Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -43


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋsನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ || 43 ||

೩೯೬) ರಾಮಃ

ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದ ಸ್ವರೂಪ ಹಾಗೂ ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣ ಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರೂ ಕೂಪಗೊಂಡಾಗಲೂ ಸಹ ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ, ಬದಲಿಗೆ "ಸಲಿಗೆಯಿಂದ ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಭಾಂದವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ.

ರಂ+ಅಮ, ಇಲ್ಲಿ ರಂ 'ಅಗ್ನಿಬೀಜ' 'ಅಮ' ಎಂದರೆ ಅಜ್ಞಾನ. ಆದ್ದರಿಂದ ರಾಮ ಎಂದರೆ ಅಜ್ಞಾನವನ್ನು ಸುಟ್ಟುಬಿಡುವ ಶಕ್ತಿ. ಆದ್ದರಿಂದ ನಿರಂತರ ರಾಮ ಜಪದಿಂದ ನಮ್ಮ ಅಜ್ಞಾನ ಹಾಗು ದುರ್ಗುಣಗಳು ಸುಟ್ಟು ಹೋಗುತ್ತವೆ.

೩೯೭) ವಿರಾಮಃ

ಒಬ್ಬೊಬ್ಬರಲ್ಲಿ ಒಂದೊಂದು ರೀತಿ ವಿಹರಿಸುವ, ಒಂದೊಂದು ಅವತಾರದಲ್ಲಿ ಒಂದೊಂದು ರೀತಿ ನಡೆದುಕೊಳ್ಳುವ, ವೈವಿಧ್ಯವಾಗಿ ಆನಂದವನ್ನು ಹಂಚುವ ಶಕ್ತಿ ವಿರಾಮಃ. ವಿರ+ಆಮಃ; ಇಲ್ಲಿ 'ವಿರರು' ಎಂದರೆ ಮುಕ್ತಿ ಯೋಗ್ಯರು; 'ಆಮ' ಎಂದರೆ ಜ್ಞಾನ. ಮುಕ್ತಿಯೋಗ್ಯರಿಗೆ ಪೂರ್ಣ ಜ್ಞಾನವನ್ನು ಕರುಣಿಸಿ ಉದ್ಧಾರ ಮಾಡುವ ಭಗವಂತ ವಿರಾಮಃ.

೩೯೮) ವಿರಜಃ

'ರಜ' ಎಂದರೆ ಕೊಳೆ. ವಿರಜಃ ಎಂದರೆ ಯಾವ ಕೊಳೆಯ ಸ್ಪರ್ಶವೂ ಇಲ್ಲದ ನಿತ್ಯ ಪವಿತ್ರವಾದ ಪರಿಶುದ್ಧ ವಸ್ತು. ಇದಕ್ಕೆ ಉತ್ತಮ ಉದಾಹರಣೆ 'ಬೆಂಕಿ'. ಬೆಂಕಿ ಎಂದೆಂದೂ ಪರಮ ಪವಿತ್ರ ಹಾಗೂ ಬೆಂಕಿಗೆ ಯಾವ ವಸ್ತುವನ್ನು ಹಾಕಿದರೂ ಅದು ಪವಿತ್ರವಾಗುತ್ತದೆ. ಭಗವಂತನಿಂದ ಸೃಷ್ಟಿಯಾದ 'ಬೆಂಕಿಗೆ' ಇಂತಹ ಗುಣವಿರಬೇಕಾದರೆ ಇನ್ನು ಭಗವಂತ ಎಷ್ಟು ಪವಿತ್ರ ಎನ್ನುವುದನ್ನು ನಾವು ಊಹಿಸಬಹುದು.ಹೀಗೆ ಅಪವಿತ್ರವಾಗದ,ನಿತ್ಯ ಶುದ್ಧ ಸ್ವರೂಪ ಭಗವಂತ ವಿರಜಃ.

೩೯೯) ಮಾರ್ಗಃ

ಇಲ್ಲಿ ಮಾರ್ಗಃ ಎಂದರೆ 'ಅನ್ವೇಷಣ'; ಎಲ್ಲರೂ ಹುಡುಕುತ್ತಿರುವ ವಸ್ತು. ವೇದಗಳಿಗೆ ಪೂರ್ತಿ ಎಟುಕದ, ವೇದಾಭಿಮಾನಿ ದೇವತಗಳಿಗೆ ಇನ್ನೂ ಪೂರ್ತಿ ತಿಳಿಯಲಾಗದ, ಎಷ್ಟು ಹುಡುಕಿದರೂ ಬಾಕಿ ಉಳಿಯುವ ಭಗವಂತ ಮಾರ್ಗಃ.

೪೦೦) ನೇಯಃ
ಎಷ್ಟು ಹುಡುಕಿದರೂ ಸಿಗದ ಭಗವಂತ ತನ್ನ ಭಕ್ತರು ಭಕ್ತಿಯಿಂದ ಕರೆದಾಗ ಕರೆದಲ್ಲಿಗೆ ಬಂದು ಸಲಹುತ್ತಾನೆ. ಇಂತಹ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಭಗವಂತ ನೇಯಃ.

೪೦೧) ನಯಃ

ಎಲ್ಲರನ್ನೂ ಪ್ರೇರೇಪಿಸುವ, ಎಲ್ಲ ನೀತಿ-ನಿಯಮಗಳನ್ನು ಮಾಡುವ ಸ್ವರೂಪ ನಯಃ.

೪೦೨) ಅನಯಃ

ಎಲ್ಲರನ್ನೂ ನಿಯಂತ್ರಿಸುವ, ಅಜ್ಞಾನಿಗಳ ಅರಿವಿಗೆ ಬರದ, ಜ್ಞಾನಿಗಳ ಬಳಿ ಸದಾ ಮಗುವಿನಂತಿರುವ, ಯಾರ ನೀತಿ-ನಿಯಮಗಳ ಕಟ್ಟುಪಾಡಿಗೆ ಸಿಲುಕದ, ತನ್ನ ನೀತಿಗೆ ತಾನು ಬದ್ಧನಾಗಿರುವ ಭಗವಂತ ಅನಯಃ.

೪೦೨) ವೀರಃ

ಇಡೀ ಜಗತ್ತನ್ನು ತನ್ನ ಪರಾಕ್ರಮದಿಂದ ಮಣಿಸಬಲ್ಲ ಶೌರ್ಯ ಉಳ್ಳವನು ವೀರಃ. ಈ ನಾಮವನ್ನು ಬಿಡಿಸಿ ನೋಡಿದಾಗ ವೀ+ಈರ ಎಂದಾಗುತ್ತದೆ. ವೀ ಎಂದರೆ ವಿಶಿಷ್ಟ, ಆದ್ದರಿಂದ ವೀರಃ ಎಂದರೆ ವಿಶಿಷ್ಟ ಜ್ಞಾನವನ್ನು ಪಡೆದ ಅಪರೋಕ್ಷ ಜ್ಞಾನಿಗಳನ್ನೂ ಪ್ರೇರೇಪಿಸುವ ಭಗವಂತ ವೀರಃ. 'ಈರ' ಎಂದರೆ ಅಪರೋಕ್ಷ ಜ್ಞಾನಿಗಳಲ್ಲಿ ಅತೀ ಎತ್ತರದಲ್ಲಿರುವ ಪ್ರಾಣ ದೇವರು. ಇಂತಹ ಪ್ರಾಣದೇವರಿಗೆ ಜ್ಞಾನದ ವಿಶಿಷ್ಟ ಸ್ಥಾನವನ್ನು ಕೊಟ್ಟ ಭಗವಂತ ವೀರಃ. ಸಮಸ್ತ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು 'ವೀ' (ಹಕ್ಕಿ) ಎನ್ನುತ್ತಾರೆ. ಗರುಡ ವಾಹನನಾಗಿ ಬರುವ ವೇದ ವೇದ್ಯನಾದ ಭಗವಂತನನ್ನು ತಿಳಿಯಬೇಕಾದರೆ ಮೊದಲು ವೇದವನ್ನು ತಿಳಿಯಬೇಕು. ಇಂತಹ ಭಗವಂತ ವೀರಃ.

೪೦೪) ಶಕ್ತಿಮತಾಂ ಶ್ರೇಷ್ಠಃ

ಜಗತ್ತಿನಲ್ಲಿರುವ ಸರ್ವ ಶಕ್ತಿಗಳ ಮೂಲ ಭಗವಂತ. ಆರ್ಥಿಕ ಶಕ್ತಿ , ದೈಹಿಕ ಶಕ್ತಿ, ಬೌದ್ಧಿಕ ಶಕ್ತಿ, ಜನಶಕ್ತಿ, ಹೀಗೆ ಯಾವುದೇ ರೂಪದ ಶಕ್ತಿಯಿರಲಿ ಅದನ್ನು ನಮಗೆ ಕೊಟ್ಟವನು ಭಗವಂತ. ಭಗವಂತನ ಶಕ್ತಿ ನಮ್ಮಂತೆ ಬಾಹ್ಯವಲ್ಲ. ಆತ ಸ್ವರೂಪಭೂತವಾದ, ಶಾಶ್ವತವಾದ, ಅನಂತವಾದ, ಸ್ಥಿರವಾದ ಶಕ್ತಿ. ನಾವು ಭಗವಂತ ನಮಗೆ ಕೊಟ್ಟ ಶಕ್ತಿಯ ಅಹಂಕಾರದಲ್ಲಿ ಬದುಕುತ್ತೇವೆ, ಆದರೆ ನಮ್ಮ ಯಾವ ಶಕ್ತಿಯೂ ಸ್ಥಿರವಲ್ಲ. ಇಡೀ ಜಗತ್ತನ್ನು ಗೆದ್ದವ ಕೂಡಾ ಒಂದು ದಿನ ಸಾವಿಗೆ ಸೋಲಬೇಕು. ಭಗವಂತನ ಕಾಲ ಚಕ್ರ ಬ್ರಹ್ಮಾದಿ ದೇವತೆಗಳನ್ನೂ ಬಿಡುವುದಿಲ್ಲ. ಆದ್ದರಿಂದ ನಮ್ಮ ಶಕ್ತಿ ಕ್ಷಣಿಕ. ಹೀಗೆ ಶಕ್ತಿವಂತರಿಗೆಲ್ಲ ಹಿರಿಯ ಶಕ್ತಿಶಾಲಿ, ಮೂಲಶಕ್ತಿ ಸ್ವರೂಪ ಭಗವಂತ ಶಕ್ತಿಮತಾಂ ಶ್ರೇಷ್ಠಃ.

೪೦೫) ಧರ್ಮಃ

ಯಾವುದು ನಮ್ಮ ಬದುಕಿಗೆ ಆಧಾರವಾಗಿದೆಯೋ ಅದು ಧರ್ಮ; ಆದ್ದರಿಂದ ನಿಜವಾದ ಧರ್ಮ ಭಗವಂತ. ಭಗವಂತ ಒಂದು ವಸ್ತುವಿನ ಸ್ವರೂಪಭೂತವಾದ ಗುಣವನ್ನು ಅಭಿವ್ಯಕ್ತ ಮಾಡಿಸುತ್ತಾನೆ ಹೊರತು ಅಲ್ಲಿ ಇಲ್ಲದ ಗುಣವನ್ನಲ್ಲ. ವೈವಿಧ್ಯತೆ ಪ್ರಪಂಚ ಸೃಷ್ಟಿಯ ಸಹಜ ಕ್ರಿಯೆ. ವಸ್ತುವಿನ ಸಹಜ ಗುಣಕ್ಕನುಗುಣವಾಗಿ ಪ್ರಪಂಚ ಸೃಷ್ಟಿ ಮಾಡಿದ ಭಗವಂತ ಧರ್ಮಃ.

೪೦೬) ಧರ್ಮವಿದುತ್ತಮಃ

ನಿಜವಾದ ಧರ್ಮಜ್ಞ ಭಗವಂತನೊಬ್ಬನೇ. ಏಕೆಂದರೆ ಧರ್ಮ ಕಾಲ ಬಾಧಿತ. ಒಂದು ಕಾಲದ ಧರ್ಮ ಇನ್ನೊಂದು ಕಾಲದಲ್ಲಿ ಅಧರ್ಮವಾಗಬಹುದು. ಒಂದು ವ್ಯಕ್ತಿಗೆ ಧರ್ಮವಾಗಿರುವ ವಿಷಯ ಇನ್ನೊಬ್ಬನಿಗೆ ಅಧರ್ಮವಾಗಬಹುದು, ಒಂದು ದೇಶದ ಧರ್ಮ ಇನ್ನೊಂದು ದೇಶಕ್ಕೆ ಅಧರ್ಮವಾಗಬಹುದು. ಆದ್ದರಿಂದ ಧರ್ಮ ಯಾವುದು ಎಂದು ಸಮಷ್ಟಿಯಾಗಿ ಹೇಳಲಾಗದು. ಧರ್ಮಕ್ಕೆ ಯಾವುದೇ ಮಾನದಂಡವಿಲ್ಲ. ಧರ್ಮ ಯಾವುದು ಎನ್ನುವುದು ಹೊರನೋಟದಿಂದ ಹೇಳಲಾಗದು. ಯಾವ ಕ್ರಿಯೆಯಿಂದ ನಮ್ಮ ಮನಸ್ಸು ಭಗವಂತನೆಡೆಗೆ ಒಲಿಯುತ್ತದೋ ಅದು ಧರ್ಮ. ಯಾವುದರಿಂದ ನಾವು ಭಗವಂತನನ್ನು ಮರೆಯುತ್ತೆವೋ ಅದು ಅಧರ್ಮ. ಮಹಾಭಾರತದಲ್ಲಿ ಶ್ರೀಕೃಷ್ಣ ಧರ್ಮವನ್ನು ವಿಶಿಷ್ಟವಾಗಿ ಎಲ್ಲರಿಗೂ ತಿಳಿಹೇಳಿದ್ದನ್ನು ನಾವು ಕಾಣುತ್ತೇವೆ.ಇನ್ನೊಬ್ಬರ ಒಳಿತಿಗಾಗಿ ನಾವು ಸುಳ್ಳು ಹೇಳಿದರೆ ಅದು ಅಧರ್ಮವಲ್ಲ ಧರ್ಮ ಎನ್ನುವ ವಿಷಯ ಕೃಷ್ಣ ಹೇಳುವ ತನಕ ಇನ್ಯಾರಿಗೂ ತಿಳಿದಿರಲಿಲ್ಲ. ಧರ್ಮವನ್ನು ತಿಳಿದವರಲ್ಲಿ ಉತ್ತಮನು ಭಗವಂತ. ಈ ಕಾರಣದಿಂದ ಧರ್ಮವಿದುತ್ತಮಃ ಎನ್ನುವುದು ಭಗವಂತನಿಗೆ ಅನ್ವರ್ಥ ನಾಮ.

ಮುಂದುವರೆಯುವುದು...

No comments:

Post a Comment