Monday, May 15, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -64


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀನಿವಾಸಃ ಶ್ರೀಪತಿಃ ಶ್ರೀಮತಾಂ ವರಃ || 64 ||

೬೦೨) ಅನಿವರ್ತೀ

ಹಿಡಿದ ಕಾರ್ಯವನ್ನು ಎಂದೂ ಅಪೂರ್ಣ ಮಾಡದ, ಎಂದೂ ಮಾತಿಗೆ ತಪ್ಪದ ಭಗವಂತ ಅನಿವರ್ತೀ. ಜೀವರಲ್ಲಿ ನೆಲೆಸಿದ ಆತ ಮುಕ್ತರನ್ನು ಎಂದೂ ಸಂಸಾರಕ್ಕೆ ಮರಳಿಸುವುದಿಲ್ಲ.

೬೦೩) ನಿವೃತ್ತಾತ್ಮಾ

ಭಗವಂತನಿಗೆ ದೇವತೆಗಳ ಮೇಲೆ ಪ್ರೀತಿಯೂ ಇಲ್ಲ, ದೈತ್ಯರ ಮೇಲೆ ದ್ವೇಷವೂ ಇಲ್ಲ. ಆತನಿಗೆ ಯಾವುದರ ಮೇಲೂ ಮೋಹವಿಲ್ಲ. ಎಲ್ಲಿ ಧರ್ಮವಿದೆಯೋ ಅದನ್ನು ಪ್ರೀತಿಸುವ ಭಗವಂತ, ಎಲ್ಲಾ ಬಂಧಗಳಿಂದಾಚೆಗಿನ ತಟಸ್ಥ ಸ್ವರೂಪ.

೬೦೪) ಸಂಕ್ಷೇಪ್ತಾ

ವಿಶ್ವವನ್ನು ಪ್ರಳಯ ಕಾಲದಲ್ಲಿ ಸಂಕುಚಗೊಳಿಸುವವನು ಸಂಕ್ಷೇಪ್ತಾ. ಪ್ರಳಯ ಕಾಲದಲ್ಲಿ ಮಣ್ಣು ನೀರಿನಲ್ಲಿ, ನೀರು ಬೆಂಕಿಯಲ್ಲಿ, ಬೆಂಕಿ ಗಾಳಿಯಲ್ಲಿ, ಗಾಳಿ ಆಕಾಶದಲ್ಲಿ, ಆಕಾಶ ಆತ್ಮನಲ್ಲಿ ಸಂಕುಚಗೊಂಡು ಸೂಕ್ಷ್ಮ ಸ್ಥಿತಿಗೆ ಹೋಗುವುದು. ಹೀಗೇ ಸೃಷ್ಟಿ-ಸಂಹಾರ ಮಾಡುವ ಭಗವಂತ ಸಂಕ್ಷೇಪ್ತಾ.

೬೦೫) ಕ್ಷೇಮಕೃಚ್ಛಿವಃ

ಸಜ್ಜನರಿಗೆ ಕ್ಷೇಮವನ್ನೀಯುವ, ದುರ್ಜನರ ಕ್ಷೇಮವನ್ನು ಇಲ್ಲವಾಗಿಸುವ ಮಂಗಳ ಸ್ವರೂಪ ಭಗವಂತ  ಕ್ಷೇಮಕೃಚ್ಛಿವಃ. ನಮಗೆ ಜೀವನ ಕೊಟ್ಟು, ಕ್ಷೇಮ ಕೊಟ್ಟವ. ನಾವು ಏನನ್ನೂ ಪಡೆದಿದ್ದೇವೋ ಅದನ್ನು ಉಳಿಸಿಕೊಳ್ಳಲು ನೆರವನ್ನೀಯುವವ, ನಮ್ಮನ್ನು ಸಂಸಾರ ಬಂಧದಿಂದ ಬಿಡಿಸಿ ಅತಿದೊಡ್ಡ ಕ್ಷೇಮವಾದ ಮೋಕ್ಷವನ್ನು ಕರುಣಿಸುವ ಪರಮಮಂಗಳ ಜ್ಞಾನಾನಂದ ಬಲಸ್ವರೂಪಿ ಭಗವಂತ ಕ್ಷೇಮಕೃಚ್ಛಿವಃ.

೬೦೬) ಶ್ರೀವತ್ಸವಕ್ಷಾಃ

ಭಗವಂತನ ಬಲ ಎದೆಯಲ್ಲಿ ಶ್ರೀವತ್ಸ ಮಚ್ಚೆಯಿದೆ. ಇದು ಲಕ್ಷ್ಮಿ ಸ್ವರೂಪ. ಸದಾ ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದ ಭಗವಂತ ಶ್ರೀವತ್ಸವಕ್ಷಾಃ.

೬೦೬) ಶ್ರೀವಾಸಃ

ಯಾರ ಎದೆಯಲ್ಲಿ ಲಕ್ಷ್ಮಿ ಲಕ್ಷಣವಾಗಿ ಕುಳಿತಿದ್ದಾಳೋ ಅವನು ಶ್ರೀವಾಸಃ

೬೦೭) ಶ್ರೀಪತಿಃ

ಲಕ್ಷ್ಮಿಯ ಪತಿ ಹಾಗು ಸಮಸ್ತ ವೇದಗಳ ಒಡೆಯ ಭಗವಂತ ಶ್ರೀಪತಿಃ.

೬೦೯) ಶ್ರೀಮತಾಂವರಃ

ಜಗತ್ತಿನಲ್ಲಿರುವ ಶ್ರೀಮಂತರಲ್ಲಿ ಸರ್ವ ಶ್ರೇಷ್ಠ ಶ್ರೀಮಂತ, ಸರ್ವಶ್ರೇಷ್ಠ  ಜ್ಞಾನಿ  ಶ್ರೀಮತಾಂವರಃ.

ಮುಂದುವರೆಯುವುದು....

No comments:

Post a Comment