Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -44


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯ ಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || 44 ||
 
೪೦೭) ವೈಕುಂಠಃ

ಮುಕ್ತರಿಗೆ ಆನಂದಪ್ರದನಾದ ಭಗವಂತ ವೈಕುಂಠ ಪತಿ. ನಮಗೆ ತಿಳಿದಿರುವಂತೆ 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಭಗವಂತನ ಸಾಕ್ಷಾತ್ಕಾರವಾದ ಮುಕ್ತರು. 'ಆಗಾಮಿ' ಹಾಗು 'ಸಂಚಿತ' ಕರ್ಮವಿಲ್ಲದ ಅಪರೋಕ್ಷ ಜ್ಞಾನಿಗಳನ್ನೂ ಕೂಡಾ 'ಪ್ರಾರಬ್ಧ ಕರ್ಮ' ಬಿಡುವುದಿಲ್ಲ. ಪ್ರಾರಬ್ಧ ಕರ್ಮ ಬಿಟ್ಟ ಬಾಣದಂತೆ. ಆದರೆ ಮುಕ್ತಿಗೆ ಹೋದವರಿಗೆ ಯಾವ ಕರ್ಮದ ಲೇಪವೂ ಇಲ್ಲ. ಇಂತಹ ವೈಕುಂಠ ಲೋಕದ ಪತಿಯಾದ ಭಗವಂತ ವೈಕುಂಠಃ. "ನಡೆಯುವವರಿಗೂ ಭೂಮಿ ಆಸರೆ, ಜಾರಿ ಬೀಳುವವರಿಗೂ ಭೂಮಿ ಆಸರೆ" ಎಂಬಂತೆ 'ವಿಕುಂಠರಿಗೆ' ಆಸರೆಯಾದ ಭಗವಂತ 'ವಿವಿಧ ಕುಂಠರಿಗೂ' ಆಶ್ರಯದಾತ. ಪಂಚಭೂತಗಳಿಂದಾದ ಈ ಪ್ರಪಂಚವನ್ನು 'ವಿಕುಂಠ' ಎನ್ನುತ್ತಾರೆ. ಮೂಲ ದ್ರವ್ಯಗಳಾದ ಮಣ್ಣು-ನೀರು-ಬೆಂಕಿಗಳಿಂದ ನಾನಾ ಪದಾರ್ಥಗಳನ್ನು ಸೃಷ್ಟಿ ಮಾಡಿದ ಭಗವಂತ ವೈಕುಂಠಃ

೪೦೮) ಪುರುಷಃ

ಪುರದಲ್ಲಿ ವಾಸಿಸುವವನು "ಪುರುಷಃ" ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ "ಪುರುಷ ಸೂಕ್ತ" ಭಗವಂತನನ್ನು ‘ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ. ಭಗವಂತನೊಬ್ಬನೇ ನಿಜವಾದ ಪುರುಷ. ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರು+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ. ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ, ಒಂದೊಂದು ಪಿಂಡಾಂಡದೊಳಗೆ ಒಂದೊಂದು ರೂಪದಲ್ಲಿ ಬಿಂಬರೂಪನಾಗಿ ತುಂಬಿ ಆ ಪಿಂಡಾಂಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ. ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸೃಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಇರುವ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರವಾದವನು. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮವನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.

೪೦೯) ಪ್ರಾಣಃ

ಎಲ್ಲರ ಒಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವವ ಪ್ರಾಣಃ. ಈ ಎಲ್ಲಾ ಚೇಷ್ಟೆಗಳು ಆತನ ಆನಂದದ ಅಭಿವ್ಯಕ್ತವೇ ಹೊರತು ಇನ್ನೇನನ್ನೋ ಪಡೆಯುವುದಕ್ಕೊಸ್ಕರ ಅಲ್ಲ. ಹೀಗೆ ಪೂರ್ಣವಾದ ಆನಂದದ ಸೆಲೆಯಾದ ಭಗವಂತ ಪ್ರಾಣಃ.

೪೧೦) ಪ್ರಾಣದಃ

ಪ್ರಾಣ+ದಃ, ಇಲ್ಲಿ 'ದ' ಎಂದರೆ ದ್ಯತಿ; ನಮ್ಮೊಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವ ಭಗವಂತ ಒಂದು ದಿನ ಪ್ರಾಣನೊಂದಿಗೆ ನಮ್ಮ ದೇಹವನ್ನು ತ್ಯಜಿಸುತ್ತಾನೆ, ಯಾವುದೂ ನಮ್ಮ ಕೈಯಲ್ಲಿಲ್ಲ, ನಾವು ಭಗವಂತ ನೆಡೆಸಿದಷ್ಟು ಕಾಲ ಮಾತ್ರ ನಡೆಯಬಹುದು. ವ್ಯರ್ಥವಾಗಿ ಅಹಂಕಾರದ ಮೊರೆ ಹೋಗುವ ದುಷ್ಟರ ಆನಂದವನ್ನು ಸಂಹಾರ ಮಾಡುವ ಭಗವಂತ ಪ್ರಾಣದಃ.

೪೧೧) ಪ್ರಣವಃ

ಎಲ್ಲರಿಂದ ಸ್ತುತನಾದ ಓಂಕಾರ ಪ್ರತಿಪಾದ್ಯ ಭಗವಂತ ಪ್ರಣವಃ. ಭಗವಂತನ ಹಿರಿಮೆಯನ್ನರಿತವರು ಆತನತ್ತ ಮುಖ ಹಾಕುತ್ತಾರೆ. ತಮ್ಮ ಅಹಂಕಾರವನ್ನು ಕಳಚಿಕೊಂಡು ಆತನ ಹತ್ತಿರ ಹೋಗುತ್ತಾರೆ. ಭಗವಂತನ ಸ್ತುತಿಯಿಂದ ಭಗವಂತನಿಗೇನೂ ಲಾಭವಿಲ್ಲ. ಆತನನ್ನು ತಿಳಿದಾಗ ನಮ್ಮ ರಾಗ-ದ್ವೇಷ ಹೊರಟು ಹೋಗಿ ಆತನ ಸ್ತೋತ್ರದತ್ತ ಮನಸ್ಸು ಹರಿಯುತ್ತದೆ. ಹೀಗೆ ಜ್ಞಾನಿಗಳಿಂದ ಸ್ತುತನಾದ, ಮೂರು ಕಾಲದಲ್ಲೂ ಇರುವ ಅವಿನಾಶಿ ತತ್ವ ಭಗವಂತ ಪ್ರಣವಃ.

೪೧೨) ಪೃಥುಃ

ಭೂಮಿ (ಪೃಥ್ವಿ) ಹೇಗೆ ಎಲ್ಲವನ್ನೂ ಹೊತ್ತು ಸಲಹುತ್ತದೋ ಅದೇ ರೀತಿ ಭಗವಂತ ಇಡೀ ವಿಶ್ವವನ್ನು ಹೊತ್ತು ಸಲಹುತ್ತಾನೆ. ಎಲ್ಲವನ್ನೂ ಹೊರುವ ವೈಶಾಲ್ಯವುಳ್ಳ ಭಗವಂತ ಸರ್ವ ವ್ಯಾಪ್ತನಾದವನು. ಇಂತಹ ವಿಶಾಲವಾದ ಸರ್ವವ್ಯಾಪಿ ಭಗವಂತ ಪೃಥುಃ.

೪೧೩) ಹಿರಣ್ಯಗರ್ಭಃ

ಒಡಲಲ್ಲಿ ವಿಶ್ವವೆಂಬ ಬಂಗಾರ ತುಂಬಿರುವ ಭಗವಂತ ಹಿರಣ್ಯಗರ್ಭಃ. ಇಲ್ಲಿ ಹಿರಣ್ಯ ಎಂದರೆ ಬಾಹ್ಯ ಪ್ರಪಂಚದ ಅಪೇಕ್ಷೆ ಇಲ್ಲದೆ ಅಂತರಂಗದಿಂದ ಚಿಮ್ಮುವ ಆನಂದ. ನಮ್ಮೊಳಗಿರುವ ಜ್ಞಾನಾನಂದವೇ ನಿಜವಾದ ಚಿನ್ನ. ಇದನ್ನು ಬಿಟ್ಟು ಹೊರಗಿನ ಚಿನ್ನದ ಬೆನ್ನು ಹತ್ತುವವರಿಗೆ ಭಗವಂತ ಎಂದೂ ದಕ್ಕುವುದಿಲ್ಲ. ಬಂಗಾರದ ಮೊಟ್ಟೆಯಾದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಚತುರ್ಮುಖನ ಅಂತರ್ಯಾಮಿ ಭಗವಂತ ಹಿರಣ್ಯಗರ್ಭಃ

೪೧೪) ಶತ್ರುಘ್ನಃ

ಶ್ರೀರಾಮಚಂದ್ರನಿಗೆ ಶತ್ರುಘ್ನನೆಂಬ ತಮ್ಮನಿದ್ದ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ಎಂಬ ಭಗವಂತನ ರೂಪವೇ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂದು ಅವತಾರದಲ್ಲಿ ನಮಗೆ ಕಾಣಿಸಿಕೊಂಡ ರೂಪ. ಶಂಖಾಭಿಮಾನಿ ಅನಿರುದ್ಧ ನಾಮಕ ಭಗವಂತ ಶತ್ರುಘ್ನನಲ್ಲಿ ಸನ್ನಿಹಿತನಾಗಿದ್ದ. ಶತ್ರು ನಾಶಕ ಭಗವಂತನನ್ನು ಶತ್ರುಘ್ನ ಎನ್ನುತ್ತಾರೆ. ಭಗವಂತನಿಗೆ ಶತ್ರುಗಳು ಯಾರು ? ಎನ್ನುವ ಪ್ರಶ್ನೆ ನಮ್ಮಲ್ಲಿ ಹುಟ್ಟಬಹುದು. ಭಗವಂತ ದ್ವೇಷ ಮಾಡುವ ವಸ್ತು ಅಜ್ಞಾನ, ವಿಪರೀತ ಜ್ಞಾನ, ಅತಿಕಾಮ, ಕ್ರೋಧ ಇತ್ಯಾದಿ. ಸಾಧಕನ ಸಾಧನೆಗೆ ಅಂತರಂಗದ ಶತ್ರುಗಳು ದುರ್ಗುಣಗಳು. ನಮ್ಮ ಅಂತರಂಗದ ಶತ್ರುಗಳು ತುಂಬಾ ಅಪಾಯಕಾರಿ. ಇದಕ್ಕೆ ನಿದರ್ಶನ 'ಮಹಾಭಾರತದ ಧೃತರಾಷ್ಟ್ರ'. ಧೃತರಾಷ್ಟ್ರನ ಒಳಗಿದ್ದ 'ಪುತ್ರಮೋಹ' ಎನ್ನುವ ಶತ್ರು ಆತನನ್ನು ಅಧಃಪತನಕ್ಕೆ ಕೊಂಡೊಯ್ದ ವಿಷಯ ನಮಗೆಲ್ಲ ತಿಳಿದೇ ಇದೆ. ನಾವು ಭಗವಂತನ ಬಗ್ಗೆ ಚಿಂತನೆ ಮಾಡಬೇಕಿದ್ದರೆ ಮೊದಲು ನಮ್ಮ ಮನಸ್ಸು ದುರ್ಗುಣಗಳಿಂದ ಈಚೆ ಬರಬೇಕು. ನಾವು ಚಿಂತನೆ ಮಾಡಬೇಕೆಂದುಕೊಂಡಾಗ ಮನಸ್ಸು ನಿಂತ ಕಡೆ ನಿಲ್ಲುವುದಿಲ್ಲ. ಮಗು ತಾಯಿಯೇ ಬೇಕು ಎಂದು ಹಂಬಲಿಸಿ ಹೇಗೆ ಹಠ ಮಾಡಿ ತಾಯಿಯನ್ನು ಸೇರುತ್ತದೋ ಅದೇ ರೀತಿ ನಾವು ಹಠ ಬಿಡದೆ ಭಗವಂತನನ್ನು ನೆನೆದರೆ ಆತ ಶತ್ರುಘ್ನನಾಗಿ ಬಂದು ನಮ್ಮ ಅಂತರಂಗದ ಶತ್ರುಗಳನ್ನು ನಾಶ ಮಾಡಿ ಸಾಧನೆಯ ಹಾದಿಯಲ್ಲಿ ನಮ್ಮನ್ನು ಮುಂದೆ ನಡೆಸುತ್ತಾನೆ. ಹೀಗೆ ಜ್ಞಾನ ಮಾರ್ಗದ ಅರಿಗಳನ್ನು ತರಿಯುವವನು ಶತ್ರುಘ್ನ.

೪೧೫) ವ್ಯಾಪ್ತಃ

ಭಗವಂತ ಪರಮ ಆಪ್ತನಾದವನು; ಆತ ಜ್ಞಾನಿಗಳ ಆಪ್ತ ಗೆಳೆಯ ಹಾಗೂ ಅಭಯ. ಹೀಗೆ ಜ್ಞಾನಿಗಳ ಮಿತ್ರನಾಗಿ ಎಲ್ಲೆಡೆ ತುಂಬಿರುವ ಭಗವಂತ ವ್ಯಾಪ್ತಃ.

೪೧೬) ವಾಯುಃ

ಪ್ರತಿಯೊಂದು ಜೀವ ಜಾತದ ಒಳಗೂ ಹೊರಗೂ ತುಂಬಿರುವ; ಜಗವನ್ನು ಬೆಸೆದ; ಜ್ಞಾನ ಸ್ವರೂಪ ಹಾಗೂ ನಮಗೆ ಉಸಿರನ್ನಿತ್ತ ಭಗವಂತ ವಾಯುಃ.

೪೧೭) ಅಧೋಕ್ಷಜಃ

ಎಂದೂ ಕೆಳಕ್ಕೆ ಕುಸಿಯದವನು; ಪ್ರತ್ಯಕ್ಷಕ್ಕೆ ಗೋಚರವಾಗದವನು. ಭಾರತದಲ್ಲಿ ಹೇಳುವಂತೆ "ಅಧೋ ನಕ್ಷೀಯತೆ ಜಾತು ಯಸ್ಮಾತ್ ತಸ್ಮಃ ಅಧೋಕ್ಷಜಃ". ಅಂದರೆ ಭಗವಂತ ಎಂದೂ ತನ್ನ ಎತ್ತರದ ಸ್ಥಿತಿಯಿಂದ ಕೆಳಕ್ಕಿಳಿಯುವುದಿಲ್ಲ. ಆ ಎತ್ತರ ಆತನ ಸ್ವರೂಪ ಧರ್ಮ. ಹೀಗೆ ಎಂದೆಂದೂ ಶ್ರೇಷ್ಠನಾಗಿರುವ, ಪ್ರತ್ಯಕ್ಷ ಗೋಚರವಾಗದ ಭಗವಂತ ಅಧೋಕ್ಷಜಃ.

ಮುಂದುವರೆಯುವುದು...

No comments:

Post a Comment