Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -28


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || 28 ||

೨೫೮) ವೃಷಾಹೀ

ಧರ್ಮ ಸಾಧನವಾದ ಯಜ್ಞಗಳಿಂದ ಆರಾಧ್ಯನಾದವನು, ಯಜ್ಞವನ್ನು ಸ್ವೀಕರಿಸಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಷಾಹೀ. ಈ ಹಿಂದೆ ಹೇಳಿದಂತೆ ಯಜ್ಞದಲ್ಲಿ ಮೂರು ವಿಧ. ಕಾಲ ಕುಂಡದಲ್ಲಿ ಮಾಡುವ ಯಜ್ಞ, ದೇಹ ಕುಂಡದಲ್ಲಿ ಮಾಡುವ ಯಜ್ಞ ಹಾಗೂ ಅಗ್ನಿ ಕುಂಡದಲ್ಲಿ ಮಾಡುವ ಯಜ್ಞ. ಈ ರೀತಿ ಭಗವಂತನ ಉಪಾಸನೆ 'ವೃಷಾಹ'. ನಾವು ಮಾಡುವ ಸಮಸ್ತ ಕರ್ಮ, ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆ ಯಜ್ಞವಾಗಬೇಕು. ಕೆಲವೊಮ್ಮೆ ಶಾಸ್ತ್ರ ಓದುವುದರಿಂದ ಅಜ್ಞಾನಿಗಳಾಗುವ ಹಾಗೂ ಯಜ್ಞ-ಯಾಗಾದಿಗಳನ್ನು ಮಾಡಿಯೂ ದುರ್ಬುದ್ಧಿ ಬೆಳೆಯುವ ಸಾಧ್ಯತೆ ಇದೆ! ಅದಕ್ಕಾಗಿ ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನಡೆಸು ಎನ್ನುವುದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಗಣಪತಿ ಆಕಾಶದ ದೇವತೆ ಹಾಗು ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ, ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.

ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್

ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು ಮೂಲಾಧಾರ, ಸ್ವಾದಿಷ್ಟಾನ ಹಾಗೂ ಮಣಿಪುರ. ನಾಭಿಯಿಂದ ಮೇಲಕ್ಕೆ ಹೃತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು. ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹೃತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸಿ ನಮ್ಮನ್ನು ಉದ್ಧಾರ ಮಾಡುತ್ತಾನೆ. ಇಂತಹ ಹೃತ್ಕಮಲ ನಿವಾಸಿ ಭಗವಂತ ವೃಷಾಹೀ.

೨೫೯) ವೃಷಭ

ವೃಷಭ ಎಂದರೆ ಗೂಳಿ. ಇದು ಪೌರುಷದ ಸಂಕೇತ. ಯಾವುದಕ್ಕೂ ಬಗ್ಗದೆ ಎದೆ ಸೆಟೆದು ನಿಲ್ಲುವ, ತಮ್ಮ ಎದುರಾಳಿಯನ್ನು ಎದುರಿಸುವ ಕೆಚ್ಚು. ಇದು ಪ್ರಕೃತಿದತ್ತವಾಗಿ ಪುರುಷ ಸ್ವಭಾವ. ಸಾಮಾನ್ಯವಾಗಿ ಈ ಗುಣ ಮಹಿಳೆಯರಿಗಿರುವುದಿಲ್ಲ. ಹೊಂದಿಕೆ, ಸಾಮರಸ್ಯ ಮತ್ತು ಅರ್ಪಣೆ ಸ್ತ್ರೀ ಲಕ್ಷಣ. ಸ್ತ್ರೀಗೆ ಬಾಲ್ಯದಲ್ಲಿ ತಂದೆ-ತಾಯಿ, ಯೌವನದಲ್ಲಿ ಗಂಡ ಹಾಗೂ ಮುಪ್ಪಿನಲ್ಲಿ ಮಕ್ಕಳ ಸಾಂಗತ್ಯ ಅತ್ಯಗತ್ಯ. ಆದ್ದರಿಂದ ಪೌರುಷದ ಸಂಕೇತವಾದ ಗೂಳಿ, ಸಿಂಹ ಹಾಗೂ ಹುಲಿಗಳನ್ನು ಕೇವಲ ಪುರುಷರಿಗೆ ಹೋಲಿಸುತ್ತಾರೆ. ಭಗವಂತ ಸರ್ವ ವೀರರ ವೀರ. ಅವನನ್ನು ಎದುರಿಸುವ ವೀರರು ಯಾರೂ ಇಲ್ಲ. ಎಂತಹ ಸಿದ್ಧ ಪುರುಷ ಕೂಡ ಒಮ್ಮೆ ಸಾವಿಗೆ ಶರಣಾಗಬೇಕು. ಆದರೆ ಭಗವಂತ ಎಲ್ಲವನ್ನೂ ಮೀರಿ ನಿಂತ ಸರ್ವಶಕ್ತ. ಜಗತ್ತಿನಲ್ಲಿ ಏನು ಕೇಳಿದರೂ ಕೊಡುವಂತಹ ಸಾಮರ್ಥ್ಯವಿರುವ ಭಗವಂತ.

೨೬೦) ವಿಷ್ಣು

ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ. ಈ ಹಿಂದೆ ಹೇಳಿದಂತೆ ವಿಷತಿ ಇತಿ ವಿಷ್ಣುಃ. ಅಂದರೆ ಯಾರು ಎಲ್ಲರ ಒಳಗೆ ಪ್ರವೇಶಿಸಬಲ್ಲನೋ ಅವನು ವಿಷ್ಣು. ಸರ್ವಾಂತರ್ಯಾಮಿ ಭಗವಂತ. ವಿಷ್ಣು ಸೂಕ್ತದಲ್ಲಿ ಹೇಳಿರುವಂತೆ:

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಸಮೂ(ಲ)ಢಮಸ್ಯ ಪಾಗೇಂಸುರೇ

ಪ್ರಪಂಚದಲ್ಲಿ ಏನೇನು ವಸ್ತುಗಳಿವೆ ಅದರೊಳಗಿರುವ ಹಾಗು ನಮ್ಮೊಳಗಿರುವ ಭಗವಂತ ಒಬ್ಬನೇ. ಹಿಂದೂ-ಮುಸಲ್ಮಾನ್-ಕ್ರಿಸ್ತ ಎಲ್ಲರ ದೇವರು ಒಬ್ಬನೇ. ವೈಷ್ಣವ-ಶೈವ ಅನ್ನುವ ಭೇದ-ಭಾವ ಮನುಷ್ಯನ ಸೃಷ್ಟಿ. ಸರ್ವಾಂತರ್ಯಾಮಿ, ಸರ್ವಗತ ಹಾಗು ಸರ್ವಸಮರ್ಥನಾದ ದೇವರು ಇಬ್ಬರಿರಲು ಸಾದ್ಯವಿಲ್ಲ. ಸರ್ವಶಬ್ದ ವಾಚ್ಯನಾದ ಭಗವಂತನನ್ನು ಯಾವ ಹೆಸರಿನಿಂದ ಕೂಡ ಕರೆಯಬಹುದು, ಹೆಸರಿನ ಹಿಂದಿರುವ ಅರ್ಥ ತಿಳಿದಿರಬೇಕು ಅಷ್ಟೇ! ಮದ್ವಾಚಾರ್ಯರ ಜೀವನ ಚರಿತ್ರೆಯಲ್ಲಿನ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ. ಒಮ್ಮೆ ಆಚಾರ್ಯರು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ದಾರಿಯಲ್ಲಿ ಹಿಂದೂ ಸನ್ಯಾಸಿಗಳಿಗೆ ನಿಷಿದ್ಧವಿದ್ದ ಮುಸ್ಲಿಂ ರಾಜ್ಯವನ್ನು ಪ್ರವೇಶಿಸುತ್ತಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ತಪ್ಪಿಗಾಗಿ ಅವರನ್ನು ಸೈನಿಕರು ಬಂಧಿಸಿ ರಾಜನ ಮುಂದೆ ಪ್ರಸ್ತುತಿಪಡಿಸುತ್ತಾರೆ. ಪ್ರಶ್ನಿಸಿದ ರಾಜನಿಗೆ ಆಚಾರ್ಯರು ಈ ರೀತಿ ಉತ್ತರ ಕೊಡುತ್ತಾರೆ. "ನೀನು ಪೂಜಿಸುವ ಹಾಗೂ ನಾನು ಪೂಜಿಸುವ ದೇವರು ಒಬ್ಬನೇ, ಹೆಸರು ಮಾತ್ರ ಬೇರೆ ಬೇರೆ. ಒಂದೇ ದೇವರ ಮಕ್ಕಳಾದ ನಾವು ಸಹೋದರರಲ್ಲವೇ?" ಆಚಾರ್ಯರ ಈ ಮಾತಿನಿಂದ ವಿಸ್ಮಿತನಾದ ರಾಜ ಅವರನ್ನು ತನ್ನ ರಾಜ್ಯದಲ್ಲಿ ನೆಲೆಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಆಚಾರ್ಯರು ರಾಜನನ್ನು ಹರಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಜಾತಿ-ಧರ್ಮ-ದೇವರು ಎಂದು ಕಚ್ಚಾಡುವ ನಮಗೆ ಭಗವಂತನ ಈ ನಾಮ ಮಹತ್ತಾದ ಸಂದೇಶವನ್ನು ಕೊಡುತ್ತದೆ.

ಸೂಕ್ತಗಳನ್ನು ಒಮ್ಮೆ ಕಣ್ಣಾಡಿಸಿ ನೋಡಿದರೆ ಅದರಲ್ಲಿ 'ಷ' ಮತ್ತು 'ಣ' ಇಲ್ಲದ ಸೂಕ್ತಗಳಿಲ್ಲ. ವಿ-ಷ-ಣು ಎಂದರೆ ವಿಶಿಷ್ಟನಾದ(ವಿ),ಸರ್ವಾಂತರ್ಯಾಮಿ(ಷ) ಹಾಗು ಸರ್ವಬಲಪೂರ್ಣನಾದ(ಣು) ಭಗವಂತ.

ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ

ಅಂದರೆ ಸಾವಿರಾರು ಮಂದಿಯಲ್ಲಿ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿ ಮುಟ್ಟಿದವರಲ್ಲಿ ಯಾರೋ ಒಬ್ಬ ಭಗವಂತನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ. ಆದ್ದರಿಂದ ಭಗವಂತನನ್ನು ನೋಡುವುದು ದುರ್ಧರ. ಸರ್ವಾಂಗ ಸುಂದರನಾದ ಆತನನ್ನು ನೋಡಬೇಕಾದರೆ ಎಷ್ಟೋ ಜನ್ಮದ ಕರ್ಮ ಬೇಕು.

೨೬೧) ವೃಶಪರ್ವಾ

'ವೃಶ' ಎಂದರೆ ಬಯಸಿದ್ದನ್ನು ಕೊಡುವ ಶಕ್ತಿ, 'ಪರ್ವ' ಎಂದರೆ ನಮ್ಮ ಅಭೀಷ್ಟಗಳ ಸಾಧಕದ ನಾಲ್ಕು ಮಜಲು. ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕು ಪರ್ವಗಳು. ನಾವು ಧರ್ಮದ ಮೆಟ್ಟಲೇರಿದರೆ ಮಾತ್ರ ಭಗವಂತ ನಮ್ಮ ಸಕಲ ಅಭೀಷ್ಟವನ್ನು ಪೂರೈಸುತ್ತಾನೆ. ಅಧರ್ಮದ ಮಾರ್ಗ ಕ್ಷಣಿಕ. ವೇದವ್ಯಾಸರು "ನಾನು ಕೈಯತ್ತಿ ಹೇಳುತ್ತಿದ್ದೇನೆ-ಧರ್ಮದ ಮಾರ್ಗವನ್ನು ಹಿಡಿದವರ ಹಿಂದೆ ಅರ್ಥ-ಕಾಮ-ಮೋಕ್ಷಗಳು ತಾನೆ ತಾನಾಗಿ ಹಿಂಬಾಲಿಸುತ್ತವೆ" ಎಂದಿದ್ದಾರೆ. ಹೀಗೆ ಧರ್ಮಪರ್ವ, ಅರ್ಥಪರ್ವ, ಕಾಮಪರ್ವ ಹಾಗು ಮೋಕ್ಷಪರ್ವನಾಗಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಶಪರ್ವಾ.

೨೬೨) ವೃಷೋದರ.

ಇಳೆಗೆ ಮಳೆಯನ್ನು ಕೊಡುವ ಭಗವಂತ ವೃಷೋದರ. ನೆಲದಲ್ಲಿನ ನೀರನ್ನು ಆವಿಯನ್ನಾಗಿ ಮಾಡಿ ಪುನಃ ಮೋಡದಿಂದ ಮಳೆ ಸುರಿಸುವ ಹಾಗೂ ಈ ಚಕ್ರವನ್ನು ನಿರಂತರ ತಿರುಗಿಸುವ, ದೋಷರಹಿತ-ನಾದ ಅಭೀಷ್ಟಪ್ರದ ಭಗವಂತ ವೃಷೋದರ.

೨೬೩) ವರ್ಧನ

ವೃದ್ಧಿ ಎಂದರೆ ಬೆಳೆಸುವವನು. ನಮ್ಮನ್ನು, ಈ ಸೃಷ್ಟಿಯನ್ನು ಭಗವಂತ ಪೋಷಿಸಿ ಬೆಳೆಸುತ್ತಾನೆ. ಬೆಳೆಯುವುದು ಅಂದರೆ ಸಾವಿಗೆ ಹತ್ತಿರವಾಗುವುದು. ಆದ್ದರಿಂದ ವರ್ಧನ ಎಂದರೆ ಸಂಹಾರ ಮಾಡುವವನು ಎನ್ನುವ ಅರ್ಥವನ್ನು ಕೂಡಾ ಕೊಡುತ್ತದೆ. ಧಾನ್ಯ, ಭತ್ತ, ಬಾಳೆ, ಇತ್ಯಾದಿ ಗಿಡಗಳ ಸಂತಾನವಾದಾಕ್ಷಣ ಜೀವನ ಅಂತ್ಯವಾಗುತ್ತದೆ. ಬೆಳವಣಿಗೆ ಸಾರ್ಥಕವಾಗುವುದು ಸಾವಿನಲ್ಲಿ. ಆದ್ದರಿಂದ ಸಾವು ಒಂದು ಸಹಜ ಸ್ಥಿತಿ.

ವರ+ಧನ-ವರ್ಧನ. ಶ್ರೇಷ್ಠವಾದ ಸಂಪತ್ತನ್ನು ನಾವು ಯಾರಿಂದ ಪಡೆಯುತ್ತೇವೋ ಅವನು ವರ್ಧನ. ಇಲ್ಲಿ ಶ್ರೇಷ್ಠವಾದ ಸಂಪತ್ತು ಎಂದರೆ "ಹಂಚಿದಾಗ ಹೆಚ್ಚಾಗುವ ಸಂಪತ್ತು-ಅಂದರೆ ಜ್ಞಾನ". ಒಳ್ಳೆಯ ದಾರಿಯಲ್ಲಿ ಪಡೆಯಬಹುದಾದ ಶ್ರೇಷ್ಠವಾದ ಸಂಪತ್ತು ಮೋಕ್ಷ. ಹೀಗೆ ನಮ್ಮನ್ನು ಬೆಳೆಸುವವನು, ಸಂಹಾರ ಮಾಡುವವನು, ಜ್ಞಾನಪ್ರದ ಹಾಗು ಮೊಕ್ಷಪ್ರದನಾದ ಭಗವಂತ ವರ್ಧನ.

೨೬೪) ವರ್ಧಮಾನಃ

ವರ್ಧಮಾನ ಎಂದರೆ ಬೆಳೆಯುತ್ತಿರುವವನು. ಇಲ್ಲಿ ಭಗವಂತ ಬೆಳೆಯುತ್ತಿರುವವನಲ್ಲ. ಆತ ಎಲ್ಲಾ ಕಾಲದಲ್ಲೂ ಪೂರ್ಣತೆಯನ್ನು ಹೊಂದಿದವ. ತನ್ನ ಅವತಾರಗಳ ಮೂಲಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ಆತ ತೋರಿಸಿ ಕೊಟ್ಟಿದ್ದಾನೆ. ಆತ ಯಾವುದೇ ಮಾನ ಹಾಗು ಮಾಪನಗಳ ಅಳತೆಗೆ ನಿಲುಕುವವನಲ್ಲ.

೨೬೫) ವಿವಿಕ್ತ.

ವಿವಿಕ್ತ ಎಂದರೆ ಅತ್ಯಂತ ಪವಿತ್ರವಾದ ಹಾಗೂ ವಿಲಕ್ಷಣವಾದ ಎಂದರ್ಥ. ಭಗವಂತನ ವ್ಯಕ್ತಿತ್ವ ತೀರಾ ಭಿನ್ನ. ಸೃಷ್ಟಿ ಮಾಡುವ ಭಗವಂತ ಯಾವುದೇ ಲೇಪವೂ ಇಲ್ಲದೆ ನಿರ್ಲಿಪ್ತನಾಗಿ ಸಂಹಾರ ಕೂಡ ಮಾಡುತ್ತಾನೆ. ಈ ರೀತಿ ಪವಿತ್ರನೂ, ವಿಲಕ್ಷಣನೂ ಆಗಿರುವ ವಿಶಿಷ್ಟ ವ್ಯಕ್ತಿತ್ವವುಳ್ಳ ಭಗವಂತ ವಿವಿಕ್ತ.

೨೬೬) ಶ್ರುತಿಸಾಗರ.

ಎಲ್ಲಾ ಶಾಸ್ತ್ರ ಸಮಸ್ತ ವೇದ ಹರಿದು ಹೋಗಿ ಸೇರಬೇಕಾದ ಕಡಲು ಭಗವಂತ. ಈ ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳು ಹಾಗು ಎಲ್ಲಾ ಪದಗಳು ಭಗವಂತನನ್ನು ಹೇಳುತ್ತವೆ. ಶಬ್ಧದ ಜೊತೆಗಿರುವ ನಾದ ಶ್ರುತಿ. ನಾದದಲ್ಲಿ ಮೂಲಭೂತವಾಗಿ ನಾಲ್ಕು ವಿಧ. ಉದಾತ್ತ, ಅನುದಾತ್ತ, ಸ್ವರಿತ ಮತ್ತು ಪ್ರಚಯ. ಉದಾತ್ತ ಎಂದರೆ ಕಂಠದಿಂದ ಮೇಲಕ್ಕೆ ಎತ್ತಿ ಮಾತನಾಡುವುದು, ಅನುದಾತ್ತ ಎಂದರೆ ನಾದವನ್ನು ಕೆಳಗೆ ಒತ್ತಿ ಮಾತನಾಡುವುದು, ಸ್ವರಿತ ಎಂದರೆ ಉದಾತ್ತ ಮತ್ತು ಅನುದಾತ್ತದ ಸಮೀಕರಿಸಿದ ರೂಪ. ಪ್ರಚಯ ಎಂದರೆ ಉದಾತ್ತ ಮತ್ತು ಅನುದಾತ್ತವನ್ನು ಕಳಚಿ ಸಮಾನಾಂತರವಾಗಿ ಮೂಡುವ ನಾದ. ಸಪ್ತ ಸ್ವರಗಳೂ ಕೂಡ ಈ ಮೇಲಿನ ನಾಲ್ಕು ಮೂಲಭೂತ ನಾದದಿಂದಾಗಿದೆ. ನಾದ ಬದಲಾದಂತೆ ಅರ್ಥ ಬದಲಾಗುತ್ತದೆ. ಭಾಷೆಗೆ ಅರ್ಥ ಕೊಡುವುದು ನಾದ. ಎಲ್ಲಾ ನಾದಗಳೂ ಭಗವಂತನನ್ನು ಹೇಳುವುದರಿಂದ ಆತ ಶ್ರುತಿಸಾಗರಃ.

ಮುಂದುವರೆಯುವುದು...

No comments:

Post a Comment