ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾಃ ಶಾಂತಿಃ ಪರಾಯಣಮ್ || 62 ||
೫೮೦) ತ್ರಿಸಾಮಾ
ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಅದಕ್ಕೆ 'ಶಸ್ತ್ರ' ಎಂದು ಹೆಸರು. ಬೆಳಿಗ್ಗೆ ಅಷ್ಟ ವಸುಗಳಿಗೆ ಸಂಬಂಧಪಟ್ಟ 'ವಾಸವಸಾಮ'; ಮಧ್ಯಾಹ್ನ ಹನ್ನೊಂದು ರುದ್ರರಿಗೆ ಸಂಬಂಧಪಟ್ಟ 'ರೌದ್ರಸಾಮ'. ಸಂಜೆ ಹನ್ನೆರಡು ಮಂದಿ ಆದಿತ್ಯರಿಗೆ ಸಂಬಂಧಪಟ್ಟ 'ಆದಿತ್ಯಸಾಮ'. ಹೀಗೆ ಮೂರು ಹೊತ್ತು ಮೂರು ವಿಧದ ಸಾಮದಿಂದ ಹೊಗಳಲ್ಪಡುವ ಭಗವಂತ ತ್ರಿಸಾಮಾ.
ಮೂರು ಸ್ವಸ್ತುಗಳನ್ನು (ಸತ್ವ, ರಜಸ್ಸು, ತಮಸ್ಸು, ಅಥವಾ ಮಣ್ಣು, ನೀರು, ಬೆಂಕಿ) ಸಮೀಕರಿಸಿ ಸಮಸ್ತ ಪ್ರಪಂಚವನ್ನು ಸೃಷ್ಟಿ ಮಾಡಿದ ಭಗವಂತ ತ್ರಿಸಾಮ.
೫೮೧) ಸಾಮಗಃ
ಸಾಮವೇದದ ಮಂತ್ರವನ್ನು ಗಾನಬದ್ಧವಾಗಿ ಹಾಡುವವರು ಸಾಮಗರು. ಭಗವಂತ ಮೊದಲು ಹಯಗ್ರೀವ ರೂಪದಲ್ಲಿ ಸಮಸ್ತ ವೇದವನ್ನು ಉಚ್ಚಾರ ಮಾಡಿದವ. ಹೀಗೆ ಸಾಮವನ್ನು ಗಾನಮಾಡಿ ಆವಿಷ್ಕಾರ ಮಾಡಿದ ಭಗವಂತ ಸಾಮಗಃ.
೫೮೨) ಸಾಮ
ವೇದದಲ್ಲಿ ಸಾಮವೇದ ನನಗೆ ಬಲು ಇಷ್ಟ, ಅದಕ್ಕಾಗಿ ಅದರಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದೇನೆ ಎಂದು ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ:
ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ
ಇಲ್ಲಿ ಸಾಮ ಎಂದರೆ ಎಲ್ಲೆಡೆಯು ಸಮನಾಗಿದ್ದು ಎಂದರ್ಥ, ವೇದ ಎಂದರೆ ಜ್ಞಾನ ರೂಪನಾದ್ದರಿಂದ 'ಸಾಮವೇದ' ಎನ್ನಿಸಿ ಸಾಮವೇದದಲ್ಲಿದ್ದೇನೆ ಎಂದರ್ಥ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಕಾರಣವೇನೆಂದರೆ, ವೇದದಲ್ಲಿ ತಾರತಮ್ಯವಿಲ್ಲ ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ! ಸಾಮ ವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಭಗವಂತನಿಗೆ ಅತಿ ಪ್ರಿಯನಾದ ಪ್ರಾಣ ದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ.
ಸಾಮದಲ್ಲಿ ಇನ್ನೊಂದು ವಿಶೇಷವಿದೆ. ಋಗ್ವೇದ ಮತ್ತು ಯಜುರ್ವೇದದಲ್ಲಿ ಮಂತ್ರಗಳ ಹಾಗು ಶಬ್ಧಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ಧದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ. ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ.
೫೮೩) ನಿರ್ಬಾಣಂ
ಪಾಂಚಭೌತಿಕ ಶರೀರವಿಲ್ಲದ ಜ್ಞಾನಾನಂದಮಯ ಸ್ವರೂಪ ಭಗವಂತ ನಿರ್ಬಾಣಂ.
೫೮೪) ಭೇಷಜಮ್
ಸಂಸಾರವೆಂಬ ರೋಗಕ್ಕೆ ಏಕಮಾತ್ರ ಮದ್ದು ಭಗವಂತ ಭೇಷಜಮ್.
೫೮೫) ಭಿಷಕ್
ಸರ್ವ ರೋಗಗಳಿಗೆ ಮದ್ದು ನೀಡುವ ವೈದ್ಯರ ವೈದ್ಯ.
೫೮೬) ಸಂನ್ಯಾಸಕೃತ್
ಸನತ್ ಕುಮಾರನಾಗಿ, ನರ-ನಾರಾಯಣ ರೂಪಿಯಾಗಿ ನಮಗೆ ನಿಜವಾದ ಸನ್ಯಾಸಿಯ ಬದುಕನ್ನು ಬದುಕಿ ತೋರಿಸಿದ ಭಗವಂತ ಸಂನ್ಯಾಸಕೃತ್. ನಿಜವಾದ ಸನ್ಯಾಸ ಎಂದರೆ ಕಾಮವನ್ನು ಹಾಗೂ ಕ್ರೋಧವನ್ನು ಸಂಪೂರ್ಣ ಬಿಡುವುದು. ಕಾಮವೇ ಕ್ರೋಧಕ್ಕೆ ಕಾರಣ. ಈಡೇರದ ಆಸೆಯಿಂದ ಮನಸ್ಸಿನಲ್ಲಿ ಉಂಟಾಗುವ ವಿಕಾರ 'ಕೋಪ'. ಪ್ರಪಂಚ ನಾವು ಬಯಸಿದಂತೆ ಎಂದೂ ಇರುವುದಿಲ್ಲ, ಹೀಗಿರುವಾಗ ಹೀಗೇ ಆಗಬೇಕು ಎಂದು ಬಯಸುವುದು ಮೂರ್ಖತನ. ಜಗತ್ತಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಹಾಗೇ ಸ್ವೀಕರಿಸುವುದು ಧರ್ಮ. ಸಮುದ್ರದಲ್ಲಿ ಅಲೆಗಳು, ತರಂಗಗಳು ನಿರಂತರ ಹಾಗೂ ಅನಿವಾರ್ಯ. ಆದ್ದರಿಂದ ತೆರೆಯ ಜೊತೆಗೆ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಬೇಕೇ ಹೊರತು ತೆರೆ ನಿಂತ ಮೇಲೆ ಸ್ನಾನ ಮಾಡುತ್ತೇನೆ ಎಂದರಾಗದು. ಬದುಕು ಕೂಡಾ ಅಷ್ಟೇ; ಪ್ರಪಂಚ ಸಮುದ್ರದ ಅಲೆಗಳಂತೆ, ಜೀವನದಲ್ಲಿ ಏನು ಘಟಿಸಿತೋ ಅದಕ್ಕೆ ಒಗ್ಗಿಕೊಂಡು ಬದುಕಬೇಕೇ ಹೊರತು ಜಗತ್ತನ್ನು ನಮ್ಮ ಇಚ್ಚೆಯಂತೆ ಬಯಸುವುದು ತಪ್ಪು. ಹೀಗೇ ಜಗತ್ತಿನ ಅಲೆಗಳಿಗೆ ಒಗ್ಗಿಕೊಂಡು ಬದುಕುವುದು ಒಬ್ಬ ಸಂಸಾರಿಯ ಸನ್ಯಾಸ! ಇಂಥದ್ದು ಬೇಕು ಎಂದು ಬಯಸದೇ ಇದ್ದದ್ದರಲ್ಲಿ ಖುಷಿ ಪಡುವುದು, ಏನೇ ಬಂದರೂ ಧೃತಿಗೆಡದೆ, ಬದುಕಿನ ಸಂಪೂರ್ಣ ಹೊಣೆಗಾರಿಕೆಯನ್ನು ಭಗವಂತನಿಗೆ ಬಿಟ್ಟುಬಿಡುವುದು ಸನ್ಯಾಸ. ಇಡೀ ಬದುಕನ್ನು, ಸರ್ವಸ್ವವನ್ನು, ಸರ್ವ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸನ್ಯಾಸ.
೫೮೭) ಶಮಃ
ಮನಸ್ಸನ್ನು ಸದಾ ಭಗವಂತನಲ್ಲಿಡುವುದು, ಯಾವ ಚಿಂತೆ ಇಲ್ಲದೆ ನೆಮ್ಮದಿಯಿಂದಿರುವುದು, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಧರ್ಮ. ಒಳ್ಳೆಯ ವ್ಯಕ್ತಿತ್ವ ಹೊಂದಿದ ಅಥವಾ ಒಳ್ಳೆಯ ಜೀವ ಸ್ವಭಾವವಿರುವವರಿಗೆ ಇಂತಹ ಗುಣಗಳನ್ನು ದಯಪಾಲಿಸುವ ಭಗವಂತ ಶಮಃ. ಇದಕ್ಕಾಗಿ ಸನ್ಯಾಸಿಯಾಗಬೇಕೆಂದಿಲ್ಲ, ಗೃಹಸ್ಥ ಕೂಡಾ ಅನುಸರಿಸಬಹುದಾದ ಗುಣವಿದು. ಇದಕ್ಕೆ ಉತ್ತಮ ಉದಾಹರಣೆ ಧರ್ಮವ್ಯಾಧ. ಮಾಂಸ ಮಾರಿ ಜೀವಿಸುತ್ತಿದ್ದ ವ್ಯಾಧನಲ್ಲಿ ಇಂತಹ ಗುಣವಿತ್ತು. ಲೋಕದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ಒಂದು ಕಾರಣವಿರುತ್ತದೆ, ಭಗವಂತ ಎಂದೂ ಕೆಟ್ಟದ್ದನ್ನು ಕೊಡುವುದಿಲ್ಲ, ಆತ ಕೊಡುವುದೆಲ್ಲ ಪ್ರಸಾದ ಎಂದು ಸ್ವೀಕರಿಸುವ ಗುಣ ನಮ್ಮಲ್ಲಿರಬೇಕು ಅಷ್ಟೇ.
೫೮೮) ಶಾಂತಃ
'ಶಂ' ಎಂದರೆ ಆನಂದ; 'ಅಂತ' ಎಂದರೆ ತುತ್ತತುದಿ. ಆನಂದದ ಪರಾಕಾಷ್ಟೆಯಲ್ಲಿರುವ ಭಗವಂತ ಶಾಂತಃ
೫೮೯) ನಿಷ್ಠಾ
ಜಗತ್ತಿನಲ್ಲಿರುವ ಎಲ್ಲವೂ ಏಲ್ಲಿ ಕೊನೆಗೊಳ್ಳುತ್ತದೋ, ಯಾವುದು ಸರ್ವಾಧಾರವೋ ಅದು ನಿಷ್ಠಾ.
೫೯೦) ಶಾಂತಿಃ
ಜ್ಞಾನಾನಂದ ಭಲದ ಪರಿಪೂರ್ಣ ಸಮಷ್ಟಿ ಭಗವಂತ ಶಾಂತಿಃ. ಈ ಕಾರಣಕ್ಕಾಗಿ ವೇದಗಳಲ್ಲಿ ಮೊದಲಿಗೆ ಶಾಂತಿ ಮಂತ್ರ ಪಠನೆ ಮಾಡುತ್ತೇವೆ.
೫೯೧) ಪರಾಯಣಮ್
ಪರಾಯಣಮ್ ಎಂದರೆ ಸರ್ವೋತ್ಕೃಷ್ಟವಾದ ತುತ್ತ ತುದಿ, ಕೊನೆಯ ಆಸರೆ. ಎಲ್ಲಾ ಮೆಟ್ಟಿಲುಗಳನ್ನು ಹತ್ತಿ ಕೊನೆಗೆ ತಲುಪುವ ತುತ್ತ ತುದಿ.
ಮುಂದುವರೆಯುವುದು...
No comments:
Post a Comment