Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -36


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ || 36 ||

೩೨೯) ಸ್ಕಂದಃ

ಶಿವ ಪುತ್ರನಾದ ಕಾರ್ತಿಕೇಯ, ಸುಬ್ರಹ್ಮಣ್ಯ ಅಥವಾ ಷಣ್ಮುಖನನ್ನು ಸ್ಕಂದ ಎನ್ನುತ್ತಾರೆ; ಇದು ರೂಢಾರ್ಥ. ಸ್ಕಂದ ಎಂದರೆ ಚಲಿಸುವುದು, ಹೊರಹೊಮ್ಮುವುದು ಹಾಗೂ ಚಿಮ್ಮುವುದು ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ. ಯಾರ ನಾಭಿಯಿಂದ ಈ ಜಗತ್ತು ಹೊರಹೊಮ್ಮಿತೋ ಅವನು ಸ್ಕಂದಃ. ಈ ನಾಮವನ್ನು ಒಡೆದು ನೋಡಿದರೆ ಸ+ಕ+ದ; ಈ ಹಿಂದೆ ಹೇಳಿದಂತೆ 'ಸ' ಎಂದರೆ ಸಾರ ಅಥವಾ ಜ್ಞಾನ; 'ಕ' ಅಥವಾ 'ಕಂ' ಎಂದರೆ ಆನಂದ; 'ದ' ಎಂದರೆ ಕೊಡುವವನು ಅಥವಾ ಕೊಡದೇ ಇರುವವನು. ಆದ್ದರಿಂದ ಸ್ಕಂದಃ ಎಂದರೆ ಸಾತ್ವಿಕರಿಗೆ ಸದಾ ಜ್ಞಾನಾನಂದವನ್ನು ಕೊಡುವವನು ಹಾಗೂ ದುಷ್ಟರನ್ನು ಜ್ಞಾನಾನಂದದಿಂದ ದೂರವಿರಿಸುವವನು.

೩೩೦) ಸ್ಕಂದಧರಃ

ಸ್ಕಂದಧರಃ ಎಂದರೆ ಸ್ಕಂದನನ್ನು ಧರಿಸಿದವನು. ಸ್ಕಂದ ಶಿವನಲ್ಲಿ 'ಷಣ್ಮುಖನಾಗಿ', ಚತುರ್ಮುಖನಲ್ಲಿ 'ಸನತ್ ಕುಮಾರನಾಗಿ' ಹಾಗೂ ವಿಷ್ಣುವಿನಲ್ಲಿ 'ಕಾಮನಾಗಿ' ಹುಟ್ಟಿದವನು. ಹೀಗೆ ಸ್ಕಂದನನ್ನು ಧರಿಸಿ ಆತನನ್ನು ಮಗನಾಗಿ ಪಡೆದ ಭಗವಂತ ಸ್ಕಂದಧರಃ. ಮೇಲೆ ಹೇಳಿದಂತೆ ಸ್ಕಂದ ಎಂದರೆ ಜ್ಞಾನಾನಂದವನ್ನು ಕೊಡುವವರು. ನಮಗೆ ಜ್ಞಾನಾನಂದದ ಅನುಭವವನ್ನು ಕೊಡುವವರು ನಮ್ಮ ಆತ್ಮಾಭಿಮಾನಿ ದೇವತೆಗಳಾದ ಚತುರ್ಮುಖ ಹಾಗೂ ಪ್ರಾಣ. ಈ ಜೀವಾಭಿಮಾನಿ ದೇವತೆಗಳನ್ನು ಧರಿಸಿದ ಭಗವಂತ ಸ್ಕಂದಧರಃ.

೩೩೧) ಧುರ್ಯಃ

ಧುರ್ಯ ಎಂದರೆ 'ಮುಂದಾಳು'. ಈ ಪ್ರಪಂಚದಲ್ಲಿನ ಪ್ರತಿಯೊಂದು ಪ್ರಾಣಿಸಂಕುಲದಲ್ಲಿ ಒಬ್ಬ ಮುಂದಾಳುವನ್ನು ಕಾಣುತ್ತೇವೆ. ಆನೆಗಳ ಗುಂಪಿನಲ್ಲಿ ಒಂದು ಆನೆ ಮುಂದಾಳಾಗಿರುತ್ತದೆ ಹಾಗೂ ಇತರ ಆನೆಗಳು ಅದನ್ನು ಅನುಸರಿಸುತ್ತವೆ. ಮಂಗಗಳ ಗುಂಪನ್ನು ಒಂದು ಮುಂದಾಳು ಮಂಗ ಮುನ್ನೆಡೆಸುತ್ತದೆ ಹಾಗೂ ಇತರೆ ಮಂಗಗಳು ಅದನ್ನು ಅನುಸರಿಸುತ್ತವೆ. ವೈರಿಯನ್ನು ಸದೆಬಡಿಯುವಾಗ 'ಮುಂದಾಳು' ಎದೆಯೊಡ್ಡಿ ಹೋರಾಡಿದರೆ ಇತರರು ಆತನ ಅಪ್ಪಣೆಯಂತೆ ಹೋರಾಟ ಮಾಡುತ್ತಾರೆ; ಮಹಾಭಾರತ ಯುದ್ಧದಲ್ಲಿ ಭೀಮಾರ್ಜುನರು 'ಮುಂದಾಳಾಗಿದ್ದು' ಹೋರಾಟ ಮಾಡಿ ಧರ್ಮರಾಯನಿಗೆ ಜಯವನ್ನು ತಂದುಕೊಡುತ್ತಾರೆ; ಅರ್ಜುನನ ರಥದ 'ಧುರ್ಯ' ಸ್ವಯಂ ಶ್ರೀಕೃಷ್ಣನಾಗಿದ್ದ. ಹೀಗೆ ಭಗವಂತ ಪ್ರತಿಯೊಂದು ಮುಂದಾಳುವಿನಲ್ಲಿ 'ಧುರ್ಯ' ರೂಪನಾಗಿ ಸನ್ನಿಹಿತನಾಗಿರುತ್ತಾನೆ. ಪ್ರತಿಯೊಂದು ಮಹತ್ಕಾರ್ಯವನ್ನು ಮುಂದಾಳಾಗಿ ಮಾಡುವ ಹಾಗೂ ಮಾಡಿಸುವ ಭಗವಂತ ಧುರ್ಯಃ

೩೩೨) ವರದಃ

ಭಗವಂತ ವರವನ್ನು ಕೊಡುವವನು ಹಾಗೂ ಅಯೋಗ್ಯರಿಗೆ ಸಿಕ್ಕ ವರವನ್ನು ನಾಶ ಮಾಡುವವನು. ಆತ ತನ್ನ ಯೋಗ್ಯ ಭಕ್ತರಿಗೆ ಅವರು ಬಯಸಿದ ವರವನ್ನು ಕೊಡುತ್ತಾನೆ, ಹಾಗೆಯೇ ಹಿರಣ್ಯಕಶಿಪುವಂತಹ ದುಷ್ಟರು ತಮಗೆ ಸಿಕ್ಕ ವರದ ದುರುಪಯೋಗ ಮಾಡಿದಾಗ ಅವರನ್ನು ನಾಶ ಮಾಡಿ ಭಕ್ತಕೂಟಿಯ ರಕ್ಷಣೆ ಮಾಡುತ್ತಾನೆ. ಹೀಗೆ ಭಕ್ತರು ಬಯಸಿದ್ದನ್ನೀಯುವ ಭಗವಂತ ವರದಃ.

೩೩೩) ವಾಯುವಾಹನಃ

ಪ್ರಾಣ ತತ್ವದ ತೇರನ್ನೇರಿದವನು ಹಾಗೂ ವಾಯುವಿನ ಸಾರಥ್ಯದಲ್ಲಿ ದೇಹದ ತೇರನ್ನೇರಿದ ಭಗವಂತ ವಾಯುವಾಹನಃ. ವಾಯುವನ್ನು ನಮ್ಮೊಳಗಿರಿಸಿ ನಮಗೆ ಬದುಕನ್ನು ಕೊಟ್ಟ ಭಗವಂತ ಸ್ವಯಂ ವಾಯುವಾಹನ. "ವಾಯು" ಎಂದರೆ ಇಡೀ ಜಗತ್ತನ್ನು ಹೆಣೆಯುವ ಶಕ್ತಿ. ಪಂಚಭೂತಗಳನ್ನು ನಿರ್ಧಿಷ್ಟವಾಗಿ ಹೆಣೆದು ನಮಗೆ ಈ ದೇಹವನ್ನು ಭಗವಂತ ಕರುಣಿಸಿದ್ದಾನೆ; ಅದೇ ರೀತಿ ಈ ಬ್ರಹ್ಮಾಂಡವನ್ನು ನಿರ್ದಿಷ್ಟವಾಗಿ ಹೆಣೆದು ಜೋಡಿಸಿಟ್ಟಿದ್ದಾನೆ. ಜ್ಞಾನದಿಂದ ತುಂಬಿದ ಶಕ್ತಿಯಾಗಿ ಇಡೀ ಜಗತ್ತನ್ನು ಧರಿಸಿದ ಭಗವಂತನಿಗೆ ವಾಯುವಾಹನವೆಂಬುದು ಅನ್ವರ್ಥನಾಮ.

೩೩೪) ವಾಸುದೇವಃ

ಭಗವಂತನ ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ. ಈ ನಾಮವನ್ನು ಈ ರೀತಿ ಒಡೆದು ಅರ್ಥೈಸಬಹುದು. ವ+ಅಸು+ದೇವ. ಹಿಂದೆ ಹೇಳಿದಂತೆ 'ವ' ಅಂದರೆ ಜ್ಞಾನ; 'ಅಸು' ಎಂದರೆ ಪ್ರೇರಕ; ದೇವ ಎಂದರೆ ಆಟ. ಜ್ಞಾನ ಸ್ವರೂಪನಾದ ಭಗವಂತನಿಗೆ ಇಡೀ ವಿಶ್ವವನ್ನು ನಿಯಂತ್ರಿಸುವುದು ಒಂದು ಕ್ರೀಡೆ!. ಇಡೀ ವಿಶ್ವದ ಸೃಷ್ಟಿ-ಸ್ಥಿತಿ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಅವನಿಗೆ ಲೀಲಾಮಾತ್ರ. ಇದೇ ನಾಮವನ್ನು ಇನ್ನೊಂದು ರೀತಿಯಲ್ಲಿ ನೋಡಿದರೆ ವಾ+ಸೂ+ದೇ+ಅವ. ಇಲ್ಲಿ 'ವಾ' ಎಂದರೆ ಎಲ್ಲೆಡೆ ತುಂಬಿರುವವನು (ಸರ್ವಗತ-ಸರ್ವಜ್ಞ); 'ಸೂ' ಅಥವಾ 'ಸೂತೇ' ಎಂದರೆ ಎಲ್ಲವನ್ನೂ ಹೆತ್ತವನು (ಸರ್ವ ಸೃಷ್ಟಿಕರ್ತ); 'ದೇ' ಎಂದರೆ ಎಲ್ಲವನ್ನೂ ಕೊಡುವವನು(ಸರ್ವ ಧಾತಾ); 'ಅವ' ಎಂದರೆ ಎಲ್ಲರ ರಕ್ಷಕ (ಸರ್ವ ರಕ್ಷಕ).

ವಸುದೇವ ಎಂದರೆ 'ಬೆಳಗುವ ಸಂಪತ್ತು'; ಸಾತ್ವಿಕ ಮನಸ್ಸನ್ನು ಕೊಡುವ ಬೆಳಕು. ಕೇವಲ ಶುದ್ಧವಾದ ಸಾತ್ವಿಕ ಮನಸ್ಸಿಗೆ ಅಭಿವ್ಯಕ್ತವಾಗುವವ ವಾಸುದೇವ. ಅಷ್ಟವಸುಗಳಲ್ಲಿ ಪ್ರಧಾನನಾದ ಅಗ್ನಿ ಪ್ರತೀಕದಲ್ಲಿ ಉಪಾಸ್ಯನಾದವ ಹಾಗೂ ಎಲ್ಲೆಡೆ ನೆಲೆಸಿ ಎಲ್ಲವನ್ನೂ ಆವರಿಸಿ ವಿಹರಿಸುವ ಭಗವಂತ ವಾಸುದೇವಃ.

೩೩೫) ಬೃಹದ್ಭಾನುಃ

ಈ ಜಗತ್ತಿನಲ್ಲಿ ಇರುವ ಎಲ್ಲಾ ಬೃಹತ್ತಾದ ಬೆಳಕುಗಳನ್ನು ಬೆಳಗಿಸುವವ ಬೃಹದ್ಭಾನು.

ಹೊರಪ್ರಪಂಚದಲ್ಲಿ ಹಾಗೂ ನಮ್ಮೊಳಗೆ ಐದು ಪ್ರಮುಖವಾದ ಬೆಳಕುಗಳಿವೆ.
(೧) ಮನುಷ್ಯನ ಕಣ್ಣಿಗೆ ಗೋಚರವಾಗುವ ಅತೀ ದೊಡ್ಡ ಬೆಳಕು ಸೂರ್ಯ; ಆತನೇ ನಮ್ಮ ಕಣ್ಣಿನ ಅಭಿಮಾನಿ ದೇವತೆ.
(೨) ತಂಪಾದ ಆಹ್ಲಾದಕರ ಬೆಳದಿಂಗಳನ್ನೀಯುವ ಹಾಗೂ ನಮ್ಮ ಕಿವಿಯ ಅಭಿಮಾನಿ ದೇವತೆ ಚಂದ್ರ.
(೩) ಭೂಮಿಯಲ್ಲಿರುವ ಅತ್ಯಂತ ಮಹತ್ತಾದ ಬೆಳಕು ಹಾಗೂ ನಮ್ಮ ಬಾಯಿಯ ಅಭಿಮಾನಿ ದೇವತೆ ಬೆಂಕಿ.
(೪)ಚಂದ್ರನ ಸುತ್ತಲೂ ಇರುವ ನಕ್ಷತ್ರಗಳು; ನಾವು ನಮ್ಮ ಕಣ್ಣಿನಿಂದ ನೋಡುವ ಮುಖೇನ, ಕಿವಿಯಿಂದ ಕೇಳುವ ಮುಖೇನ ಹಾಗೂ ಬಾಯಿಯಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳುವ ಮುಖೇನ, ನಮ್ಮೊಳಗೆ ತಿಳುವಳಿಕೆಯ ನಕ್ಷತ್ರಗಳು ಬೆಳಗುತ್ತವೆ. ಹೀಗೆ ಜ್ಞಾನ ವೃದ್ದಿಯಾಗಿ ನಮ್ಮಲ್ಲಿ ಅತ್ಯಂತ ಪ್ರಮುಖವಾದ ಐದನೇ ಬೆಳಕು ಚಿಮ್ಮುತ್ತದೆ.
(೫) ಈ ಐದನೇ ಅತ್ಯಂತ ಪ್ರಮುಖ ಬೆಳಕು 'ಮಿಂಚು' ಅದೇ ನಮ್ಮೊಳಗಿನ ಸತ್ಯದ ಸ್ಪೂರಣ. ಹೀಗೆ ನಮ್ಮಲ್ಲಿನ ಕಣ್ಣು, ಕಿವಿ, ಬಾಯಿ,ಮನೋವೃತ್ತಿ ಮತ್ತು ಅಂತಃಸ್ಪೂರಣ ಹಾಗೂ ಹೊರಗಿನ ಸೂರ್ಯ, ಚಂದ್ರ, ಅಗ್ನಿ ನಕ್ಷತ್ರ ಮತ್ತು ಮಿಂಚನ್ನು ಬೆಳಗುವ ಭಗವಂತ ಬೃಹದ್ಭಾನುಃ.

೩೩೬) ಆದಿದೇವಃ

ಸೃಷ್ಟಿಯ ಪೂರ್ವದಲ್ಲಿದ್ದವ, ಆದಿತ್ಯನೊಳಗೆ ಅಂತಃರ್ಯಾಮಿಯಾಗಿದ್ದು ಬೆಳಗುವ ಹಾಗೂ ಎಲ್ಲಕ್ಕೂ ಮೂಲಕಾರಣನಾದ ಭಗವಂತ ಆದಿದೇವಃ.

೩೩೭) ಪುರಂದರಃ

ಚತುರ್ಮುಖನ ಪುರ ಈ ಬ್ರಹ್ಮಾಂಡ, ನಮ್ಮ ಪುರ ಈ ನಮ್ಮ ದೇಹ. ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡವನ್ನು ಬೇಧಿಸುವವನು; ನಮ್ಮ ಗತಿಗನುಗುಣವಾಗಿ ನಮ್ಮ ಶರೀರವೆಂಬ ಪುರವನ್ನು ಬೇಧಿಸುವವ; ಮೋಕ್ಷ ಯೋಗ್ಯರ ಸೂಕ್ಷ್ಮ ಶರೀರವನ್ನು ಭೇಧಿಸಿ ನಮ್ಮ ಸ್ವರೂಪರೂಪಿ ಆತ್ಮವನ್ನು ಧಾರಣೆ ಮಾಡುವವ; ಶತ್ರುಗಳ ಪುರವನ್ನು ಪುಡಿಗಟ್ಟುವ ಭಗವಂತ ಪುರಂದರಃ.

ಮುಂದುವರೆಯುವುದು...

No comments:

Post a Comment