ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋsನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 46 ||
೪೨೮) ವಿಸ್ತಾರಃ
ಇದು ಸೃಷ್ಟಿಯ ರಹಸ್ಯವನ್ನು ಹೇಳುವ ಒಂದು ಸುಂದರವಾದ ನಾಮ. ಪ್ರಳಯಕಾಲದಲ್ಲಿ ಸ್ಥೂಲವಾದ ಈ ಪ್ರಪಂಚ ಸೂಕ್ಷ್ಮ ರೂಪದಲ್ಲಿ ಉಳಿಯುತ್ತದೆ. ಸೃಷ್ಟಿ ಕಾಲದಲ್ಲಿ ಸೂಕ್ಷ್ಮವಾಗಿರುವ ಪ್ರಪಂಚವನ್ನು ಭಗವಂತ ವಿಸ್ತಾರಗೊಳಿಸಿ ಸ್ಥೂಲ ಪ್ರಪಂಚ ನಿರ್ಮಾಣ ಮಾಡುತ್ತಾನೆ. ಮಹತತ್ವ-ಅಹಂಕಾರ ತತ್ವ-ಆಕಾಶ-ಗಾಳಿ-ಬೆಂಕಿ-ನೀರು-ಭೂಮಿ ಹೀಗೆ ಸೃಷ್ಟಿ ಸೂಕ್ಷ್ಮ ರೂಪದಿಂದ ಸ್ಥೂಲ ಪ್ರಪಂಚವಾಗಿ ವಿಸ್ತಾರಗೊಳ್ಳುತ್ತದೆ. ಇಲ್ಲಿ ಸೃಷ್ಟಿ ಎಂದರೆ ಇಲ್ಲದ ಸೃಷ್ಟಿ ಅಲ್ಲ. ಇದ್ದದ್ದನ್ನು ಸ್ಥೂಲ ರೂಪಗೊಳಿಸಿ ಕಾಣುವ ರೂಪ ಕೊಡುವುದು. ನಾಮಾತ್ಮಕ ಪ್ರಪಂಚದಿಂದ ನಾದ, ನಾದದಿಂದ ತರಂಗ, ನಾದ ತರಂಗದಿಂದ ರೂಪ, ಈ ರೂಪ ಬೆಳೆದು ವಿಸ್ತಾರವಾಗಿ ಅಖಂಡ ಬ್ರಹ್ಮಾಂಡ ನಿರ್ಮಾಣ. ಪ್ರಪಂಚವನ್ನು ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನಾಗಿ ವಿಸ್ತರಿಸಿ ಪ್ರತಿಯೊಂದು ವಸ್ತುವಿನಲ್ಲೂ ಆಯಾ ರೂಪದಲ್ಲಿ ಭಗವಂತ ತುಂಬಿಕೊಂಡ. ಇದು ಒಂದು ಹಣತೆಯಿಂದ ಸಹಸ್ರಾರು ಹಣತೆಗಳನ್ನು ಹಚ್ಚಿದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದಾಗ ಮೂಲ ದೀಪ ತನ್ನ ಪ್ರಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇ ರೀತಿ ಭಗವಂತ ಸಮಸ್ತ ಬ್ರಹ್ಮಾಂಡದಲ್ಲಿ ಸಮಸ್ತ ಚರಾಚರಗಳಲ್ಲಿ ಬೆಳಕಾಗಿ ತುಂಬಿದ. ಪ್ರತಿಯೊಂದು ಜೀವರಲ್ಲಿ ಸಂತಾನ ವಿಸ್ತಾರ ಅಥವಾ ಜ್ಞಾನ ವಿಸ್ತಾರದ ಬಯಕೆಯ ಬೀಜವನ್ನು ಬಿತ್ತಿ ಈ ಪ್ರಪಂಚದ ವಿಸ್ತಾರಕ್ಕೆ ಕಾರಣನಾದ. ಹೀಗೆ ಪ್ರಪಂಚ ಸೃಷ್ಟಿ ಹಾಗೂ ಅದರ ವಿಸ್ತಾರದ ಮೂಲನಾದ ಭಗವಂತ ವಿಸ್ತಾರಃ.
೪೨೯) ಸ್ಥಾವರಃ
ಸ್ಥಾ+ಅವ+ರ; 'ಸ್ಥಾ' ಎಂದರೆ ಪ್ರತಿಯೊಂದು ವಸ್ತುವಿನಲ್ಲಿ ಸನ್ನಿಹಿತನಾದ, ನಮ್ಮ ಹಿತಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ ಸ್ಥಿತನಾದ ಭಗವಂತ, 'ಅವ' ಎಂದರೆ ನಮ್ಮ ಆಗು ಹೋಗುಗಳನ್ನು, ನಾವು ಮಾಡಲಾಗದ್ದನ್ನು ನಮ್ಮೊಳಗೆ ಕುಳಿತು ಮಾಡಿಸುವ ಭಗವಂತ. 'ರ' ಎಂದರೆ ರಮಿಸುವುದು. ಇಡೀ ವಿಶ್ವವನ್ನು ಸೃಷ್ಟಿ ಮಾಡುವುದು, ಸೃಷ್ಟಿ ಮಾಡಿ ಅದರೊಳಗೆ ಪ್ರವೇಶ ಮಾಡುವುದು, ಪ್ರವೇಶಿಸಿ ಎಲ್ಲರನ್ನೂ ರಕ್ಷಿಸಿ ನಡೆಸಿ ಕೊನೆಗೆ ಸಂಹಾರ ಮಾಡುವುದು ಭಗವಂತನ ಆನಂದದ ಲೀಲೆ. ಇಂತಹ ಭಗವಂತನಿಗೆ 'ಸ್ಥಾವರಃ' ಅನ್ವರ್ಥ ನಾಮ.
೪೩೦) ಸ್ಥಾಣುಃ
ಎಂದೂ ಸ್ಥಿರತೆಯನ್ನು ಕಳೆದುಕೊಳ್ಳದ ವಸ್ತು, ಜೀವ ಸ್ವರೂಪದೊಳಗೆ ಅಣುವಿಗಿಂತ ಅಣುವಾಗಿ ಕುಳಿತ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಸ್ಥಾಣುಃ. ನಮ್ಮೊಳಗಿರುವ ವಿಶ್ವ ರೂಪಿ ಭಗವಂತ ಎಷ್ಟು ಸೂಕ್ಷ್ಮ ಎಂದರೆ ಅದನ್ನು ಊಹಿಸುವುದು ಅಸಾಧ್ಯ. ಕುದುರೆಯ ಬಾಲದ ಕೂದಲಿನ ತುದಿ ಭಾಗವನ್ನು ಸುಮಾರು ಹತ್ತು ಸಾವಿರ ಭಾಗವನ್ನಾಗಿ ಮಾಡಿದರೆ ಅದರ ಒಂದು ಭಾಗ ಎಷ್ಟು ಗಾತ್ರದಲ್ಲಿರಬಹುದೋ ಅಷ್ಟು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವ ನಮ್ಮ ಸ್ವರೂಪ ಭೂತ ಜೀವದೊಳಗೆ ಭಗವಂತ ಸ್ಥಿತನಾಗಿದ್ದಾನೆ. ಹೀಗೆ ಅಚಲನಾದ, ಯಾವ ಶಕ್ತಿಗೂ ಅಭೇದ್ಯನಾದ, ನಿರ್ವಿಕಾರ ಭಗವಂತ ಸ್ಥಾಣುಃ.
೪೩೧) ಪ್ರಮಾಣಮ್
ಎಲ್ಲಕ್ಕೂ ಕೊನೆಯ ಪ್ರಮಾಣ ಭಗವಂತ. ಯಾವುದು ಸರಿ, ಯಾವುದು ತಪ್ಪು, ಯಾವುದು ಧರ್ಮ, ಯಾವುದು ಅಧರ್ಮ ಎನ್ನುವುದಕ್ಕೆ ಭಗವಂತನೊಬ್ಬನೇ ಕೊನೆಯ ಪ್ರಮಾಣ. ಜಗತ್ತಿನ ಎಲ್ಲಾ ಪ್ರಮಾಣಗಳು(ಎಲ್ಲಾ ವೇದ ಶಾಸ್ತ್ರಗಳು) ಯಾರನ್ನು ಹೇಳುತ್ತವೋ ಅವನು ಪ್ರಮಾಣಃ.
'ಪ್ರಮಾ' ಎಂದರೆ 'ಯಥಾರ್ಥ ಜ್ಞಾನ' 'ಅಣಯತಿ' ಎಂದರೆ ನಮ್ಮೊಳಗಿದ್ದು ದಯಪಾಲಿಸುವುದು. ಭಗವಂತನನ್ನು ಬರಿದೆ ವೇದಗಳನ್ನೋದುವುದರಿಂದ ಕಾಣಲು ಸಾಧ್ಯವಿಲ್ಲ. ತಪಸ್ಸಿನಿಂದ, ದಾನದಿಂದ, ಇಲ್ಲ ಯಜ್ಞದಿಂದ ಕಾಣಲು ಸಾಧ್ಯವಿಲ್ಲ. ಆತನನ್ನು ಕಾಣಲು ಆತನ ಬಗ್ಗೆ ಯಥಾರ್ಥ ಜ್ಞಾನ ಬೇಕು. ನಮ್ಮೊಳಗಿದ್ದು ನಮಗೆ ಇಂತಹ ಜ್ಞಾನವನ್ನು ಕೊಡುವ ಭಗವಂತ ಪ್ರಮಾಣಮ್. ಆತನನ್ನು ಕಾಣಲು ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ.
ನಾಹಂ ವೇದೈರ್ನ ತಪಸಾ ನ ದಾನೇನ ನಚೇಜ್ಯಯಾ
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ||
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ
ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟುಂ ಚ ಪರಂತಪ ||
೪೩೨) ಬೀಜಮವ್ಯಯಮ್
ಭಗವಂತ ಎಂದೂ ವಿಕಾರಗೊಳ್ಳದ, ನಾಶವಾಗದ ಬೀಜ. ಈ ಜಗತ್ತು ಭಗವಂತನೆಂಬ ಬೀಜದಿಂದಲೇ ಹುಟ್ಟಿ ಬಂತು. ಆದರೆ ಆ ಬೀಜ ಜಗತ್ತಾಗಿ ವಿಕಾರಗೊಂಡ ಬೀಜವಲ್ಲ. ಭಗವಂತನಿಂದ ಈ ಪ್ರಪಂಚ ಅಭಿವ್ಯಕ್ತವಾಯಿತೇ ಹೊರತು ಭಗವಂತ ಪ್ರಪಂಚವಾಗಿ ರೂಪಾಂತರಗೊಂಡಿದ್ದಲ್ಲ. ಈ ಪ್ರಪಂಚ ಆತನ ಶರೀರವಲ್ಲ. ಜ್ಞಾನಾನಂದಮಯನಾದ ಭಗವಂತ ಈ ಪ್ರಪಂಚದ ಮೂಲ ಕಾರಣ ಹಾಗೂ ಧಾರಕ ಶಕ್ತಿ. ಹೀಗೆ ಅಳಿವಿರದ, ವಿಕಾರಗೊಳ್ಳದ ಜಗದ ಮೂಲ ಕಾರಣ ಭಗವಂತ ಬೀಜಮವ್ಯಯಮ್.
೪೩೩) ಅರ್ಥಃ
ಅರ್ಥಃ ಎಂದರೆ ಎಲ್ಲರೂ ಬಯಸುವಂತವನು; ಮನುಷ್ಯನು ಬಯಸುವ ಬಯಕೆಗಳಲ್ಲಿ ಶ್ರೇಷ್ಠವಾದ ಬಯಕೆ ಭಗವಂತನ ಬಯಕೆ. ಬಯಕೆಗಳ ಬಗ್ಗೆ ಹೇಳುವಾಗ ಮಹಾಭಾರತದ ಒಂದು ಘಟನೆ ಇಲ್ಲಿ ನೆನಪಿಗೆ ಬರುತ್ತದೆ. ಒಮ್ಮೆ ಧರ್ಮರಾಯನ ಸಮ್ಮುಖದಲ್ಲಿ ಧರ್ಮ, ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಪುರುಷಾರ್ಥ ಯಾವುದು ಎನ್ನುವ ವಿಷಯದ ಬಗ್ಗೆ ಚರ್ಚೆಯಾಗುತ್ತದೆ. ಆಗ ಸಭೆಯಲ್ಲಿದ್ದ ಪ್ರಮುಖರು 'ಧರ್ಮವೇ' ಶ್ರೇಷ್ಠವಾದ ಪುರುಷಾರ್ಥ ಎಂದು ಹೇಳುತ್ತಾರೆ. ಇದಕ್ಕೆ ವಿರೋಧಿಸಿದ ಅರ್ಜುನ ಧರ್ಮಕ್ಕಿಂತ ಅರ್ಥವೇ ಮೇಲು, ಏಕೆಂದರೆ ಬಡವನನ್ನು ಈ ಪ್ರಪಂಚದಲ್ಲಿ ಯಾರೂ ಗುರುತಿಸಲಾರರು. ಧರ್ಮವನ್ನು ಪಾಲಿಸಲು 'ಅರ್ಥ' ಮುಖ್ಯ ಎಂದು ವಾದಿಸುತ್ತಾನೆ. ಕೊನೆಯದಾಗಿ ಭೀಮಸೇನ ಎಲ್ಲರ ವಾದವನ್ನು ಬದಿಗಿರಿಸಿ ಸರ್ವ ಶ್ರೇಷ್ಠ ಪುರುಷಾರ್ಥ 'ಕಾಮ' ಎನ್ನುತ್ತಾನೆ! ಎಲ್ಲರಿಗೂ ಈ ಬಗ್ಗೆ ಆಶ್ಚರ್ಯವಾಗುತ್ತದೆ. ನಾವು 'ಕಾಮ' ಎಂದಾಗ ಅದರ ಅತ್ಯಂತ ಸೀಮಿತ ಅರ್ಥವನ್ನು ಮಾತ್ರ ನೋಡುತ್ತೇವೆ. 'ಕಾಮ' ಎಂದರೆ ಬಯಕೆ. ನಮಗೆ ಬಯಕೆಗಳೇ ಇಲ್ಲದಿದ್ದರೆ ಧರ್ಮವೂ ಇಲ್ಲ, ಅರ್ಥವೂ ಇಲ್ಲ! ಧರ್ಮ ಮಾರ್ಗದಲ್ಲಿ ನಡೆಯಬೇಕು ಎನ್ನುವ ಬಯಕೆ ಇಲ್ಲದಿದ್ದರೆ ಧರ್ಮ ಅಸಾಧ್ಯ! ಜ್ಞಾನಿಗಳಿಗೆ ಇರುವ ಅತ್ಯಂತ ಮಹಾನ್ ಬಯಕೆ ದೇವರನ್ನು ಕಾಣಬೇಕು ಎನ್ನುವುದು. ಹೀಗೆ ಎಲ್ಲರೂ ಬಯಸುವ ಭಗವಂತ ಅರ್ಥಃ.
ಸಮಸ್ತ ವೇದಗಳ ಮುಖ್ಯಾರ್ಥ ಭಗವಂತನೊಬ್ಬನೆ. ಮೇಲ್ನೋಟಕ್ಕೆ ವೇದ ‘ಕರ್ಮ’, ‘ವ್ಯವಹಾರ’, ‘ಪ್ರಪಂಚವನ್ನು’ ಹೇಳುವಂತೆ ಕಾಣಿಸಿದರೂ, ವೇದದ ಮುಖ್ಯಾರ್ಥ ಭಗವಂತ. ಹೀಗೆ ಸರ್ವ ವೇದಗಳಿಂದ, ಸರ್ವ ಶಬ್ದಗಳಿಂದ ವಾಚ್ಯನಾದ, ಎಲ್ಲರೂ ಬಯಸುವ ಭಗವಂತ ಅರ್ಥಃ.
೪೩೪) ಅನರ್ಥಃ
ಸೃಷ್ಟ್ಯಾದಿಗಳಿಂದ ತನಗೆ ಯಾವ ಪ್ರಯೋಜನವೂ ಇರದವನು ಅನರ್ಥಃ. ಈ ಪ್ರಪಂಚವನ್ನು ಯಾವುದೇ ಸ್ವಪ್ರಯೋಜನವಿಲ್ಲದೆ ನಮಗಾಗಿ ನಿರ್ಮಿಸಿರುವ ಭಗವಂತ, ತನ್ನ ನಿಯಮವನ್ನು ತಾನೂ ಪಾಲಿಸುತ್ತಾನೆ. ಪ್ರಕೃತಿಯ ನಿಯಮವನ್ನು ಮೀರಿ ನಡೆಯುವವರಿಗೆ ಆತ ಅನರ್ಥ. ವೇದಗಳನ್ನು ನಾಶಮಾಡಲು ಹೊರಟ ಹಯಗ್ರೀವನಿಗೆ ಮತ್ಸ್ಯಾವತಾರಿ ಭಗವಂತ 'ಅನರ್ಥಕಾರಿಯಾದ'; ಭೂಮಿಯ ಆಕರ್ಷಣ ಶಕ್ತಿಯನ್ನು ಕಳಚಲು ಹೋದ ಹಿರಣ್ಯಾಕ್ಷನಿಗೆ ವರಾಹರೂಪಿ ಭಗವಂತ ಅನರ್ಥಕಾರಿಯಾದ; ಧರ್ಮ ಕಾರ್ಯ ನಡೆಯಬಾರದು, ಯಾರ ಬಾಯಲ್ಲೂ ದೇವರ ಹೆಸರು ಬರಬಾರದು, ನಾನೇ ದೇವರು ಎಂದ ಹಿರಣ್ಯಕಶಿಪುವಿಗೆ 'ನರಸಿಂಹನಾಗಿ' ಭಗವಂತ ಅನರ್ಥಕಾರಿಯಾದ. ರಾಮನಾಗಿ ರಾವಣ ಕುಂಭಕರ್ಣರಿಗೆ; ಕೃಷ್ಣನಾಗಿ ಶಿಶುಪಾಲ ದಂತವಕ್ರರಿಗೆ ಅನರ್ಥನಾಗಿ, ಶಸ್ತ್ರವನ್ನು ಹಿಡಿಯದೆ ಹದಿನೆಂಟು ಅಕ್ಷೋಹಿಣಿ ಸೈನ್ಯಕ್ಕೆ ಅನರ್ಥಕಾರಿಯಾದ ಭಗವಂತ ಅನರ್ಥಃ.
೪೩೫) ಮಹಾಕೊಶಃ
ವೇದವೆಂಬ ಹಿರಿಯ ಅರಿವಿನ ಕೋಶದಲ್ಲಿ ತುಂಬಿದ ಭಗವಂತ, ಬ್ರಹ್ಮಾಂಡವೆಂಬ ಮಹಾಕೋಶದೊಳಗೆ ಅಂತರ್ಯಾಮಿಯಾಗಿ ತುಂಬಿರುವ ಮಹಾನ್ ಶಕ್ತಿ. ನಮ್ಮಲ್ಲಿರುವ ಪಂಚಕೋಶ (ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಹಾಗೂ ಆನಂದಮಯ ಕೋಶ)ದ ಒಳಗೆ ಅಡಗಿರುವ ಭಗವಂತ ಮಹಾಕೊಶಃ.
೪೩೬) ಮಹಾಭೋಗಃ
ಈ ಪ್ರಪಂಚದಲ್ಲಿ ಯಾರ್ಯಾರು ಏನೇನು ಭೋಗಿಸುತ್ತಾರೆ ಅವೆಲ್ಲವನ್ನು ಭೋಗಿಸುವವನು ಭಗವಂತ. ಇಡಿಯ ಜಗವನ್ನೇ ಕಬಳಿಸುವ ಹಿರಿಯ ಪೂರ್ಣಾನಂದ ಭೋಗಿ ಭಗವಂತ ಮಹಾಭೋಗಃ.
೪೩೭) ಮಹಾಧನಃ
ಈ ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಂಪತ್ತು ಭಗವಂತ. ಈ ಜಗತ್ತಿನಲ್ಲಿ ಏನೇನು ಸಂಪತ್ತಿದೆ ಅವೆಲ್ಲವೂ ಅವನಿಗೆ ಸೇರಿದ್ದು. ಅರಿವೆಂಬ ಹಿರಿಯ ಸಿರಿಯನ್ನೀಯುವ ಭಗವಂತ ಮಹಾಧನಃ.
ಮುಂದುವರೆಯುವುದು...
No comments:
Post a Comment