Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -51


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ ಕ್ಷರಮಕ್ಷರಮ್ |
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ || 51 ||

೪೭೮) ಧರ್ಮಗುಪ್

ಧರ್ಮಗುಪ್ ಅಂದರೆ ಧರ್ಮವನ್ನು ಗೊಪನೆ ಮಾಡುವವನು. ಗೊಪನೆ ಎಂದರೆ  ರಕ್ಷಣೆ ಮಾಡುವುದು. ಕೃಷ್ಣ ಗೀತೆಯಲ್ಲಿ ಹೇಳಿದಂತೆ:

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನಾಂ ಸೃಜಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ |                      
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ||

ಭಗವದ್ ಗೀತೆಯ ಈ ಶ್ಲೋಕದ ಅರ್ಥ ಭಗವಂತನ "ಧರ್ಮಗುಪ್" ಎನ್ನುವ ನಾಮದಲ್ಲಿ ಅಡಗಿದೆ. ಅಧರ್ಮದ ಕೈ ಮೇಲಾಗಿ,  ಧರ್ಮ ನೆಲೆ ಕಳೆದುಕೊಳ್ಳುವ ಸಂದರ್ಭ ಬಂದಾಗ ಭಗವಂತ ಭೂಮಿಗಿಳಿದು ಬರುತ್ತಾನೆ. ಭಗವಂತನ ಅವತಾರದ ಉದ್ದೇಶವೇ ಧರ್ಮ ಗೊಪನೆ. ನಾವು ಭಗವಂತನ ದಶಾವತಾರವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಮತ್ಸ್ಯಾವತಾರದಲ್ಲಿ ವೇದಾಭಿಮಾನಿ ದೇವತೆಗಳನ್ನು ಬಂಧನದಲ್ಲಿಟ್ಟ ಆಸುರಿ ಶಕ್ತಿಯನ್ನು ನಿಗ್ರಹಿಸಿ ಧರ್ಮ ರಕ್ಷಣೆ ಮಾಡಿದ ಭಗವಂತ, ಧರ್ಮದ ಬಗ್ಗೆ ಅಲಕ್ಷ್ಯ ತೋರಿದ ದೇವತೆಗಳು ಸೋತಾಗ, ಕೂರ್ಮಾವತಾರಿಯಾಗಿ ಬಂದು ಧರ್ಮ ರಕ್ಷಣೆ ಮಾಡಿದ. ಹೀಗೆ ಆತನ ಎಲ್ಲಾ ಅವತಾರಗಳು ಧರ್ಮದ ರಕ್ಷಣೆಗಾಗಿಯೇ ಆಗಿದೆ. ವೇದವ್ಯಾಸರ ರೂಪದಲ್ಲಿ ಹದಿನೆಂಟು ಪುರಾಣ, ಬ್ರಹ್ಮಸೂತ್ರ, ಮಹಾಭಾರತ ಇತ್ಯಾದಿ ಗ್ರಂಥಗಳನ್ನು ನಮಗೆ ದಯಪಾಲಿಸಿದ ಭಗವಂತ ಧರ್ಮಗುಪ್.

೪೭೯) ಧರ್ಮಕೃತ್

ಧರ್ಮ ಎಂದರೆ ನಾವು ನಡೆಯಬೇಕಾದ ನಡೆ. ಧರ್ಮಕೃತ್  ಎಂದರೆ ಧರ್ಮವನ್ನು ನಿರ್ಮಾಣ ಮಾಡಿದವ.

ಇನ್ನೊಂದು ಅರ್ಥದಲ್ಲಿ ಧರ್ಮ ಎಂದರೆ ಒಂದು ವಸ್ತುವಿನ ಅಸಾಧಾರಣ ಗುಣ. ಉದಾಹರಣೆಗೆ ಕಣ್ಣಿನ ಧರ್ಮ ನೋಡುವುದು; ಕಿವಿಯ ಧರ್ಮ ಕೇಳುವುದು, ನಾಲಿಗೆಯ ಧರ್ಮ ರುಚಿ ನೋಡುವುದು. ಹೀಗೆ ಒಂದೊಂದು ಇಂದ್ರಿಯಗಳಲ್ಲಿ, ಒಂದೊಂದು ವಸ್ತುವಿನೊಳಗೆ ಒಂದೊಂದು ಧರ್ಮವನ್ನಿಟ್ಟ ಭಗವಂತ ಧರ್ಮಕೃತ್.

೪೮೦) ಧರ್ಮೀ
ಎಲ್ಲ ಶುಭ ಧರ್ಮಗಳ ನೆಲೆ, ಮೂಲ ಶಕ್ತಿ  ಹಾಗೂ  ಜಗತ್ತಿನ ಧಾರಕಶಕ್ತಿಗಳಾದ ದೇವತೆಗಳ ದೊರೆಯಾದ ಭಗವಂತ ಧರ್ಮೀ.

೪೮೧) ಸತ್

ಭಗವಂತನನ್ನು ಸತ್ ಚಿತ್ ಆನಂದ ಎಂದು ಉಪಾಸನೆ ಮಾಡುತ್ತೇವೆ. ಇಲ್ಲಿ ಸತ್ ಎಂದರೆ 'ವ್ಯಕ್ತ'. ಆತ ನಿರ್ಧಿಷ್ಟ ಹಾಗೂ ದೋಷ ರಹಿತ ಜ್ಞಾನಾನಂದ ಮೂರ್ತಿ.

೪೮೨) ಅಸತ್

ಅಸತ್ ಎಂದರೆ 'ಅವ್ಯಕ್ತ'.  ಭಗವಂತ ಅವ್ಯಕ್ತ ಮೂರ್ತಿ. ಆತ ಎಲ್ಲರ ಕಣ್ಣಿಗೆ ಕಾಣಲಾರ. ಆತನನ್ನು ಒಳಗಣ್ಣಿನಿಂದ ಕಾಣಲು ಪ್ರಯತ್ನಿಸಬೇಕು.

೪೮೩) ಕ್ಷರಮ್

ಕ್ಷರಮ್  ಎಂದರೆ ಸಾವಿನ ಒಡೆಯ. ಸಾವು ಯಾರ ಅಧೀನವೋ ಅವನು ಕ್ಷರಮ್. ಕ್ಷರಣ ಎಂದರೆ ನಿರಂತರ ಬಯಸಿದ್ದನ್ನು ಕೊಡುವವನು. ಎಲ್ಲರ ಒಳಗಿದ್ದು ಆನಂದವನ್ನೀಯುವ ಭಗವಂತ ಕ್ಷರಮ್.

೪೮೪) ಅಕ್ಷರಮ್

'ನ-ಕ್ಷರತಿ ಅಕ್ಷರಮ್'; ಅಂದರೆ ಎಂದೂ ನಾಶವಿಲ್ಲದವನು. 'ಅಷ್ಣುತೇ  ಇತಿ ಅಕ್ಷರಮ್'; ಅಂದರೆ ಎಲ್ಲಕಡೆ ತುಂಬಿರುವವನು. 'ಅಧಿಕಮ್ ಕ್ಷರತಿ ಅಕ್ಷರಮ್'; ಅಂದರೆ ಎಲ್ಲರಿಗಿಂತ ಹೆಚ್ಚು ಅಭೀಷ್ಟವನ್ನು ಕೊಡತಕ್ಕ ಸರ್ವಶಕ್ತ. 'ಅಕ್ಷ+ರ' ಅಂದರೆ ಸಮಸ್ತ ವರ್ಣಗಳಲ್ಲಿ (ಅಕ್ಷರಗಳಲ್ಲಿ) ರಮಿಸುವವನು. ಹೀಗೆ ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳನ್ನು ಕಾಣಬಹುದು.

೪೮೫) ಅವಿಜ್ಞಾತಾ

'ಅ' ಕಾರ ವಾಚ್ಯನಾಗಿ ತನ್ನ ಸ್ವರೂಪವನ್ನು ತಾನೇ ತಿಳಿದವನು  ಅವಿಜ್ಞಾತ. ಸಮಸ್ತ ಚೇತನಾಚೇತನ ಪ್ರಪಂಚದಿಂದ ವಿಲಕ್ಷಣನಾದ  ಭಗವಂತ ಅವಿಜ್ಞಾತ.

೪೮೬) ಸಹಸ್ರಾಂಶುಃ

ಸಹಸ್ರಾರು ಕಿರಣಗಳುಳ್ಳವನು. ಜ್ಞಾನದ ಕಿರಣಗಳಿಂದ ಜಗತ್ತಿನಲ್ಲಿ ಸನ್ನಿಹಿತನಾದ ಭಗವಂತ, ಸೂರ್ಯ ಕಿರಣದಲ್ಲಿ ಸನ್ನಿಹಿತನಾಗಿ ಜಗತ್ತಿಗೆ ಪ್ರಾಣ ಶಕ್ತಿಯನ್ನು ಹರಿಸುತ್ತಾನೆ. ಅಂಶು ಎಂದರೆ 'ಅಂಶ' . ಭಗವಂತ ಅಪರಂಪಾರವಾದ ಸಾಗರದಂತಾದರೆ ಜೀವಗಳು ಒಂದು ಹನಿಯಂತೆ. ಭಗವಂತ ಒಂದು ಬಿಂಬ ಹಾಗೂ ಆತನಿಗೆ ಕೋಟಿ ಕೋಟಿ ಪ್ರತಿಬಿಂಬ!

೪೮೭) ವಿಧಾತಾ

ಭಗವಂತ ವಿಶಿಷ್ಟವಾದ, ವಿಲಕ್ಷಣವಾದ, ಧಾರಕ ಶಕ್ತಿ. ನಮ್ಮೊಳಗಿದ್ದು, ನಮ್ಮ ಹೊರಗಿದ್ದು, ನಮ್ಮನ್ನು ಧಾರಣೆ ಮಾಡುವ, ಪೋಷಣೆ ಮಾಡುವ; ಸಂಸಾರದಲ್ಲಿ ಮಾತ್ರವಲ್ಲದೆ ಮೋಕ್ಷದಲ್ಲೂ ರಕ್ಷಿಸುವ ದಿವ್ಯ ಶಕ್ತಿ.

೪೮೮) ಕೃತಲಕ್ಷಣಃ

ಲಕ್ಷಣ ಎಂದರೆ ಗುರುತಿಸುವ ಸಂಗತಿ. ಆಕಾರ, ಗುಣಧರ್ಮ, ಹೆಸರು ಇತ್ಯಾದಿ ಮೂಲಭೂತ ಲಕ್ಷಣಗಳು. ಮನುಷ್ಯರೆಲ್ಲರೂ ಒಂದೇ ತರನಾಗಿದ್ದರೂ ನೂರಕ್ಕೆ ನೂರು ಸಮನಾದ ಎರಡು ವಸ್ತು ಈ ಪ್ರಪಂಚದಲ್ಲಿಲ್ಲ. ಪ್ರತಿಯೊಬ್ಬನೊಳಗೆ ಆಯ ರೂಪನಾಗಿ ಭಗವಂತ ತುಂಬಿದ್ದಾನೆ. ಪ್ರತಿಯೊಂದು ಜೀವಕ್ಕೆ ಒಂದು ಆಕಾರ ಕೊಟ್ಟ, ಆಯಾ ಆಕಾರದ ವಸ್ತುಗಳಿಗೆ ಅದರದ್ದೇ ಆದ ಗುಣಧರ್ಮವನ್ನು ಕೊಟ್ಟ. ಹೀಗಾಗಿ ಪ್ರತಿಯೊಬ್ಬರಿಗೂ ಅವನದೇ ಆದ ಸ್ವಭಾವ. ಒಬ್ಬರ ಸ್ವಭಾವದಂತೆ ಇನ್ನೊಬ್ಬರ ಸ್ವಭಾವ ಇರಲು ಸಾಧ್ಯವಿಲ್ಲ. ಹೀಗೆ ಅನಂತ ರೂಪ ಲಕ್ಷಣವನ್ನು ಹೊಂದಿದ ಭಗವಂತ  ಕೃತಲಕ್ಷಣಃ.

ಮುಂದುವರೆಯುವುದು...

No comments:

Post a Comment