Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 4


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 || 

25) ಸರ್ವಃ  

ವಿಶ್ವಂ ಮತ್ತು ಸರ್ವ ಎರಡು ಸಮಾನಾರ್ಥಕವಾದ ನಾಮಗಳು. ಭಗವಂತ ಸರ್ವ ಅಂದರೆ ಸರ್ವಸಮರ್ಥ, ಸರ್ವಗತ ಮತ್ತು  ಸರ್ವಗುಣ ಪೂರ್ಣ. ಸರ್ವ ಅಂದರೆ ಎಲ್ಲವನ್ನು ತಿಳಿದವನು, ಎಲ್ಲೆಡೆ  ತುಂಬಿರುವವನು, ಎಲ್ಲಾ ಕಾಲದಲ್ಲೂ ಇರುವವನು, ಎಲ್ಲಕ್ಕೂ ಕಾರಣನಾದವನು ಮತ್ತು  ಪರಿಪೂರ್ಣನಾದವನು.

26) ಶರ್ವಃ  

ಶರ್ವ ಎಂದರೆ ಶಿವನೊಳಗೆ ನೆಲೆಸಿ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು. ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು ಶರ್ವ.

27) ಶಿವಃ 

‘ಶ’ ಅಂದರೆ ಸುಖ; ಶಿವ ಎಂದರೆ ಜ್ಞಾನಾನಂದ ಹಾಗೂ ಪರಮ ಮಂಗಳ ಸ್ವರೂಪ.

28) ಸ್ಥಾಣುಃ

ಸ್ಥಾಣು ಎಂದರೆ ‘ಚಲಿಸದ’ ಎನ್ನುವ  ಅರ್ಥವನ್ನು ಕೊಡುತ್ತದೆ. ಭಗವಂತ ಸರ್ವಗತ  ಅದ್ದರಿಂದ ಆತ  ಸ್ಥಾಣು. ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ  ಭಗವಂತ ಇದ್ದಾನೆ. ಆತ  ಆಕಾಶಕ್ಕಿಂತ  ದೊಡ್ಡವ , ಪರಮಾಣುಗಿಂತ ಚಿಕ್ಕವ!  It moves and it moves not! ಚಲಿಸಿದಂತೆ ಕಾಣುವ ಚಲಿಸದೇ ಇರುವ ಭಗವಂತ ಸ್ಥಾಣು.   

29) ಭೂತಾದಿಃ

ಭೂತಾದಿ ಎಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ, ಎಲ್ಲಾ ಚರಾಚರಾತ್ಮಕವಾದ ಹಾಗೂ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ. ಅಷ್ಟೇ ಅಲ್ಲ, ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು, ಕೊನೆಗೆ ಸಂಹಾರ ಮಾಡುವವನೂ ಅವನೇ.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ, ಪ್ರಪಂಚದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದವನು ಭೂತಾದಿ. ಇಷ್ಟೇ ಅಲ್ಲದೆ  ಭೂತರು ಎಂದರೆ ಮುಕ್ತರು ಕೂಡ ಹೌದು. ಮುಕ್ತರಿಗೆ ಮುಕ್ತಿಯನ್ನು ಕರುಣಿಸಿವನು ಭೂತಾದಿ.

30) ನಿಧಿರವ್ಯಯಃ

ನಿಧಿಃ+ಅವ್ಯಯಃ =ನಿಧಿರವ್ಯಯ. ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು). ಭಗವಂತನ ಅರಿವೇ  ಅತೀ ದೊಡ್ಡ ಕರಗದ ಅಥವಾ ಅಳಿಯದ (ಅವ್ಯಯ)  ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ  ಅಡಗಿರುವ ಹೃತ್ಕಮಲ ಮಧ್ಯ ನಿವಾಸಿಯಾದ ಭಗವಂತ ಅಪೂರ್ವ ಹಾಗೂ ಅಮೂಲ್ಯವಾದ ನಿಧಿ. ಅವನು ಅವಿ  ಅಂದರೆ ಅವತಿ ಅಥವಾ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ ನಿರಂತರ ರಕ್ಷಣೆ ಮಾಡುವವನು. ಅಯಃ  ಎಂದರೆ  ಎಲ್ಲಾ ಕಡೆ ಇರುವವನು. ನಮ್ಮ ಕ್ಷೇಮಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗೂ  ಎಲ್ಲಾ ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯಃ.

31) ಸಂಭವಃ

ಸಂಭವಃ  ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗೂ ಜಗತ್ತಿನ ಪಾಲನೆಗೋಸ್ಕರ  ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ  - ಶ್ರೇಷ್ಠವಾದ ಉನ್ನತಿ ಅಥವಾ ಮುಕ್ತಿ  ಯಾರಿಂದ  ಸಿಗುತ್ತದೋ ಅವನು ಸಂಭವಃ

32) ಭಾವನಃ

ಒಬ್ಬೊಬ್ಬರೊಳಗಿದ್ದು  ಅವರ ಭಾವನೆಗಳನ್ನು  ನಿಯಂತ್ರಿಸುವ ಶಕ್ತಿಯಾದ ಭಗವಂತ  ಭಾವನಃ .
ಭಾವಂ+ನಯತಿ=ಭಾವನಃ  ಅಂದರೆ ನಮಗೆ ಆನಂದವನ್ನು ಕೊಡುವವನು; ಭಾವಂ+ಅಪನಯತಿ=ಭಾವನಃ ಅಂದರೆ ನಾವು ಕೆಟ್ಟ ದಾರಿಯಲ್ಲಿ ನಡೆದಾಗ ನಮ್ಮನ್ನು ಸರಿ ದಾರಿಗೆ ತರಲು ನಮಗೆ ದುಃಖವನ್ನು ಕೊಡುವವನು. ಹೀಗೆ ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .

33) ಭರ್ತಾ

ಭರ್ತಾ ಎಂದರೆ ಎಲ್ಲವನ್ನೂ ಹೊತ್ತವನು, ಇಡೀ ವಿಶ್ವವನ್ನು ಧರಿಸಿದವನು. ವಿಶ್ವದ ಮೂಲಾಧಾರನಾದ ಭಗವಂತ ಭರ್ತಾ.

34) ಪ್ರಭವಃ

ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ, ಎಲ್ಲಕ್ಕಿಂತ ವಿಶಿಷ್ಟನಾಗಿರುವ, ಜ್ಞಾನ ಸ್ವರೂಪನಾದ ಭಗವಂತ.
ಯಾರು ಎಲ್ಲರಿಗಿಂತ ದೊಡ್ಡವನೋ, ಯಾರಿಂದ ಎಲ್ಲರೂ ಎತ್ತರಕ್ಕೆ  ಏರಲು  ಸಾಧ್ಯವೋ, ಅವನು ಪ್ರಭವಃ.

35) ಪ್ರಭುಃ

ಭಗವಂತ ಸರ್ವಸಮರ್ಥ ಆದ್ದರಿಂದ ಆತ ಎಲ್ಲರ ಪ್ರಭು.

36) ಈಶ್ವರಃ

ಈಶರು ಎಂದರೆ ನಮ್ಮ ದೇಹ ಹಾಗೂ ಪ್ರಪಂಚಕ್ಕೆ ಸಂಬಂಧಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ ಶನಿ- ಪೃಥ್ವಿಯ  ಅಭಿಮಾನಿ ದೇವತೆ; ಬುಧ- ನೀರಿನ ಅಭಿಮಾನಿ ದೇವತೆ; ಗಣಪತಿ- ಆಕಾಶದ ಅಭಿಮಾನಿ ದೇವತೆ; ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ- ನಾಲಿಗೆಯ ಅಭಿಮಾನಿ ದೇವತೆ; ಅಗ್ನಿ- ಮಾತಿನ ಅಭಿಮಾನಿ ದೇವತೆ; ಇಂದ್ರ- ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ; ಅನಿರುದ್ಧ , ಬೃಹಸ್ಪತಿ , ವರುಣ , ಮಿತ್ರ , ಇಂದ್ರ ,  ಕಾಮ , ಗರುಡ , ಶೇಷ, ರುದ್ರ , ವಾಯು - ಇವರೆಲ್ಲರೂ ಮನಸ್ಸಿನ ಅಭಿಮಾನಿ ದೇವತೆಗಳು . ಶ್ರದ್ಧೆಯ ದೇವತೆ- ಸರಸ್ವತಿ. ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು  ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ಧರಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಠನಾದವ , ಈ ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.

ಮುಂದುವರೆಯುವುದು.....

No comments:

Post a Comment