Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -52


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಗಭಸ್ತಿನೇಮಿಃ ಸತ್ತ್ವತ್ಥಃ ಸಿಂಹೋ ಭೂತಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || 52 ||

೪೮೯) ಗಭಸ್ತಿನೇಮಿಃ

'ಗಭಸ್ತಿ' ಎಂದರೆ ಕಿರಣಗಳು, 'ನೇಮಿ' ಎಂದರೆ ಅಚ್ಚು (ಉದಾ: ಗಾಲಿಯ ಅಚ್ಚು). ಗಭಸ್ತಿನೇಮಿ ಎಂದರೆ ಕಿರಣದ ಅಚ್ಚು; ಅಂದರೆ ಪ್ರಕಾಶದ ವಲಯದ ಮಧ್ಯ ನಿಂತವನು. ಭಗವಂತನ ಸುತ್ತ ಕಿರಣಗಳ ಅಚ್ಚು ತುಂಬಿದೆ.ಇದನ್ನೇ ದೇವಸ್ಥಾನದಲ್ಲಿ 'ಪ್ರಭಾವಳಿ' ಎನ್ನುತ್ತಾರೆ.

೪೯೦) ಸತ್ವಸ್ಥಃ

ಭಗವಂತ  ಸತ್ವ ಸ್ವರೂಪನಾಗಿ, ಭಲ ಜ್ಞಾನ ಸ್ವರೂಪನಾಗಿ ಎಲ್ಲರೊಳಗೆ ತುಂಬಿದ್ದಾನೆ. ವಿಶೇಷವಾಗಿ ಸಾತ್ವಿಕ ಕಾರ್ಯಗಳಿಗೆ  ನೆರವಾಗುವ, ಪ್ರತಿಯೊಬ್ಬರೊಳಗಿದ್ದು, ಕತ್ತಲೆಯನ್ನೋಡಿಸುವ ಬೆಳಕಿನ ಪುಂಜನಾದ ಭಗವಂತ ಸತ್ವಸ್ಥಃ.

೪೯೧) ಸಿಂಹಃ

'ಸಿಮ್ಮತಿ ಇತಿ ಸಿಂಹಃ' ; ಇನ್ನೊಂದು ಪ್ರಾಣಿಯನ್ನು ಕೊಂದು ತಿಂದು ಬದುಕುವ ಪ್ರಾಣಿಗಳಲ್ಲಿ ಶ್ರೇಷ್ಠವಾದ ಪ್ರಾಣಿ ಸಿಂಹ. ಇಲ್ಲಿ ಸಿಂಹಃ  ಎಂದರೆ 'ಸಂಹಾರ ಮಾಡುವವ' ಎಂದರ್ಥ. ಸರ್ವ ಸಂಹಾರಕ ಭಗವಂತ ನಿಜವಾದ ಸಿಂಹ. ನಮ್ಮಲ್ಲಿರುವ ದೌರ್ಬಲ್ಯ, ದೋಷ, ಎಲ್ಲವನ್ನೂ ನಾಶ ಮಾಡುವವನೂ ಅವನೇ. ಈ ಕಾರಣಕ್ಕಾಗಿ ಭಗವಂತನ ಸಿಂಹ ರೂಪದ ಉಪಾಸನೆ ಮಾಡುತ್ತಾರೆ. "ನನ್ನಲ್ಲಿರುವ ತಮೊಗುಣವನ್ನು, ದೋಷವನ್ನು, ಕಾಮ-ಕ್ರೋಧ-ಮದ-ಮತ್ಸರ-ಲೋಭವನ್ನು ನಾಶಮಾಡಿ, ಸಂಸಾರ ಬಂಧನದಿಂದ ಪಾರುಮಾಡು" ಎಂದು ನರಸಿಂಹ ರೂಪದ ಭಗವಂತನ ಉಪಾಸನೆ ಮಾಡುತ್ತಾರೆ. ಸಾತ್ವಿಕ ಜೀವರೊಳಗಿದ್ದು, ಮುಕ್ತಿಪ್ರದನಾಗಿ, ಸಂಸಾರ ಬಂಧನದ ಸಂಹಾರ ಮಾಡುವ ಭಗವಂತ ಸಿಂಹಃ.

೪೯೨) ಭೂತಮಹೇಶ್ವರಃ

ಈ ನಾಮವನ್ನು ಈ ರೀತಿ ಬಿಡಿಸಬಹುದು. ಭೂತ+ಮಹಾ+ಈಶ+ವರ. ಅಂದರೆ ನಮ್ಮನ್ನು ನಿಯಂತ್ರಿಸುವ ಭೂತಗಳಿಗೆ  ಮಹಾ ಈಶ-ಮಹೇಶ್ವರ, ಅವನಿಗೂ ವರವಾದ ಭಗವಂತ ಮಹೇಶ್ವರಃ.  ಪ್ರಪಂಚ ಸೃಷ್ಟಿಗೆ ಕಾರಣವಾದ ಪಂಚಭೂತಗಳೇ  ಸರ್ವ ಭೂತಗಳು (ಮಣ್ಣು, ನೀರು, ಬೆಂಕಿ,ಗಾಳಿ ಮತ್ತು  ಆಕಾಶ). ಪ್ರಪಂಚದ ಎಲ್ಲಾ ರೂಪಗಳೂ ಪಂಚ ಭೂತದ ಒಂದು ಸಮಷ್ಟಿ. ಆದ್ದರಿಂದ ಯಾರಾದರೂ ಸತ್ತಾಗ 'ಪಂಚಭೂತಗಳಲ್ಲಿ ಲೀನವಾದ (ಪಂಚತ್ವಂ ಗತಃ)' ಎನ್ನುತ್ತೇವೆ. ಭೂಮಿಯ ಒಡೆಯ ಶನಿ, ಶನಿಯ ಮೇಲೆ ಇರುವ ದೇವತೆ ಪ್ರಥ್ವೀದೇವತೆ ಮಹೇಶಳು; ನೀರಿನ ಈಶ ಬುಧ, ಬುಧನ ಮೇಲೆ ವರುಣ ಮಹೇಶ; ಬೆಂಕಿಯ ಒಡೆಯ ಪಾಲಕ, ಅವನ ಮೇಲಿರುವ ವೈಶ್ವಾನರ ಮಹೇಶ; ಗಾಳಿಯ ಒಡೆಯ ಮರೀಚಿ, ಅವನ ಮೇಲಿರುವ ಪ್ರಭವವಾಯು ಮಹೇಶ; ಆಕಾಶಕ್ಕೆ ಗಣಪತಿ ಒಡೆಯ ಅವನ ಮೇಲೆ ಪಾರ್ವತಿ. ಈ ಎಲ್ಲಾ ಭೂತ ಮಹೇಶರಿಗೆ ಅಧಿಪತಿ ಶಿವ 'ಸರ್ವ ಭೂತ ಮಹೇಶ'. ಇನ್ನೊಬ್ಬ ಸರ್ವ ಭೂತ ಮಹೇಶ ಮುಖ್ಯ ಪ್ರಾಣ. ಈ ಸರ್ವ ಭೂತ ಮಹೇಶರಿಗೆ  ವರನಾದ ಭಗವಂತ ಭೂತಮಹೇಶ್ವರಃ.

೪೯೩) ಆದಿದೇವಃ

ಎಲ್ಲಕ್ಕಿಂತ ಮೊದಲು ಇರುವವ; ಈ ಪ್ರಪಂಚ ಇರುವಾಗಲೂ ಇಲ್ಲದಾಗಲೂ ಇರುವವ ಆದಿದೇವ. ಅನಾದಿನಿತ್ಯವಾದ ಜೀವ ಹಾಗೂ ಜೀವ ಸ್ವಭಾವಕ್ಕನುಗುಣವಾಗಿ ಭಗವಂತನ ಸೃಷ್ಟಿಯಲ್ಲಿ ಜೀವದ ಬೆಳವಣಿಗೆಯಾಗುತ್ತದೆ. ಅವನು ಎಲ್ಲಾಕ್ಕೂ ಕಾರಣ ಹಾಗೂ ಅದು ಅವನಿಗೆ ಒಂದು ಕ್ರೀಡೆ. ಎಲ್ಲಕ್ಕಿಂತ ಎತ್ತರದಲ್ಲಿರುವವನು; ಆದಿಯಿಂದ ಅನಾದಿಕಾಲದವರೆಗೆ ಜಗತ್ತಿನ ಎಲ್ಲಾ ವ್ಯವಹಾರವನ್ನು ನೆಡೆಸತಕ್ಕಂತಹ, ಎಲ್ಲವುದರ ಒಳಗಿದ್ದು ಎಲ್ಲಾ ಕ್ರಿಯೆಗಳನ್ನು ನಡೆಸುವ ಭಗವಂತ ಆದಿದೇವಃ.

೪೯೪) ಮಹಾದೇವಃ

'ದೇವ' ಎಂದರೆ ದೇವತೆಗಳು. ಈ ಜಗತ್ತಿನ ನಿಯಾಮಕ ಶಕ್ತಿಗಳಾದ ದೇವತೆಗಳಿಗೆ ಹಿರಿದೈವನಾದ ಭಗವಂತ ಮಹಾದೇವಃ

೪೯೫) ದೇವೇಶಃ

ಮೇಲೆ ಹೇಳಿದಂತೆ 'ದೇವ' ಎಂದರೆ ದೇವತೆಗಳು; 'ಈಶ' ಎಂದರೆ ಒಡೆಯ. ಸರ್ವ ದೇವತೆಗಳ ಒಡೆಯನಾದ ಭಗವಂತ ದೇವೇಶಃ.

೪೯೬) ದೇವಭೃದ್ಗುರುಃ

ಸಮಸ್ತ ದೇವತೆಗಳನ್ನು, ಜ್ಞಾನಿಗಳನ್ನು ಭರಣೆ ಮಾಡಿದ ಭಗವಂತ ಜಗದ್ಗುರು. ಹಾಗಾಗಿ "ಕೃಷ್ಣಂ ವಂದೇ ಜಗದ್ಗುರುಮ್ " ಎನ್ನುತ್ತಾರೆ. ಭಗವಂತ ಲೋಕಗುರು; ದೇವತೆಗಳಿಗೆ, ಜ್ಞಾನಿಗಳಿಗೆ,ಬ್ರಹ್ಮಾದಿಗಳಿಗೆ, ಶ್ರಿಲಕ್ಷ್ಮಿಗೆ, ಎಲ್ಲರಿಗೂ ಆತ ಗುರು. ಎಲ್ಲಾ ಗುರುವಿನೊಳಗಿದ್ದು ಜ್ಞಾನ ಕೊಡುವವನೂ ಅವನೇ. ಹೀಗೆ ಬ್ರಹ್ಮಾದಿ ದೇವತೆಗಳನ್ನು, ಜ್ಞಾನಿಗಳನ್ನು ಸಲಹುವ ಜಗದ್ಗುರು ಭಗವಂತ ದೇವಭೃದ್ಗುರುಃ.

ಮುಂದುವರೆಯುವುದು...

No comments:

Post a Comment