ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 ||
95) ಅಜಃ
ಅಜಃ ಅಂದರೆ ಯಾರಿಂದಲೂ ಹುಟ್ಟದವನು ಆದರೆ ಎಲ್ಲರಲ್ಲೂ ಹುಟ್ಟುವವನು ಎಂದರ್ಥ. ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಹುಟ್ಟುವವನು. ಗರ್ಭಿಣಿಯ ಹೊಟ್ಟೆ ಹಾಗೂ ದೇವರ ಗುಡಿಯಲ್ಲಿ ಮುಖ್ಯ ಮೂರ್ತಿ ಇರುವ ಸ್ಥಳ -ಇವೆರಡನ್ನೂ "ಗರ್ಭ" ಎನ್ನುವ ಏಕಪದದಿಂದ ಸಂಬೋದಿಸುತ್ತಾರೆ (ಬೇರೆ ಪದ ಲಭ್ಯವಿಲ್ಲ ). ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ ಆಹ್ವಾನ ಮಾಡಿದಾಗ ದೇವರ ಆಗಮನವಾದರೆ, ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ. ಇಂತಹ ಭಗವಂತ ಅಜಃ .
96) ಸರ್ವೇಶ್ವರಃ
ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೂ ಅಂತವರಿಗೆ ಸದಾಕಾಲ ಲಭ್ಯವಿರುವ, ಎಲ್ಲಾ ಈಶ್ವರರ-ಈಶ್ವರ ಸರ್ವೇಶ್ವರ.
97) ಸಿದ್ಧಃ
ಈ ಜಗತ್ತಿನಲ್ಲಿರುವ ಎಲ್ಲಾ ಶಾಸ್ತ್ರ ಹಾಗೂ ವೇದಗಳು ಸರ್ವ ಸಿದ್ಧನಾದ ಭಗವಂತನನ್ನು ಹಾಗೂ ಅವನ ತತ್ವಗಳನ್ನು ತಿಳಿಸುತ್ತವೆ. ಈ ಎಲ್ಲಾ ವೇದ-ಶಾಸ್ತ್ರಗಳ ಮೂಲನಾಗಿರುವ, ಭಕ್ತರ ಹೃದಯನಿವಾಸಿ, ಪರಮಪುರುಷಾರ್ಥರೂಪ, ಸದಾ ಏಕ ರೂಪನಾಗಿರುವ ಭಗವಂತ ಸಿದ್ಧಃ.
98) ಸಿದ್ಧಿಃ
ಸಮಸ್ತ ಪುರುಷಾರ್ಥ ಸಿದ್ಧಿ ಯಾರಿಂದ ಆಗುತ್ತದೋ ಅವನು ಸಿದ್ಧಿ. ಸಮಸ್ತ ಕಾರ್ಯಗಳ ಸಿದ್ಧಿದಾಯಕನಾದ ಭಗವಂತ ಸಿದ್ಧಿ.
99) ಸರ್ವಾದಿಃ
ಎಲ್ಲವುದರ ಆದಿ, ಎಲ್ಲವುದರ ಮೊದಲು ಇರುವವ, ಹಾಗೂ ಎಲ್ಲವನ್ನೂ ಸ್ವೀಕರಿಸುವ, ಎಲ್ಲಕ್ಕೂ ಮೂಲ ಕಾರಣ ನಾದ ಭಗವಂತ ಸರ್ವಾದಿ.
100) ಅಚ್ಯುತಃ
ಎಲ್ಲವನ್ನೂ ಸ್ವೀಕರಿಸಿ, ಎಲ್ಲವನ್ನೂ ನಾಶಮಾಡಿ(ಪ್ರಳಯ), ಯಾವುದೇ ಚ್ಯುತಿ ಇಲ್ಲದೇ ಅನಂತವಾಗಿ ಅಖಂಡವಾಗಿ ಇರುವ, ಎಂದೂ ಕುಂದದ ಗುಣ-ಕ್ರಿಯೆಗಳಿಂದ ನಿತ್ಯ ಪೂರ್ಣನಾಗಿರುವವನು ಅಚ್ಯುತಃ.
101) ವೃಷಾಕಪಿಃ
ಮೇಲ್ನೋಟಕ್ಕೆ ವೃಶ+ಕಪಿ=ವೃಷಾಕಪಿ, ಅಂದರೆ ನಾವು ಬಾಯಾರಿ ಬಳಲಿದಾಗ ನಮ್ಮ ಪೀಪಾಸವನ್ನು ತಣಿಸುವವ. (ವೃಶ ಎಂದರೆ ಮಳೆ ಸುರಿಸುವವನು, ಕಪಿ (ಕಂ+ಪಾಯತೆ) -ಅಂದರೆ ನೀರು ಕುಡಿಸುವವನು).
ವೃಷಾ ಎಂದರೆ 'ಧರ್ಮ ಸ್ವರೂಪ', 'ನಮ್ಮ ಅಭೀಷ್ಟದ ಮಳೆ ಸುರಿಸುವವ', ಎನ್ನುವ ಅರ್ಥವನ್ನೂ ಕೂಡ ಕೊಡುತ್ತದೆ. ಅಕಪಿ ಎಂದರೆ ದುಃಖ ನಿವಾರಕ ಎಂದರ್ಥ. ಆದ್ದರಿಂದ ವೃಷಾಕಪಿ ಎಂದರೆ ನಮ್ಮ ಮೇಲೆ ಧರ್ಮದ ಮೂಲಕ ಅಭೀಷ್ಟದ ಮಳೆಗರೆದು, ನಮ್ಮ ಮನಸ್ಸಿನ ದುಃಖ ದುಗುಡವನ್ನು ನಿವಾರಿಸಿ, ಪೂರ್ಣಾನಂದವನ್ನು ಕೊಟ್ಟು, ತಾನೂ ಪೂರ್ಣಾನಂದವನ್ನು ಅನುಭವಿಸುವವನು ಎಂದರ್ಥ.
102) ಅಮೇಯಾತ್ಮಾ
ನಮ್ಮ ಮನಸ್ಸು ಬುದ್ಧಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯ, ಅದ್ದರಿಂದ ಆತ ಅಮೇಯಾತ್ಮಾ. ಭಗವಂತನನ್ನು ನಮಗೆ ತಿಳಿಯಲು ಅಸಾಧ್ಯವಾದರೂ ಕೂಡ, ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಹಾಗೂ ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ. ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.
103) ಸರ್ವಯೋಗವಿನಿಸ್ಸೃತಃ
ಇಲ್ಲಿ ಯೋಗ ಎಂದರೆ ಸಂಬಂಧ ಅಥವಾ ಉಪಾಯ ಎನ್ನುವ ಅರ್ಥವನ್ನು ಕೊಡುತ್ತದೆ. ನಾವು ಎಲ್ಲಿ ಇರುತ್ತೇವೂ ಅದರ ಸಂಬಂಧದಲ್ಲಿರುತ್ತೇವೆ. ಭಗವಂತ ಎಲ್ಲಾಕಡೆ ಇದ್ದಾನೆ, ಆದರೆ ಅವನು ಯಾವುದಕ್ಕೂ ಅಂಟಿಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಕಾಶ. ಮಣ್ಣು, ನೀರು, ಬೆಂಕಿ ಅಥವಾ ಗಾಳಿ ಇದನ್ನು ಮುಟ್ಟಿದಾಗ ಅಂಟಿಕೊಳ್ಳುತ್ತದೆ, ಆದರೆ ಆಕಾಶ ಎಲ್ಲಾಕಡೆ ಇದ್ದರೂ ಕೂಡಾ, ಯಾವುದಕ್ಕೂ ಅಂಟಿಕೊಂಡಿಲ್ಲ. ಭಗವಂತ ಕೂಡ ಹೀಗೆ. ಎಲ್ಲಾಕಡೆ ಇದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದವನು. ಇಂತಹ ಭಗವಂತ ಸರ್ವಯೋಗವಿನಿಸ್ಸೃತಃ.
ಮುಂದುವರೆಯುವುದು....
No comments:
Post a Comment