ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಅಗ್ರಣೀಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || 24 ||
೨೨೦) ಅಗ್ರಣೀ
ಅಗ್ರ ಎಂದರೆ ಮುಂದಾಳು. ಅಗ್ರಣೀ ಎಂದರೆ ಎಲ್ಲರ ಮುಂದಾಳಾಗಿ ನಿಂತು, ಅಥವಾ ಮುಂದಾಳುವಿನ ಒಳಗೆ ಕುಳಿತು ದುಷ್ಟ ನಿಗ್ರಹ ಮಾಡುವವ. ಇದಕ್ಕೆ ಉತ್ತಮ ಉದಾಹರಣೆ ಮಹಾಭಾರತ ಯುದ್ದ. ಧರ್ಮದ ಸಂಸ್ಥಾಪನೆಗಾಗಿ ಪಾಂಡವ ಸೇನೆಯ ಸಾರಥಿಯಾಗಿ, ನರನ ಆವೇಶವಿರುವ ಅರ್ಜುನನಲ್ಲಿ ವಿಶೇಷ ರೀತಿಯಲ್ಲಿ ಆವಿರ್ಭೂತನಾಗಿ, ದುಷ್ಟ ಸಂಹಾರ ಮಾಡಿ, ಪ್ರಪಂಚಕ್ಕೆ ಗೀತೆಯ ಮೂಲಕ ವಿಶೇಷ ಸಂದೇಶವನ್ನು ಕರುಣಿಸಿದ ಭಗವಂತ ಅಗ್ರಣೀಃ.
ಮಹಾಭಾರತ ಮೇಲ್ನೋಟಕ್ಕೆ ಒಂದು ಮಹಾಯುದ್ದ. ಆದರೆ ಈ ಯುದ್ದಕ್ಕೂ ನಮ್ಮ ಜೀವನಕ್ಕೂ ನೇರ ಸಂಬಂಧವಿದೆ. ಜೀವನವೇ ಒಂದು ಹೋರಾಟ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿತಪ್ಪಿಸುವ ಕೌರವರೂ ಇದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಕಣ್ಣಿಲ್ಲದ ಧೃತರಾಷ್ಟ್ರ ಅಥವಾ ಕಣ್ಣಿದ್ದೂ ಕುರುಡಿಯಾದ ಗಾಂಧಾರಿಯಂತೆ ನಾವು ನಮ್ಮನ್ನು ದಾರಿ ತಪ್ಪಿಸುವ ಶಕ್ತಿಗಳ ಮೋಹಪಾಶಕ್ಕೆ ಬಲಿಯಾಗಿ, ನಮ್ಮಲ್ಲಿರುವ ಅಮೂಲ್ಯ ಸಂಪತ್ತಾದ ಇಂದ್ರಿಯಗಳನ್ನು ದುರುಪಯೋಗ ಮಾಡಿಕೊಂಡು ದಾರಿ ತಪ್ಪಿದಾಗ, ನಮ್ಮೊಳಗಿರುವ ಬಿಂಬರೂಪಿಯಾದ ಭಗವಂತ ಅಗ್ರಣಿಯಾಗಿ ನಿಂತು ದುಷ್ಟಶಕ್ತಿಗಳ ನಿರ್ಮೂಲ ಮಾಡುತ್ತಾನೆ. ಭಗವಂತನ ಶರಣಾಗತಿಯೊಂದೇ ನಮ್ಮನ್ನು ಉದ್ಧಾರ ಮಾಡಬಲ್ಲದು ಎನ್ನುವುದು ಮಹಾಭಾರತದ ಮೂಲ ಸಂದೇಶ.
೨೨೧) ಗ್ರಾಮಣಿ
ಗ್ರಾಮ ಎಂದರೆ ಸಮುದಾಯ. ಗ್ರಾಮಣಿ ಎಂದರೆ ಸಮುದಾಯದ ಒಡೆಯನಾಗಿದ್ದು ದುಷ್ಟ ನಿಗ್ರಹ ಮಾಡುವ ಭಗವಂತ. ಎಲ್ಲಾ ಜೀವ ಸಮುದಾಯಕ್ಕೆ, ದೇವತೆಗಳ ಸಮುದಾಯಕ್ಕೆ, ಆತ ನಿಯಾಮಕ. ಅಮಿತವಾದ ಜ್ಞಾನಾನಂದಗಳಿಂದ ತುಂಬಿರುವ ಹಾಗು ಪ್ರಪಂಚದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ, ಆಸ್ತಿಕತೆಯ ಸೋಗಿನಲ್ಲಿ ಬದುಕುವ ತಾಮಸರನ್ನು ನಿಗ್ರಹಿಸಿ, ಸಾತ್ವಿಕತೆಯ ರಕ್ಷಣೆ ಮಾಡುವ ಭಗವಂತ ಗ್ರಾಮಣಿ.
೨೨೨) ಶ್ರೀಮಾನ್
ನಮ್ಮಲ್ಲಿ ಶ್ರೀಮಂತರು ಎಂದರೆ ಅತೀ ಹೆಚ್ಚು ಹಣವುಳ್ಳವರು ಎನ್ನುವುದು ಜನರ ಅಭಿಪ್ರಾಯ. ಆದರೆ ನಿಜವಾದ ಸಂಪತ್ತು ಹಣವಲ್ಲ! ಏಕೆಂದರೆ ಹಣ "ಕರಗುವ ಸಂಪತ್ತು". ಒಮ್ಮೆ ಕೋಟ್ಯಾಧಿಪತಿಯಾಗಿರುವ ವ್ಯಕ್ತಿಗಳು ಮುಂದೆ ಭಿಕ್ಷಾಧಿಪತಿಯಾಗಿರುವ ಅನೇಕ ಘಟನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ನೋಡುತ್ತೇವೆ. ಹಣ ಬರುವಾಗ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ, ಹಾಗೆ ಹೋಗುವಾಗ ಕೂಡ ಹೇಗೆ ಹೋಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ನಾವು ನಿಜವಾದ ಶ್ರಿಮಂತರಾಗಬೇಕಾದರೆ ಎಂದೂ "ಕರಗದ" ಸಂಪತ್ತನ್ನೂ ನಮ್ಮದಾಗಿಸಿಕೊಳ್ಳಬೇಕು. ವೇದ ವಿದ್ಯೆಗಳು ಹಾಗೂ ಅದರಿಂದ ಬರುವ ಜ್ಞಾನ ಎಂದೂ ಕರಗದ ಅಪೂರ್ವ ಸಂಪತ್ತು.
ವಿದ್ಯಾದೇವತೆಯಾದ ಸರಸ್ವತಿ-ಭಾರತಿಯರಿಗೂ ಭಗವಂತ ನಿಯಾಮಕ. ಆದ್ದರಿಂದ ಆತ ಶ್ರೀಮಾನ್.
ಈ ಹಿಂದೆ ಹೇಳಿದಂತೆ ಭಗವಂತ ನಮಗೆ ಅತ್ಯಂತ ಅಮೂಲ್ಯವಾದ ಐದು ಶ್ರೀಗಳನ್ನು ಕರುಣಿಸಿದ ಶ್ರೀಮಾನ್. ಅವುಗಳೆಂದರೆ ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು. ಇದಕ್ಕಿಂತ ಹೆಚ್ಚಿನ ಸಂಪತ್ತು ಮನುಷ್ಯನಿಗೆ ಇನ್ನೊಂದಿಲ್ಲ. ಈ ಸಂಪತ್ತನ್ನೂ ನಾವು ಎಂದೂ ದುರುಪಯೋಗ ಮಾಡಿಕೊಳ್ಳಬಾರದು. ಅದಕ್ಕಾಗಿ ಶಾಂತಿ ಮಂತ್ರದಲ್ಲಿ ಒಳ್ಳೆಯದನ್ನು ನೋಡೋಣ. ಒಳ್ಳೆಯದನ್ನು ಮಾಡೋಣ, ಒಳ್ಳೆಯದನ್ನು ಕೇಳೋಣ ಹಾಗೂ ಒಳ್ಳೆಯದನ್ನು ಯೋಚಿಸೋಣ ಎಂದು ಹೇಳಿದೆ.
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಂಗೈಃ ಸ್ತುಷ್ಟುವಾಂ ಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ
ಸ್ವಸ್ತಿ ನಃ ಪೂಷಾ ವಿಶ್ವವೇದಾಃ
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ
ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾಂತಿಃ ಶಾಂತಿಃ ಶಾಂತಿಃ
ಸಾಮಾನ್ಯವಾಗಿ ನಾವು ಜೀವನ ನಿರ್ವಹಣೆಯ ಹಾಗೂ ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುತ್ತಾ ಹಣದ ಹಿಂದೆ ಓಡುತ್ತಾ ಭಗವಂತನ ಅಭಯವನ್ನು ಮರೆತು ಬದುಕುತ್ತೇವೆ. ಗೀತೆಯಲ್ಲಿ ಭಗವಂತ ನಮಗೆ ರಕ್ಷಣೆಯ ಅಭಯವಿತ್ತಿದ್ದಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್.
ಅಂದರೆ ಚಿಂತೆಯನ್ನು ತೊರೆದು ಭಕ್ತಿಯಿಂದ ನನ್ನನ್ನು ಪೂಜಿಸುವ ಭಕ್ತರ ಯೋಗ-ಕ್ಷೇಮದ ಹೊಣೆ ನನ್ನದು. ಆದ್ದರಿಂದ ಅತ್ಯಂತ ಶ್ರೀಮಂತನಾದ ಭಗವಂತನ ಮುಂದೆ ಜುಜುಬಿ ಹಣದ ಅಭಿಷ್ಟವನ್ನು ವ್ಯಕ್ತಪಡಿಸದೆ, ಅವನನ್ನು ಸಂಪೂರ್ಣ ಭಕ್ತಿಯಿಂದ ನಂಬಿ ಬದುಕಿದರೆ, ನಮ್ಮ ಸಕಲ ಅಭಿಷ್ಟವನ್ನೂ ಆತ ಪೂರೈಸಿ ರಕ್ಷಿಸುತ್ತಾನೆ.
೨೨೩) ನ್ಯಾಯಃ
ನಿ+ಆಯ-ನ್ಯಾಯ. ಆಯವ್ಯಯ ಅನ್ನುವ ಪದ ಎಲ್ಲರಿಗೂ ತಿಳಿದ ಸಾಮಾನ್ಯ ಪದ. ಇಲ್ಲಿ ಆಯ ಎಂದರೆ ಲಾಭ. ಎಲ್ಲಾ ನೀತಿಗಳ ಮೂಲ ಪ್ರವರ್ತಕನಾದ ಭಗವಂತ ಭಕ್ತರ ದೊಡ್ಡ ಲಾಭ ಆದ್ದರಿಂದ ಆತ ನ್ಯಾಯಃ.
೨೨೪) ನೇತಾ
ನೇತಾ ಎಂದರೆ ನೇತಾರ ಅಥವಾ ನಾಯಕ. ಸಮಸ್ತ ಚರಾಚರಾತ್ಮಕ ಪ್ರಪಂಚದ, ಬ್ರಹ್ಮಾದಿ ದೇವತೆಗಳ, ಇಂದ್ರಿಯಗಳ, ಪಂಚಭೂತಗಳ ಮತ್ತು ಪಂಚಭೂತಾತ್ಮಕ ಪ್ರಪಂಚದ ನಾಯಕನಾದ ಭಗವಂತ ನೇತಾ. ಅನೇಕ ಅವತಾರಗಳ ಮೂಲಕ ನೇತಾರನಾಗಿ ಭೂಮಿಯನ್ನು ಹಾಗೂ ನಮ್ಮನ್ನು ರಕ್ಷಿಸಿದ ಭಗವಂತ ನೇತಾ.
೨೨೫) ಸಮೀರಣ
ಈರಣ ಎಂದರೆ ಪ್ರೇರಣೆಮಾಡುವವನು. ನಮ್ಮೊಳಗೆ ಅನೇಕ ಅಸುರ ಶಕ್ತಿಗಳು ಹಾಗು ದೇವತಾ ಶಕ್ತಿಗಳು ಪ್ರೇರಣೆ ಮಾಡುತ್ತಿರುತ್ತವೆ. ನಾವು ಈ ಶಕ್ತಿಗಳ ಪ್ರೇರಣೆಗೊಳಗಾಗುತ್ತೇವೆ. ಆದರೆ ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಒಬ್ಬ ಸಮೀರಣ ನಮ್ಮಲ್ಲಿದ್ದಾನೆ. "ಧಿಯೋ ಯೋನಃ ಪ್ರಚೋದಯಾತ್" ಅಂದರೆ ಯಾವ ಭಗವಂತ ಮನೋತತ್ವಗಳನ್ನು ಪ್ರೇರಣೆ ಮಾಡುತ್ತಾನೋ ಅವನು ನಮ್ಮನ್ನು ಒಳ್ಳೆಯ ದಾರಿಯತ್ತ ಪ್ರೇರೇಪಿಸಲಿ ಎಂದರ್ಥ.
೨೨೬) ಸಹಸ್ರಮೂರ್ಧಾ
ಸಾವಿರಾರು ತಲೆಯವನು; ಅಂದರೆ ಸರ್ವ ಜೀವ-ಜಂತುವಿನಲ್ಲಿ ಅಂತರ್ಯಾಮಿ.
೨೨೭) ವಿಶ್ವಾತ್ಮಾ
ಜಗದ ಅಂತರ್ಯಾಮಿ; ಎಲ್ಲೆಡೆ ವ್ಯಾಪಿಸಿರುವವನು; ಬ್ರಹ್ಮಾದಿ ಪ್ರಾಣದೇವರಿಗೂ ಅಂತರ್ಯಾಮಿ.
೨೨೮) ಸಹಸ್ರಾಕ್ಷ
ಸಾವಿರಾರು ಕಣ್ಣುಳ್ಳವನು; ಅಂದರೆ ಅವನು ಕಾಣದ ಸಂಗತಿಯಿಲ್ಲ
೨೨೯) ಸಹಸ್ರಪಾತ್
ಸಾವಿರಾರು ಕಾಲುಗಳುಳ್ಳವನು; ಅಂದರೆ ಅವನು ಹೋಗದ ಜಾಗವಿಲ್ಲ.
ಮುಂದುವರೆಯುವುದು...
No comments:
Post a Comment