Wednesday, May 24, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -70


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುಃರ್ವೀರೋsನಂತೋ ಧನಂಜಯಃ || 70 ||

೬೬೬) ಕಾಮದೇವಃ

ಈ ನಾಮದ ಮೇಲ್ನೋಟದ ಅರ್ಥ ಎಲ್ಲರಿಗೂ ಚಿರಪರಿಚಿತ. ಮನುಷ್ಯನ ಬದುಕಿನಲ್ಲಿ ಬಯಕೆ ಹಾಗು ಅರಿವು ಚೈತನ್ಯದ ಮೂಲಭೂತ ಧರ್ಮ. 'ಕಾಮ' ಸಂಸ್ಕೃತದಲ್ಲಿ ಸೌಂದರ್ಯದ ಸಂಕೇತ. ಅಂದರೆ ಸುಂದರವಾದದ್ದನ್ನು ಬಯಸುವುದು 'ಕಾಮ'. 'ಸುಂದರ' ಅಂದರೆ ಪ್ರೀಯವಾದದ್ದು. ಸುಂದರವಾದದ್ದನ್ನು, ಅಥವಾ ಪ್ರಿಯವಾದದ್ದನ್ನು ಬಯಸುವುದು ಕಾಮ. ಸೌಂದರ್ಯ ವಸ್ತುವಿನಲ್ಲಿಲ್ಲ, ನಾವು ನೋಡುವ ದೃಷ್ಟಿಯಲ್ಲಿದೆ. ನಮಗೆ ಯಾವುದು ಇಷ್ಟವೋ ಅದು ನಮಗೆ ಸುಂದರವಾಗಿ ಕಾಣುತ್ತದೆ. ಹೀಗೆ ಇರುವ ಕಾಮವನ್ನು ಈಡೇರಿಸುವ ಕಾಮದೇವ (ಮನ್ಮಥ) ನಮ್ಮೊಳಗಿದ್ದು ವಿವಿಧ ರೂಪದ ಬಯಕೆಗಳನ್ನು ಪ್ರಚೋದಿಸಿ, ಕಾಮನೆಗಳನ್ನು ಈಡೇರಿಸಿ, ಆನಂದವನ್ನು ಕೊಟ್ಟು ವಿಹರಿಸುವವ. ಮನ್ಮಥ ವಿಷ್ಣುವಿನ ಮಗ; ಅವನೇ ಶಿವನ ಮಗ ಸ್ಕಂದ (ಷಣ್ಮುಖ), ಅವನೇ ಬ್ರಹ್ಮನ ಮಗ ಸನತ್ಕುಮಾರ. ನಮಗೆ ಕಾಮನೆಗಳನ್ನು ನೀಡುವ ಹಾಗೂ ಅದನ್ನು ನಿಯಂತ್ರಿಸುವ ಮನ್ಮಥ-ಸನತ್ಕುಮಾರ-ಷಣ್ಮುಖನೊಳಗಿರುವ, ಸರ್ವ ಕಾಮಗಳನ್ನು ಗೆದ್ದ ಭಗವಂತ ಕಾಮದೇವಃ.

೬೫೭) ಕಾಮಪಾಲಃ

ನಮ್ಮ ಎಲ್ಲಾ ಬಯಕೆಗಳನ್ನು ರಕ್ಷಣೆ ಮಾಡುವವನು ಭಗವಂತ. ನಮ್ಮ ಬಯಕೆ ನಮ್ಮ ಅಧೀನ ಅಲ್ಲ. ಧರ್ಮಕಾರ್ಯ ಮಾಡಬೇಕು ಎನ್ನುವ ಕಾಮ ಇಲ್ಲದಿದ್ದರೆ ಧರ್ಮವಿಲ್ಲ! ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಬೇಕು ಎನ್ನುವ ಕಾಮನೆ ಇಲ್ಲದಿದ್ದರೆ 'ಅರ್ಥಕ್ಕೆ' ಬೆಲೆಯಿಲ್ಲ. ಕಾಮ ಇಲ್ಲದಿದ್ದರೆ ಎಲ್ಲವೂ ಅಸಾಧ್ಯ. ಬಯಕೆಯೇ ಇಲ್ಲದ ಬದುಕಿಲ್ಲ. ಬಯಕೆ ಕೆಟ್ಟದ್ದಲ್ಲ ಆದರೆ ಕುಸ್ಸಿತವಾದ ಬಯಕೆ ಕೆಟ್ಟದ್ದು. ನಮಗೆ ಒಳ್ಳೆಯ ಬಯಕೆಯನ್ನು ಕೊಟ್ಟು ಅದನ್ನು ಪೂರೈಸಿ ಉದ್ಧರಿಸುವ ಭಗವಂತ ಕಾಮಪಾಲಃ.

೬೫೮) ಕಾಮೀ

ಕಾಮೀ ಅಂದರೆ ಕಾಮ ಉಳ್ಳವನು ಎಂದರ್ಥವಲ್ಲ. ಕಾಮದ ಒಡೆಯ ಕಾಮೀ. ಜಗತ್ತಿನಲ್ಲಿ ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನ ಅಪ್ಪ ಭಗವಂತ ಕಾಮೀ.

೬೫೯) ಕಾಂತಃ

ರತಿ-ಮನ್ಮಥರಿಗೆ ರೂಪಕೊಟ್ಟ ಭಗವಂತ ಎಲ್ಲರೂ ಬಯಸುವಂತಹ  ಪರಮಸುಂದರ ಮೂರ್ತಿ. ಅತ್ಯಂತ  ಸುಂದರ ಮಾಂಗಲಿಕ ರೂಪ ಆತನದ್ದು. ಇಲ್ಲಿ ಸೌಂದರ್ಯ ಎಂದರೆ ಬಾಹ್ಯ ಸೌಂದರ್ಯವಲ್ಲ, ಪಂಚಭೂತಗಳಿಂದಾದ ಸೌಂದರ್ಯವಲ್ಲ, ಜ್ಞಾನಾನಂದಗಳಿಂದ ತುಂಬಿದ  ಪರಿಪೂರ್ಣ ಸೌಂದರ್ಯ.ಇಂತಹ ಸುಂದರ ಮೂರ್ತಿ ಭಗವಂತ ಕಾಂತಃ.

೬೬೦) ಕೃತಾಗಮಃ

ಮೊಟ್ಟ ಮೊದಲು ಜ್ಞಾನವನ್ನು, ವೇದವನ್ನು, ಚತುರ್ಮುಖನಿಗೆ ಉಪದೇಶ ಮಾಡಿ ಜಗತ್ತಿಗೆ ಆಗಮನದ ರೂಪದಲ್ಲಿ ಕೊಟ್ಟವ ಭಗವಂತ. ಆತ ಆಗಮಗಳಿಂದ ಕೃತನಾದವನು. ಸಮಸ್ತ ಆಗಮಗಳಿಂದಲೇ ತಿಳಿಯಬೇಕಾದವನು. ಭೂಮಿಗೆ ಇಳಿದು ಬಂದು, ವೇದ-ಪುರಾಣವನ್ನು ರಚಿಸಿ ಕೊಟ್ಟು, ಶ್ರುತಿ-ಸ್ತುತಿಗಳನ್ನು ನೀಡಿದ ಭಗವಂತ ಕೃತಾಗಮಃ.

೬೬೧) ಅನಿರ್ದೇಶ್ಯವಪು

ಇಂಥದ್ದೇ ಎಂದು ನಿರೂಪಿಸಲು ಆಗದ ಆಚಿಂತ್ಯ ರೂಪನು. 'ನಿರ್ದೇಶ' ಎಂದರೆ ಇದು ಇಂಥದ್ದೇ ಎಂದು ಮನಸ್ಸು ಗ್ರಹಿಸುವ ರೂಪ. ಕೃಷ್ಣನನ್ನು, ರಾಮನನ್ನು, ವ್ಯಾಸರನ್ನು ಕಂಡವರಿದ್ದಾರೆ, ಆದರೆ ಅದು ಕಂಡು ಗ್ರಹಿಸುವ ರೂಪವಲ್ಲ. ಯಾವುದನ್ನು ನಿರೂಪಿಸಲಾಗದೆ ಮಾತು ಮೂಕವಾಗುತ್ತದೋ, ಮನಸ್ಸು ಸ್ವಚ್ಚವಾಗುತ್ತದೋ, ಅಂತಹ ಆನಂದಮಯ ರೂಪ ಎಂದು ಉಪನಿಷತ್ತು ಹೇಳುತ್ತದೆ. ಹೀಗೆ ಮನಸ್ಸಿನ ಚಿಂತನೆಗೆ ಮೀರಿದ ರೂಪವುಳ್ಳ  ಭಗವಂತ  ಅನಿರ್ದೇಶ್ಯವಪು.

೬೬೨) ವಿಷ್ಣುಃ

ಎಲ್ಲಾ ಕಡೆಯೂ, ಎಲ್ಲರ ಒಳಗೂ-ಹೊರಗೂ ತುಂಬಿರುವ, ಮಾತು ಮನಸ್ಸಿಗೆ ಮೀರಿದ ಅನಂತ ಶಕ್ತಿ ಭಗವಂತ ವಿಷ್ಣುಃ.

೬೬೩) ವೀರಃ

ಎಲ್ಲವನ್ನೂ ನಿಗ್ರಹಿಸಬಲ್ಲ ಪೌರುಷಶಾಲಿ. 'ವಿ' ಅಂದರೆ ಪಕ್ಷಿ (ಗರುಡ), 'ಈರ' ಅಂದರೆ ಪ್ರಾಣದೇವರು. ಗರುಡ-ಪ್ರಾಣರನ್ನು ನಿಯಂತ್ರಿಸುವ ಪರಾಶಕ್ತಿ ಭಗವಂತ ವೀರ.

೬೬೪) ಅನಂತಃ

ಅಳತೆಗೆ ಸಿಗದ ಅನಂತ ಶಕ್ತಿ. ಆತ ಕಾಲತಃ, ದೇಶತಃ, ಗುಣತಃ ಅನಂತ.

೬೬೫) ಧನಂಜಯಃ

ಅರ್ಜುನನಲ್ಲಿ ಸನ್ನಿಹಿತನಾಗಿ ಅವನನ್ನು ಧನಂಜಯನಾಗಿ ಮಾಡಿದ ಭಗವಂತ ಧನಂಜಯಃ.  ಜಗತ್ತಿನಲ್ಲಿರುವ ಎಲ್ಲಾ ಸಂಪತ್ತು ಆತನ ಸೊತ್ತು. ಆದ್ದರಿಂದ 'ನನ್ನದು' ಎನ್ನುವ ಅಹಂಕಾರ ಬಿಟ್ಟು ಆ ಧನಂಜಯನಲ್ಲಿ ಶರಣಾಗಬೇಕು.

ಮುಂದುವರೆಯುವುದು....✍️💐

No comments:

Post a Comment