ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ವೇದಾಃ ಸ್ವಂಗೋsಜಿತಃ ಕೃಷ್ಣೋ ದೃಢಃ ಸಂಕರ್ಷಣೋsಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಃ || 59 ||
೫೫೧) ವೇಧಾಃ
'ವಿದತ್ತೇ ಇತೀ ವೇದಾಃ'; ವಿಶಿಷ್ಟವಾದ ಧಾರಣೆ ಹಾಗೂ ಪೋಷಣೆಯನ್ನು ಜಗತ್ತಿಗೆ ಕೊಡುವವನು, ಜಗತ್ತನ್ನು ಹೊರಗಿನಿಂದ ಧಾರಣೆ ಮಾಡಿದ, ಅಂತರಂಗದೊಳಗಿದ್ದು ಅದನ್ನು ಪೋಷಣೆ ಮಾಡುವ ಜಗತ್ತಿನ ಜನಕ.
೫೫೨) ಸ್ವಾಂಗಃ
ನಮ್ಮ ದೇಹ ಪಂಚಭೂತಗಳಿಂದಾದದ್ದು, ಆದರೆ ಭಗವಂತ ಜ್ಞಾನಾನಂದ ಸ್ವರೂಪಭೂತವಾದ ಅಂಗಾಂಗಗಳುಳ್ಳವನು. ಈ ಕಾರಣದಿಂದ ನಮ್ಮ ಪಾಂಚಭೌತಿಕ ಇಂದ್ರಿಯ ಆತನನ್ನು ಗ್ರಹಿಸಲಾರದು. ಇಂತಹ ಸ್ವರೂಪಭೂತವಾದ ಅಂಗಾಂಗಗಳುಳ್ಳ ಭಗವಂತ ಸ್ವಾಂಗಃ.
೫೫೩) ಅಜಿತಃ
ಭಗವಂತನನ್ನು ಯಾರೂ ಸೋಲಿಸಲಾರರು ಅವನು ಅಜಿತಃ, ಆದರೆ ಭಕ್ತ ಪರಾಧೀನನಾದ(ಅಹಂ ಭಕ್ತಪರಾಧೀನಃ) ಭಗವಂತ ಕೆಲವೊಮ್ಮೆ ಸೋತಂತೆ ತೋರಿಸಿಕೊಳ್ಳುತ್ತಾನೆ.
೫೫೪) ಕೃಷ್ಣಃ
'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸ, ಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯ ಮೂರ್ತಿ ಭಗವಂತ ಕೃಷ್ಣಃ.
ಕೃಷ್ಣ ಎನ್ನುವುದು ಕೃಷಿ+ಣ ಎನ್ನುವ ಎರಡು ಶಬ್ದಗಳ ಸಂಯುಕ್ತ ರೂಪ . ಕೃಷಿ ಎಂದರೆ ಭೂಮಿ, ಕೃಷಿ ಎಂದರೆ ನಿರ್ದೊಶಿತ್ವ. ಭಗವಂತ ದೋಷರಹಿತವಾದ, ಪರಿಶುದ್ಧವಾದ ಅಸ್ಥಿತ್ವವುಳ್ಳ ಭಲಾನಂದಸ್ವರೂಪ.
೫೫೫) ದೃಢಃ
ಭಗವಂತನ ವ್ಯಕ್ತಿತ್ವವನ್ನು ಯಾರೂ ಬದಲಿಸಲಾರರು, ಆತ ದೃಢ. ಅನಾದಿ ಅನಂತಕಾಲದಲ್ಲಿ ದೃಢವಾದ, ಏಕರೂಪದ, ಎಂದೂ ಬದಲಾಗದ, ಚಪಲ-ಚಾಂಚಲ್ಯವಿಲ್ಲದ, ನಿಶ್ಚಿತವಾದ ವ್ಯಕ್ತಿತ್ವವುಳ್ಳ ಭಗವಂತ ದೃಢ.
೫೫೬) ಸಂಕರ್ಷಣಃ
ಸಂಕರ್ಷಣ ಎಂದರೆ ಶೇಷ. ಶೇಷನಲ್ಲಿ ಅಂತರ್ಗತನಾಗಿರುವ ಭಗವಂತ, ಸರ್ವ ಗ್ರಹ-ಗೊಲಗಳನ್ನು ಸೆಳೆದು ಹಿಡಿದಿಟ್ಟ ವಿಶ್ವಧಾರಕ ಶಕ್ತಿ.
೫೫೭) ಅಚ್ಯುತಃ
ಚ್ಯುತಿ ಇಲ್ಲದೆ, ಅಖಂಡವಾಗಿ ಸೃಷ್ಟಿ-ಸ್ಥಿತಿ-ಸಂಹಾರ ಕಾಲದಲ್ಲಿ ಅನಂತನಾಗಿ ಇರುವ ಭಗವಂತ ಅಚ್ಯುತಃ. ಆತನಿಗೆ ಎಂದೂ ಅಳಿವಿಲ್ಲ.
೫೫೮) ವರುಣಃ
ಮಿತ್ರ ಹಗಲಿನ ಸೂರ್ಯನಾದರೆ ವರುಣ ರಾತ್ರಿಯ ಸೂರ್ಯ, ಇದನ್ನೇ "ಶಂ ನೋ ಮಿತ್ರಃ ಶಂ ವರುಣಃ" ಎಂದಿದ್ದಾರೆ. ಮಿತ್ರನಾಗಿ , ವರುಣನಾಗಿ ಜಗತ್ತಿನ ಹಗಲು ರಾತ್ರಿಯನ್ನು ನಿಯಂತ್ರಿಸುವ ಭಗವಂತ 'ವರುಣಃ' ಜೀವರನ್ನು ಸಂಸಾರವೆಂಬ ಮಾಯೆಯ ಆವರಣದಲ್ಲಿಡುವ ಹಿರಿಯ ಆನಂದ ಸ್ವರೂಪ ಭಗವಂತ ವರುಣಃ.
೫೫೯) ವಾರುಣಃ
ನೀರಿನ, ಸಮುದ್ರದ, ಪಶ್ಚಿಮದಿಕ್ಕಿನ ದೇವತೆ ವರುಣ. ಇಂತಹ ವರುಣನಲ್ಲಿದ್ದು, ಸಮಸ್ಥ ಕಾರ್ಯವನ್ನು ನಿರ್ವಹಿಸುವ, ಶತ್ರುಗಳನ್ನು ತಡೆಯಬಲ್ಲ ಭಲದ ಮೂರ್ತಿ, ಕ್ಷೀರಸಾಗರವಾಸಿ ಭಗವಂತ ವಾರುಣಃ.
೫೬೦) ವೃಕ್ಷಃ
ವೃಕ್ಷ ಎಂದರೆ ಮರ, ಯಾವುದನ್ನು ಕಡಿಯುತ್ತೇವೋ(ಛೇದನೆ) ಅದು ವೃಕ್ಷ. ಸಂಸಾರವೆಂಬ ಮಹಾ ವೃಕ್ಷವನ್ನು ಕಡಿದು ಮುಕ್ತಿ ಕೊಡುವ ನಿರ್ವೀಕಾರ ಹಾಗು ನಿಶ್ಚಲ ಮೂರ್ತಿ ಭಗವಂತ ವೃಕ್ಷಃ.
೫೬೧) ಪುಷ್ಕರಾಕ್ಷಃ
ಪುಷ್ಕರಾಕ್ಷಃ ಎಂದರೆ ಪುಷ್ಕರದಂತೆ(ತಾವರೆಯಂತೆ) ಅಕ್ಷ ಉಳ್ಳವ ಅಥವಾ ತಾವರೆಗಣ್ಣಿನವ. ದೇಹದಲ್ಲಿ ಕಣ್ಣು ಆಕರ್ಷಣೆಯ ಕೇಂದ್ರ. ಭಗವಂತ ಅಗಲವಾದ ಅರಳುಗಣ್ಣಿನ ಸೌಂದರ್ಯಮೂರ್ತಿ. ಕೆಂದಾವರೆ ಬಣ್ಣ ನಸುಗೆಂಪು. ಆರೋಗ್ಯವಾಗಿರುವ ವ್ಯಕ್ತಿಯ ಕಣ್ಣು ಹಾಗಿರುತ್ತದೆ. ರಕ್ತ ಕೆಂಪಾದ ಅಥವಾ ಬಿಳಿಚಾದ ಕಣ್ಣು ಆರೋಗ್ಯದ ಲಕ್ಷಣವಲ್ಲ. ನಸುಗೆಂಪು ವಾತ್ಸಲ್ಯವನ್ನು ಬಿಂಬಿಸುತ್ತದೆ. ಭಕ್ತವಾತ್ಸಲ್ಯವನ್ನು ಬಿಂಬಿಸುವ ಕಣ್ಣುಗಳುಳ್ಳ ವಾತ್ಸಲ್ಯಮೂರ್ತಿ ಭಗವಂತ ಪುಷ್ಕರಾಕ್ಷಃ.
೫೬೨) ಮಹಾಮನಾಃ
ಮನಸ್ಸು ಎಂದರೆ 'ಮನನ'. ಒಂದು ವಸ್ತುವನ್ನು ತಳಸ್ಪರ್ಶಿಯಾಗಿ ತಿಳಿಯುವುದು 'ಅರಿವು'. ಇಂತಹ ಮಹತ್ತರವಾದ ಮನನ ಉಳ್ಳವನು ಮಹಾಮನಃ. ಭಕ್ತರು ಬಯಸಿದ್ದೆಲ್ಲವನ್ನೂ ಕೊಡುವ ಮನೋವೈಶಾಲ್ಯವುಳ್ಳ ಸರ್ವಜ್ಞ ಭಗವಂತ ಮಹಾಹಲಾಯುಧಃ.
ಮುಂದುವರೆಯುವುದು...
No comments:
Post a Comment