Wednesday, May 24, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -73


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || 73 ||

೬೮೪) ಸ್ತವ್ಯಃ

ಎಲ್ಲಾ ಸ್ತೋತ್ರಗಳಿಂದ ಸ್ತುತಿಸಲ್ಪಡಬೇಕಾದವನು ಸ್ತವ್ಯಃ.

೬೮೫) ಸ್ತವಪ್ರಿಯಃ

ನಾವು ಭಕ್ತಿಯಿಂದ ಸ್ತೋತ್ರ ಮಾಡಿದರೆ ಅದನ್ನು ಪ್ರೀತಿಸುವವನು.

೬೮೬) ಸ್ತೋತ್ರಮ್

ಸ್ತುತಿಗಳಲ್ಲಿ ವಾಚ್ಯನಾಗಿ ನೆಲೆಸಿದವನು.

೬೮೭) ಸ್ತುತಿಃ

ಸ್ತವನ ಕ್ರಿಯೆಯಲ್ಲಿ ಇರುವವನು.

೬೮೮) ಸ್ತೋತಾ

ಸ್ತುತಿಸುವವನೂಳಗಿರುವವನು.

೬೮೯) ರಣಪ್ರಿಯಃ

ಗುಣಗಾನ ಮಾಡುವ ವೇದ ಶಬ್ಧವನ್ನು ಮೆಚ್ಚುವವನು. ದುಷ್ಟರ ಜೊತೆಗೆ ಕದನ ಕುತೂಹಲಿ.

೬೯೦) ಪೂರ್ಣಃ

ನಾವು ಶಾಂತಿ ಮಂತ್ರಗಳಲ್ಲಿ ಈ ರೀತಿ ಹೇಳುತ್ತೇವೆ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಅಂದರೆ "ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" ಎಂದರ್ಥ.  ಭಗವಂತ ನಮ್ಮೊಳಗೂ ಇದ್ದಾನೆ ಹೊರಗೂ ಇದ್ದಾನೆ, ಆತ ಒಳಗೂ ಪೂರ್ಣ, ಹೊರಗೂ ಪೂರ್ಣ. ಆತ ಅವತಾರದಲ್ಲೂ ಪೂರ್ಣ, ಅವತಾರದ ನಂತರವೂ ಪೂರ್ಣ. ಆತ ಹಣತೆಯಂತೆ. ಒಂದು ಹಣತೆಯಿಂದ ಇನ್ನೊಂದು, ಇನ್ನೊಂದರಿಂದ ಮತ್ತೊಂದು ಹೀಗೆ ಸಹಸ್ರಾರು ಹಣತೆಗಳನ್ನು ಹಚ್ಚಿದರೂ, ಮೂಲ ಹಣತೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಸರ್ವ ಶಬ್ಧವಾಚ್ಯ  ಭಗವಂತ ಪೂರ್ಣಃ. 

೬೯೧) ಪೂರಯಿತಾ

ನಮಗೆ ಯಥಾರ್ಥ ಜ್ಞಾನ ಕೊಟ್ಟು ಮೊಕ್ಷದತ್ತ ಕೊಂಡೊಯ್ಯುವ ಭಗವಂತ ಪೂರಯಿತಾ. ಭಗವಂತ ಸೂರ್ಯನಾದರೆ ನಾವು ಮಿಂಚು ಹುಳದಂತೆ, ಆತ ಕಡಲಾದರೆ ನಾವು ಕೊಡದಂತೆ. ಕಡಲಿನಿಂದ ನಾವು ನಮ್ಮ ನಮ್ಮ ಕೊಡವನ್ನು ತುಂಬಿಸಿಕೊಳ್ಳಬೇಕು, ಅವರವರ ಯೋಗ್ಯತೆಗೆ ತಕ್ಕಂತೆ ಇದನ್ನು ಮಾಡಿಸುವವನೂ ಅವನೇ.

೬೯೨) ಪುಣ್ಯಃ

ಪುಣ್ಯ ಎಂದರೆ ಪವಿತ್ರ ಅಥವಾ ಪಾವನ. ಭಗವಂತನ ಜ್ಞಾನ ನಮ್ಮನ್ನು, ನಮ್ಮ ಮನಸ್ಸನ್ನು ಪಾವನ ಗೊಳಿಸುವ ಏಕೈಕ ಸಾಧನ. ಮಾನಸಿಕವಾಗಿ ಗೊಂದಲ, ದುಃಖ, ನಿರಾಶೆಗೊಳಗಾದ ಮನಸ್ಸನ್ನು  ಭಗವಂತನತ್ತ ಹರಿಸಿದಾಗ ಮನಸ್ಸು ನೆಮ್ಮದಿಯಿಂದಿರುತ್ತದೆ. ಇದೇ ಪುಣ್ಯ ಅಥವಾ ಪಾವಿತ್ರ್ಯ. ಲೋಕೋತ್ತರವಾದ ಸುಂದರ ಭಗವಂತನ ಚಿಂತನೆಯಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಬಾಡುವುದಿಲ್ಲ, ಮುದುಡುವುದಿಲ್ಲ. ಹೀಗೆ ಪವಿತ್ರನೂ ಪರಮ ಸುಂದರನೂ ಆದ ಭಗವಂತ ಪುಣ್ಯಃ.

೬೯೩) ಪುಣ್ಯಕೀರ್ತಿಃ

ಕೀರ್ತನ ಮಾತ್ರದಿಂದ ಎಲ್ಲಾ ಪಾಪಗಳನ್ನು ಕಳೆಯುವ ಭಗವಂತ ಪುಣ್ಯಕೀರ್ತಿಃ. ಅವನ ಗುಣಗಾನ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಭಗವನ್ನಾಮ ನಮ್ಮನ್ನು ಉದ್ಧಾರ ಮಾಡುತ್ತದೆ.

೬೯೪) ಅನಾಮಯಃ

'ಆಮಯ' ಎಂದರೆ ದೋಷಗಳು. ಬೆಂಕಿಯ ಜೊತೆಗೆ ಹೊಗೆ ಇರುವಂತೆ ನಮ್ಮಲ್ಲಿ ದೋಷಗಳು ಇದ್ದೇ ಇರುತ್ತವೆ. ಆದರೆ ಭಗವಂತನಿಗೆ ಯಾವುದೇ ದೋಷದ ಲೇಪವಿಲ್ಲ. ಆತ ಪೂರ್ಣ ನಿರ್ದೋಷ. ಇಂತಹ ಭಗವಂತ ಅನಾಮಯಃ

ಮುಂದುವರೆಯುವುದು...✍️💐

No comments:

Post a Comment