Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -26


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ || 26 ||

೨೩೮) ಸುಪ್ರಸಾದ.

ಪ್ರಸಾದ ಎಂದರೆ ಒಳಮನಸ್ಸಿನ ಆನಂದ. ಪೂರ್ಣಪ್ರಮಾಣದ ಸ್ವರೂಪಾನಂದನಾದ ಭಗವಂತ ಸುಪ್ರಸಾದ. ಭಗವಂತನಿಗೆ ದುಃಖದ ಸ್ಪರ್ಶವೇ ಇಲ್ಲ. ಆತನನ್ನು ಸ್ವಚ್ಛ ಮನಸ್ಸಿನಿಂದ, ಫಲಾಪೇಕ್ಷೆ ಇಲ್ಲದೆ ಉಪಾಸನೆ ಮಾಡುವವರಿಗೆ ಸದಾ ಆನಂದವನ್ನು ಕೊಡುತ್ತಾನೆ. 'ಸುಪ್ರ' ಎಂದರೆ ಪೂರ್ಣತೆ ಪಡೆದವರು ಅಥವಾ ಜ್ಞಾನಿಗಳು. ಇಂತಹ ಜ್ಞಾನಿಗಳನ್ನು ಸಂಸಾರಬಂಧನದಿಂದ ಪಾರು ಮಾಡುವವನು ಸುಪ್ರಸಾದಃ. ಸುಪ್ರ+ಸಾದ - ಅಂದರೆ ಆನಂದದಿಂದ ಸಂಹಾರ ಮಾಡುವವನು! ಭಗವಂತ ಸಂಹಾರ ಮಾಡುವುದು ಬೇಸರದಿಂದ ಹಾಗೂ ದ್ವೇಷದಿಂದಲ್ಲ. ಸಂಹಾರ ಆತನ ಕರುಣಾಮಯ ಕರ್ಮ ಹಾಗೂ ಆತ ಅದನ್ನು ಯಾವಾಗಲೂ ಆನಂದ ಸ್ವರೂಪನಾಗಿ ಮಾಡುತ್ತಾನೆ.

೨೩೯) ಪ್ರಸನ್ನಾತ್ಮಾ

ತಿಳಿಯಾದ ಬಗೆಯವನು ಹಾಗೂ ರೋಷ ರಹಿತನು ಆದ ಭಗವಂತ ಪ್ರಸನ್ನಾತ್ಮಾ. ಭಗವಂತ ಭಕ್ತರಿಗೆ ಎಂದೂ ರೋಷಚಿತ್ತನಲ್ಲ. ಎಂದೆಂದೂ ಪ್ರಸನ್ನತೆಯ ಭಾವದಿಂದ ಸದಾ ಭಕ್ತರ ರಕ್ಷಣೆ ಮಾಡುವ ಭಗವಂತ ಪ್ರಸನ್ನಾತ್ಮಾ. ಭಗವಂತನ ಪ್ರಸನ್ನಚಿತ್ತ ರೂಪಕ್ಕೆ ಆತನ ಕೃಷ್ಣಾವತಾರವೇ ಸಾಕ್ಷಿ. ಕೃಷ್ಣಾವತಾರದಲ್ಲಿ ಭಗವಂತ ಯಾವಾಗಲೂ ನಗುನಗುತ್ತ ತನ್ನ ಪ್ರಸನ್ನತೆಯ ಸ್ವರೂಪವನ್ನು ತನ್ನ ಭಕ್ತಕೋಟಿಗೆ ತೋರಿಸಿಕೊಟ್ಟಿದ್ದಾನೆ.

೨೪೦) ವಿಶ್ವಧೃಕ್

ಈ ಹಿಂದೆ ವಿಶ್ಲೇಶಿಸಿದಂತೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನನ್ನು 'ವಿಶ್ವ' ಎನ್ನುತ್ತಾರೆ. ಈ ಬ್ರಹ್ಮಾಂಡವೆಂಬ ಕಮಲವನ್ನು ತನ್ನ ನಾಭಿಯಲ್ಲಿ ಧರಿಸಿರುವ ಸರ್ವಧಾರಕ ಭಗವಂತ ವಿಶ್ವಧೃಕ್. 

೨೪೧) ವಿಶ್ವಭುಕ್

ಪ್ರಳಯ ಕಾಲದಲ್ಲಿ ಈ ವಿಶ್ವವನ್ನು ಸಂಪೂರ್ಣವಾಗಿ ಸಂಹಾರಮಾಡಿ ( ಭೋಕ್ತಾ) ತನ್ನ ಉದರದಲ್ಲಿ ಸಲಹುವವನು. ವಿಶ್ವವನ್ನು ಪಾಲಿಸಿ ನಂತರ ಕಬಳಿಸುವ ಭಗವಂತ ವಿಶ್ವಭುಕ್.

೨೪೨) ವಿಭು.

ವಿವಿಧ+ಭವತಿ - ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ. ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭು.

೨೪೩) ಸತ್ಕರ್ತಾ

ಗುಣದಲ್ಲಿ ಜ್ಞಾನದಲ್ಲಿ ಹಿರಿಯರಾದವರನ್ನು ಮೇಲು-ಕೀಳು ಎನ್ನುವ ಭೇದವಿಲ್ಲದೆ ಗೌರವಿಸುವುದನ್ನು ಸತ್ಕಾರ ಎನ್ನುತ್ತಾರೆ. ಭಗವಂತನ ಪೂಜೆ ಸಹ ಸತ್ಕಾರ. ಜೀವನದಲ್ಲಿ ಸತ್ಕಾರ ಹೇಗಿರಬೇಕು ಎನ್ನುವುದನ್ನು ಭಗವಂತ ತನ್ನ ಅವತಾರ ರೂಪದಲ್ಲಿ ನಮಗೆ ತೋರಿಸಿ ಕೊಟ್ಟಿದ್ದಾನೆ. ನಿಜವಾಗಿ ಹಿರಿಯ ವ್ಯಕ್ತಿಗಳು ಅಹಂಕಾರ ರಹಿತರಾಗಿರುತ್ತಾರೆ. ತಾನು ದೊಡ್ಡವ ಎನ್ನುವ ಅಹಂಕಾರ ಅವರಲ್ಲಿರುವುದಿಲ್ಲ. ರಾಜಸೂಯ ಯಜ್ಞದಲ್ಲಿ ಯಾರಿಗೆ ಮೊದಲು ಪಾದ ಪೂಜೆ ಮಾಡಬೇಕು ಎಂದು ಚರ್ಚೆಯಾದಾಗ ಭೀಷ್ಮಾಚಾರ್ಯರು ಶ್ರೀಕೃಷ್ಣನೊಬ್ಬನೇ ಅಗ್ರಪೂಜೆಗೆ ಅರ್ಹ ಎನ್ನುವ ಸಲಹೆಯನ್ನು ಮುಂದಿಡುತ್ತಾರೆ. ಆ ಸಮಯದಲ್ಲಿ ಕೃಷ್ಣನನ್ನು ಹುಡುಕಾಡಿದರೆ ಆತ ಬಂದ ಅತಿಥಿಗಳ ಕಾಲು ತೊಳೆಯಲು ನೀರು ಕೊಡುತ್ತಿದ್ದನಂತೆ! ನಿಜವಾದ ಜ್ಞಾನಿಗಳು ಎಂದೂ ಅಹಂಕಾರಿಗಳಾಗಿರುವುದಿಲ್ಲ. ಇನ್ನೊಬ್ಬರನ್ನು ಸತ್ಕಾರ ಮಾಡುವುದನ್ನು ಭಗವಂತ ತನ್ನ ರಾಮಾವತಾರದಲ್ಲಿ ತೋರಿಸಿ ಕೊಟ್ಟಿದ್ದಾನೆ. ಮೇಲು-ಕೀಳು ಬಡವ-ಬಲ್ಲಿದ ಎನ್ನುವ ಬೇಧವಿಲ್ಲದೆ ಸ್ನೇಹಿತ ಸುಧಾಮನನ್ನು ಭಗವಂತ ಸತ್ಕರಿಸಿದ ಬಗೆ ಎಲ್ಲರಿಗೂ ತಿಳಿದಿದೆ. ದುರ್ವಾಸಮುನಿ ದ್ವಾರಕೆಯನ್ನು ನೋಡಲು ಬಂದಾಗ ಸ್ವತಃ ಶ್ರೀಕೃಷ್ಣ ಅವರನ್ನು ಗಾಡಿಯಲ್ಲಿ ಕುಳ್ಳಿರಿಸಿ ತಾನೇ ಎಳೆದುಕೊಂಡು ಹೋಗಿ ಇಡೀ ದ್ವಾರಕೆಯನ್ನು ದುರ್ವಾಸರಿಗೆ ತೋರಿಸಿ ಕಳುಹಿಸಿ ಕೊಡುತ್ತಾನೆ. ತನ್ನ ಪೂಜೆಯನ್ನು ನಮ್ಮೊಳಗಿದ್ದು ತಾನೇ ಮಾಡಿಕೊಳ್ಳುವವ, ಪೂಜಾ ಫಲವನ್ನು ಭಕ್ತಕೋಟಿಗೆ ಕರುಣಿಸುವವ, ಸತ್ಕಾರ ಮಾಡುವುದು ಹೇಗೆ ಎನ್ನುವುದನ್ನು ಅವತಾರಗಳ ಮೂಲಕ ನಮಗೆ ತೋರಿಸಿಕೊಟ್ಟ ಭಗವಂತ ಸತ್ಕರ್ತಾ.

೨೪೪) ಸತ್ಕೃತ

ಈ ಜಗತ್ತಿನಲ್ಲಿ ಇರುವ ಸರ್ವ ವಸ್ತುಗಳ ಕರ್ತನಾದ ಭಗವಂತ ಸತ್ಕೃತ.  ಜ್ಞಾನ, ದುಃಖ, ಅಜ್ಞಾನ, ಸಂಹಾರ, ಮೋಕ್ಷದ 'ಕರ್ತ' ಭಗವಂತ ಸತ್ಕೃತ. 'ಸತ್' ಎಂದರೆ ಕಣ್ಣಿಗೆ ಕಾಣುವ ವಸ್ತು. ಸೃಷ್ಟಿಯ ಆದಿಯಲ್ಲಿ ಭಗವಂತ ಪ್ರಾಣ ತತ್ವವನ್ನು ಸೃಷ್ಟಿ ಮಾಡಿದ. ಭಗವಂತ ಸೃಷ್ಟಿ ಮಾಡಿರುವ 'ಮಣ್ಣು, ನೀರು, ಮತ್ತು ಬೆಂಕಿ 'ಸತ್'. ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಸರ್ವ ವಸ್ತುಗಳು ಈ ಮೂರು ಮೂಲ ವಸ್ತುಗಳ ಮಿಶ್ರಣ. ಸದಾ ಕೆಳಮುಖವಾಗಿ ಚಲಿಸುವ ಮಣ್ಣು ತಮೋಗುಣವನ್ನು, ತಗ್ಗಿದ್ದ ಕಡೆ ಹರಿಯುವ ನೀರು ರಜೋಗುಣವನ್ನು ಹಾಗೂ ಸದಾ ಮೇಲ್ಮುಖವಾಗಿ ಉರಿಯುವ ಬೆಂಕಿ ಸತ್ವಗುಣವನ್ನು ಪ್ರತಿಬಿಂಬಿಸುತ್ತದೆ. ಮಣ್ಣು-ನೀರು-ಬೆಂಕಿ ಇಡೀ ವಿಶ್ವದ ಮೂಲದ್ರವ್ಯ. 

ಗೊಬ್ಬರದಲ್ಲಿರುವುದೂ ಮಣ್ಣು-ನೀರು-ಬೆಂಕಿ ಹಾಗೂ ಅದರಿಂದ ಅರಳಿನಿಲ್ಲುವ ಸುಂದರವಾದ ಗುಲಾಬಿ ಕೂಡ ಮಣ್ಣು-ನೀರು-ಬೆಂಕಿಯಿಂದಾಗಿದೆ. ಇಲ್ಲಿ ಬೆಂಕಿ ಎಂದರೆ ಶಾಖ. ಸೂರ್ಯನ ಬೆಳಕಿನಿಂದ ನಮಗೆ ಬೇಕಾದ ಶಾಖ ದೊರೆಯುತ್ತದೆ. ಹೀಗೆ ಅನಂತ ಆಕಾಶ, ಮೂಲದ್ರವ್ಯವಾದ ಮಣ್ಣು-ನೀರು-ಬೆಂಕಿ, ಗಾಳಿ, ಚರ-ಅಚರ, ಜಡ-ಚೇತನ, ಎಲ್ಲವುದರ ಸೃಷ್ಟಿಕರ್ತ ಭಗವಂತ ಸತ್ಕೃತಃ. ಆತ ಮಾಡುವ ಯಾವ ಕರ್ಮವೂ ಕೆಟ್ಟ ಕೆಲಸವಾಗಿರುವುದಿಲ್ಲ. ಈ ಜಗತ್ತಿನಲ್ಲಿ ಎಂದೂ ಆಗಬಾರದ್ದು ಆಗಿಲ್ಲ ಹಾಗೂ ಆಗುವುದೂ ಇಲ್ಲ!

೨೪೫) ಸಾಧು

ಭಗವಂತ ಸದ್ಗುಣಮೂರ್ತಿ. ಯಾವ ಕಾಲದಲ್ಲೂ ಆತನಿಗೆ ಕೆಟ್ಟ ಗುಣದ ಲೇಪವಿಲ್ಲ. ಸದ್ಗುಣಗಳಿಂದ ಪರಿಪೂರ್ಣನಾದ, ಸಾತ್ವಿಕ ಮೂರ್ತಿ ಹಾಗೂ ಸಕಲ ಗುಣಪೂರ್ಣ ಭಗವಂತ ಸಾಧು.

೨೪೬) ಜಹ್ನು

'ಜಹ್ನು' ಎಂದಾಗ ನಮಗೆ ನೆನಪಿಗೆ ಬರುವುದು ಋಷಿ ಜಹ್ನು. ಗಂಗೆಯು ಭಗೀರಥ ಪ್ರಯತ್ನದಿಂದ ಭೂಮಿಗಿಳಿದು ಬರುತ್ತಿದ್ದಾಗ, ರಭಸದಿಂದ ಬಂದು ಜಹ್ನು ಋಷಿಗಳ ತಪೋವನ ಪ್ರವೇಶಿಸುತ್ತಾಳೆ. ಕೋಪಗೊಂಡ ಜಹ್ನು ಋಷಿಗಳು ಇಡೀ ಗಂಗೆಯನ್ನು ಸ್ವೀಕರಿಸಿ ಹಿಡಿದಿಡುತ್ತಾರೆ. ನಂತರ ಋಷಿಮುನಿಗಳ ಪ್ರಾರ್ಥನೆಯಂತೆ ಮತ್ತು ದೇವಾನುದೇವತೆಗಳ ಅನುಜ್ಞೆಯಂತೆ ಗಂಗಾದೇವಿಯನ್ನು ಹರಿದು ಬಿಡುತ್ತಾರೆ. ಈ ಕಾರಣಕ್ಕಾಗಿ ಗಂಗೆಯನ್ನು ಜಾಹ್ನವಿ ಎನ್ನುತ್ತಾರೆ.

ಭಗವಂತನನ್ನು 'ಜಹ್ನು' ಎನ್ನಲು ಕಾರಣವೇನು? ಯಾವುದೇ ಅರ್ಥವಿಲ್ಲದೆ ವ್ಯರ್ಥವಾದ ಪದವನ್ನು ಜಹ್ನುವಿನ ತಂದೆ ನಾಮಕರಣ ಮಾಡಿಲ್ಲ. ಜಹ್ನು ಭಗವಂತನ ಗುಣವಾಚಕ ನಾಮ. ಇಲ್ಲಿ 'ಜಃ' ಧಾತು 'ಬಿಟ್ಟವನು' ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಯಾವುದು ಬೇಡವೋ ಅದನ್ನು ಬಿಟ್ಟವನು. ಇಲ್ಲಿ ಬೇಡವಾದದ್ದು ಅಂದರೆ ಪ್ರಮುಖವಾಗಿ ಅಹಂಕಾರ ಮತ್ತು ಮಮಕಾರ. ಆತನಿಗೆ ಅಹಂಕಾರ ಮತ್ತು ಮಮಕಾರದ ಸ್ಪರ್ಶವೇ ಇಲ್ಲ. ಆದ್ದರಿಂದ ಆತ ಜಹ್ನು. 'ಜ' ಎಂದರೆ ‘ಜನನ’, 'ಹಂತಿ' ಎಂದರೆ ಸಂಹಾರ. ಸೃಷ್ಟಿ-ಸ್ಥಿತಿ-ಸಂಹಾರಗಳ ಕರ್ತ ಜಹ್ನು.

೨೪೭) ನಾರಾಯಣ

ಸೃಷ್ಟಿಗೆ ಮೊದಲು ಭಗವಂತ ಸೂಕ್ಷ್ಮ ರೂಪದ ಪ್ರಕೃತಿಯನ್ನು ನಿರ್ಮಾಣ ಮಾಡಿದ. ಇದೇ ಸೃಷ್ಟಿಯ ಮೂಲ ದ್ರವ್ಯ ಹಾಗೂ ಇದನ್ನು 'ನಾರ' ಎನ್ನುತ್ತಾರೆ. ಸೃಷ್ಟಿಗೆ ಮೊದಲು ಇದ್ದವ ನಾರಾಯಣ. ಸೃಷ್ಟಿ ನಿರ್ಮಾಣದ ನಂತರ ನರರ ಸಮುದಾಯವೇ ಅವನ ಅಯನ. "ನಾರಸ್ಯ ಅಯನಃ ನಾರಾಯಣಃ". ಅಂದರೆ ಜೀವ ಸಮುದಾಯಕ್ಕೆ ಆಶ್ರಯದಾತ. "ನಾರಂ ಅಯನಂ ಯಸ್ಸ್ಯ ನಾರಾಯಣಃ". ಅಂದರೆ ಜೀವ ಸಮುದಾಯವನ್ನು ಆಶ್ರಯಿಸಿ ಕೊಂಡಿರುವವ. ನಾರಾಣಾಂ ಅಯನಃ ನಾರಾಯಣಃ. ಅಂದರೆ ಜೀವರನ್ನು ನಿಯಂತ್ರಿಸುವ ಸರ್ವ ದೇವತೆಗಳ ಆಶ್ರಯದಾತ. "ಅರ" ಎಂದರೆ ದೋಷ. ದೋಷದ ಸ್ಪರ್ಶವೇ ಇಲ್ಲದ ಗುಣಪೂರ್ಣ ನಾರಾಯಣ. ಹೀಗೆ ಸೃಷ್ಟಿಗೆ ಮೊದಲು ಇದ್ದವ, ಸೃಷ್ಟಿಯಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವವ,ದೋಷಗಳಿಲ್ಲದ ಗುಣಪೂರ್ಣ, ಸರ್ವ ನರರೂ ತಿಳಿಯಬೇಕಾದವ, ದೇವತೆಗಳ ಆಶ್ರಯದಾತ, ಮತ್ತು ಎಲ್ಲಾ ನರರು ಕೊನೆಯದಾಗಿ ಸೇರಬೇಕಾದ ತಾಣ ಭಗವಂತ ನಾರಾಯಣ.

೨೪೮) ನರ

'ನರ' ಎಂದರೆ ನರರಲ್ಲಿ ಶೇಷಾಭೀಷ್ಟನಾದ ಭಗವಂತನ ಆವೇಶ. ಅರ್ಜುನನಲ್ಲಿ ನರನ ಆವೇಶವಿತ್ತು ಎನ್ನುವ ವಿಷಯವನ್ನು ನಾವು ಹಿಂದೆ ವಿಶ್ಲೇಷಿಸಿದ್ದೇವೆ. ಶೇಷ ನಮ್ಮ ದೇಹದಲ್ಲಿರುವ ಕುಂಡಲಿನಿ ಶಕ್ತಿಯ ಸಂಕೇತ. ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾ, ಪಶ್ಯಂತಿ, ಮಧ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಶೇಷನಲ್ಲಿ ವಿಶೇಷವಾಗಿ ಅಭೀಷ್ಟನಾದ ಶೇಷಶಯನನಾಗಿರುವ ಭಗವಂತ ನಮ್ಮಲ್ಲಿರುವ ವೇದಪುರುಷ (ಗರುಡ) ಜಾಗೃತನಾಗುವಂತೆ ಮಾಡಿ ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಹೀಗೆ ಛಂದಃಪುರುಷನಲ್ಲಿ ಅಭೀಷ್ಟನಾಗಿದ್ದು, ಎಲ್ಲವನ್ನೂ ತಿಳಿದ, 'ಅರಿಗಳಿಗೆ' ನರನಾದ ಭಗವಂತ ನರ.

ಮುಂದುವರೆಯುವುದು...

No comments:

Post a Comment