Monday, May 15, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -63


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || 63 ||

೫೯೨) ಶುಭಾಂಗಃ

ಮಂಗಳಕರವಾದ ಅಂಗಾಂಗಗಳುಳ್ಳವನು ಹಾಗೂ ಆನಂದಮಯವಾದ ಬೆಳಕಿನ ರೂಪ ಭಗವಂತ ಶುಭಾಂಗಃ. ಸಮಷ್ಟಿಯಾಗಿ ಆತನ ಇಡೀ ದೇಹ ಆನಂದಮಯವಾದ ಬೆಳಕಿನ ಮಾಂಗಲಿಕ ರೂಪ. ಆತ ನಮ್ಮೊಳಗಿರುವ ತನಕ ನಮ್ಮ ದೇಹ ಮಂಗಳ (ಶಿವ). ಆತ ಹೊರಟು ಹೋದ ಮೇಲೆ ಶವ! ಆತನ ಸನ್ನಿಧಾನವಿಲ್ಲದ ದೇಹ ಅಮಂಗಳ.

'ಶುಭಾಂಗ' ಇಲ್ಲಿ 'ಶು' ಎಂದರೆ ಸುಖಸ್ವರೂಪ, 'ಭ' ಎಂದರೆ ಬೆಳಕಿನಪುಂಜ. ಕತ್ತಲು ಹಾಗೂ ದುಃಖದ ಸ್ಪರ್ಶವೇ ಇಲ್ಲದ ಆನಂದಮಯ ಅವಯವಗಳುಳ್ಳ ಜ್ಯೋತಿರ್ಮಯ ಭಗವಂತ ಶುಭಾಂಗಃ.

೫೯೩) ಶಾಂತಿದಃ

ಮೋಕ್ಷವನ್ನು, ಅಜ್ಞಾನದ ಸ್ಪರ್ಶವಿಲ್ಲದ ಪರಿಪೂರ್ಣ ಆನಂದವನ್ನು ಕೊಟ್ಟು ನಮ್ಮನ್ನು ಸಂಸಾರ ಬಂಧದಿಂದ ಬಿಡಿಸುವ ಭಗವಂತ ಶಾಂತಿದಃ.

೫೯೪) ಸ್ರಷ್ಟಾ

ಸೂಕ್ಷ್ಮ ರೂಪಿ ಪರಮಾಣುಗಳ ಪುಂಜದಿಂದ ಸ್ಥೂಲ ರೂಪದ ಈ ಪ್ರಪಂಚವನ್ನು ಸೃಷ್ಟಿಸಿದ ಭಗವಂತ ಸ್ರಷ್ಟಾ.

೫೯೫) ಕುಮುದಃ

'ಮುದ' ಅಂದರೆ ಆನಂದ; 'ಕು' ಎಂದರೆ ಭೂಮಂಡಲ. ಭೂಮಿಗೆ ಆನಂದವನ್ನು ಕೊಡುವುದಕ್ಕೋಸ್ಕರ ಇಳಿದು ಬಂದ ಭಗವಂತ ಕುಮುದಃ.

೫೯೬) ಕುವಲೇಶಯಃ

'ಕು' ಎಂದರೆ ಭೂಮಿ, 'ವಲ' ಎಂದರೆ ಹರಿಯುವುದು. ಪಂಚಭೂತಗಳಲ್ಲಿ ಹರಿಯುವುದು ನೀರು, ಆದ್ದರಿಂದ 'ಕುವಲ' ಎಂದರೆ ನೀರು. ಕುವಲೇಶಯ ಎಂದರೆ ನೀರಿನಲ್ಲಿ ಮಲಗಿದವನು. ಇಲ್ಲಿ 'ನೀರು' ಎಂದರೆ ಸೂಕ್ಷ್ಮರೂಪಿ ಪ್ರಳಯ ಸಮುದ್ರ. ಇಂತಹ ಸೂಕ್ಷ್ಮ ಪ್ರಪಂಚದಲ್ಲಿ ಮಲಗಿದ ಭಗವಂತ ಕುವಲೇಶಯಃ.

೫೯೭) ಗೋಹಿತಃ

'ಗೋವು' ಎನ್ನುವ ಪದವನ್ನು ಹಿಂದೆ ಅನೇಕ ಬಾರಿ ವಿಶ್ಲೇಷಿಸಿದ್ದೇವೆ. ಎಲ್ಲಾ ಬಗೆಯಿಂದಲೂ ನಮಗೆ ಉಪಯೋಗಕ್ಕೆ ಬರುವ ವಸ್ತು  ಗೋವು. ಈ ಪದಕ್ಕೆ ಅನೇಕ ಅರ್ಥಗಳಿವೆ, ಸ್ವರ್ಗ, ಸೂರ್ಯ, ಹಸು, ಭೂಮಿ, ನೀರು, ಕಣ್ಣು, ಕೂದಲು, ವೇದ ಇತ್ಯಾದಿ. ನಮಗೆ ಮಾರ್ಗದರ್ಶನ ಮಾಡುವ ವೇದಗಳನ್ನು ನಮಗೆ ಕರುಣಿಸಿದ ವೇದ ವಾಗ್ಮಯ, ಭೂಮಿಗೆ ಹಿತಕಾರಿಯಾದ, ಗುಂಗುರು ಕೂದಲಿನ ಗೋವಳನಾಗಿ, ಎಲ್ಲರಿಗೂ ಹಿತವನ್ನುಂಟು ಮಾಡಿದ ಭಗವಂತ ಗೋಹಿತಃ.

೫೯೮) ಗೋಪತಿಃ

ಗೋವುಗಳ, ಭೂಮಿಯ, ವೇದದ ಹಾಗೂ ಸ್ವರ್ಗದ ಒಡೆಯ ಭಗವಂತ ಗೋಪತಿಃ.

೫೯೯) ಗೋಪ್ತಾ

ತನ್ನನ್ನು ತಾನು ಮುಚ್ಚಿಟ್ಟುಕೊಂಡು ಜಗತ್ತಿನ ರಕ್ಷಣೆ ಮಾಡುವ ಭಗವಂತ ಗೋಪ್ತಾ. ಎಲ್ಲೆಡೆ ಇದ್ದು ಎಲ್ಲರನ್ನೂ ಕಾಪಾಡುವ ಕರುಣಾಮೂರ್ತಿ.

೬೦೦) ವೃಷಭಾಕ್ಷಃ

ವೃಷಭ-ಅಕ್ಷ ಅಂದರೆ ಧರ್ಮದ ಮೇಲೆ ಕಣ್ಣಿಟ್ಟು ಅದರ ರಕ್ಷಣೆಗೋಸ್ಕರ ಪದೇ ಪದೇ ಭೂಮಿಗೆ ಅವತಾರ ರೂಪಿಯಾಗಿ ಇಳಿದು ಬರುವವ. ಭಗವಂತ ಸ್ವತಃ ಭೂಮಿಗಿಳಿದು ಬರಬಹುದು ಅಥವಾ ಮಹಾ ಪುರುಷರನ್ನು, ಸಾತ್ವಿಕರನ್ನು ಕಳುಹಿಸಬಹುದು. ಅವರೊಳಗೆ ವಿಶೇಷ ಸನ್ನಿಧಾನವನ್ನಿಟ್ಟು ಧರ್ಮ ರಕ್ಷಣೆ ಮಾಡುವ ಭಗವಂತ ವೃಷಭಾಕ್ಷಃ.

೬೦೧) ವೃಷಪ್ರಿಯಃ

ಧರ್ಮದ ನಡೆಯನ್ನು ಪ್ರೀತಿಸುವ ಭಗವಂತ ವೃಷಪ್ರಿಯಃ.

ಮುಂದುವರೆಯುವುದು...

No comments:

Post a Comment