಿದೆ. ಓ ಸಗ್ಗಿಗರೊಡೆಯನೆ, ಜಗದ ಆಸರೆಯೇ, ದಯೆ ತೋರು”.ಇಲ್ಲಿ ಯುದ್ಧನಿರತ ಕೌರವಸೇನೆ ಭಗವಂತನ ಕೋರೆದಾಡೆಗಳ ಮಧ್ಯೆ ಸಿಕ್ಕಿ ನುಚ್ಚು ನೂರಾಗುವುದನ್ನು ಕಂಡ ಅರ್ಜುನ, ತಾನು ಕೇವಲ ನೆಪಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಇಲ್ಲಿ ದಂಷ್ಟ್ರ ಎಂದರೆ ಕೋರೆದಂತ ಉಳ್ಳವನು ಎಂದರ್ಥ. ಚತುರ್ದಂಷ್ಟ್ರ ಎಂದರೆ ನಾಲ್ಕು ಕೋರೆ ಹಲ್ಲುಗಳಿರುವವನು ಎಂದರ್ಥ.
ಭಗವಂತನು ವರಾಹ ಅವತಾರಿಯಾಗಿ ಹಿರಣ್ಯಾಕ್ಷನನ್ನು ಹಾಗೂ ನರಸಿಂಹ ಅವತಾರಿಯಾಗಿ ಹಿರಣ್ಯಕಶಿಪು-ವನ್ನು ತನ್ನ ಕೋರೆ ಹಲ್ಲುಗಳಿಂದ ಸಂಹಾರ ಮಾಡಿದವನು. ನಮ್ಮೊಳಗೆ ಕೂಡಾ ಈ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಿದ್ದಾರೆ!! ಇಲ್ಲಿ ಹಿರಣ್ಯ ಎಂದರೆ ಚಿನ್ನ, ಅಂದರೆ ದುಡ್ಡು ಅಥವಾ ಸಂಪತ್ತು. ಯಾವಾಗಲೂ ದುಡ್ಡಿನ ಮೇಲೆ ಕಣ್ಣನ್ನಿಟ್ಟು, ಅದರಿಂದಾಚೆಗೆ ಏನನ್ನೂ ಯೋಚಿಸದೆ, ದುಡ್ಡಿನ ಆಸೆಯಲ್ಲಿ ಇರುವ ಮನುಷ್ಯನ ಗುಣವೇ ಆತನಲ್ಲಿರುವ ಹಿರಣ್ಯಾಕ್ಷ. ಇನ್ನು ಒಮ್ಮೆ ದುಡ್ಡು ಬಂದಿತು, ಅದನ್ನು ತನ್ನ ತಲೆದಿಂಬನ್ನಾಗಿ(ಕಶಿಪು) ಇಟ್ಟು-ಕೊಂಡು ದುಡ್ಡಿನ ಲೋಭದಲ್ಲಿ ಮುಳುಗುವ, ಹಾಗೂ ತಮ್ಮ ಲೋಭಕ್ಕೆ ಅಡ್ಡಿ ಆದಾಗ, ಕ್ರೋಧಗೊಳ್ಳುವ ಮನುಷ್ಯ ಗುಣವೇ ಆತನಲ್ಲಿರುವ ಹಿರಣ್ಯಕಶಿಪು. ನಮ್ಮಲ್ಲಿರುವ ಈ ಕಾಮ-ಕ್ರೋಧ-ಲೋಭವನ್ನು ಸಂಹಾರ ಮಾಡಬಲ್ಲ ಭಗವಂತ ಚತುರ್ದಂಷ್ಟ್ರ.
140) ಚತುರ್ಭುಜಃ
ಸಾಮಾನ್ಯವಾಗಿ ದೇವರ ಮೂರ್ತಿಗಳಲ್ಲಿ ನಾವು ನಾಲ್ಕು ಕೈ ಹಾಗೂ ನಾಲ್ಕು ಆಯುಧವನ್ನು ನೋಡುತ್ತೇವೆ. ಉದಾಹರಣೆಗೆ ವಿಷ್ಣು- ಶಂಖ, ಚಕ್ರ, ಗಧಾ, ಪದ್ಮಧಾರಿ. ಹಾಗೇ ಗಣಪತಿ- ಪಾಶ, ದಂತ, ಅಂಕುಶ ಮತ್ತು ಅಭಯಧಾರಿ. ಏನಿದು ? ಏನಿದರ ಅರ್ಥ?
೧. ಚಕ್ರ: ಚಕ್ರ 'ಧರ್ಮದ' ಸಂಕೇತ. ಅಧರ್ಮವನ್ನು ಸಂಹಾರಮಾಡುವ, ನಿರಂತರ ತಿರುಗುವ ವಿಷ್ಣು ಚಕ್ರ, ಸಂಹಾರಶಕ್ತಿ ಮಾತೆ ದುರ್ಗೆಯ ಸಂಕೇತ.
೨. ಶಂಖ: ಧರ್ಮದ ಪಂಚಾಂಗದಲ್ಲಿ ನಮ್ಮ ಬದುಕು ಸಮೃದ್ಧಿಯಾಗಿರುವ 'ಅರ್ಥದ' ಸಂಕೇತ.
೩. ಗಧಾ: ಭಗವಂತನ ಗಧೆ ಸ್ವಚ್ಚಂದ 'ಕಾಮದ ನಿಯಂತ್ರಣದ' ಸಂಕೇತ.
೪. ಪದ್ಮ: 'ಶಾಂತಿಯ ಮತ್ತು ಮೋಕ್ಷದ' ಸಂಕೇತ
ಇದೇ ರೀತಿ ಗಣಪತಿಯನ್ನು ನೋಡಿದರೆ:
೧. ಪಾಶ: ನಮ್ಮ ಬದುಕಿಗೆ ಬೇಕಾದ ಧರ್ಮದ ಬಿಗಿ (ಪಾಶ).
೨. ದಂತ: ಸಂಪತ್ತಿನ ಜೊತೆಗೆ ಆತ್ಮ ಸಂಯಮ (ತನ್ನ ಧಾಡೆಯನ್ನು ಮುರಿದು ಹಿಡಿದಿರುವುದು).
೩. ಅಂಕುಶ: ಸ್ವಚ್ಚಂದ ಕಾಮಕ್ಕೆ ಅಂಕುಶ.
೪. ಅಭಯ: ಈ ಮೇಲಿನ ಮೂರನ್ನು ಪಾಲಿಸಿದರೆ ಮೋಕ್ಷದ ಅಭಯ.
ವಿಷ್ಣುವಿನ ಕೈಯಲ್ಲಿನ ನಾಲ್ಕು ಆಯುಧಗಳನ್ನು ಇಪ್ಪತ್ನಾಲ್ಕು ವಿಧದಲ್ಲಿ ಇಡಲು ಬರುತ್ತದೆ. ಚಕ್ರ(ಬಲ ಕೈ), ಶಂಖ ಗಧಾ ಪದ್ಮಧಾರಿ-ಜನಾರ್ದನ ಮೂರ್ತಿಯಾದರೆ, ಶಂಖ(ಬಲ ಕೈ) ಚಕ್ರ ಗಧಾ ಪದ್ಮಧಾರಿ-ಕೇಶವ ಮೂರ್ತಿ. ಈ ರೀತಿ ವಿಷ್ಣುವಿನ ಇಪ್ಪತ್ನಾಲ್ಕು ಮೂರ್ತಿಗಳಿವೆ. ಅವುಗಳೆಂದರೆ ೧) ಕೇಶವ ೨) ನಾರಾಯಣ ೩) ಮಾಧವ ೪) ಗೋವಿಂದ. ೫) ವಿಷ್ಣು ೬) ಮಧುಸೂದನ ೭) ತ್ರಿವಿಕ್ರಮ ೮) ವಾಮನ ೯) ಶ್ರೀಧರ ೧೦) ಹೃಷೀಕೇಶ ೧೧) ಪದ್ಮನಾಭ ೧೨) ದಾಮೋದರ ೧೩) ಸಂಕರ್ಷಣ ೧೪) ವಾಸುದೇವ ೧೫) ಪ್ರದ್ಯುಮ್ನ ೧೬) ಅನಿರುದ್ಧ ೧೭) ಪುರುಷೋತ್ತಮ ೧೮) ಅಧೋಕ್ಷಜ ೧೯) ನಾರಸಿಂಹ ೨೦) ಅಚ್ಚುತ ೨೧) ಜನಾರ್ದನ ೨೨) ಉಪೇಂದ್ರ ೨೩) ಹರಿ ೨೪) ಕೃಷ್ಣ.
ಈ ರೀತಿ ವಿಶಿಷ್ಟವಾದ ನಾಲ್ಕು ಬಾಹುವುಳ್ಳ ಭಗವಂತನನ್ನು ಚತುರ್ಭುಜ ಎನ್ನುತ್ತಾರೆ. ಭುಜ ಎನ್ನುವುದಕ್ಕೆ ಭೋಜನ ಎನ್ನುವ ಅರ್ಥ ಕೂಡಾ ಇದೆ. ನಾಲ್ಕು ವಿಧದಲ್ಲಿ ತಿನ್ನುವವನು ಹಾಗೂ ತಿನ್ನಿಸುವವನು ಚತುರ್ಭುಜ. ಭಗವಂತನು ಗೀತೆಯಲ್ಲಿ ಹೇಳಿರುವಂತೆ-
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ || 15.14 ||
ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. ಅನ್ನವೆಂದರೆ ಎಲ್ಲಾ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ 'ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.
ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು)
ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು).
ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು.
ಚೋಷ್ಯ = ಕುಡಿಯಲು ಯೋಗ್ಯವಾದುದು.
ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲಾ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವನು ಚತುರ್ಭುಜ.
ಎಲ್ಲಾ ಆಹಾರ ಮಣ್ಣು-ನೀರು-ಬೆಂಕಿಯಿಂದ ಆಗಿರುತ್ತದೆ. ಆಹಾರದ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗೂ ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ ಹಾಗೂ ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ. ಈ ರೀತಿ, ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ಥಿತ ರೀತಿಯಲ್ಲಿ ಮಾಡಿ , ನಾಲ್ಕು ಬಗೆಯ ಆಹಾರವನ್ನು ಮೇಲಿನ ಮೂರು ರೀತಿಯಲ್ಲಿ ವಿನಿಯೋಗ ಮಾಡುವ ಭಗವಂತ ಚತುರ್ಭುಜ.
ಮುಂದುವರೆಯುವುದು....
No comments:
Post a Comment