Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 3


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ   |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ   || 3 || 

18) ಯೋಗಃ  

ಜೀವದ ಜೊತೆಗೆ ನಿರಂತರವಾಗಿ ಇರುವ ಆಪ್ತ ಬಂಧು. ನೆನೆದಾಗ ಮನದಲ್ಲಿ ಬಂದು ನೆಲೆಸುವವನು. ಭಕ್ತರು   ಬಯಸಿದ್ದನ್ನು ಈಡೇರಿಸುವವನು.

19) ಯೋಗವಿದಾಂನೇತಾ 

ಸರ್ವ ವೇದ ಮಂತ್ರಗಳನ್ನು ಬಲ್ಲವರ ನಾಯಕ. ಅಧ್ಯಾತ್ಮದ ಬಗೆಯನ್ನು, ಜೀವನ ಯೋಗವನ್ನು ಬಲ್ಲ  ಜ್ಞಾನಿಗಳ ನೇತಾರ.

20) ಪ್ರಧಾನಪುರುಷೇಶ್ವರಃ

ಪ್ರಧಾನ ಅಂದರೆ "ಶ್ರೀ" ಅಂದರೆ ಲಕ್ಷ್ಮಿ, ಲಕ್ಷ್ಮಿಗೂ ಈಶ್ವರ, ಬ್ರಹ್ಮ ವಾಯುರಿಗೂ ಈಶ್ವರ.

21) ನಾರಸಿಂಹವಪುಃ  

ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ ಎನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ಈ ನಾಮವನ್ನು ಒಡೆದು ವಿಶ್ಲೇಷಿಸಿದರೆ ವಿಶಿಷ್ಟ ಅರ್ಥಗಳನ್ನು ಕಾಣುತ್ತೇವೆ. ಇಲ್ಲಿ 'ನಾರ' ಎಂದರೆ ನರರಲ್ಲಿ ತುಂಬಿರುವ ಅಜ್ಞಾನ, 'ಸಿಂಹ' ಎಂದರೆ ಸಿಮ್ಮತಿ ಅಥವಾ ನಿವಾರಿಸುವವನು, 'ವ' ಎಂದರೆ  ಜ್ಞಾನ, ಪುಃ ಎಂದರೆ ಕರುಣಿಸುವವನು.ಆದ್ದರಿಂದ ನಾರಸಿಂಹವಪುಃ ಎಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ, ಜ್ಞಾನದ ಬೀಜ ಬಿತ್ತುವವನು ಎಂದರ್ಥ.

ಇಷ್ಟೇ  ಅಲ್ಲದೆ ಇನ್ನೂ ಮುಂದಕ್ಕೆ ವಿಶ್ಲೇಷಿಸಿದಾಗ,  ನಾರ(ನಾ+ಅರ) ಎಂದರೆ ದೋಷವಿಲ್ಲದವನು; ಸಿಂಹ ಎಂದರೆ ಭಯಂಕರವಾಗಿ ಸರ್ವ ದೋಷವನ್ನು ನಾಶಮಾಡುವವನು. ಆದ್ದರಿಂದ  ನಾರಸಿಂಹವಪುಃ ಎಂದರೆ ಸರ್ವ ದೋಷವನ್ನು ಭಯಂಕರವಾಗಿ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದಿರುವವನು. ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿಮಾಡುವವನು. ಹೀಗೆ ಮನುಕುಲದ ಸೃಷ್ಟಿ-ಸಂಹಾರಕ್ಕೆ ಕಾರಣನಾದ ಭಗವಂತ  ನಾರಸಿಂಹವಪುಃ

22) ಶ್ರೀಮಾನ್

ಇಡೀ ವಿಶ್ವದ ಒಡೆತನ ಇರುವ ಭಗವಂತ ಶ್ರೀಮಂತ, ಅದ್ದರಿಂದ ಆತ ಶ್ರೀಮಾನ್.ಇಲ್ಲಿ ಶ್ರೀಹಿ ಎಂದರೆ  ವೇದ ವಾಙ್ಮಯ, ಶ್ರೀಮಾನ್ ಎಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು ಎಂದರ್ಥ. 'ಶ್ರೀ' ಎಂದರೆ ಚಿತ್-ಪ್ರಕೃತಿ "ಲಕ್ಷ್ಮಿ"  ಲಕ್ಷ್ಮೀ ಪತಿಯಾದ ಭಗವಂತ ಶ್ರೀಮಾನ್. ಐತರೇಯ ಉಪನಿಷತ್ತು ಹೇಳುವಂತೆ "ಕಣ್ಣು ಒಂದು ಶ್ರೀ, ಮನಸ್ಸು ಒಂದು ಶ್ರೀ, ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು. ಮನುಷ್ಯ ಅರಿವಿನ ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ ಸೂರ್ಯ-ಚಂದ್ರರಿದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು  ಬೇಕು. ಈ ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ. ಈ ಪಂಚೇಂದ್ರಿಯಗಳನ್ನು ನಮಗೆ ದಯಪಾಲಿಸಿದ ಆ ಕರುಣಾಮಯೀ ಭಗವಂತ ಶ್ರೀಮಾನ್.

23) ಕೇಶವಃ

ಕೇಶವ ಎಂದರೆ ಅತ್ಯಂತ ಸುಂದರವಾದ ಕೂದಲು ಉಳ್ಳವನು ಎಂದರ್ಥ.ಇದು  ಭಗವಂತನ ಕೃಷ್ಣಾವತಾರದಲ್ಲಿ ಬಂದ ಹೆಸರು. ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಸುಂದರವಾದ ಗುಂಗುರು ಕೂದಲಿನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ. ಗಂಡಸರು , ಹೆಂಗಸರು , ಗೋವುಗಳು ಎಲ್ಲರೂ ಕೃಷ್ಣನಿಂದ ಆಕರ್ಷಣೆಗೆ ಒಳಗಾಗುತ್ತಿದ್ದರು. ಈ ರೀತಿ ಸುಂದರನಾದ  ಭಗವಂತ ಕೇಶವ.
ಇನ್ನು ಕೃಷ್ಣಾವತಾರದಲ್ಲಿ ಕಂಸನ ಧೂತನಾದ ಕೇಶಿ ಎಂಬ ರಾಕ್ಷಸನನ್ನು ಕೊಂದ ಭಗವಂತನನ್ನು ಕೇಶವ ಎನ್ನುತ್ತಾರೆ. ಕೃಷ್ಣನನ್ನು ಕೊಲ್ಲಲು ಕಂಸ ಕೇಶಿಯನ್ನು, ಕುದುರೆ ರೂಪದಲ್ಲಿ  ಬೃಂದಾವನಕ್ಕೆ  ಕಳುಹಿಸಿಕೊಟ್ಟಿದ್ದ. ಆತನನ್ನು ಕೃಷ್ಣ ಸಂಹಾರ ಮಾಡಿದ್ದ.

ಈ ನಾಮವನ್ನು ಕಾ+ಈಶ+ವ ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ಕಾ' ಎಂದರೆ ಸೃಷ್ಟಿಗೆ ಕಾರಣವಾಗಿರುವ   ಚತುರ್ಮುಖ ಬ್ರಹ್ಮ; 'ಈಶ' ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ; ಕೇಶವ ಎಂದರೆ  ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಪರಶಕ್ತಿ.

ಇನ್ನು ಕೇಶ ಎಂದರೆ ಸೂರ್ಯಮಂಡಲದಿಂದ ಭೂಮಿಗೆ ಹರಿದುಬರುವ ಕಿರಣ;  ಸೌರ ಮಂಡಲದಲ್ಲಿ ನಿಂತು, ಸೌರ ಶಕ್ತಿಯಿಂದ ಈ ಜಗತ್ತನ್ನು ಬೆಳಗಿಸುವ ಗಾಯತ್ರಿ ಸ್ವರೂಪ ಭಗವಂತ-ಕೇಶವ.

24) ಪುರುಷೋತ್ತಮಃ

ಪುರುಷೋತ್ತಮ ಎನ್ನುವ ನಾಮದ ಸಂಪೂರ್ಣ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು.

ದ್ವಾವಿಮೌ  ಪುರುಷೌ ಲೋಕೇ ಕ್ಷರಸ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ  ಉಚ್ಚ್ಯತೇ  || (ಅ-೧೫, ಶ್ಲೋ-೧೬)
ಉತ್ತಮಃ ಪುರುಷಸ್ತ್ವನ್ಯಃ  ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ  || (ಅ-೧೫, ಶ್ಲೋ-೧೭)
ಯಸ್ಮಾತ್ ಕ್ಷರಮತೀತೋऽಹಮಕ್ಷರಾದಪಿ ಚೋತ್ತಮಃ |
ಅತೋऽಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || (ಅ-೧೫, ಶ್ಲೋ-೧೮)

ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ  ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ  ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭).ನಾನು ಕ್ಷರವನ್ನು ಮೀರಿ ನಿಂತವನು. ಅಕ್ಷರಕ್ಕಿಂತಲೂ ಹಿರಿಯನು, ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದು ಹೆಸರಾಗಿದ್ದೇನೆ  (ಅ-೧೫, ಶ್ಲೋ-೧೮).

ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ. ಉತ್ತಮಪುರುಷ ; ಮಹಾಪುರುಷ ; ಪರಮಪುರುಷ  ಮತ್ತು  ಪುರುಷೋತ್ತಮ. ಎಲ್ಲವೂ  ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತವೆ. ಉತ್ತಮಪುರುಷ ಎಂದರೆ  ಪುರುಷರಲ್ಲಿ ಉತ್ತಮ. ಕ್ಷರಪುರುಷ ಎಂದರೆ ಕ್ಷರವಾದ ಪುರದಲ್ಲಿ ಇರುವ ಎಲ್ಲಾ ಜೀವರು. ನಾಶವಾಗುವ ಹದಿನೈದು ಬೇಲಿಯಿಂದ ಬದ್ಧನಾದ  ಶರೀರದಲ್ಲಿರುವ ಜೀವ ಕ್ಷರಪುರುಷ. ಈಗ ಜೀವರನ್ನು ಬಂದಿಸಿರುವ ಹದಿನೈದು ಬೇಲಿಗಳನ್ನು ನೋಡೋಣ.

೧) ಶ್ರದ್ಧೆಯ ಬೇಲಿ: ಇದರಲ್ಲಿ ಎರಡು ವಿಧ. ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ) ಹಾಗೂ ಜೀವ ಸ್ವಭಾವದ ಬೇಲಿ(ಕಿತ್ತೆಸೆಯಬೇಕಾದ ಬೇಲಿ). ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ, ಪರಿಸರದ ಪ್ರಭಾವ, ಮನೆತನದ ಅನುವಂಷಿಕ(ಜೀನ್ಸ್)ಪ್ರಭಾವದಿಂದ ಬಂದ ಶ್ರದ್ಧೆ, ಇತ್ಯಾದಿಯನ್ನು ಮೀರಿನಿಂತು  ನೋಡಿದಾಗ ಮಾತ್ರ ನಿಜವಾದ ಶ್ರದ್ಧೆ ಎಂದರೆ ಏನು ಎಂದು ಅರ್ಥವಾಗುತ್ತದೆ.

೨-೬)ಪಂಚಭೂತಗಳ ಬೇಲಿ: ಮಣ್ಣು-ನೀರು(ಅನ್ನಮಯ ಕೋಶ), ಬೆಂಕಿ-ಗಾಳಿ-ಆಕಾಶ (ಪ್ರಾಣಮಯ ಕೋಶ).

೭)ಇಂದ್ರಿಯಗಳ ಬೇಲಿ:ಕೆಟ್ಟದ್ದನ್ನು ಮಾಡುವ ಐದು  ಜ್ಞಾನೇಂದ್ರಿಯಗಳು(ಕಿವಿ, ಮೂಗು, ಕಣ್ಣು, ನಾಲಗೆ ಮತ್ತು ಚರ್ಮ) ಮತ್ತು  ಐದು ಕರ್ಮೇಂದ್ರಿಯಗಳು(ಕೈ, ಕಾಲು, ಮುಖ, ಉಪಸ್ಥ ಮತ್ತು ಗುದ).

೮)ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು

೯)ಅನ್ನದ ಬೇಲಿ: ಆಹಾರ.

೧೦)ವೀರ್ಯದ ಬೇಲಿ: ಶಕ್ತಿ .

೧೧-೧೩) ತಪಃ-ಮಂತ್ರಃ-ಕರ್ಮಃ.ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ)-ತಪಃ. ತನ್ನ ಕನಸನ್ನು ನನಸು ಮಾಡಲು ಆಡುವ  ಮಾತುಗಾರಿಕೆ ಮಂತ್ರಃ.ಮತ್ತು ಅದನ್ನು ಸಾಧಿಸಲು ಮಾಡುವ ಕರ್ಮ.

೧೪)ಲೋಕಗಳು: ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು, ನನ್ನದು ಅನ್ನುವ ಸೊತ್ತುಗಳು).

೧೫)ನಾಮದ ಬೇಲಿ: Name and fame, ಕೀರ್ತಿ. ಈ ಮೇಲಿನ  ನಾಶವಾಗತಕ್ಕಂತಹ  ಹದಿನೈದು ಬೇಲಿ ಒಳಗೆ ಸಿಕ್ಕಿ ಹಾಕಿಕೊಂಡಿರುವುದೇ ಹದಿನಾರನೇ ಜೀವ.  ಜೀವಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಶಿಕ್ಷಣಕ್ಕಾಗಿ ಕಳಿಸಿರುವ ಚಿತ್ತ್ ಪ್ರಕೃತಿ ಲಕ್ಷ್ಮಿ ಹದಿನೇಳನೇ ಅಕ್ಷರಪುರುಷಳು. ಈ ಮೇಲಿನ ಕ್ಷರ-ಅಕ್ಷರಗಳಿಗಿಂತ ಅತೀತನಾದ ಹದಿನೆಂಟನೆಯ ಭಗವಂತ ಪುರುಷೋತ್ತಮ. ಮೇಲಿನ ಬೇಲಿಯಿಂದ ಜೀವಿಯನ್ನು ಬಿಡಿಸಿ ಮುಕ್ತಿಯನ್ನು ಕರುಣಿಸುವವನು ಪುರುಷೋತ್ತಮ! 

ಮುಂದುವರೆಯುವುದು....

No comments:

Post a Comment