Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -32


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಭೂತಭವ್ಯಭವನ್ನಾಥಃ ಪವನಃ ಪಾವನೋ‌உನಲಃ |
ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || 32 ||

೨೯೧) ಭೂತಭವ್ಯಭವನ್ನಾಥಃ

ಭಗವಂತನ ಈ ನಾಮ ಓಂಕಾರದ ಅರ್ಥವನ್ನು ಕೊಡುತ್ತದೆ. ಭೂತ+ಭವ್ಯ+ಭವತ್+ನಾಥ ಅಂದರೆ ಪ್ರಪಂಚ ಸೃಷ್ಟಿಗೆ ಮೊದಲು, ವರ್ತಮಾನ ಹಾಗು ಸೃಷ್ಟಿ ನಿರ್ಮಾಣವಾದಾಗ, ಹೀಗೆ ಎಲ್ಲಾ ಕಾಲದಲ್ಲೂ ಇರುವಂತಹದ್ದು; ಭೂತ, ಭವ್ಯ ಹಾಗೂ ಭವತಿಗಳ ನಾಥ (ನಿಯಾಮಕ ಶಕ್ತಿ). ಓಂಕಾರದಲ್ಲಿ 'ಅ' ಎಂದರೆ ಅತೀತ ಅಂದರೆ ಭೂತಕಾಲ, 'ಉ' ಎಂದರೆ 'ಉತ್ಪನ್ನವಾದ ಕ್ಷಣ' ಹಾಗೂ 'ಮ್' ಎಂದರೆ ಇನ್ನು ನಿರ್ಮೇಯವಾಗುವ (ಭವಿಷ್ಯತ್) ಕಾಲ. 'ನಾಥ' ಎಂದರೆ ಒಡೆಯ. ನಾವು ಯಾರಿಂದ ಬೇಡಿ ಪಡೆಯಬೇಕೋ ಅವನು 'ನಾಥ'. ನಮ್ಮ ಸಮಸ್ಯೆಗಳಿಗೆ ಏಕೈಕ ಪರಿಹಾರ ಹಾಗೂ ಏನೇ ಕೇಳಿದರೂ ಕೊಡಬಲ್ಲ ಶಕ್ತಿ.

ಇನ್ನೊಂದು ವಿಧದಲ್ಲಿ ಈ ನಾಮವನ್ನು ಹೀಗೆ ಬಿಡಿಸಬಹುದು. ಭೂತ+ಭವಿ+ಅಭವತ್+ನಾಥ. ಭಗವಂತ ಎಲ್ಲರ ಒಡೆಯ. 'ಭೂತಿಗಳು' ಎಂದರೆ ಭಗವಂತನೆಡೆಗೆ ಚಲಿಸುವ ಸಾತ್ವಿಕರು; ಭವಿಗಳು ಎಂದರೆ ಭಗವಂತನಿಂದ ನಿರ್ದಿಷ್ಟ ದೂರದಲ್ಲಿದ್ದು ಅಲ್ಲೇ ಸುತ್ತುವ ಸಂಸಾರಿಗಳು ಹಾಗೂ 'ಅಭವತ್' ಎಂದರೆ ಭಗವಂತನ ವಿರುದ್ದ ಕತ್ತಲಿನೆಡೆಗೆ ಚಲಿಸುವ ತಾಮಸರು; ಎಲ್ಲರಿಗೂ ಆತನೇ ನಾಥ (ಒಡೆಯ).

೨೯೨) ಪವನಃ

'ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ಸನ್ನಿಹಿತನಾಗಿರುವ ಭಗವಂತ ಪವನಃ. ಈ ನಾಮದ ಇನ್ನೊಂದು ಅರ್ಥ 'ಚಲನೆ'. ಪವತೇ ಇತಿ ಪವನಃ ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ 'ಪ' ಎಂದರೆ 'ಪಾಲನೆ'; ನಮ್ಮನ್ನು ಹಾಗೂ ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.

೨೯೩) ಪಾವನಃ

ಭಗವಂತನಿರುವ ಪ್ರತಿಯೊಂದು ವಸ್ತು ಪಾವನವಾಗಿರುತ್ತದೆ. ಪ್ರಾಣದೇವರಲ್ಲಿ ಸನ್ನಿಹಿತನಾಗಿ ಆತ ನಮ್ಮೊಳಗಿರುವ ತನಕ ನಮ್ಮ ದೇಹ ಪಾವನವಾಗಿರುತ್ತದೆ. ಆತ ಹೊರಟುಹೋದ ಮರುಕ್ಷಣದಲ್ಲಿ ನಮ್ಮ ಮೃತದೇಹ 'ಅಪವಿತ್ರವೆನಿಸುತ್ತದೆ'. ಭಗವಂತ ಪಾ+ವನಃ; ಇಲ್ಲಿ 'ಪಾ' ಎಂದರೆ 'ಪಾನ' ಹಾಗೂ ವನಃ ಎಂದರೆ ರಕ್ಷಕ. ಸೂರ್ಯನಲ್ಲಿ ಸನ್ನಿಹಿತನಾಗಿದ್ದು; ಸೂರ್ಯಕಿರಣ ರೂಪದಲ್ಲಿ ಭೂಮಿಯಿಂದ ನೀರನ್ನು ಪಾನ ಮಾಡಿ; ಮೋಡಗಳ ಮುಖೇನ ಮಳೆಸುರಿಸಿ, ನಿರಂತರವಾಗಿ ಋತುಗಳ ಮುಖೇನ ನಮ್ಮನ್ನು ರಕ್ಷಿಸುವ ಭಗವಂತ ಪಾವನ.

೨೯೪) ಅನಲಃ.

ಅನಲ ಎಂದರೆ ಪ್ರಸಿದ್ಧವಾದ ಅರ್ಥ 'ಬೆಂಕಿ'. ಶಾಸ್ತ್ರೀಯ ನಿರ್ವಚನದಲ್ಲಿ ಇದಕ್ಕೆ ವಿಶಿಷ್ಟವಾದ ಅರ್ಥವಿದೆ. ಅನಲ ಎಂದರೆ ಎಷ್ಟು ಕೊಟ್ಟರೂ ಸಾಕು ಎನ್ನದವನು! ನಮ್ಮಲ್ಲಿ ಎರಡನ್ನು ಅನಲ ಎನ್ನುತ್ತಾರೆ. ಒಂದು 'ಬೆಂಕಿ' ಹಾಗೂ ಇನ್ನೊಂದು 'ಮನುಷ್ಯನ ಆಸೆ' ! ಅಗ್ನಿ ಭೂಮಿಯಲ್ಲಿ ಭಗವಂತನ ಆರಾಧನೆಯ ಮುಖ್ಯ ಪ್ರತೀಕ. ಅಗ್ನಿಹೋತ್ರ ಮುಖೇನ ಭಗವಂತನ ಆರಾಧನೆ ಅತ್ಯಂತ ಶ್ರೇಷ್ಠ. ಅಗ್ನಿಗೆ ನಾವು ಎಷ್ಟೇ ಹವಿಸ್ಸುಗಳನ್ನು ಹಾಕಿದರೂ ಅದು ಸ್ವೀಕರಿಸುತ್ತದೆ. ಅಗ್ನಿ ಮಣ್ಣು ಹಾಗೂ ನೀರಿಗಿಂತ ಶುದ್ಧ. ಇದಕ್ಕಾಗಿ ಶಾಸ್ತ್ರದಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ. ಋಗ್ವೇದದಲ್ಲಿ "ಅಗ್ನಿಮೀಳೇ ಪುರೋಹಿತಂ " ಎಂದಿದ್ದಾರೆ. ಅಗ್ನಿಯಲ್ಲಿ ಸನ್ನಿಹಿತನಾಗಿ ಆಹುತಿಯನ್ನು ಸ್ವೀಕರಿಸುವ ಜ್ಯೋತಿರ್ಮಯನಾದ ಭಗವಂತ ಅನಲ. ಇನ್ನು ಅನಲ ಎಂದರೆ ತೃಪ್ತಿ ಇಲ್ಲದವನು ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಭಕ್ತರ ಅಧೀನ; ಭಕ್ತರಿಗೆ ಎಷ್ಟು ಕೊಟ್ಟರೂ ಆತನಿಗೆ ತೃಪ್ತಿ ಇಲ್ಲ! ಆದ್ದರಿಂದ ಭಕ್ತ ಪರಾಧೀನನಾದ ಭಗವಂತ ಅನಲ.

೨೯೫) ಕಾಮಹಾ

ಇಲ್ಲಿ ಕಾಮ ಅಂದರೆ ಕಾ+ಅ+ಮ; 'ಕಾ' ಎಂದರೆ ಕುತ್ಸಿತ, 'ಅ' ಎಂದರೆ ಅಜ್ಞಾನ ಹಾಗೂ 'ಮ' ಎಂದರೆ ಬಯಕೆ. 'ಹ' ಎಂದರೆ 'ಹಂತಿ ಅಥವಾ ನಾಶ'. ಆದ್ದರಿಂದ ಕಾಮಹಾ ಎಂದರೆ ಅಜ್ಞಾನದಿಂದ ಬರುವ ಕೆಟ್ಟ ಬಯಕೆಯನ್ನು ನಾಶ ಮಾಡುವವನು. ಕೆಟ್ಟ ಕಾಮನೆಗಳನ್ನು ಹೊತ್ತ ದುರ್ಜನರನ್ನು ನಾಶಮಾಡುವವನು ಕಾಮಹಾ. ಕೃಷ್ಣನಾಗಿ ಕಂಸ ಹಾಗು ಜರಾಸಂಧನನ್ನು, ರಾಮನಾಗಿ ರಾವಣ-ಕುಂಭಕರ್ಣನನ್ನು, ವರಾಹನಾಗಿ ಹಿರಣ್ಯಾಕ್ಷನನ್ನು, ನರಸಿಂಹನಾಗಿ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ಭಗವಂತ ದುಷ್ಟ ಕಾಮನೆಗಳನ್ನು ಎಂದೂ ನೆರವೇರಿಸಿಲ್ಲ. ಭಕ್ತರ ಅಭೀಷ್ಟವನ್ನು ಪೂರೈಸುವ ಆತನಲ್ಲಿ ನಾವು ನಮ್ಮ 'ಕೆಟ್ಟ ಬಯಕೆಗಳಿಂದ' ಮುಕ್ತಿ ಕರುಣಿಸೆಂದು ಬೇಡಬೇಕು.

೨೯೬) ಕಾಮಕೃತ್

ಸದ್ಬಯಕೆಗಳ ತಂದೆ ಭಗವಂತ ! ಬಯಕೆಗಳ ಅಭಿಮಾನಿ ಕಾಮನನ್ನು ಹುಟ್ಟಿಸಿದವ. ಕೆಟ್ಟ ಕಾಮನೆಗಳ ಅಭಿಮಾನಿ 'ಕಾಲನೇಮಿ' ಕಂಸನನ್ನು ಸಂಹರಿಸಿದ ಭಗವಂತ ಕಾಮಕೃತ್.

೨೯೭) ಕಾಂತಃ

ಭಗವಂತ ಎಲ್ಲರೂ ಬಯಸುವ ಚಲುವ. ಮನ್ಮಥನಿಗೂ ಸೌಂದರ್ಯವನ್ನು ಕೊಟ್ಟ ಭಗವಂತ ಚಲುವರ ಚಲುವ. ಕಂ+ಅಂತಃ - ಕಾಂತಃ. ಇಲ್ಲಿ ಕಂ ಎಂದರೆ ತುದಿ ಆದ್ದರಿಂದ ಕಾಂತಃ ಎಂದರೆ ಆನಂದದ ತುತ್ತತುದಿ. ಭಗವಂತ ಆನಂದದ ಪರಾಕಾಷ್ಟೆ. ಜ್ಞಾನಿಗಳಿಗೆ ಆನಂದವನ್ನು ಕೊಡುವ ಭಗವಂತ ಪಾಪಿಗಳಿಗೆ ಅದರ ಅಂತ! ಪರಂಪರೆಯಲ್ಲಿ ಆನಂದವನ್ನು ಪಡೆದ ಅತೀ ದೊಡ್ಡ ಶಕ್ತಿಯಾದ ಶತಾನಂದನಿಗಿಂತಲೂ ಆಚೆಗಿನ ಶಕ್ತಿಯಾದ ಭಗವಂತ ಕಾಂತ.

೨೯೮) ಕಾಮಃ

ಭಗವಂತ ಎಲ್ಲರೂ ಬಯಸುವಂಥವನು. ಅಳತೆ ಮಾಡಲು ಅಸಾಧ್ಯವಾದ ಜ್ಞಾನಾನಂದಗಳ ಪರಿಪೂರ್ಣ ಸ್ವರೂಪ.

೨೯೯) ಕಾಮಪ್ರದಃ

ಸದ್ಬಯಕೆಗಳನ್ನು ನಮ್ಮ ಕರ್ಮಫಲಕ್ಕನುಸಾರವಾಗಿ ಈಡೇರಿಸುವ, ಎಲ್ಲಾ ವಿವೇಕಿಗಳು ಬಯಸುವ ಅತ್ಯಂತ ಅಮೂಲ್ಯ ವಸ್ತು ಭಗವಂತ. ಭಕ್ತರ ಬಯಕೆಗಳನ್ನು ಈಡೇರಿಸುವಲ್ಲಿ ಭಗವಂತನಿಗೆ ತೃಪ್ತಿಯೇ ಇಲ್ಲ. ತನ್ನ ಸಹಸ್ರಾರು ತೋಳುಗಳಿಂದ ಭಕ್ತಕೋಟಿಯ ಅಭೀಷ್ಟವನ್ನು ಈಡೇರಿಸುವ ಭಗವಂತ ಕಾಮಪ್ರದಃ.

೩೦೦) ಪ್ರಭು

ಭಕ್ತಕೋಟಿಯ ಸರ್ವಾಭೀಷ್ಟವನ್ನು ನೆರವೇರಿಸುವ ಭಗವಂತ ಸರ್ವಸಮರ್ಥ. ಯಾರಿಗೆ ಯಾವ ಕಾಲದಲ್ಲಿ ಏನನ್ನು ಕೊಡಬೇಕು, ಏನನ್ನು ಕೊಡಬಾರದು ಎನ್ನುವುದು ಅವನಿಗೆ ತಿಳಿದಿದೆ. ನಾವು ನಮ್ಮ ಮಕ್ಕಳು ಬಯಸಿದ್ದನ್ನೆಲ್ಲ ಕೊಡುವುದಿಲ್ಲ. ಏಕೆಂದರೆ ಮಕ್ಕಳಿಗೆ ಯಾವುದೂ ಒಳ್ಳೆಯದು ಹಾಗೂ ಯಾವುದು ಕೆಟ್ಟದ್ದು ಎನ್ನುವ ಅರಿವಿರುವುದಿಲ್ಲ. ಹೀಗೆ ಭಗವಂತ ತನ್ನ ಭಕ್ತರ ಅಭೀಷ್ಟವನ್ನು ಅವರ ಒಳಿತಿಗನುಗುಣವಾಗಿ ಕೊಟ್ಟು ಉದ್ಧರಿಸುವ ಪ್ರಭು.

ಮುಂದುವರೆಯುವುದು...

No comments:

Post a Comment