ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋsಕ್ಷರ ಏವ ಚ || 2 ||
10) ಪೂತಾತ್ಮಾ
ದ್ವೇಷಗಳ, ತ್ರಿಗುಣಗಳ ಸ್ಪರ್ಶವಿಲ್ಲದ ಪವಿತ್ರ ಸ್ವರೂಪನಾದ ಭಗವಂತ ಪೂತಾತ್ಮಾ.
11) ಪರಮಾತ್ಮಾ
ಆತ್ಮ ಅಂದರೆ - ದೇಹ? ಅಲ್ಲ ! ಭಾವನೆಗಳ ಗೂಡಾದ ಮನಸ್ಸು? ಅದೂ ಅಲ್ಲ !! ಏಕೆಂದರೆ ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು? ಅದೇ ಜೀವ. ಆದರೆ ಈ ಜೀವವನ್ನು ನಿಯಂತ್ರಿಸುವ ಶಕ್ತಿ ಯಾವುದು? ಆತನೇ-ಪರಮಾತ್ಮ. ಎಲ್ಲಾ ಆತ್ಮಗಳಿಗೂ ಪರಮವಾದ ಆತ್ಮ, ಬ್ರಹ್ಮಾದಿ ಸಕಲ ಚೇತನಗಳಿಗೂ ಹಿರಿಯನಾದ ಸ್ವಾಮಿ.
12) ಮುಕ್ತಾನಾಂ ಪರಮಾ ಗತಿಃ
ಚತುರ್ಮುಖನ ಆಯಸ್ಸು ನೂರು ಕಲ್ಪ. ಒಂದು ಕಲ್ಪ (kalpa) ಅಂದರೆ 31,104 ಸಾವಿರ ಕೋಟಿ ವರ್ಷ. ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕರಾಗಿ ಇರುತ್ತಾರೆ. ಮುಕ್ತಾನಾಂ ಪರಮಾ ಗತಿಃ ಅಂದರೆ ಮುಕ್ತಿ ಪಡೆದವರಿಗೆ ಮುಕ್ತಿಯಲ್ಲೂ ಚತುರ್ಮುಖ ಬ್ರಹ್ಮರೊಂದಿಗೆ - ಶ್ರೇಷ್ಠ ಮಾರ್ಗದರ್ಶನ ಮಾಡುವವನು ಹಾಗೂ ಚತುರ್ಮುಖ ಬ್ರಹ್ಮರಿಗೂ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಮತ್ತು ಮುಕ್ತಿ ಪಡೆದ ಎಲ್ಲಾ ಆತ್ಮರಿಗೆ ತಾಯಿಯಾಗಿರುವ ಶ್ರೀ ತತ್ವ ಲಕ್ಷ್ಮಿಗೂ ಆಶ್ರಯದಾತನಾಗಿರುವವನು.
13) ಅವ್ಯಯಃ
ಎಲ್ಲಾ ವಸ್ತುವಿನ ಒಳಗಿದ್ದೂ (ಆಯ) ಏಕರೂಪನಾಗಿ ಇರುವವನು. ಆನೆ ಮತ್ತು ಇರುವೆ ಒಳಗೆ ಇರುವ ಭಗವಂತ ಒಬ್ಬನೇ, ಬೇರೆ ಬೇರೆ ಅಲ್ಲ. ಇಲ್ಲಿ ವ್ಯಯ ಅಂದರೆ ಕಮ್ಮಿ ಆಗುವುದು, ಖರ್ಚು, ನಾಶ ಇತ್ಯಾದಿ. ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ ಕಾಲದಲ್ಲಿ, ಏಕರೂಪವಾಗಿ ಇರುವ ಶಾಶ್ವತ ತತ್ವ ಅವ್ಯಯಃ
14) ಪುರುಷಃ
ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ ಸೂಕ್ತಗಳ ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ ದೊಡ್ಡದು ಅಥವಾ ಅನಂತ. ಬ್ರಹ್ಮಾಂಡ ರಚನೆ ಆಗುವ ಮುಂಚೆ, ಬ್ರಹ್ಮಾಂಡ ಸೃಷ್ಟಿ ಆದ ಮೇಲೂ, ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಅನಂತವಾಗಿ ತುಂಬಿರುವವನು ಪುರುಷಃ .
ಈ ಶಬ್ದವನ್ನು ಪುರು+ಷಃ ಎಂದು ಒಡೆದು ಅರ್ಥೈಸಬಹುದು. ಇಲ್ಲಿ ಪುರು ಅಂದರೆ ಪೂರ್ಣತೆ ಹೊಂದಿದ ದೇಹ (Perfect body), ಷಃ ಅಂದರೆ ನೆಲೆಸಿರುವವನು. ಆದ್ದರಿಂದ ಪುರುಷ ಅಂದರೆ ಪುರದಲ್ಲಿ ಇದ್ದು, ಅದರ ಒಡೆತನವನ್ನು ಹೊಂದಿರುವ ಹಾಗೂ ಇತರ ಎಲ್ಲಾ ಪುರದ ಒಡೆಯ. ಪುರದ ಒಳಗೆ, ಪುರದ ಹೊರಗೆ ತುಂಬಿ ಅನಂತವಾಗಿರುವ ಪರಮ ಪುರುಷ. ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ ಪುರುಷಃ. ಇನ್ನು ಪು+ರು+ಷ ಅನ್ನುವ ಏಕಾಕ್ಷರಗಳಿಗೆ ವಿಶಿಷ್ಟವಾದ ಅರ್ಥವಿದೆ. ‘ಪು’ ಅಂದರೆ ಎಲ್ಲವನ್ನು ಪಾವನ ಗೊಳಿಸುವವನು. ‘ರು’ ಅಂದರೆ ತಾನು ಒಳಗಿದ್ದು, ಶತ್ತ್ರು, ಅಜ್ಞಾನ ಮತ್ತು ದುಃಖ ತಡೆದು, ಜೀವನನ್ನು ಉದ್ಧಾರ ಮಾಡುವವನು. ‘ಷಃ’ ಎಂದರೆ ಎಲ್ಲೆಡೆ ಮಲಗಿದವ! ಮಲಗಿದವ ಅಂದರೆ ಅನಾಯಾಸವಾಗಿ ಎಲ್ಲಾ ಕಾರ್ಯ ಮಾಡುವವ. ಈ ರೀತಿ ಭಗವಂತನ ಪುರುಷಃ ನಾಮ ಅನೇಕ ಅರ್ಥಗಳನ್ನು ಕೊಡುತ್ತದೆ.
15) ಸಾಕ್ಷೀ
ಸಾಕ್ಷೀ ಎಂದರೆ ಎಲ್ಲವನ್ನು ಕಣ್ಣಾರೆ ಕಾಣಬಲ್ಲವ ಎಂದರ್ಥ. ಭಗವಂತನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ. ಭಗವಂತನ ಮುಂದೆ ನಾವೆಲ್ಲರೂ ಬೆತ್ತಲು, ಆತನ ಮುಂದೆ ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬೆತ್ತಲಾಗದೆ ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಆದುದರಿಂದ ಭಗವಂತ ಎಲ್ಲವನ್ನು ಕಾಣಬಲ್ಲ ಸಾಕ್ಷಿ. ಇಲ್ಲಿ ಅಕ್ಷಿಗಳು ಎಂದರೆ ಇಂದ್ರಿಯ ಉಳ್ಳವರು, ಅಂದರೆ ನಾವು-ನೀವು ; ಅಕ್ಷಿಗಳ ಸಖನಾಗಿ ನಮ್ಮನ್ನು ಉದ್ಧಾರ ಮಾಡುವವನು ಸಾಕ್ಷಿ.
16) ಕ್ಷೇತ್ರಜ್ಞಃ
ಕ್ಷೇತ್ರಜ್ಞಃ ಎಂದರೆ ಕ್ಷೇತ್ರವನ್ನು ತಿಳಿದವನು ಎಂದರ್ಥ. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಚತುರ್ಮುಖನ ಕ್ಷೇತ್ರವಾದ ಈ ಬ್ರಹ್ಮಾಂಡದಲ್ಲಿ ಮತ್ತು ಜೀವದ ನೆಲೆಯಾದ ಶರೀರ ನಮ್ಮ ಕ್ಷೇತ್ರ. ಅದ್ದರಿಂದ ಕ್ಷೇತ್ರಜ್ಞಃ ಎಂದರೆ ಈ ಬ್ರಹ್ಮಾಂಡವನ್ನು, ಈ ಶರೀರವನ್ನು ಮತ್ತು ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ ತಿಳಿದವನು.
17) ಅಕ್ಷರಃ
ಅಕ್ಷರ ಅಂದರೆ ನಾಶವಿಲ್ಲದ್ದು. ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಶಾಶ್ವತವಾಗಿ ಧ್ವನಿಮುದ್ರಿತವಾಗಿರುತ್ತದೆ.
ಈ ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಅಕ್ಷರ ನಾಮದಲ್ಲಿ ಕಾಣಬಹುದು. ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence). 'ಕ್ಷರ' ಎಂದರೆ ನಾಶ, ನಾಶವಿಲ್ಲದ್ದು ಅಕ್ಷರ. 'ಕ್ಷರಣ' ಅಂದರೆ ಸುರಿಸುವವನು, ಯುಗ ಯುಗಾಂತರದಲ್ಲಿ ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು ಅಕ್ಷರ.
ಇನ್ನು ಅಕ್ಷ+ರ ಅಕ್ಷರ. ಇಲ್ಲಿ 'ಅಕ್ಷ' ಎಂದರೆ ಇಂದ್ರಿಯ, 'ರ' ಎಂದರೆ ರಮಣ ಅಥವಾ ರಮಿಸುವವನು. ಆದ್ದರಿಂದ ಅಕ್ಷರ ಎಂದರೆ ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು ಎಂದರ್ಥ. ಇಲ್ಲಿ 'ಅ' ಎಂದರೆ ಅಲ್ಲ ಅಥವಾ ಇಲ್ಲ . ಭಗವಂತ ಅಲ್ಲ, ಭಗವಂತ ಇಲ್ಲ! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.
ಮುಂದುವರೆಯುವುದು...
No comments:
Post a Comment