Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -33


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಯುಗಾದಿ ಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || 33 ||

೩೦೧) ಯುಗಾದಿಕೃತ್

ಈ ಪ್ರಪಂಚ ಸೃಷ್ಟಿಯಾದಂದಿನಿಂದ ಒಂದು ಯುಗದ ಕಲ್ಪನೆಯಿದೆ. ಯುಗಗಳ ನಾಲ್ಕು ಗುಂಪು ಸೇರಿ ಯುಗಚಕ್ರವಾಗುತ್ತದೆ. ಎಲ್ಲಕ್ಕಿಂತ ಚಿಕ್ಕ ಯುಗ ಕಲಿಯುಗ. ಇದರ ಅವಧಿ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷ. ದ್ವಾಪರ ಯುಗದ ಅವಧಿ ಕಲಿಯುಗದ ಎರಡರಷ್ಟು ಅಂದರೆ ಎಂಟು ಲಕ್ಷದ ಅರವತ್ನಾಲ್ಕು ಸಾವಿರ ವರ್ಷಗಳು. ಕಲಿಯುಗದ ಮೂರರಷ್ಟು ಅವಧಿ ತ್ರೇತಾಯುಗ ಅಂದರೆ ಹನ್ನೆರಡು ಲಕ್ಷದ ತೊಂಬತ್ತಾರು ಸಾವಿರ ವರ್ಷ. ಯುಗದ ಆದಿ ಕೃತಯುಗ, ಇದರ ಅವಧಿ ಕಲಿಯುಗದ ನಾಲ್ಕುಪಟ್ಟು ಅಂದರೆ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರ್ಷಗಳು. ಆದ್ದರಿಂದ ಒಂದು ಯುಗಚಕ್ರದಲ್ಲಿ ನಲವತ್ಮೂರು ಲಕ್ಷದ ಇಪ್ಪತ್ತು ಸಾವಿರ ವರ್ಷಗಳಿರುತ್ತವೆ. ಇಂತಹ ಇಪ್ಪತ್ತೊಂದು ಯುಗಚಕ್ರಗಳಿಗೆ ಹದಿನೆಂಟು ಲಕ್ಷದ ಐವತ್ತು ಸಾವಿರ ವರ್ಷಗಳನ್ನು ಸೇರಿಸಿದರೆ ಒಂದು ಮನ್ವಂತರ(೩೦,೬೭,೨೦,೦೦೦+೧೮,೫೦,೦೦೦). ಇಂತಹ ಹದಿನಾಲ್ಕು ಮನ್ವಂತರಗಳು ಹಾಗೂ ಜೊತೆಗೆ ಮನ್ವಂತರಗಳ ನಡುವಿನ ಹದಿಮೂರು ಪ್ರಳಯಕಾಲದ ಇಪ್ಪತ್ತುಸಾವಿರ ವರ್ಷಗಳು, ಒಟ್ಟಿಗೆ ೪೩೨ ಕೋಟಿ (೩೦,೮೫,೭೦,೦೦೦×೧೪+೨೦,೦೦೦) ವರ್ಷಗಳು. ಇದು ಚತುರ್ಮುಖನ ಒಂದು ಹಗಲು. ಆದ್ದರಿಂದ ಚತುರ್ಮುಖನ ಒಂದು ದಿನ ಅಂದರೆ ೮೬೪ ಕೋಟಿ ವರ್ಷಗಳು. ಚತುರ್ಮುಖನ ಆಯಸ್ಸು ೧೦೦ ವರ್ಷ ಅಂದರೆ ೩೧ ಸಾವಿರದ ೧೦೪ ಸಾವಿರ ಕೋಟಿ ವರ್ಷ (೮೬೪,೦೦೦೦೦೦೦×೩೦×೧೨×೧೦೦=೧೦೪,೦೦೦೦೦೦೦೦೦೦) ಈ ರೀತಿ ಕಾಲ ಚಕ್ರ ತಿರುಗುತ್ತಿರುತ್ತದೆ. ಕಲಿ ಯುಗ ಕಲಹಗಳ ಯುಗ, ಆದರೆ ತ್ರೇತಾಯುಗದಲ್ಲೂ ಕೂಡ ರಾವಣನಂಥ ದುಷ್ಟ ರಾಕ್ಷಸರಿದ್ದಿದ್ದನ್ನು ಕಾಣುತ್ತೇವೆ. ಆದ್ದರಿಂದ ಭಗವಂತನ ನಿರಂತರ ಉಪಾಸನೆ ನಮ್ಮ ಬದುಕನ್ನು ಕೃತಯುಗಕ್ಕೆ ಕೊಂಡೋಯ್ಯಬಲ್ಲುದೇ ಹೊರತು ಕಾಲವಲ್ಲ. ಕಲಿಯುಗದಲ್ಲಿದ್ದು ಕೃತಯುಗದ ಆನಂದವನ್ನು ಭಗವಂತನ ನಿರಂತರ ಉಪಾಸನೆಯಿಂದ ಪಡೆಯಬಹುದು. ಇದು ಭಗವಂತನ ' ಯುಗಾದಿಕೃತ್' ನಾಮ ಉಪಾಸನೆಯ ತಾತ್ಪರ್ಯ.

೩೦೨) ಯುಗಾವರ್ತಃ

ಮೇಲೆ ಹೇಳಿದಂತೆ ಯುಗದ ಆದಿಗೆ ಕಾರಣಕರ್ತನಾದ ಭಗವಂತ ಯುಗದ ಆವರ್ತನೆಗೂ ಕಾರಣಕರ್ತ. ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಯುಗಚಕ್ರವನ್ನು ತಿರುಗಿಸುವ ಭಗವಂತ ಯುಗಾವರ್ತ.

೩೦೩) ನೈಕಮಾಯಃ

ಭಗವಂತನ ಮಾಯೆ ಅನೇಕ. ವೈದಿಕ ಸಾಹಿತ್ಯದಲ್ಲಿ 'ಮಾಯ' ಎನ್ನುವ ಪದಕ್ಕೆ 'ಜ್ಞಾನ, ಇಚ್ಚೆ, ಮಹಿಮೆ ಇತ್ಯಾದಿ ಅರ್ಥವಿದೆ. ಭಗವಂತನ ಮಾಯೆಯಿಂದ ಈ ಜಗತ್ತು ಸೃಷ್ಟಿಯಾಯಿತು ಎಂದರೆ ಭಗವಂತನ ಅನಂತ ಜ್ಞಾನಶಕ್ತಿ ಹಾಗೂ ಇಚ್ಚಾ ಶಕ್ತಿಯಿಂದ ಈ ಜಗತ್ತು ಆವಿಷ್ಕಾರವಾಯಿತು ಎಂದರ್ಥ. ಭಗವಂತ ಅನಂತ ಮಹಿಮ; ಅವನ ಮಹಿಮೆಗೆ ಎಣೆಯಿಲ್ಲ, ಅದು ಅಪರಂಪಾರವಾದದ್ದು. ಇನ್ನು ಮಾಯೆ ಎಂದರೆ ಮೋಹಕ ಶಕ್ತಿ ; ನೈಕಮಾಯ ಎಂದರೆ ನಮ್ಮನ್ನು ಎರಡು ಮೋಹಕ ಶಕ್ತಿಗಳಿಂದ ಕಟ್ಟಿಹಾಕಿದ ಭಗವಂತ. ಅವುಗಳೆಂದರೆ ನಮಗೆ ನಮ್ಮ ಸ್ವರೂಪದ ಅರಿವೇ ಇಲ್ಲದ ಹರಿಯುವ ಪರದೆ ಮತ್ತು ಭಗವಂತನಿಗೂ ಹಾಗೂ ನಮ್ಮ ನಡುವಿನ ಸರಿಯುವಂತಹ ಪರದೆ. ಹೀಗೆ ಜ್ಞಾನಸ್ವರೂಪನಾಗಿದ್ದು, ಜ್ಞಾನಿಗಳಿಗೆ ತನ್ನ ಅರಿವನ್ನು ಕರುಣಿಸುವ ಭಗವಂತ ನೈಕಮಾಯ.

೩೦೪) ಮಹಾಶನಃ

ಮಹಾ+ಅಶನ - ಅಂದರೆ ಇಡೀ ಜಗತ್ತನ್ನು ಕಬಳಿಸಿ ಯೋಗನಿದ್ರೆಯಲ್ಲಿ ಪವಡಿಸುವ ಭಗವಂತ. ಕಠೋಪನಿಷತ್ತಿನಲ್ಲಿ ಹೇಳುವಂತೆ, ಪ್ರಳಯ ಕಾಲದಲ್ಲಿ ಭಗವಂತನಿಗೆ ಬ್ರಹ್ಮ-ವಾಯು ಕೇವಲ ಒಂದು ತುತ್ತು ! ಪ್ರಳಯ ಕಾಲದಲ್ಲಿ ಸಮಸ್ತ ವಿಶ್ವವನ್ನು ಕಬಳಿಸಿ ತನ್ನ ಉದರದಲ್ಲಿ ಪೋಷಿಸುವ ಹಾಗೂ ಪುನಃ ತನ್ನ ನಾಭಿಯಿಂದ ಸೃಷ್ಟಿಯ ನಿರ್ಮಾಣ ಮಾಡುವ ಭಗವಂತ ಮಹಾಶನಃ. ಇನ್ನು ಈ ನಾಮವನ್ನು ಮಹಾ+ಶ+ನ ಎಂದು ಅರ್ಥೈಸಬಹುದು. ಇಲ್ಲಿ 'ಶ' ಅಥವಾ 'ಶಂ' ಎಂದರೆ ಅಂತರಂಗದ ಆನಂದ. 'ನ' ಎಂದರೆ ನಯತಿ ಜೀವರಿಗೆ ಅಂತರಂಗದ ಮಹದಾನಂದವನ್ನು ಕೊಡುವವ ಮಹಾಶನಃ. ಮಹತ್ತಾದ ಆಸೆ ಉಳ್ಳವರು ಮಹಾಶರು. ಇಲ್ಲಿ ಮಹತ್ತಾದ ಆಸೆ ಎಂದರೆ ಯಾವುದೇ ರಾಗ-ದ್ವೇಷವಿಲ್ಲದೆ ಇಡೀ ಜಗತ್ತಿನ ಕಲ್ಯಾಣ ಬಯಸುವುದು. ಜ್ಞಾನಿಗಳಿಗೆ ಇಂತಹ ಸ್ಥಿತಿಯನ್ನು ಕರುಣಿಸುವ ಭಗವಂತ ಮಹಾಶನ.

೩೦೫) ಅದೃಶ್ಯಃ

ಅದೃಶ್ಯಃ ಎಂದರೆ ಕಾಣಸಿಗದವನು. ಭಗವಂತ ಜೀವನ ನಾಟಕದ ಸೂತ್ರಧಾರ ಆದರೆ ಆತ ಕಾಣ-ಸಿಗುವುದಿಲ್ಲ. ಇದಕ್ಕೆ ವಿಶೇಷ ಕಾರಣವಿದೆ. ನಮ್ಮ ಕಣ್ಣಿಗೆ ಕಾಣುವುದು ಕೇವಲ ಮಣ್ಣು-ನೀರು-ಬೆಂಕಿಯಿಂದಾದ ವಸ್ತು ಮಾತ್ರ. ಭಗವಂತನ ಆಕಾರ ಮಣ್ಣು-ನೀರು-ಬೆಂಕಿಯಿಂದಾಗಿಲ್ಲ. ಅವನು ಸ್ವಯಂ ಕಾಣಿಸಿಕೊಳ್ಳಬೇಕು ಎಂದು ಬಯಸದೇ ಕಾಣಿಸಿಕೊಳ್ಳುವುದಿಲ್ಲ.

೩೦೬) ವ್ಯಕ್ತರೂಪಃ (ಅವ್ಯಕ್ತರೂಪಃ)

ಭಗವಂತನ ರೂಪ ಜ್ಞಾನಾನಂದ ಸ್ವರೂಪ. ಆನಂದ, ದುಃಖ, ಸುಖ, ಜ್ಞಾನ, ಅಜ್ಞಾನ, ಇತ್ಯಾದಿ ಕಣ್ಣಿಗೆ ಕಾಣುವ ವಸ್ತುಗಳಲ್ಲ. ಭಗವಂತ ಜ್ಞಾನಾನಂದಮಯ ಅವನ ರೂಪ ಅವ್ಯಕ್ತ. ಆದರೆ ಆತ ಬಯಸಿದರೆ ವ್ಯಕ್ತನಾಗಬಲ್ಲ. ಆತ ಒಲಿದನೆಂದರೆ ತನ್ನ ರೂಪವನ್ನು ತೆರೆದು ತೋರಿಸುತ್ತಾನೆ. ಅವತಾರರೂಪನಾಗಿ ಬಂದಾಗ ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ. ಸೂತ್ರಧಾರನಾದ ಭಗವಂತ ಸ್ವಯಂ ತನ್ನ ಪಾತ್ರವನ್ನು ನಿಭಾಯಿಸಲು ಅವತಾರರೂಪಿಯಾಗಿ ಭೂಮಿಗಿಳಿದು ಬರುತ್ತಾನೆ. ಹೊರಗಣ್ಣಿಗೆ ಕಾಣದ ಭಗವಂತ ಸಾಧಕರಿಗೆ ಧ್ಯಾನದಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಧಕ ಧ್ಯಾನದಲ್ಲಿ ತನ್ನ ಮನಸ್ಸನ್ನು ಅಣಿಗೊಳಿಸುತ್ತಾನೆ. ಆದರೆ ಇದು ಸುಲಭದ ಕೆಲಸವಲ್ಲ. ಮನಸ್ಸನ್ನು ನಿಯಂತ್ರಿಸಿ, ಬುದ್ಧಿಯನ್ನು ನಿಯಂತ್ರಣ ಮಾಡಿ ಅದರಾಚೆಗಿನ ಅಹಂಕಾರ, ಚಿತ್ತ, ಚೇತನ ಎಲ್ಲವನ್ನೂ ನಿಯಂತ್ರಣ ಮಾಡಿ, ಒಂದು ಬಿಂದುವಿನಲ್ಲಿ ಏಕಾಗ್ರನಾದಾಗ ಮನಸ್ಸು ಆತನ ಪ್ರತೀಕವನ್ನು ಕಡೆಯುತ್ತದೆ. ಆದರೆ ಇದು ಕೇವಲ ನಮ್ಮ ಸಂಸ್ಕಾರದ ಪ್ರತಿಮೆ ಹೊರತು ಭಗವಂತನಲ್ಲ. ಸಾಕ್ಷಾತ್ ಭಗವಂತನನ್ನು ಕಾಣಬೇಕಾದರೆ ನಾವು ನಮ್ಮ ಪಂಚ ಕೋಶಗಳಿಂದ ಈಚೆ ಬಂದು ಜ್ಞಾನಾನಂದಮಯರಾಗಬೇಕು. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿ ಆತ್ಮವೇ ಯೋಚಿಸಲು ಆರಂಭಿಸುತ್ತದೆ. ಆಗ ಜ್ಞಾನಾನಂದ ರೂಪನಾದ ಭಗವಂತನನ್ನು ಕಾಣಬಹುದು. ಈ ಕಾರಣಕ್ಕಾಗಿ ಭಗವಂತನ ರೂಪ ವ್ಯಕ್ತ ಹಾಗೂ ಅವ್ಯಕ್ತ!

೩೦೭) ಸಹಸ್ರಜಿತ್

ಭಗವಂತ ಸಾವಿರ ರೂಪವನ್ನು ತೊಟ್ಟವ. ವ್ಯಕ್ತಿ ಒಂದೇ ಆದರೂ ಅವತಾರದಲ್ಲಿ ಅಭಿವ್ಯಕ್ತಿ ಬೇರೆ ಬೇರೆ. ವ್ಯಕ್ತಿ ಏಕ ಅಭಿವ್ಯಕ್ತಿ ಅನಂತ. ಸೃಷ್ಟಿಯ ಆದಿಯಲ್ಲಿ ನಾಲ್ಕು ರೂಪದಲ್ಲಿ ವ್ಯಕ್ತನಾದ (ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ, ವಾಸುದೇವ) ನಂತರ ಪಂಚರೂಪ, ನಂತರ ಕೇಶವಾದಿ ದ್ವಾದಶರೂಪ, ನಂತರ ಸಂಕರ್ಷಣಾದಿ ಇಪ್ಪತ್ನಾಲ್ಕು ರೂಪ, ಆನಂತರ ನಾರಾಯಣಾದಿ ೧೦೮ ರೂಪ, ಆ ಮೇಲೆ ವಿಶ್ವಾದಿ ಸಹಸ್ರರೂಪ. ಈ ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಒಂದೊಂದು ರೂಪದ ಪ್ರತೀಕ. ಸಹಸ್ರಾರು ದೇವತೆಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಭಗವಂತನಿಗೆ ಪ್ರಾಣತತ್ವ ಸದಾ ಜೊತೆಗಾರ. ಸಹಸ್ರಾರು ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಭಗವಂತ ಸಹಸ್ರಜಿತ್.

೩೦೮) ಅನಂತಜಿತ್

ಭಗವಂತ ಅನಂತವನ್ನು ಗೆದ್ದವನು ಹಾಗು ಅನಂತದ ಜೊತೆಗಿರುವವನು. ಗೀತೆಯಲ್ಲಿ ಹೇಳುವಂತೆ:

ಅನಂತಸ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್
ಪಿತ ಣಾಮರ್ಯಮಾ ಚಾಸ್ಮಿ ಯಮಃ ಸಂಯಮ ತಾಮಹಮ್

ನಾಗರ ಹಾವುಗಳಲ್ಲಿ ಶೇಷ ನಾನು (ಅಳಿವಿರದ್ದರಿಂದ 'ಅನಂತ' ಎನ್ನಿಸಿ ಶೇಷನಲ್ಲಿದ್ದೇನೆ). ಜಲಚರಗಳ ಒಡೆಯ ವರುಣ ನಾನು, ಪಿತೃ ದೇವತೆಗಳಲ್ಲಿ ಆರ್ಯಮ ನಾನು , ದಂಡಿಸುವವರಲ್ಲಿ ಯಮ ನಾನು. ಹೀಗೆ ನಾಗರನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶೇಷಶಯನನಾದ ಅನಂತಜಿತ್.

ಮುಂದುವರೆಯುವುದು....

No comments:

Post a Comment