ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸದ್ಗತಿಃ ಸತ್ಕ್ರತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಸ್ಸುಯಾಮುನಃ || 75 ||
೭೦೪) ಸದ್ಗತಿಃ
ಭಗವಂತನ ಗುಣಗಾನ ಮಾಡುತ್ತಾ ನಾಮ ಜಪ ಮಾಡುತ್ತಾ ಕುಳಿತರೆ ನಮ್ಮ ದೈನಂದಿನ ಚಟುವಟಿಕೆಯನ್ನು ಯಾರು ಮಾಡುತ್ತಾರೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ನಾವು ಮಾಡುವ ನಮ್ಮ ದೈನಂದಿನ ಕೆಲಸ ಕಾರ್ಯವನ್ನು ಭಗವದರ್ಪಣೆಯಾಗಿ ಮಾಡುವುದೇ ಮಹಾ ಹವನ. ಇದು ಸಜ್ಜನರಿಗೆ ಗಮ್ಯನಾದ ಭಗವಂತನನ್ನು ಸೇರಲು ಇರುವ ಅತ್ಯಂತ ಸರಳ ವಿಧಾನ. ಹೀಗೆ ಸಜ್ಜನರಿಗೆ, ಜ್ಞಾನಿಗಳಿಗೆ, ಸಾತ್ವಿಕರಿಗೆ ಗಮ್ಯನಾದ ಭಗವಂತ ಸದ್ಗತಿಃ.
೭೦೫) ಸತ್ಕೃತಿಃ
ನಮ್ಮಿಂದ ಸಮೀಚೀನವಾದ ಕ್ರಿಯೆಯನ್ನು ಮಾಡಿಸಿ, ನಮ್ಮ ಜ್ಞಾನವನ್ನು ವೃದ್ಧಿ ಮಾಡಿಸುವ ಭಗವಂತ ಸತ್ಕೃತಿಃ.
೭೦೬) ಸತ್ತಾ
'ಸತ್ತಾ' ಅಂದರೆ 'ಇರುವಿಕೆ'. ಈ ಜಗತ್ತಿನಲ್ಲಿ ಇರುವ ಏಕಮಾತ್ರ 'ನಿರ್ದೋಷತ್ವವಾದ ಇರುವಿಕೆ' ಕೇವಲ ಭಗವಂತ. ಯಾವ ದೋಷವೂ ಇಲ್ಲದ ಪರಿಶುದ್ಧ ಇರುವಿಕೆಯ ಭಗವಂತ ಸತ್ತಾ.
೭೦೬) ಸದ್ಭೂತಿಃ
ಸಜ್ಜನರಿಗೆ ಭೂತಿಯನ್ನು ಕೊಡುವ ಭಗವಂತ, ಜ್ಞಾನಿಗಳಿಗೆ ಉನ್ನತಿಯನ್ನು ಕೊಟ್ಟು ಎತ್ತರಕ್ಕೇರಿಸುವ ಸದ್ಭೂತಿಃ.
೭೦೮) ಸತ್ಪರಾಯಣಃ
ಸಜ್ಜನರು ಹೋಗಿ ಸೇರಬೇಕಾದ ಕೊನೆಯ ನಿಲುದಾಣ. ಅಲ್ಲಿಂದ ಮುಂದೆ ಪ್ರಯಾಣವಿಲ್ಲ. ನಮ್ಮ ಪಯಣದ ಕೊನೆಯ ನಿಲ್ದಾಣ ಭಗವಂತ ಸತ್ಪರಾಯಣಃ
೭೦೯) ಶೂರಸೇನ
ಶೂರರಾದ ಸೈನಿಕರ ಪಡೆಯುಳ್ಳವನು ಶೂರಸೇನ. ಭಗವಂತನ ಸೇನೆ ದೇವತೆಗಳ ಸೇನೆ. ಭಗವಂತ ದೇವತೆಗಳ ಜೊತೆಗಿರುವ ತನಕ ಅವರಿಗೆ ಎಂದೂ ಸೋಲಿಲ್ಲ. ಆದರೆ ಅಹಂಕಾರದಿಂದ ದೇವರಿಂದ ದೂರ ಸರಿದವರಿಗೆ ಎಂದೂ ಜಯವಿಲ್ಲ!
೭೧೦) ಯದುಶ್ರೇಷ್ಠಃ
ಯದುವಂಶದಲ್ಲಿ ಶ್ರೇಷ್ಟನಾಗಿ ಹುಟ್ಟಿಬಂದ, ಎಲ್ಲರಿಗಿಂತ ಹಿರಿಯ ಭಗವಂತ ಯದುಶ್ರೇಷ್ಠಃ
೭೧೧) ಸನ್ನಿವಾಸಃ
ಸಜ್ಜನರಿಗೆ ಸದಾ ನೆಲೆಯಾದ ಭಗವಂತ ಸದಾ ಅವರಲ್ಲಿ ನಿವಾಸ ಮಾಡುವ ಸನ್ನಿವಾಸಃ.
೭೧೨) ಸುಯಾಮುನಃ
ಯಮುನೆಯ ನೀರನ್ನು ನಿರ್ದೋಷಗೊಳಿಸಿದ ಭಗವಂತ ಸುಯಾಮುನಃ. ಯಮುನೆಯ ನೀರು ಕಾಲಿಯನ ವಿಷದಿಂದ ಕೆಟ್ಟು ಹೋದಾಗ, ಆ ಕಾಲಿಯನ ತಲೆಯಮೇಲೆ ನಿಂತು ನಲಿದಾಡಿ ಯಮುನೆಯನ್ನು ಸ್ವಚ್ಚಗೊಳಿಸಿ ಹೊಸ ಚೈತನ್ಯವನ್ನು ಕೊಟ್ಟ ಭಗವಂತ ಸುಯಾಮುನಃ
ನಮ್ಮ ಒಳ ಪ್ರಪಂಚದಲ್ಲೂ ಯಮುನೆಯೊಬ್ಬಳಿದ್ದಾಳೆ. ಇದು ನಮ್ಮೊಳಗಿರುವ ಶಕ್ತಿ ಕೇಂದ್ರಗಳಿಗೆ ಸಂಬಂಧಪಟ್ಟ ವಿಷಯ. ನಮ್ಮ ಮೂಲಾಧಾರದ ಎಡಭಾಗಕ್ಕೆ 'ಇಡಾ' ಹಾಗು ಬಲ ಭಾಗಕ್ಕೆ 'ಪಿಂಗಳ' ಎನ್ನುವ ಎರಡು ನಾಡಿಗಳು ಹಾವಿನಂತೆ ಸುಷಮ್ನಾ ನಾಡಿಯನ್ನು ಹೆಣೆದುಕೊಂಡು ಊರ್ಧ್ವಮುಖವಾಗಿ ಆಜ್ಞಾ ಚಕ್ರದಲ್ಲಿ ಸಂಗಮಿಸುತ್ತವೆ. ಈ ನಾಡಿಗಳನ್ನು ಗಂಗಾ(ಇಡಾ), ಯಮುನಾ(ಪಿಂಗಳ) ಹಾಗು ಸರಸ್ವತಿ(ಸುಷಾಮ್ನಾ) ಎಂದು ಕರೆಯುತ್ತಾರೆ. ಕುಂಡಲಿನಿ ನಿಯಂತ್ರಣ ತಿಳಿಯದವರಿಗೆ ಕುಂಡಲಿನಿ ಜಾಗೃತವಾದರೆ ಹುಚ್ಚುಹಿಡಿಯಬಹುದು! ಇಂತಹ ಸಂದರ್ಭದಲ್ಲಿ ಜಾಗೃತಗೊಂಡ ಕುಂಡಲಿನಿಯ ತಲೆಯಮೇಲೆ ನಿಂತು ನಾಟ್ಯವಾಡಿ ನಮಗೆ ಶಕ್ತಿಯ ಆನಂದವನ್ನು ಕೊಡುವ ಭಗವಂತ ಸುಯಾಮುನಃ.
ಮುಂದುವರೆಯುವುದು...✍️💐
No comments:
Post a Comment