Wednesday, May 24, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -74


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮನೋಜವಸ್ತಿರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || 74 ||

೬೯೫) ಮನೋಜವಃ

ಎಲ್ಲಕ್ಕಿಂತ ವೇಗವಾಗಿ ಹೋಗುವ ವಸ್ತು ಮನಸ್ಸು. ಆದರೆ ಭಗವಂತನ ವೇಗ ಮನಸ್ಸಿನ ವೇಗಕ್ಕಿಂತ ಮಿಗಿಲು. ಇಂತಹ ಭಗವಂತನನ್ನು ತಲುಪಬೇಕಾದರೆ ನಾವು ನಮ್ಮ ಅಹಂಕಾರವನ್ನು ಸಂಪೂರ್ಣವಾಗಿ ಕಳಚಿ ಆತನಲ್ಲಿ ಶರಣಾಗಬೇಕು. ಆಗ ಮಾತ್ರ ನಮ್ಮ ಮನಸ್ಸು ಆತನನ್ನು ಮುಟ್ಟಬಲ್ಲದು.

೬೯೬) ತೀರ್ಥಕರಃ

ಭಗವಂತನ ಕಡೆಗೆ ಹೋಗಬೇಕಾದರೆ ಹಂತ-ಹಂತವಾಗಿ ಹೋಗಬೇಕು. ಮೊದಲು ನಮ್ಮ ಮನಸ್ಸು ಒಳ್ಳೆಯ ವಿಚಾರದ ಕಡೆ ಹರಿಯಬೇಕು. ಮನಸ್ಸಿನಲ್ಲಿ ಬೇಡವಾದ ಪ್ರಾಪಂಚಿಕ ವಿಷಯ ತುಂಬಿಕೊಂಡರೆ ನಾವು ಭಗವಂತನತ್ತ ಪ್ರಯಾಣಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಭಗವಂತ ದೇವಸ್ಥಾನ ಹಾಗೂ ಪುಣ್ಯತೀರ್ಥಗಳ ಸೃಷ್ಟಿ ಮಾಡಿದ. ಗಂಗೆ ಕಾವೇರಿಯಂತಹ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ನಮ್ಮ ಮನಸ್ಸಿನ ಕಲ್ಮಶ ಹೊರಟು ಹೋಗಿ ಮನಸ್ಸು ಭಗವಂತನೆಡೆಗೆ ಹರಿಯುತ್ತದೆ. ಶಾಸ್ತ್ರಗಳನ್ನೂ ಕೂಡಾ ತೀರ್ಥ ಎಂದು ಕರೆಯುತ್ತಾರೆ. ಸ್ವಚ್ಚ ಮನಸ್ಸಿನಿಂದ ಓದಲು ಶಾಸ್ತ್ರಗಳ ನಿರ್ಮಾಣ ಕೂಡಾ ಭಗವಂತನ ಸೃಷ್ಟಿ. ಇದರಿಂದ ಮನಸ್ಸಿಗೆ ವೇಗ ಸಿಗುತ್ತದೆ. ಹೀಗೆ ಪವಿತ್ರ ತೀರ್ಥಗಳ, ಶಾಸ್ತ್ರಗಳ ಸೃಷ್ಟಿ ಮಾಡಿದ ಭಗವಂತ ತೀರ್ಥಕರಃ

೬೯೭) ವಸುರೇತಾಃ

'ವಸುಗಳು' ಎಂದರೆ ದೇವತೆಗಳು. ಎಲ್ಲಾ ದೇವತೆಗಳ ಸೃಷ್ಟಿಗೆ ಕಾರಣಪುರುಷನಾದ ಭಗವಂತ ವಸುರೇತಾಃ.

೬೯೮) ವಸುಪ್ರದಃ

ಮೋಕ್ಷವೆಂಬ ಸಿರಿಯನ್ನೀಯುವವ. ನಾವು ದಾರಿತಪ್ಪಿದಾಗ ಎಲ್ಲವನ್ನೂ ಕಸಿದುಕೊಳ್ಳುವವನು. (ಏಕೆಂದರೆ ದೇವರ ಸಾಮ್ರಾಜ್ಯದಲ್ಲಿ ತಪ್ಪಿಗೆ ಸಜೆ ತಪ್ಪಿದ್ದಲ್ಲ).

೬೯೯) ವಸುಪ್ರದಃ

ಈ ನಾಮ ಒಂದೇ ಕಡೆ ಎರಡು ಸಾರಿ ಬಂದಿದೆ. ವ +ಸು+ಪ್ರದ; ಇಲ್ಲಿ 'ವ' ಅಂದರೆ ಜ್ಞಾನ, 'ಸು' ಎಂದರೆ ಸುಖ ಅಥವಾ ಆನಂದ. ಆದ್ದರಿಂದ ನಮ್ಮೊಳಗಿನಿಂದ ಅರಿವಿನ ಆನಂದವನ್ನು ಅರಳಿಸುವ ಭಗವಂತ ವಸುಪ್ರದಃ. ಒಮ್ಮೆ ನಮ್ಮ ಅಂತರಂಗದ ಅರಿವು ತೆರೆದುಕೊಂಡಾಗ, ಹೊರಗಿನ ಯಾವ ಸಲಕರಣೆಯೂ ಬೇಡ, ಯಾವುದರ ನೆರವೂ ಬೇಡ, ಯಾವ ಪುಸ್ತಕವೂ ಬೇಡ, ಯಾವ ಓದೂ ಬೇಡ. ಮನಸ್ಸಿನ ಈ ಸ್ಥಿತಿಯಲ್ಲಿ ನಮಗೆ ಅಧ್ಯಾತ್ಮದ ಮೇಲೆ ಅಧಿಕಾರ ಬರುತ್ತದೆ. ಇದು ನಮ್ಮ ಹೃದಯ ಮಾತನಾಡುವ ಅದ್ಬುತ  ಸ್ಥಿತಿ. ಇಂತಹ ಸ್ಥಿಯಲ್ಲಿ ನಮಗೆ ಅಧ್ಯಾತ್ಮದ ಬಗ್ಗೆ ಬರೆಯುವ ಹಾಗೂ ಮಾತನಾಡುವ ಶಕ್ತಿ ಬರುತ್ತದೆ. ಹೀಗೆ ನಮಗೆ ನಮ್ಮ ಹೃದಯದಿಂದ ಅರಿವು ಆನಂದವಾಗಿ ಚಿಮ್ಮುವ  ಸ್ಥಿತಿಯನ್ನು ಕೊಡುವ ಭಗವಂತ ವಸುಪ್ರದಃ.

೭೦೦) ವಾಸುದೇವಃ

ವಾಸು+ದೇವ, ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಹದಿನೈದು ಬೇಲಿಗಳನ್ನು ದಾಟಿ, ಸಮಾಧಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ)  ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.

೭೦೧) ವಸುಃ

ಭಗವಂತ ಸರ್ವೋತ್ಕೃಷ್ಟವಾದ ಜ್ಞಾನಾನಂದ ಸ್ವರೂಪ. ನಮಗಿರುವ ಆನಂದ ಒಂದು ಸೂಕ್ಷ್ಮ ಬಿಂದು ಹಾಗೂ ಅದು ದುಃಖದ ಜೊತೆಗಿರುವ ಆನಂದ, ಆದರೆ ಭಗವಂತ ಎಂದೂ ದುಃಖಸ್ಪರ್ಶವಿಲ್ಲದ, ಎಂದೂ ಅಳಿವಿರದ, ಅನಂತ ಜ್ಞಾನಾನಂದ ಸ್ವರೂಪ.

೭೦೨) ವಸುಮನಾಃ

ಜ್ಞಾನಾನಂದ ಸ್ವರೂಪಭೂತವಾದ ಮನಸ್ಸುಳ್ಳ ಭಗವಂತ ವಸುಮನಾಃ.

೭೦೩) ಹವಿಃ

'ಹವನ' ಎಂದರೆ ಆಹುತಿ; ಯಾರಿಗೋಸ್ಕರ ನಾವು ಆಹುತಿ ಕೊಡುತ್ತೆವೋ ಆತ ಹವಿಃ. ನಾವು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮನಸ್ಸನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಧ್ಯಾನ, ದೈಹಿಕ ಇಂದ್ರಿಯಗಳನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಕರ್ಮ. ನಾವು ನಮ್ಮ ಮನಸ್ಸನ್ನು ಹಾಗು ಕರ್ಮವನ್ನು ಭಗವಂತನತ್ತ ಹರಿದು ಬಿಡಬೇಕು, ಅದೇ ನಿಜವಾದ ಹವನ. "ನಿನ್ನ ಮನಸ್ಸು ಭಗವಂತನನ್ನೇ ನೆನೆಯಲಿ, ಭಗವಂತನ ನಾಮಗಳ ಗುಣಾನುಸಂಧಾನದಲ್ಲಿ ಮೈಮರೆಯಲಿ, ನಿನ್ನ ಸಮಸ್ತ ಇಂದ್ರಿಯಗಳು ಭಗವಂತನ ಅರ್ಪಣರೂಪವಾದ ಕರ್ಮದಲ್ಲಿ ತೊಡಗಲಿ ಆಗ ಭಗವಂತ ಹವಿಯಾಗಿ ನಿನ್ನ ರಕ್ಷಣೆ ಮಾಡುತ್ತಾನೆ".

ಮುಂದುವರೆಯುವುದು....✍️💐

No comments:

Post a Comment