ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ವೈದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || 18 ||
ವೇದ್ಯಃ ಅಂದರೆ ಎಲ್ಲರೂ ತಿಳಿಯಬೇಕಾದವನು. ಜಗತ್ತಿನಲ್ಲಿ ಪ್ರತಿಯೊಂದು ಶಬ್ಧವೂ ಭಗವಂತನನ್ನು ಹೇಳುತ್ತದೆ. ಭಗವಂತನ ಹೆಸರಿಲ್ಲದ ನಾದವಿಲ್ಲ. ನಾವು ಜಗತ್ತನ್ನು ತಿಳಿಯಬೇಕಾದರೆ ಜಗತ್ತಿನ ತಂದೆಯಾದ ಆ ಭಗವಂತನನ್ನು ತಿಳಿಯಬೇಕು. ಅನಾದಿ ಕಾಲದಿಂದ ನಮ್ಮ ತಂದೆಯಾಗಿ ಪಾಲಿಸುತ್ತಿರುವವ ಆ ಭಗವಂತ. ಯಾರನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ, ಅವನೇ ಎಲ್ಲದರಿಂದ ವೇದ್ಯನಾದ ಭಗವಂತ. ಅವನ ಅರಿವಿಲ್ಲದ ಯಾವುದೇ ಅರಿವು ಈ ಪ್ರಪಂಚದಲ್ಲಿಲ್ಲ.
೧೬೫) ವೈದ್ಯಃ
ಎಲ್ಲಾ ವಿದ್ಯೆಗಳಿಂದ ಪ್ರತಿಪಾದ್ಯನಾದವನು ವೈದ್ಯ. ಸಮಸ್ತ ವಿದ್ಯೆಗಳೂ ಅವನಿಗೆ ವೇದ್ಯ ಹಾಗೂ ಸಮಸ್ತ ವಿದ್ಯೆಗಳಿಂದ ಅವನೇ ವೇದ್ಯ. ಸದಾ ವೇದವಿದ್ಯೆಯ ಅಭಿಮಾನಿ ದೇವಿಯಾದ ಶ್ರೀತತ್ವದ ಜೊತೆಗಿರುವ ಲಕ್ಷ್ಮೀಪತಿ ಭಗವಂತ "ವೈದ್ಯಃ".
೧೬೬) ಸದಾಯೋಗೀ
ಭಗವಂತ ಸರ್ವ ಯೋಗದಿಂದ ಗಮ್ಯನಾದವನು. ಆತ ಯೋಗ ಸಾಧನೆಯಲ್ಲಿ ಸದಾ ಗೋಚರಿಸುತ್ತಾನೆ. ಯೋಗಗಳಲ್ಲಿ ಅನೇಕ ವಿಧ.
೧) ಜ್ಞಾನಯೋಗ : ಭಗವಂತನನ್ನು ಜ್ಞಾನ ಯೋಗದಿಂದ ತಿಳಿಯಬಹುದು, ತಿಳಿದು ಪಡೆಯಬಹುದು.
೨) ಭಕ್ತಿಯೋಗ: ಭಗವಂತ ಸದಾ ಭಕ್ತಿಗೆ ಅಧೀನ. ಭಕ್ತಿಪೂರ್ವಕವಲ್ಲದ ಜ್ಞಾನ ಅಹಂಕಾರವಾಗುತ್ತದೆ. ಅನನ್ಯ, ನಿರಂತರ ಭಕ್ತಿ, ಸಾಧಕನ ಅತ್ಯಂತ ಶ್ರೇಷ್ಠ ಗುಣ. ನಾವು ಈ ಹಿಂದೆ ನೋಡಿದ ನಿಯಮ ಮತ್ತು ಯಮಗಳ ಜೊತೆಗೆ ಅಧ್ಯಾತ್ಮ ಭಕ್ತಿ ಇಲ್ಲದಿದ್ದರೆ, ಯಮವೂ ಕೂಡ ದ್ವೇಷವಾಗಬಹುದು, ನಿಯಮ ಕೂಡಾ ಸ್ವಾರ್ಥವಾಗಬಹುದು!! ಪ್ರಾಮಾಣಿಕತೆ ಬರಬೇಕೆಂದರೆ ಸಾಮಾಜಿಕ ಕಾಳಜಿ ಜೊತೆಗೆ ಅಧ್ಯಾತ್ಮಿಕ ಭಕ್ತಿ ಅತೀ ಮುಖ್ಯ. ಇವೆರಡು ಸಮಾನ ರೇಖೆಗಳ ಸಮಾಗಮದ ಚಿನ್ನೆಯೇ ನಮ್ಮಲ್ಲಿ ಸ್ವಸ್ತಿಕ್ (卐) ಹಾಗು ಕ್ರಿಶ್ಚಿಯನ್ ಜನಾಂಗದಲ್ಲಿ ಕ್ರಾಸ್ (†) ಆಗಿ ಬಳಕೆಯಲ್ಲಿದೆ.
೩) ಕರ್ಮಯೋಗ : ಭಗವಂತನ ನಿಯಮದಂತೆ, ಭಗವಂತ ಮೆಚ್ಚುವಂತೆ ನಡೆಯುವುದು ಜ್ಞಾನಿಗಳ ದೊಡ್ಡ ಹೊಣೆಗಾರಿಕೆ. ಜ್ಞಾನಿಗಳು ಇಟ್ಟ ಹೆಜ್ಜೆಯನ್ನು ಎಲ್ಲರೂ ಹಿಂಬಾಲಿಸುತ್ತಾರೆ. ಆದ್ದರಿಂದ ಜ್ಞಾನಿ ಮಾಡುವ ಕರ್ಮಗಳಾದ ವ್ರತ, ನೇಮ, ಧ್ಯಾನ, ನಿಷ್ಠೆ, ಉಪಾಸನೆ, ಇತ್ಯಾದಿಗಳು ನಿಯಮಬದ್ದವಾಗಿರಬೇಕು.
೪) ವೈರಾಗ್ಯಯೋಗ ಮತ್ತು ಐಶ್ವರ್ಯಯೋಗ : ಈ ಎರಡು ಯೋಗಗಳು ಒಟ್ಟಿಗೆ ಇರುವುದು ಅತೀ ವಿರಳ. ಕೇವಲ ಭಗವಂತನಲ್ಲಿ ಹಾಗು ಭಗವಂತನ ಸಾನ್ನಿಧ್ಯವಿರುವ ಯೋಗಿಗಳಲ್ಲಿ ಈ ಗುಣವನ್ನು ನೋಡುತ್ತೇವೆ.
ಈ ರೀತಿ ಸದಾ ಯೋಗದಿಂದ ತಿಳಿಯಲ್ಪಡುವ ಹಾಗೂ ಸದಾ ವಿಯೋಗವಿಲ್ಲದೆ ಶ್ರೀತತ್ವದೊಂದಿಗಿರುವ ಭಗವಂತ "ಸದಾಯೋಗಿ".
೧೬೭) ವೀರಹಾ
ನಮಗೆ ಪೌರುಷ ಕೊಡುವವನು, ಹಾಗೂ ನಾವು ಪೌರುಷದ ಅಹಂಕಾರ ತೋರಿಸಿದಾಗ, ಅದನ್ನು ಮುರಿಯುವ ಭಗವಂತ, ಪ್ರತೀ ವೀರರ ಒಳಗೆ ಬಲ ದೇವತೆಯಾಗಿ ನಿಂತಿದ್ದಾನೆ. ಹಿಂದೆ ಹೇಳಿದಂತೆ 'ವೀ' ಅಂದರೆ ಪಕ್ಷಿ 'ಇರ' ಎಂದರೆ ಪ್ರಾಣದೇವರು. ಪಕ್ಷಿ ವಾಹನನಾಗಿ, ವಾಯು ದೇವರಲ್ಲಿದ್ದು, ವಿಹರಿಸುವ ಸರ್ವವೀರ ಭಗವಂತ "ವೀರಹಾ".
೧೬೮) ಮಾಧವಃ
ಈ ನಾಮ ಹಿಂದೊಮ್ಮೆ ಬಂದಿದೆ. ಲಕ್ಷ್ಮಿಪತಿ, ಮಧು ವಂಶದಲ್ಲಿ ಅವತರಿಸಿದವ, ಸರ್ವ ಶಬ್ದ ವಾಚ್ಯ, ಸರ್ವ ವೇದ ವಾಚ್ಯ ಇತ್ಯಾದಿ ಅರ್ಥಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಇನ್ನು ಮಾ ಎಂದರೆ ಜ್ಞಾನ. ಭಗವಂತ ಎಲ್ಲಾ ಜ್ಞಾನಗಳ ಸ್ವಾಮಿ. ಸಮಸ್ತ ದೇವತೆಗಳಿಗೆ ಆತನೇ ಲೋಕ ಗುರು. ಅದಕ್ಕಾಗಿ ನಾವು "ಕೃಷ್ಣಂ ವಂದೇ ಜಗದ್ಗುರು" ಎನ್ನುತ್ತೇವೆ. ನಾವು ಯಾವುದೇ ಗ್ರಂಥ ಅಧ್ಯಯನ ಮಾಡುವ ಮೊದಲು "ಸಹನಾವವತು ಸಹನೌಭುನಕ್ತು" ಎನ್ನುತ್ತೇವೆ. ಅಂದರೆ ಗುರು ಶಿಷ್ಯರ ಒಳಗೆ ಭಗವಂತ ಪ್ರವೇಶಿಸಲಿ ಎಂದರ್ಥ. ಹೀಗೆ ಎಲ್ಲಾ ಜ್ಞಾನಗಳ ಸ್ವಾಮಿ, ಜಗದ್ಗುರು, ಭಗವಂತ "ಮಾಧವಃ".
೧೬೯) ಮಧುಃ
ಮಧು ಅಂದರೆ ಆನಂದ. ಭಗವಂತ ಆನಂದದ ಕಡಲು. ಕಡಲಿಗಾದರೂ ಸೀಮೆ ಇದೆ, ಆದರೆ ಭಗವಂತ ಅನಂತ ಆನಂದ ಸ್ವರೂಪ.
೧೭೦) ಅತೀಂದ್ರಿಯಃ
ಭಗವಂತ ಎಲ್ಲಾ ಕಡೆ ಇದ್ದರೂ, ಆತ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದಿಲ್ಲ. ಏಕೆಂದರೆ ಆತನದು ನಮ್ಮ ಮಾತು-ಮನಗಳಿಗೆ ನಿಲುಕದ ಸ್ವರೂಪ. ನಾವು ಸಮುದ್ರದ ಜೊತೆಗಿದ್ದೂ ಸಮುದ್ರವನ್ನು ಗ್ರಹಿಸಲಾರದ ಮರಳಿನ ಕಣದಂತೆ. ಯಾವಾಗಲೂ ಭಗವಂತನ ಜೊತೆಗಿದ್ದರೂ ನಮ್ಮ ಇಂದ್ರಿಯ ಆತನನ್ನು ಗ್ರಹಿಸಲು ಸಾಧ್ಯವಿಲ್ಲ. ಇಂತಹ ಭಗವಂತ "ಅತೀಂದ್ರಿಯಃ".
೧೭೧) ಮಹಾಮಾಯಃ
ಭಗವಂತ ಮಹಾನ್ ಮೋಡಿಗಾರ ! ಭಗವಂತ ಪಾಪಿಗಳ ಎದುರೇ ನಿಂತಿದ್ದರೂ, ಅವರು ಆತನನ್ನು ತಿಳಿಯಲಾರರು. ಪ್ರಕೃತಿಮಾತೆ ಲಕ್ಷ್ಮಿ ಮಾಯೆ. ಭಗವಂತ ಮೂಲಪ್ರಕೃತೀಶ್ವರ. ಮಾಯ ಅಂದರೆ ಮಹಿಮೆ, ಇಚ್ಛೆ ಎನ್ನುವ ಅರ್ಥ ಕೂಡ ಪ್ರಚಲಿತದಲ್ಲಿದೆ. ಭಗವಂತನ ಸಂಕಲ್ಪ ಎಂದೂ ಹುಸಿಯಾಗದು. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಅಖಂಡವಾದ ಇಚ್ಛೆಯುಳ್ಳ ಭಗವಂತ "ಮಹಾಮಾಯಃ".
೧೭೨) ಮಹೋತ್ಸಾಹಃ
ಭಗವಂತ ಎಂದೂ ಬತ್ತದ ಉತ್ಸಾಹದ ಚಿಲುಮೆ. ಆತನ ಕಾರ್ಯತತ್ಪರತೆ ಅನಂತವಾದುದು. ಎಂತಹ ವಿಘ್ನ ಬಂದರೂ, ಕೈ ಬಿಡದ ಕಾರ್ಯೋತ್ಸಾಹ. ಯಾವ ಕಾರ್ಯ ಯಾವಾಗ ಆಗಬೇಕೋ, ಅದು ಆತನ ಸಂಕಲ್ಪದಂತೆ ಆಗುತ್ತದೆ. ಚತುರ್ಮುಖ ಕೂಡಾ ಒಮ್ಮೊಮ್ಮೆ ನಿರುತ್ಸಾಹ ತೋರಿಸಬಹುದು, ಆದರೆ ಭಗವಂತ ಮಾತ್ರ ಎಂದೂ ನಿರುತ್ಸಾಹಿ ಅಲ್ಲ. ಆದ್ದರಿಂದ ಆತ "ಮಹೋತ್ಸಾಹಃ."
೧೭೩) ಮಹಾಬಲಃ
ಉತ್ಸಾಹ ಮತ್ತು ಬಲ ಒಟ್ಟಿಗಿರುತ್ತದೆ. ಭಗವಂತ ಅಮಿತ ಬಲ. ಭಗವಂತನಲ್ಲಿ ಬಯಸಿದ್ದನ್ನು ಮಾಡುವ ಅಪಾರ ಶಕ್ತಿಯಿದೆ. ಭಗವಂತನ ಬಯಕೆ ಮತ್ತು ಕ್ರಿಯೆ ಬೇರೆ ಬೇರೆ ಅಲ್ಲ. ಅವನ ಬಯಕೆಯೇ ಅವನ ಕ್ರಿಯೆ.
ಮುಂದುವರೆಯುವುದು.....
No comments:
Post a Comment