ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜೋತಿರ್ಗಣೇಶ್ವರಃ |
ವಿಜಿತಾತ್ಮಾsವಿಧೇಯಾತ್ಮಾ ಸತ್ಕೀರ್ತಿಶ್ಚಿನ್ನಸಂಶಯಃ || 66 ||
೬೨೦) ಸ್ವಕ್ಷಃ
ಸು+ಅಕ್ಷ; ದೋಷರಹಿತ ಸ್ವರೂಪಭೂತವಾದ ಕಣ್ಣುಳ್ಳವನು
೬೨೧) ಸ್ವಂಗಃ
ಸು+ಅಂಗಃ; ಭಗವಂತನ ಸಮಸ್ತ ಅಂಗಗಳೂ ಆನಂದಮಯ, ಜ್ಞಾನಮಯ ಹಾಗು ಸುಖ ಸ್ವರೂಪ.
೬೨೨) ಶತಾನಂದಃ.
ಶತ+ಆನಂದ; ಇಲ್ಲಿ ಶತ ಅಂದರೆ ನೂರಾರು ಅಥವಾ ಅನಂತ. ಅನಂತ ಆನಂದರೂಪಿ ಭಗವಂತ ಶತಾನಂದಃ.
೬೨೩) ನಂದಿಃ.
ಪೂರ್ಣಾನಂದ ಸ್ವರೂಪ.
೬೨೪) ಜ್ಯೋತಿರ್ಗಣೇಶ್ವರಃ
ಎಲ್ಲಾ ಬೆಳಕುಗಳ ಒಡೆಯ; ಜ್ಞಾನಾನಂದಮಯವಾದ ಬೆಳಕನ್ನು ಕೊಟ್ಟು ನಮ್ಮನ್ನು ಅಜ್ಞಾನ ಪ್ರಪಂಚದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಭಗವಂತ ಜ್ಯೋತಿರ್ಗಣೇಶ್ವರಃ.
೬೨೫) ವಿಜಿತಾತ್ಮಾ
ಮನಸ್ಸನ್ನು ಗೆದ್ದವನು, ಅಂದರೆ ಸಾದಕ ಯಾರ ಕೃಪೆಯಿಂದ ತನ್ನ ಮನಸ್ಸನ್ನು ಗೆಲ್ಲಬಲ್ಲನೊ ಅವನು ವಿಜಿತಾತ್ಮಾ. 'ಆತ್ಮ' ಎಂದರೆ ಜೀವಗಳು; ಎಲ್ಲಾ ಜೀವರನ್ನು ಗೆದ್ದ ಭಗವಂತ, ಯಾರನ್ನು ಸ್ವೀಕಾರ ಮಾಡುತ್ತಾನೋ ಅವನ ಮನಸ್ಸು ಮಾತ್ರ ಭಗವಂತನೆಡೆಗೆ ಹರಿಯುತ್ತದೆ.
೬೨೬) ಅವಿಧೇಯಾತ್ಮಾ (ವಿಧೇಯಾತ್ಮಾ)
ಎರಡು ರೂಪದಲ್ಲಿ ಈ ನಾಮವನ್ನು ನೋಡಬಹುದು. ಅವಿಧೇಯಾತ್ಮಾ ಅಂದರೆ ಇನ್ನೊಬ್ಬರಿಗೆ ಅಧೀನವಿಲ್ಲದ ಸ್ವತಂತ್ರ ಸ್ವರೂಪ. ಆದರೆ ಇಂತಹ ಭಗವಂತ ವಿಧೇಯಾತ್ಮಾ! ಏಕೆಂದರೆ ಅವನನ್ನು ಯಾರು ಭಕ್ತಿಯಿಂದ ಒಲಿಸಿಕೊಳ್ಳುತ್ತರೋ ಅವರಿಗೆ ಆತ ಅಧೀನ (ಭಕ್ತಪರಾಧೀನ).
೬೨೭) ಸತ್ಕೀರ್ತಿಃ
ನಿರ್ದಿಷ್ಟವಾದ, ದೋಷರಹಿತವಾದ ಸ್ವರೂಪ ಎಂದು ಜ್ಞಾನಿಗಳು ಯಾರನ್ನು ಗುಣಗಾನ ಮಾಡುತ್ತಾರೋ ಅವನು ಸತ್ಕೀರ್ತಿಃ.
೬೨೮) ಛಿನ್ನಸಂಶಯಃ.
ಪ್ರತಿಯೊಂದು ವಸ್ತುವಿನ ಸಮಗ್ರ ಹಾಗೂ ಸಾಕ್ಷಾತ್ ಜ್ಞಾನವುಳ್ಳ ಭಗವಂತನಿಗೆ ಸಂಶಯವೇ ಇಲ್ಲ. ನಮ್ಮ ಸಂಶಯವನ್ನು ನಾಶಮಾಡುವ ಭಗವಂತ ಛಿನ್ನಸಂಶಯಃ.
ಮುಂದುವರೆಯುವುದು...
No comments:
Post a Comment