ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸೋಮಪೋsಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ವತಾಂಃ ಪತಿಃ || 54 ||
೫೦೬) ಸೋಮಪಃ
ಹಿಂದೆ ಯಜ್ಞದಲ್ಲಿ ಸೋಮಲತೆ ಎನ್ನುವ ಬಳ್ಳಿಯಿಂದ ತಯಾರಿಸಿದ ಸೋಮರಸವನ್ನು ಆಹುತಿಯಾಗಿ ಕೊಡುತ್ತಿದ್ದರು. ಹೀಗೆ ಸೋಮರಸವನ್ನು ಆಹುತಿಯಾಗಿ ಕೊಟ್ಟು ಮಾಡುವ ಯಾಗವನ್ನು ಸೋಮಯಾಗ ಎನ್ನುತ್ತಾರೆ. ಆದರೆ ಈಗ ಸೋಮಲತೆ ಎನ್ನುವ ಬಳ್ಳಿಯ ಪರಿಚಯವೇ ಮರೆತು ಹೋಗಿದೆ. ನದಿ ತೀರದಲ್ಲಿ ಹೇರಳವಾಗಿ ಬೆಳೆಯುವ ಈ ಲತೆಗೆ ಅತ್ಯಂತ ಅಮೂಲ್ಯವಾದ ಔಷಧೀಯ ಗುಣವಿದೆ. ವೇದ ಕಾಲದಲ್ಲಿ ಇದಕ್ಕೆ ಸರಿಸಾಟಿಯಾದ ಔಷಧವೇ ಇರಲಿಲ್ಲ. ಈ ಕಾರಣಕ್ಕಾಗಿ ಹಿಂದೆ ಈ ಲತೆಯನ್ನು ಯಜ್ಞದಲ್ಲಿ ಬಳಸುತ್ತಿದ್ದರು. ಯಜ್ಞದಲ್ಲಿ ಬಳಸಿ ಉಳಿದ ಸೋಮರಸವನ್ನು ಪಾನ ಮಾಡುತ್ತಿದ್ದರು. ಇದನ್ನು ಸೋಮಪಾನ ಎನ್ನುತ್ತಾರೆ. ಇಲ್ಲಿ ಸೋಮಪಾನ ಮತ್ತು ಸುರಪಾನ ಒಂದೇ ಅಲ್ಲ. "ಸೋಮಪಾನ ಮಾಡು ಆದರೆ ಎಂದೂ ಸುರಪಾನ ಮಾಡಬೇಡ" ಎಂದು ವೇದಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಸೋಮಯಜ್ಞವನ್ನು ಯಜಮಾನನಲ್ಲಿ ಕುಳಿತು ಮಾಡಿಸುವ ಹಾಗು ಅಗ್ನಿಯಲ್ಲಿ ಸನ್ನಿಹಿತನಾಗಿ ಸೋಮರಸ ಪಾನಮಾಡುವ ಭಗವಂತ ಸೋಮಪಃ.
ಚಂದ್ರನನ್ನು ಸೋಮ ಎನ್ನುತ್ತಾರೆ. ಆತ ಎಲ್ಲಾ ಲತೆಗಳ ಒಡೆಯ. ಚಂದ್ರನ ಮುಖೇನ ಲತೆಗೆ ಇಂತಹ ಅಮೂಲ್ಯ ಗುಣವನ್ನು ದಯಪಾಲಿಸಿದ ಭಗವಂತ ಸೋಮಪಃ.
ಸೋಮ ಎಂದರೆ 'ರಸ' ಎನ್ನುವ ಅರ್ಥವಿದೆ. ನಾವು ನಿತ್ಯ ಪೂಜೆ ಮಾಡುವಾಗ ಹೇಳುವ ಒಂದು ಮಂತ್ರವಿದೆ. "ವಾಯ ವಾಯಾಹಿ ದರ್ಶತೇಮೇ ಸೋಮಾಲಂಕೃತಾಃ ತೇಷಾಂ ಪಾಹಿ ಶುಚೀ ಭವಂ" ಅಂದರೆ " ಓ ವಾಯುದೇವನೇ ಬಾ, ನಿನಗೆ ಇಲ್ಲಿ ಸೋಮವನ್ನಿಟ್ಟಿದೇನೆ, ನಮ್ಮ ಕರೆಯನ್ನು ಮನ್ನಿಸಿ ಬಾ. ಬಂದು ಈ ಸೋಮವನ್ನು ಪಾನ ಮಾಡು".
ಯಾರೂ ಪೂಜೆಯಲ್ಲಿ ಸೋಮರಸವನ್ನಿಡುವುದಿಲ್ಲ ಆದರೆ ಪೂಜೆಯ ಪ್ರಾರಂಭದಲ್ಲಿ ಈ ಮಂತ್ರವನ್ನು ಹೇಳುತ್ತಾರೆ! ಇಲ್ಲಿ ಸೋಮರಸ ಎಂದರೆ ಭಕ್ತಿಯಿಂದ ಕರಗಿ ಭಗವಂತನ ಕಡೆಗೆ ಹರಿಯುವ ಮನಸ್ಸು. ಸೋಮಪಃ ಎಂದರೆ ಭಕ್ತಿಯಿಂದ ಕರಗಿದ, ಭಕ್ತಿ ರಸವಾದ ನಮ್ಮ ಮನಸ್ಸಿನ ಪೂಜೆಯನ್ನು ಸ್ವೀಕರಿಸಿ ರಕ್ಷಣೆ ಮಾಡುವ ಭಗವಂತ.
ಮನೋಭಿಮಾನಿ ದೇವತೆಯಾದ ಶಿವ ಕೂಡಾ ಸೋಮ. ಏಕೆಂದರೆ ಆತ 'ಉಮೆಯಿಂದ ಸಹಿತನಾದವನು' ಅದಕ್ಕಾಗಿ ಆತನನ್ನು ಸೋಮೇಶ್ವರ ಎನ್ನುತ್ತಾರೆ. ಉಮಾಪತಿ ಶಿವ ಮನಸ್ಸನ್ನು ರಕ್ಷಣೆ ಮಾಡುವವ. ಮನಸ್ಸಿನ ಅಭಿಮಾನಿಯಾದ ರುದ್ರ-ಚಂದ್ರಾದಿಗಳನ್ನು ರಕ್ಷಣೆ ಮಾಡುವ ಶಕ್ತಿಯಾದ ಭಗವಂತ ಸೋಮಪಃ.
'ಸೋಮರು' ಎಂದರೆ ಉತ್ಕೃಷ್ಟವಾದ ಜ್ಞಾನ ಉಳ್ಳವರು. ಇಂತಹ ಜ್ಞಾನಿಗಳಲ್ಲಿ ಸದಾ ಸನ್ನಿಹಿತನಾಗಿದ್ದು ರಕ್ಷಣೆ ಮಾಡುವ ಭಗವಂತ ಸೋಮಪಃ.
೫೦೭) ಅಮೃತಪಃ
ಸಮುದ್ರ ಮಥನ ಕಾಲದಲ್ಲಿ ಅಮೃತಪಾನಕ್ಕೆ ದೇವತೆಗಳಿಗೆ ನೆರವು ಮಾಡಿ, ದುಷ್ಟ ರಾಕ್ಷಸರ ಸಂಹಾರ ಮಾಡಿದ ಭಗವಂತ ಅಮೃತಪಃ. ದೇವತಗಳನ್ನು, ಮುಕ್ತರನ್ನು, ಬ್ರಹ್ಮ-ವಾಯುವನ್ನು ಸಲಹುವ ಭಗವಂತ ಅಮೃತಪಃ.
೫೦೮) ಸೋಮಃ
ಅರಿವಿನ ನೆಲೆ ಹಾಗು ಸೌಮ್ಯ ಸ್ವಭಾವದ ಭಗವಂತ ಸೋಮಃ, ಸೋಮರಸದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮನೋನಿಯಾಮಕ ಚಂದ್ರ ಹಾಗೂ ರುದ್ರರಲ್ಲಿ ಸನ್ನಿಹಿತನಾಗಿದ್ದಾನೆ. ಪವಮಾನನೊಳಗೆ(ಉತ್ಕೃಷ್ಟ ಜ್ಞಾನ ಸ್ವರೂಪನೊಳಗೆ) ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಸೋಮಃ.
೫೦೯) ಪುರುಜಿತ್
ಅತ್ಯಂತ ಬಲಿಷ್ಠವಾದ ಸಂಗತಿಗಳನ್ನು(ಭಲ ಮತ್ತು ಜ್ಞಾನ) ಗೆದ್ದು, ಎಲ್ಲಕ್ಕಿಂತ ಎತ್ತರದಲ್ಲಿರುವ, ಧರ್ಮಕ್ಕೆ ವಿರುದ್ಧವಾಗಿ ನಿಲ್ಲುವ ತಾಮಸ ಶಕ್ತಿಯಾದ ಅಸುರ ವೃಂದವನ್ನು ಸೋಲಿಸಿ, ಧರ್ಮ ಸ್ಥಾಪನೆ ಮಾಡಿದ ಭಗವಂತ ಪುರುಜಿತ್.
೫೧೦) ಪುರುಸತ್ತಮಃ
ಪುರು ಎಂದರೆ ದೇಹ. ದೇಹದೊಳಗಿರುವ ಎಲ್ಲಾ ಶ್ರೇಷ್ಠ ಶಕ್ತಿಗಳನ್ನು (ಪುರುಗಳು ಅಂದರೆ ತತ್ವಾಭಿಮಾನಿ ದೇವತೆಗಳು) ನಿಯಂತ್ರಿಸುವ, ಅವರಲ್ಲಿ ಸತ್ತಮನಾಗಿರುವ, ಜ್ಞಾನಿಗಳಲ್ಲಿ ಶ್ರೇಷ್ಠ ಜ್ಞಾನಿ ಭಗವಂತ ಪುರುಸತ್ತಮಃ.
೫೧೧) ವಿನಯಃ
ವಿ+ನಯ-ವಿನಯ; ಇಲ್ಲಿ 'ವಿ' ಎಂದರೆ ವಿವಿಧ ಅಥವ ವಿಶಿಷ್ಟ; ನಯ ಎಂದರೆ ನೀತಿ. ಪ್ರಪಂಚದಲ್ಲಿ ವಿವಿಧವಾದ ನೀತಿಯನ್ನು ನೆಲೆಗೊಳಿಸಿದ ಭಗವಂತ ವಿನಯಃ. ಒಬ್ಬೊಬ್ಬರಿಗೆ ಒಂದೊಂದು ನೀತಿ, ಪ್ರತಿಯೊಬ್ಬ ವ್ಯಕ್ತಿಗೂ ಅವನ ವೈಯಕ್ತಿಕ ನೀತಿಯನ್ನು ನಿಯಮಿಸುವವನು. ಏಕೆಂದರೆ ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಆ ಸ್ವಭಾವಕ್ಕೆ ತಕ್ಕಂತೆ ಆತನ ಜೀವನದ ನಡೆ. ಆದ್ದರಿಂದ ಒಬ್ಬೊಬ್ಬರ ನಡೆ ಒಂದೊಂದು ವಿಧ. ಹೀಗೆ ವಿವಿಧವಾದ ಜೀವನದ ನಡೆಯನ್ನು ನಿಯಂತ್ರಿಸುವ, ಅನಂತ ಜೀವಗಳಿಗೆ ಅನಂತ ರೀತಿಯ ಬದುಕನ್ನು ನೀಡಿದ ಭಗವಂತ ವಿನಯಃ. ಈ ಕಾರಣಕ್ಕಾಗಿ ಭಗವಂತನ ಸೃಷ್ಟಿಯಲ್ಲಿ ನೂರಕ್ಕೆ ನೂರು ಒಂದೇ ರೀತಿಯಾದ ಎರಡು ವಸ್ತುವಿಲ್ಲ, ಒಬ್ಬರಂತೆ ಇನ್ನೊಬ್ಬರಿಲ್ಲ. ಇಂತಹ ಭಗವಂತನ ವಿನಯಪೂರ್ಣತೆಗೆ 'ಶ್ರೀ ರಾಮಚಂದ್ರನ' ಜೀವನದ ನಡೆಯೇ ಸಾಕ್ಷಿ.
೫೧೨) ಜಯಃ
ಜಯಃ ಎಂದರೆ ಎಲ್ಲವನ್ನೂ ಜಯಿಸಿದವನು. ಮಹಾಭಾರತಕ್ಕೆ 'ಜಯ' ಎನ್ನುತ್ತಾರೆ. ಮಹಾಭಾರತದಿಂದ ಪ್ರತಿಪಾಧ್ಯನಾದ ಭಗವಂತ ಜಯಃ.
ಇನ್ನು ಸಂಖ್ಯಾಶಾಸ್ತ್ರವನ್ನು ನೋಡಿದಾಗ, ಅಕ್ಷರಾಂಕದ ಪದ್ದತಿಯಲ್ಲಿ ೧೮ ಎಂದರೆ ಜಯ; ಜ=೮ ಯ=೧. ಅಕ್ಷರಾಂಕದಲ್ಲಿ ಮೊದಲನೆಯದು ಏಕ ಸ್ಥಾನ; ಎರಡನೆಯದು ದಶಕ ಸ್ಥಾನ. ಆದ್ದರಿಂದ ಜ-ಯ ಎಂದರೆ ೮೧ ಅಲ್ಲ; ೧೮. ಈ ಕಾರಣಕ್ಕಾಗಿ ಜಯ ನಾಮಕ ಭಾರತದಲ್ಲಿ ಹದಿನೆಂಟು ಪರ್ವಗಳು, ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನಗಳು, ಯುದ್ಧದಲ್ಲಿ ಪಾಲ್ಗೊಂಡ ಸೇನೆ ಹದಿನೆಂಟು ಅಕ್ಷೋಹಿಣಿ, ಜಯದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯ. ಹಿಂದೆ ಹೇಳಿದಂತೆ ಜೀವನಿಗೆ ೧೫ ಬೇಲಿ, ಆ ೧೫ ಬೇಲಿಯೊಳಗೆ ೧೬ನೇ ಜೀವ. ಹೀಗೆ ಜೀವವನ್ನು ಕಟ್ಟಿ ಹಾಕಿದವಳು ೧೭ನೇ ಪೃಕೃತಿ. ಜೀವದ ಬಂಧವನ್ನು ಕಳಚುವವನು ೧೮ನೇ ಜಯಃ ನಾಮಕ ಭಗವಂತ.
೫೧೩) ಸತ್ಯಸಂಧಃ
ಎಂದೂ ಹುಸಿಯಾಗದ ಪ್ರತಿಜ್ಞೆಯವನು. ಭಗವಂತನ ನುಡಿ ಎಂದೂ ಹುಸಿಯಾಗುವುದಿಲ್ಲ. ಆದರೂ ಕೆಲವೊಮ್ಮೆ ತನ್ನ ಭಕ್ತರ ಅಭೀಷ್ಟ ಪೂರೈಸುವುದಕ್ಕೊಸ್ಕರ ಹುಸಿಯಾದಂತೆ ತೋರಿಸುತ್ತಾನೆ! ಇಂತಹ ಭಕ್ತವಾತ್ಸಲ ಭಗವಂತ ಸತ್ಯಸಂಧಃ.
೫೧೪) ದಾಶಾರ್ಹಃ
ಮನುಷ್ಯ ಎಂದೂ ಸಂಪೂರ್ಣ ಸ್ವಾತಂತ್ರ್ಯವನ್ನು ಇಷ್ಟ ಪಡುವುದಿಲ್ಲ. ಯಾರ್ಯಾರಿಗೋ ದಾಸನಾಗುವ ಬದಲು ಭಗವಂತನಿಗೆ ದಾಸನಾಗುವುದು ನಮ್ಮ ಗುರಿಯಾಗಬೇಕು.ನಮ್ಮ ಸರ್ವಸ್ವವನ್ನೂ ಅರ್ಪಿಸಲು ತಕ್ಕ ತಾಣವಾದ ಭಗವಂತ ದಾಶಾರ್ಹಃ.
೫೧೫) ಸಾತ್ವತಾಂಪತಿಃ
ಸಾತ್ವತರು ಎಂದು ಯಾದವರ ಒಂದು ಕವಲಿತ್ತು, ಇಂತಹ ಕವಲಿನಲ್ಲಿ ಜನಿಸಿದ ಭಗವಂತನನ್ನು ಸಾತ್ವತಾಂಪತಿಃ ಎನ್ನುತ್ತಾರೆ. ಆದರೆ ಇದು ಕೇವಲ ಲೌಕಿಕ ಅರ್ಥ. ಇದಕ್ಕೊಂದು ಆಂತರಿಕ ಅರ್ಥವಿದೆ. 'ಸಾತ್ವತರು' ಎಂದರೆ-'ಸಾತ್ವತ' ಎನ್ನುವ ಸಂಹಿತೆ ಒಂದಿದೆ, ಸಾತ್ವಿಕವಾದ ತಂತ್ರಶಾಸ್ತ್ರದ ಪರಂಪರೆ. ಆ ಪರಂಪರೆಯನ್ನು ಜಗತ್ತಿಗೆ ಕೊಟ್ಟವನು ಕಪಿಲ ರೂಪಿ ಭಗವಂತ. ಸಾತ್ವತ ರೂಪನಾದ ಭಗವಂತನನ್ನು ಉಪಾಸನೆಯಲ್ಲಿ ಬಳಸಿ ಅವನನ್ನು ಆರಾಧನೆ ಮಾಡುವ ಸಾತ್ವಿಕರಿಗೆ ಪಾಲಕನಾಗಿ ಮೋಕ್ಷ ಕರುಣಿಸುವ ಭಗವಂತ ಸಾತ್ವತಾಂಪತಿಃ.
ಮುಂದುವರೆಯುವುದು...
No comments:
Post a Comment