Wednesday, May 24, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -72


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ || 72 ||

೬೭೬) ಮಹಾಕ್ರಮಃ.

ಕ್ರಮ ಎಂದರೆ 'ರೀತಿ' ; ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಆಕಸ್ಮಿಕವಲ್ಲ, ಅದು ಕ್ರಮಬದ್ಧವಾದ ಕ್ರಿಯೆ. ಎಲ್ಲವನ್ನೂ ಕರಾರುವಕ್ಕಾಗಿ ಗಣಿತಬದ್ಧವಾಗಿ ಮಾಡುವ ಭಗವಂತ ಮಹಾಕ್ರಮಃ.  ಅನಂತ ಕಾಲದಿಂದ ಈ ಪ್ರಪಂಚ ನೆಡೆದು ಬಂದಿದೆ, ಹಾಗೂ ಮುಂದುವರಿಯುತ್ತದೆ. ಈವರೆಗೆ ಅನಂತ ಪ್ರಪಂಚ ಸೃಷ್ಟಿಯಾಗಿದೆ ಹಾಗೂ ಇನ್ನು ಮುಂದೆ ಕೂಡಾ ಅನಂತ ಪ್ರಪಂಚ ಸೃಷ್ಟಿಯಾಗಲಿದೆ. ಆದರೆ ಪ್ರತಿಯೊಂದು ಸೃಷ್ಟಿಯೂ ಕ್ರಮಬದ್ಧ. ಪ್ರತಿಯೊಂದಕ್ಕೂ ಒಂದು ಲೆಕ್ಕಾಚಾರವಿದೆ, ಅದರಂತೆಯೇ ನಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧರಿತ.

೬೭೭) ಮಹಾಕರ್ಮಾ.

ಈ ವಿಶ್ವದಲ್ಲಿ ಮಹತ್ತಾದ ಕರ್ಮ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ.  ಇಂತಹ ಮಹಾ ಕರ್ಮವನ್ನು ನಿರ್ವಹಿಸುವ ಭಗವಂತ ಮಹಾಕರ್ಮಾ. ನಮ್ಮ ಕೈಯಲ್ಲಿ ಮಹತ್ತಾದ ಕರ್ಮವನ್ನು ಮಾಡಿಸುವವನೂ ಅವನೇ.

೬೭೮) ಮಹಾತೇಜಾಃ

ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗೂ ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಜಗತ್ತಿನಲ್ಲಿ ನಡೆಯುವ ತೇಜಸ್ಸಿನ ಪ್ರತಿಯೊಂದು ಕ್ರಿಯೆಯ ಮೂಲ ಭಗವಂತ ಮಹಾತೇಜಾಃ. ಆತ ಎಲ್ಲವನ್ನೂ ಬೆಳಗಿಸುವ ಬೆಳಕು. ಗೀತೆಯಲ್ಲಿ ಹೇಳುವಂತೆ:

ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ |
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ||

ಅಂದರೆ "ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ"  ಹೀಗೆ ಬೆಳಕುಗಳಿಗೆ ಬೆಳಕು ನೀಡುವ ಮಹಾ ತೇಜಸ್ಸು ಭಗವಂತ ಮಹಾತೇಜಾಃ.

೬೭೯) ಮಹೋರಗಃ

ಉರಗ ಎಂದರೆ ಹೊಟ್ಟೆ ಹೊಸೆದುಕೊಂಡು ಹೋಗುವ ಪ್ರಾಣಿ; ಅದನ್ನು ಸರ್ಪ ಎನ್ನುತ್ತಾರೆ. ಹೆಡೆ ಇರುವ ಹಾವು 'ನಾಗರ'. ಭಗವಂತ ದೊಡ್ಡ ಉರಗದ ಮೇಲೆ ಮಲಗಿದ ಶೇಷಶಾಯಿ. ಶೇಷಶಾಯಿ ಎಂದರೇನು ಎನ್ನುವುದನ್ನು ನಾವು ನಮ್ಮೊಳಗಿರುವ ದೇವರನ್ನು ಕಾಣಲು ಪ್ರಯತ್ನಿಸಿದಾಗ ಮಾತ್ರ ತಿಳಿಯುತ್ತದೆ. ಈ ಹಿಂದೆ ಹೇಳಿದಂತೆ ನಮ್ಮ ದೇಹದೊಳಗೆ ಮೂಲಾಧಾರದಿಂದ ಸಹಸ್ರಾರದವರೆಗೆ ಬೇರೆ ಬೇರೆ ಶಕ್ತಿ ಕೇಂದ್ರಗಳಿವೆ. ಮೂಲಾಧಾರದಲ್ಲಿ ಮಡಿಕೆಹಾಕಿ ತಲೆಯನ್ನು ಕೆಳಗಿಟ್ಟು ಮಲಗಿದ ಉರಗದ ಸ್ಥಿತಿಯಲ್ಲಿ ಕುಂಡಲಿನಿ ಶಕ್ತಿ ಅಡಗಿದೆ. ಕೆಳಮುಖವಾಗಿರುವ ಈ ಶಕ್ತಿಕೇಂದ್ರದಿಂದ ಶಕ್ತಿ ಪಾತವಾಗುತ್ತದೆ. ಇಂತಹ ಹಾವನ್ನು ಕೆಣಕಿದರೆ ಮಾತ್ರ ಅದು ಹೆಡೆ ಎತ್ತುತ್ತದೆ; ಆಗ ಶಕ್ತಿ ಮೇಲ್ಮುಖವಾಗಿ ಸ್ವಾಧಿಷ್ಟಾನ-ಮಣಿಪುರ-ಅನಾಹತ-ವಿಶುದ್ಧಿ-ಆಜ್ಞಾ-ಸಹಸ್ರಾರ, ಹೀಗೆ ಹಂತ ಹಂತವಾಗಿ ಮೇಲೇರುತ್ತದೆ. ನಮ್ಮ ಆಜ್ಞಾ ಚಕ್ರವೇ ಕ್ಷೀರ ಸಾಗರ. ಇಂತಹ ಕ್ಷೀರ ಸಾಗರದಲ್ಲಿ ಸಹಸ್ರಾರದತ್ತ ಹೆಡೆಯತ್ತಿನಿಂತ ಶೇಷ ಶಕ್ತಿ ಹಾಗೂ ಅದರ ಮೇಲೆ ಮಲಗಿ ದರ್ಶನವನ್ನೀಯುವ ಅನಂತ ಪದ್ಮನಾಭ ಭಗವಂತ ಮಹೋರಗಃ.

೬೮೦) ಮಹಾಕ್ರತುಃ

'ಕ್ರತು' ಎಂದರೆ  ಒಂದು ಅರ್ಥದಲ್ಲಿ ಕರ್ಮ ಅಥವಾ ಕ್ರಿಯೆ; ಇನ್ನೊಂದು ಅರ್ಥ ಜ್ಞಾನ. ನಿಶ್ಚಯ ಅಥವಾ ಖಚಿತ ಜ್ಞಾನದಿಂದ ಕರ್ಮ(ಸೃಷ್ಟಿ-ಸ್ಥಿತಿ-ಸಂಹಾರ) ಮಾಡುವ ಭಗವಂತ ಮಹಾಕ್ರತುಃ. ಯಜ್ಞದಲ್ಲಿ ಮೂರುಹೊತ್ತು ಮಾಡತಕ್ಕ ಯಜ್ಞಕರ್ಮ ಕ್ರತು. ನಾವು ಮಾಡುವ ಯಜ್ಞ-ಯಾಗಾದಿಗಳು ಭಗವಂತನಲ್ಲಿ ಅರ್ಪಿತವಾದಾಗ ಅದು ಮಹಾಕ್ರತುವಾಗುತ್ತದೆ. ಹೀಗೆ ನಿಶ್ಚಯ ಜ್ಞಾನದಿಂದ ಮಾಡುವ ಯಜ್ಞವನ್ನು ಸ್ವೀಕರಿಸುವ ಭಗವಂತ ಮಹಾಕ್ರತುಃ.

೬೮೧) ಮಹಾಯಜ್ವಾ

'ಯಜ್ವಾ' ಎಂದರೆ ಯಜ್ಞ ಮಾಡಿಸುವ ಯಜಮಾನ. ಭಗವಂತ ಹಿರಿಯ ಯಾಜಕ. ಯಜಮಾನನೊಳಗೆ ನಿಂತು ಎಲ್ಲವನ್ನೂ ಮಾಡಿಸುವ ಆತ ಮಹಾಯಜ್ವಾ.

೬೮೨) ಮಹಾಯಜ್ಞ

ಯಾರಿಂದ ಯಜ್ಞ ಮಹತ್ತಾಗುತ್ತದೋ ಅವನು ಮಹಾಯಜ್ಞ. ಯಜ್ಞದಲ್ಲಿ ನೆಲೆಸಿ,ಯಜ್ಞಗಳಿಂದ ಆರಾಧ್ಯನಾದ ಭಗವಂತ ಮಹಾಯಜ್ಞ.

೬೮೩) ಮಹಾಹವಿಃ

ಯಜ್ಞದಲ್ಲಿ ಅರ್ಪಿಸುವ ಹವಿಸ್ಸನ್ನು ಸ್ವೀಕರಿಸುವ, ಯಾಗದಿಂದ ಆರಾಧಿಸಲ್ಪಡುವ, ದೇವತೆಗಳ ಒಡೆಯ, ಸರ್ವಶಬ್ದ ವಾಚ್ಯ ಭಗವಂತ ಮಹಾಹವಿಃ.

ಮುಂದುವರೆಯುವುದು...✍️💐

No comments:

Post a Comment