ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸುರ್ವತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ || 49 ||
೪೫೮) ಸುವ್ರತಃ
ವ್ರತ ಎಂದರೆ ದೀಕ್ಷೆ, ನಿಷ್ಠೆ, ಶಿಸ್ತುಬದ್ಧವಾದ ಕ್ರಿಯೆ. ಇಂದ್ರಿಯ ನಿಗ್ರಹಕ್ಕೆ ಮಾಡುವ ನಿಯತವಾದ ಕ್ರಿಯೆ. ವ್ರತದಲ್ಲಿ ಎರಡು ವಿಧ. ಯಾವುದೋ ಒಂದು ಫಲಾಪೇಕ್ಷೆಯಿಟ್ಟು ಮಾಡುವ ವ್ರತ ಹಾಗೂ ಭಗವಂತನ ಪ್ರೀತ್ಯರ್ಥವಾಗಿ ಮಾಡುವ ವ್ರತ. ಫಲಾಪೇಕ್ಷೆಯಿಟ್ಟು ಮಾಡುವ ವ್ರತವನ್ನು ಕಾಮ್ಯ ಎನ್ನುತ್ತಾರೆ. ಇದನ್ನು ಶಾಸ್ತ್ರದಲ್ಲಿ ವಿರೋಧ ಮಾಡುತ್ತಾರೆ. ಭಗವಂತನ ಅನುಗ್ರಹ, ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನು ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲ ಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'! ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಅಂದರೆ 'ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು'. ಭಗವಂತ ಎಂದೂ ಹೂಡಿದ ಬಾಣ ಹಿಂದೆ ಪಡೆಯುವುದಿಲ್ಲ, ಆಡಿದ ಮಾತನ್ನು ತಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಆತನ ನುಡಿ ನೆರವೇರಲು ಅನೇಕ ಜನ್ಮಗಳೇ ಹಿಡಿಯಬಹುದು! ಹೀಗೆ ನಿರಂತರ ರಕ್ಷಣೆಯ ವ್ರತವನ್ನು ಮಾಡುವ ಆನಂದಮಯ ಭಗವಂತ ಸುವ್ರತಃ.
೪೫೯) ಸುಮುಖಃ
ಮೇಲೆ ಹೇಳಿದ 'ಸು' ಪದದ ಅರ್ಥವನ್ನು 'ಮುಖ' ಪದದೊಂದಿಗೆ ಸೇರಿಸಿದರೆ ಭಗವಂತನ 'ಸುಮುಖಃ' ನಾಮದ ಅರ್ಥ ತೆರೆದುಕೊಳ್ಳುತ್ತದೆ. ಭಗವಂತ ಸುಂದರವಾದ ರೂಪವನ್ನು ಈ ನಾಮ ಹೇಳುತ್ತದೆ. ವಿಶೇಷವಾಗಿ ಕೃಷ್ಣಾವತಾರದಲ್ಲಿ ಭಗವಂತ ತನ್ನ ಸುಮುಖ ರೂಪವನ್ನು ತೋರಿದ್ದಾನೆ.
೪೬೦) ಸೂಕ್ಷ್ಮಃ
ಭಗವಂತ ಜ್ಞಾನಾನಂದಮಯ. ಆತ ಸೂಕ್ಷ್ಮದಲ್ಲಿ ಸೂಕ್ಷ್ಮ ಹಾಗೂ ಬೃಹತ್ನಲ್ಲಿ ಬೃಹತ್ ರೂಪಿ. ಹೀಗಿದ್ದರೂ ಕೂಡಾ ಆತ ಇಷ್ಟಪಟ್ಟರೆ ಭಕ್ತರ ಮುಂದೆ ಕಾಣಿಸಿಕೊಳ್ಳುತ್ತಾನೆ. ರಾಮನ ಕಾಲದಲ್ಲಿದ್ದವರು ರಾಮನನ್ನು, ಕೃಷ್ಣನ ಕಾಲದಲ್ಲಿದ್ದವರು ಕೃಷ್ಣನನ್ನು ಕಂಡಿದ್ದಾರೆ. ಒಳ್ಳೆಯವರು-ಕೆಟ್ಟವರು, ಸಜ್ಜನರು-ದುರ್ಜನರು, ಪಂಡಿತರು-ಪಾಮರರು, ಗಂಡಸರು-ಹೆಂಗಸರು, ಎಳೆಯರು-ಮುದುಕರು, ಹೀಗೆ ಎಲ್ಲರೂ ಕಂಡಿದ್ದಾರೆ. ನಿಜವಾಗಿ ಅವರು ಕಂಡಿದ್ದು ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ತತ್ವವನ್ನು. ಇಂತಹ ಸೂಕ್ಷ್ಮಾತಿ-ಸೂಕ್ಷ್ಮ ತತ್ವ ಭಗವಂತ ಸೂಕ್ಷ್ಮಃ.
೪೬೧) ಸುಘೋಷಃ
ಭಗವಂತನ ಮಾತು ಬಹಳ ಸುಂದರ. ಭಗವಂತನ ಆದೇಶ ಪಡೆದು ಭೂಮಿಯಲ್ಲಿ ಹುಟ್ಟಿದ ಮಹಾಪುರುಷರ ಮಾತಿನ ನಾದದಲ್ಲೇ ಭಗವಂತನನ್ನು ಧ್ವನಿಸುವ ಶಕ್ತಿ ಇರುತ್ತದೆ.
ಮಂತ್ರಗಳಲ್ಲಿ ಶಕ್ತಿ ಅಡಗಿರುವುದು ಅದರ ನಾದದಲ್ಲಿ. ಮಂತ್ರವನ್ನು ಪಠಿಸುವವರ ಇಷ್ಟಾರ್ಥ ಸಿದ್ಧಿಗಾಗಿ ಅದನ್ನು ಸಂಯೋಜನೆ ಮಾಡಿದ್ದಾರೆ. ಇದರ ಹಿಂದೆ ಶಕ್ತಿಯುತ ಮನೋಬಲ ಅಡಗಿದೆ. ಭಗವಂತನ ಭಕ್ತರ ನಾದವೇ ಇಷ್ಟೊಂದು ಶಕ್ತಿಶಾಲಿಯಾಗಿರುವಾಗ ಇನ್ನು ಭಗವಂತನ ನಾದ ಹಾಗೂ ಮನೋಬಲ ನಮ್ಮಿಂದ ಊಹಿಸುವುದು ಅಸಾಧ್ಯ. ಜಗತ್ತಿನಲ್ಲಿ ಯಾವ ಯಾವ ಘೋಷಗಳಿವೆ ಅವುಗಳೆಲ್ಲವೂ ಸಮೀಚೀನವಾದ ಭಗವಂತನನ್ನೇ ಹೇಳುತ್ತವೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ ಬಾಷೆಗಳು ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಳೆಗಳ ಮರ್ಮರ ಎಲ್ಲಾ ಸಮಸ್ತ ನಾದವೂ ಕೂಡಾ ಭಗವಂತನ ಗುಣಗಾನ ಮಾಡುವುದರಿಂದ ಆತ ಸುಘೋಷಃ.
೪೬೨) ಸುಖದಃ
ಭಗವಂತನ ಬಗ್ಗೆ ಕೇಳುವುದೇ ಆನಂದ. ಆನಂದಮಯನಾದ ಆತನ ಚಿಂತನೆ ನಮ್ಮನ್ನು ಆನಂದಮಯರನ್ನಾಗಿ ಮಾಡುತ್ತದೆ. ಆತ ಆನಂದ ಸಾಗರ. ಆತನ ಬಳಿಗೆ ಹೋದವರು ಆನಂದ ಸಾಗರದಲ್ಲಿ ಮುಳುಗಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಆತ ಸುಖವನ್ನು 'ಧ್ಯತಿಸುವವನು'. ಯಾರು ಅಸತ್ಯದ ದಾರಿಯಲ್ಲಿ ಸಾಗುತ್ತಾರೋ ಅವರ ಸುಖವನ್ನು ಕಸಿದುಕೊಳ್ಳುವ, ಸುಖ-ದುಃಖದ ಮಿಶ್ರಣದ ಬದುಕನ್ನು ಕೊಟ್ಟು ನಮ್ಮನ್ನು ಮುಕ್ತಿಯತ್ತ ಕೊಂಡೊಯ್ಯುವ ಭಗವಂತ ಸುಖದಃ.
೪೬೩) ಸುಹೃತ್
ಎಲ್ಲಾ ಜೀವ ಜಾತಕ್ಕೆ ಆತ್ಮೀಯ ಗೆಳೆಯ. ಭಗವಂತ ನಮಗೆ ಕೊಡುವ ಕಷ್ಟ ನಮ್ಮ ಒಳಿತಿಗಾಗಿ, ನಮ್ಮ ಜೀವನದಲ್ಲಿ ನಮಗರಿವಿಲ್ಲದಿದ್ದರೂ, ಅವನು ಮಾಡುವ ಉಪಕಾರ ಅಪರಿಮಿತ. ಹೀಗೆ ಆತ್ಮೀಯನಾಗಿ ಎಂದೆಂದೂ ನಮ್ಮೊಂದಿಗಿರುವ ಭಗವಂತ ಸುಹೃತ್.
೪೬೪) ಮನೋಹರಃ
ಹಿಂದೆ ಸುಮುಖಃ ಎನ್ನುವ ನಾಮದಲ್ಲಿ ನೋಡಿದಂತೆ ಭಗವಂತ ಸೌಂದರ್ಯದ ಖನಿ. ಭಾಗವತದಲ್ಲಿ ಕವಿಗಳು ಭಗವಂತನನ್ನು ಮನ್ಮಥ ಎನ್ನುತ್ತಾರೆ. ಇದು ಕೇವಲ ದೃಷ್ಟಾಂತ ಅಷ್ಟೇ. ಏಕೆಂದರೆ ಭಗವಂತ ಮನ್ಮಥನ ಅಪ್ಪ! ಎಲ್ಲರ ಮನಸ್ಸನ್ನು ಅಪಹರಿಸುವ ಚಲುವಿನ ಖನಿ ಭಗವಂತ ಮನೋಹರಃ.
ಮನೋಮಯ ಕೋಶದ ನಿಯಾಮಕನಾದ ಹರನೊಳಗಿರುವ ಭಗವಂತ ಮನೋಹರ. ಇನ್ನು ಅನ್ನಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯನಕೋಶ ಎಲ್ಲವನ್ನೂ ದಾಟಿದರೆ ಅಮರ ಕೋಶ. ಅದೇ ನಿತ್ಯವಾಗಿರುವ ಮನನಶೀಲವಾದ ಜೀವ. ಈ ಜೀವವನ್ನು ಸಂಸಾರ ಬಂಧದಿಂದ ಕಳಚಿ ಮೋಕ್ಷವನ್ನು ಕೊಡುವ ಭಗವಂತ ಮನೋಹರಃ.
೪೬೫) ಜಿತಕ್ರೋಧಃ
ಭಗವಂತ ಕೋಪವನ್ನು ಗೆದ್ದವ. ಕೋಪ ಮನಸ್ಸಿನ ವಿಕೃತ ರೂಪ. ಸರ್ವವನ್ನು ಗೆದ್ದ ಋಷಿ ಮುನಿಗಳೂ ಕೂಡಾ ಕೆಲವೊಮ್ಮೆ ಕೋಪಕ್ಕೆ ಬಲಿಬೀಳುತ್ತಾರೆ. ಭಗವಂತ ಎಂದೂ ಕೋಪದ ವಶವಾಗುವುದಿಲ್ಲ ಆದರೆ ಕೆಲವೊಮ್ಮೆ ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಕೊಪಗೊಳ್ಳುವಂತೆ ಕೋಪದ ನಟನೆ ಮಾಡುತ್ತಾನೆ. ಆ ಕೋಪ ಮೇಲ್ನೋಟಕ್ಕೆ ದುಃಖಕರವಾಗಿ ಕಂಡರೂ ಸುಖಾಂತವಾಗಿರುತ್ತದೆ. ಕ್ರೋಧ ವಶವಾದ ಧ್ಯತ್ಯ ಪಡೆಯನ್ನು ಗೆದ್ದ ಭಗವಂತ ಜಿತಕ್ರೋಧಃ.
೪೬೬) ವೀರಬಾಹುಃ
ಭಗವಂತನ ತೋಳು ಪೌರುಷ ತುಂಬಿದ ತೋಳು. ಸತ್ಯವನ್ನು ವಿರೋಧಿಸುವ, ಯತಾರ್ಥವನ್ನು ದ್ವೇಷಿಸುವ, ಸುಳ್ಳನ್ನು ಸಮರ್ಥಿಸುವ, ದುಷ್ಟ ಶಕ್ತಿಯನ್ನು ನಿಗ್ರಹಿಸುವ ತೋಳುಗಳುಳ್ಳ ಭಗವಂತ ದ್ವೇಷಿಸುವುದು ಅಜ್ಞಾನವನ್ನು.ಸದಾ ಜ್ಞಾನವನ್ನೂ ಪ್ರೀತಿಸುವ ಹಾಗು ರಕ್ಷಿಸುವ ಭಗವಂತ ವೀರಬಾಹುಃ.
೪೬೭) ವಿದಾರಣಃ
ವಿದಾರಣಃ ಎಂದರೆ ಸೀಳಿಬಿಡುವ ಗುಣದವನು. ವೀರ ಬಾಹುವಾದ ಭಗವಂತ ದುಷ್ಟರನ್ನು, ಎದುರಾಳಿಗಳನ್ನು ಸೀಳಿಬಿಡುವ ಗುಣದವನು. ಕೃಷ್ಣಾವತಾರದಲ್ಲಿ ನರಸಿಂಹಾವತಾರದಲ್ಲಿ ಇದಕ್ಕೆ ನಿದರ್ಶನಗಳಿವೆ. ಜರಾಸಂದನನ್ನು ಭೀಮನೊಳಗೆ ಕೂತು ಸೀಳಿ ಸುಮಾರು ೨೨,೮೦೦ ರಾಜಕುಮಾರರನ್ನು ಸೆರೆಮನೆಯಿಂದ ಬಿಡಿಸಿದ ಕೃಷ್ಣ, ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವಿನ ಎದೆಬಗೆದ. ಹೀಗೆ ದುಷ್ಟರ ನಾಶಕ್ಕಾಗಿ ಸೀಳುವ ಗುಣವುಳ್ಳ ಭಗವಂತ ವಿದಾರಣಃ.
ಮುಂದುವರೆಯುವುದು...
No comments:
Post a Comment