Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 1


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

|| ಓಂ ನಮೋ ಭಗವತೇ ವಾಸುದೇವಾಯ ||

ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ  |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ    ||1||

1) ವಿಶ್ವಮ್

ವಿಷ್ಣು ಸಹಸ್ರನಾಮದ ಮೊದಲ ನಾಮ ವಿಶ್ವಂ. ಈ ಹಿಂದೆ ಹೇಳಿದಂತೆ ವಿಷ್ಣು ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ 'ವಿ ' ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ, ಶ್ವ ಎಂದರೆ ಚಲಿಸುವವನು  ಎನ್ನುವ  ಅರ್ಥವನ್ನು ಕೊಡುತ್ತದೆ .  ಆದ್ದರಿಂದ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ  ಭಗವಂತ ವಿಶ್ವ .

ಮೇಲೆ ಹೇಳಿದ ಅರ್ಥವಲ್ಲದೆ ಇನ್ನೂ ಹತ್ತು ಹಲವು ಅರ್ಥಗಳನ್ನು ವಿಶ್ವ ಅನ್ನುವ ನಾಮದಲ್ಲಿ ನಾವು ನೋಡಬಹುದು. ಚತುರ್ಮುಖ ಬ್ರಹ್ಮನನ್ನು ವಿಶ್ವ ಎಂದು ಕರೆಯುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ತನ್ನ ನಾಭಿಯಲ್ಲಿ  ಧರಿಸಿರುವ ಭಗವಂತ, ಆತನ ಮೂಲಕ ಈ ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ .  ಆದ್ದರಿಂದ  ಆತ  ವಿಶ್ವಂ.

ಆಂಜನೇಯ ರೂಪಿ ಮುಖ್ಯಪ್ರಾಣನನ್ನು  ಕೂಡ ವಿಶ್ವ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಲನೆಯನ್ನು   ಕೊಡುವಂತಹ  ಪ್ರಾಣಶಕ್ತಿಯಾದ  ಮುಖ್ಯಪ್ರಾಣನಲ್ಲಿ  ತುಂಬಿದ್ದು, ನಮ್ಮ ದೇಹದಲ್ಲಿ ಬಿಂಬರೂಪದಲ್ಲಿ ಪ್ರವೇಶಿಸಿ (ವಿಶತಿ),  ಅಂತರ್ಯಾಮಿಯಾಗಿ  ದೇಹದ  ಒಳಗೂ ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ  ಭಗವಂತ  ವಿಶ್ವಂ.

2) ವಿಷ್ಣುಃ

ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ.

ಇನ್ನು ಈ ಪದವನ್ನು  ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ (ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವಶಕ್ತ ಭಗವಂತ ವಿಷ್ಣು.

3) ವಷಟ್ಕಾರಃ

ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ  ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.

ಏಕೆ ಅವನು ವಷಟ್ಕಾರ?  ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ  ಈ ಕೆಳಗಿನ  ಆರು ಮುಖದಲ್ಲಿ ಜಗತ್ತಿನಾದ್ಯಂತ  ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ  ಜ್ಞಾನಶಕ್ತಿ ಇರುವವನು.
೨. ಶಕ್ತಿ- ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.

ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.  

4) ಭೂತಭವ್ಯಭವತ್ಪ್ರಭುಃ 

ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ.   ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ),  ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗೂ ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು  ನಾವು ಒಡೆದು ನೋಡಿದಾಗ, ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು  ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು. ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು, ಭವಿಗಳು ಎಂದರೆ  ಸಂಸಾರಿಗಳು ಅಥವಾ ರಾಜಸರು, ಭವಂತಿ ಎಂದರೆ ಜೀವನದಲ್ಲಿ  ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ  ಹಾಗೂ ತಾಮಸರಿಗೂ ಪ್ರಭು ಎಂದರ್ಥ.

ಈ ರೀತಿ ಹಿಂದೆ ಇದ್ದವನು,  ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ  ಭೂತಭವ್ಯಭವತ್ಪ್ರಭುಃ

5) ಭೂತಕೃತ್

ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸಂಹಾರ

ಅದೇ  ರೀತಿ  ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ  ಅಂದರೆ ಪಂಚಭೂತಗಳು  (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ) 
೨. ಚೇತನ ಭೂತ ಅಂದರೆ  ಪಂಚಭೂತಗಳಿಂದ ಆದ ಜೀವಗಳು.

ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ, ಪಂಚಭೂತಾತ್ಮಕವಾದ ಬ್ರಹ್ಮಾಂಡದ ಸೃಷ್ಟಿಕರ್ತ.  ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾಂಡ ಸೃಷ್ಟಿ ಮಾಡಿದವ , ಪಿಂಡಾಂಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ, ಮತ್ತು ಸಾಧನೆ ಮೂಲಕ ಜೀವರಿಗೆ ಮುಕ್ತಿಯನ್ನು ಕರುಣಿಸುವವ.

ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡುವವ, ಅಭಿವೃದ್ಧಿ ಹೊಂದದ ತಾಮಸ ಜೀವರನ್ನು ನಾಶ ಮಾಡುವವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡುವವ, ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ , ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ ಮಾಡುವವ.

6) ಭೂತಭೃತ್

ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡುವವ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಧಾರಣೆ ಮಾಡುವವ, ಪಂಚಭೂತಗಳಿಂದಾದ ಪಿಂಡಾಂಡ ಧಾರಣೆ ಮಾಡುವವ, ಪಿಂಡಾಂಡದಲ್ಲಿರುವ ಜೀವವನ್ನು ಧಾರಣೆ ಮಾಡುವವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡುವವ.

7) ಭಾವಃ

ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು ನೈಸರ್ಗಿಕ ಕ್ರಿಯೆ. ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ ಶಾಶ್ವತವಾಗಿ ಇರುವವನು.  ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.  

8) ಭೂತಾತ್ಮಾ

ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾಂಡದಲ್ಲಿ ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ. ಭೂತಿಯನ್ನು( ಉನ್ನತಿ) ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವ  ಭಗವಂತ ಭೂತಾತ್ಮ.

9) ಭೂತಭಾವನಃ  

ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದವ, ಜೀವಿಗಳಿಗೆ ಸುಖ-ದುಃಖ ಕೊಡುವವ-ಭೂತಭಾವನಃ

ಮುಂದುವರೆಯುದು....

No comments:

Post a Comment