Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -50


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || 50 ||

೪೬೮) ಸ್ವಾಪನಃ

ಸ್ವಾಪನ ಎಂದರೆ ನಿದ್ರೆ ಬರಿಸುವವನು! ಈ ಹಿಂದೆ ಹೇಳಿದಂತೆ ಸೃಷ್ಟಿ ಕಾಲ ೪೩೨ ಕೋಟಿ ವರ್ಷ. ಆ ನಂತರ ೪೩೨ ಕೋಟಿ ವರ್ಷ ಪ್ರಳಯಕಾಲ.  ಈ ಪ್ರಳಯ ಕಾಲದಲ್ಲಿ ಸರ್ವ ಜೀವವೂ ಸೂಕ್ಷ್ಮ ಸ್ಥಿತಿಯಲ್ಲಿದ್ದು, ಭಗವಂತನ ಮಡಿಲಲ್ಲಿ  ನಿದ್ರಿಸುತ್ತಿರುತ್ತವೆ. ಜೀವಕ್ಕೆ ಇದು ವಿಶ್ರಾಂತಿ ಕಾಲ. ಪ್ರಳಯದಲ್ಲಿ ಜೀವರನ್ನು ನಿದ್ರಾವಸ್ಥೆಯಲ್ಲಿರಿಸುವ  ಭಗವಂತ ಸ್ವಾಪನಃ.

ಪ್ರಳಯ ಕಾಲದಲ್ಲಷ್ಟೇ ಅಲ್ಲ ದಿನನಿತ್ಯ ನಿದ್ರಾಕಾಲದಲ್ಲಿ ನಾವು ಭಗವಂತನ ಮಡಿಲಲ್ಲಿ ಮಲಗಿರುತ್ತೇವೆ. ಸ್ವಪ್ನ  ಪ್ರಪಂಚದ ವಿಸ್ಮಯವನ್ನು ನಮಗೆ ಕೊಟ್ಟಿರುವ ಭಗವಂತ ಸ್ವಾಪನಃ.

೪೬೯) ಸ್ವವಶಃ

ಸ್ವತಂತ್ರನಾದವನು; ಇನ್ನೊಬ್ಬರಿಗೆ ಅಧೀನನಾಗದವನು.

೪೭೦) ವ್ಯಾಪೀ

ಎಲ್ಲೆಡೆ ವ್ಯಾಪಿಸಿದವನು; ಎಲ್ಲರ ಮನಸ್ಸಿನಲ್ಲಿ, ಎಲ್ಲರ ಹೃದಯದಲ್ಲಿ, ಎಲ್ಲರ ಒಳಗೆ, ಎಲ್ಲರ ಹೊರಗೆ ಹೀಗೆ ಸರ್ವ ವ್ಯಾಪಿಯಾಗಿರುವ  ಭಗವಂತ 'ವ್ಯಾಪೀ'.

೪೭೧) ನೈಕಾತ್ಮಾ

ಸಾವಿರಾರು ರೂಪಗಳನ್ನು ತೊಟ್ಟವನು; ಅನಂತ ಜೀವದೊಳಗೆ ಅನಂತ ರೂಪದಲ್ಲಿ ತುಂಬಿರುವ ಬಿಂಬ ರೂಪಿ ಅಂತರ್ಯಾಮಿ ಭಗವಂತ ನೈಕಾತ್ಮಾ.

೪೭೨) ನೈಕಕರ್ಮಕೃತ್

ಸಾವಿರಾರು ಕ್ರಿಯೆಗಳನ್ನು ನಡೆಸುವವನು; ಅನಂತ ಜೀವದೊಳಗೆ ಅನಂತ ರೂಪದಲ್ಲಿ ತುಂಬಿ ಅನಂತ ಕರ್ಮಗಳನ್ನು ಅನಂತ ಕಾಲದ ತನಕ ಮಾಡುತ್ತಿರುವ ಭಗವಂತ ನೈಕಕರ್ಮಕೃತ್

೪೭೩) ವತ್ಸರಃ

ವತ್ಸರ ಎಂದರೆ ಒಂದು ಅರ್ಥದಲ್ಲಿ 'ವರ್ಷ' ಎನ್ನುವ ಅರ್ಥವನ್ನು ಕೊಡುತ್ತದೆ. ಒಂದು ಪೂರ್ಣ  ವರ್ಷ ಎಂದರೆ ೩೬೫.೨೪೨೨  ದಿನಗಳು. ಪೂರ್ಣವಾದ ವರ್ಷವನ್ನು ಸಂವತ್ಸರ ಎನ್ನುತ್ತಾರೆ. ಕಾಲ ನಿಯಾಮಕನಾದ ಚತುರ್ಮುಖ  ಬ್ರಹ್ಮನೊಳಗೆ ಕುಳಿತು ನಿಯಮಿಸುವ ಭಗವಂತ ವತ್ಸರಃ.
ವಸತ್+ರ; ಅಂದರೆ ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದು ನಡೆಯುತ್ತಾರೋ ಅವರಿಗೆ ಆನಂದವನ್ನು ಕೊಡುವವ. ವತ್ಸ+ರ- ಮಕ್ಕಳಂತೆ ಜೀವರನ್ನು ರಮಿಸುವ ಭಗವಂತ ವತ್ಸರಃ.

೪೭೪) ವತ್ಸಲಃ

ಭಗವಂತ ಪರಮ ಭಕ್ತ ವತ್ಸಲ.  ತನ್ನ ಪ್ರೀತಿಯ ಭಕ್ತ ಜಾರಿಬಿದ್ದಾಗ, ಸಂಕಷ್ಟದಲ್ಲಿದ್ದಾಗ ತಾನೇ ಇಳಿದು ಬರುವ ಭಗವಂತ ವತ್ಸಲಃ.

೪೭೫) ವತ್ಸೀ

ವತ್ಸೀ ಎಂದರೆ ಅನಂತ ಸಂತಾನವುಳ್ಳವನು ಎಂದರ್ಥ! ಚತುರ್ಮುಖ ಬ್ರಹ್ಮನಿಂದ ಹಿಡಿದು ಎಲ್ಲರೂ ಆತನ ಮಕ್ಕಳೇ.  ಬ್ರಹ್ಮ-ವಾಯುಗಳನ್ನು ಮಕ್ಕಳಾಗಿ ಪಡೆದ ಭಗವಂತ ವತ್ಸೀ.

೪೭೬) ರತ್ನಗರ್ಭಃ

'ರತಿ' ಯನ್ನು ತನ್ನ ಗರ್ಭದಲ್ಲಿ ಧರಿಸಿದವ.  ಅಂದರೆ ಭಗವಂತ ಆನಂದದ ಕಡಲು. ಆತನ ಆನಂದದ ಆವಿರ್ಭಾವವೇ ಈ ಪ್ರಪಂಚ. ಇನ್ನು ರತ್ನ ಎಂದರೆ ಸಂಪತ್ತು ಎನ್ನುವ ಅರ್ಥವನ್ನು ಕೊಡುತ್ತದೆ. ಈ ಪ್ರಪಂಚವೇ ಒಂದು ಮಹಾ ಸಂಪತ್ತು . ಇಂತಹ ಸಂಪತ್ತನ್ನು ತನ್ನ ಗರ್ಭದಲ್ಲಿ ಧರಿಸಿ,ಆನಂದದಿಂದ ತುಂಬಿ ತುಳುಕುವ ಭಗವಂತ ರತ್ನಗರ್ಭಃ.

೪೭೭) ಧನೇಶ್ವರಃ

ಭಗವಂತ ಸರ್ವ ಸಂಪತ್ತಿನ ಒಡೆಯ. ಇಲ್ಲಿ ಧನ ಎಂದರೆ ಹಣವಿರಬಹುದು, ಜ್ಞಾನವಿರಬಹುದು ಅಥವಾ ಭಕ್ತಿ ಇರಬಹುದು. ಎಲ್ಲಾ ಸಂಪತ್ತಿನ ಅಧಿಪತಿ ಭಗವಂತ. ಆತ ಕೊಟ್ಟರೆ ನಾವು ಧನಿಕರು ಇಲ್ಲದಿದ್ದರೆ ಇಲ್ಲ! ಕೆಲವೊಮ್ಮೆ ಭಗವಂತ  ನಮ್ಮ ಕೈಯನ್ನು ಸಂಪೂರ್ಣ ಖಾಲಿ ಮಾಡಿ ನಮ್ಮನ್ನು ಇನ್ನೊಂದು ರೀತಿಯಲ್ಲಿ ಉದ್ದಾರ ಮಾಡುತ್ತಾನೆ. ಇದನ್ನೇ ಕೃಷ್ಣ ಈ ರೀತಿ ಹೇಳಿದ್ದಾನೆ. "ಯಸ್ಸ್ಯಮ್ ಅನುಗ್ರಹಾಮಿ ತಸ್ಸ್ಯ ವಿತ್ತಮ್ ಹರಾಮ್ಯಹಂ" ಇದಕ್ಕೆ ಉತ್ತಮ ನಿದರ್ಶನ ರಾಜಸೂಯ ಯಾಗ ಮಾಡಿ ಪ್ರಪಂಚವನ್ನೇ ಗೆದ್ದ ಧರ್ಮರಾಯ. ಇಂತಹ ಧರ್ಮರಾಯ ಕೇವಲ ಒಂದು ವಾರದಲ್ಲಿ ಬಿಡಿಗಾಸೂ ಇಲ್ಲದೆ ಕಾಡಿಗೆ ಹೋದ!  ಎಲ್ಲವೂ ಆ ಭಗವಂತನ   ಸಂಕಲ್ಪ. ಆತ ಕೊಟ್ಟರೆ ಇದೆ, ಇಲ್ಲದಿದ್ದರೆ ಇಲ್ಲ. ಆದರೆ ಇರುವುದು ಇಲ್ಲದಿರುವುದು ಎಲ್ಲವೂ ನಮ್ಮ ಒಳಿತಿಗಾಗಿ! ಹೀಗೆ ಜ್ಞಾನ, ಭಕ್ತಿ, ಐಶ್ವರ್ಯ ಎಲ್ಲವುದರ ಈಶ್ವರ ಎಲ್ಲಾ ಸಂಪತ್ತಿನ ಒಡೆಯ ಭಗವಂತ ಧನೇಶ್ವರಃ.

ಮುಂದುವರೆಯುವುದು...

No comments:

Post a Comment