Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -57


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋಃ ಮಹಾಶೃಂಗಃ ಕೃತಾಂತಕೃತ್ || 57 ||

೫೩೪) ಮಹರ್ಷಿಃ

ಋಷಿ ಎಂದರೆ ವೇದ ಮಂತ್ರದ ದೃಷ್ಟಾರ. ವೇದ ಮಂತ್ರವನ್ನು ಕಂಡವರು ಋಷಿಗಳು. ಸಮಗ್ರ ವೇದವನ್ನು ಕಂಡ ಋಷಿ ಮಹರ್ಷಿ. ಸಮಸ್ತ ವೇದಗಳನ್ನು ಮೊತ್ತಮೊದಲ ಬಾರಿ ಆವಿಷ್ಕಾರ ಮಾಡಿ ಚತುರ್ಮುಖನಿಗೆ ಉಪದೇಶ ಮಾಡಿದ ಮಹರ್ಷಿ-ಭಗವಂತ. ಶಾಸ್ತ್ರಕಾರರು ಹೇಳುತ್ತಾರೆ-ಯಾವುದಾದರು ಮಂತ್ರ ಜಪ ಮಾಡುವಾಗ ಅಥವಾ ಒಂದು ಸೂಕ್ತ ಹೇಳುವಾಗ ನಮಗೆ ಋಷಿ ಯಾರು ಎಂದು ತಿಳಿದಿಲ್ಲವಾದರೆ ಆಗ 'ಅಸ್ಸ್ಯ ಶ್ರೀ  ಮಹಾಮಂತ್ರಸ್ಸ್ಯ ಹಯಗ್ರೀವ ಋಷಿಃ' ಎಂದು ಹೇಳಿದರೆ ಸಾಕು. ಏಕೆಂದರೆ ಸರ್ವ ವೇದಗಳ ಪ್ರಥಮ ದೃಷ್ಟನಾದ ಭಗವಂತ ಕಾಣದ ಮಂತ್ರವಿಲ್ಲ. ಹೀಗೆ ಮಹತ್ತಾದ ದೊಡ್ಡ ಋಷಿ ಭಗವಂತ ಮಹರ್ಷಿಃ.

ಋಷಿ ಅಂದರೆ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡು ಭಗವಂತನನ್ನು ತಿಳಿದ ಸತ್ಯದರ್ಶಿಗಳು, ಸತ್ಯವಚನರು. ಭಗವಂತನನ್ನು ಪೂರ್ತಿ ತಿಳಿದವವರು ಯಾರೂ ಇಲ್ಲ, ಭಗವಂತನೊಬ್ಬನೇ! ಆದ್ದರಿಂದ ನಿಜವಾದ ಮಹರ್ಷಿ ಭಗವಂತ. ಸರ್ವಜ್ಞನೂ, ಸರ್ವ ವೇದದೃಷ್ಟನೂ ಆದ ಭಗವಂತ ಮಹರ್ಷಿಃ.

೫೩೫) ಕಪಿಲಾಚಾರ್ಯಃ

'ಆಚಾರ' ಎಂದರೆ ಒಳ್ಳೆಯ ನಡತೆ ಉಳ್ಳವರು, ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು ಅದರಂತೆ ನಡೆದು ಇನ್ನೊಬ್ಬರಿಗೆ ದೃಷ್ಟಾಂತವಾಗುವವರು. ಅವತಾರ ರೂಪಿಯಾಗಿ ಬಂದು ಮನುಷ್ಯ ಹೇಗೆ ನಡೆದುಕೊಳ್ಳಬೇಕು ಎಂದು ಕೃತಿಯಲ್ಲಿ ತೋರಿಸಿಕೊಟ್ಟ ಮಹಾ ಆಚಾರ್ಯ ಮರ್ಯಾದಾಪುರುಷ ಶ್ರೀರಾಮ. ದೌರ್ಜನ್ಯದಿಂದ ದೂರವಿರು, ಎಲ್ಲಿ ಪ್ರೀತಿ ಇದೆ ಅಲ್ಲಿ ಪ್ರೀತಿ ತೋರಿಸು, ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಿ ಸಂತೋಷ ಪಡು, ಇನ್ನೊಬ್ಬರ ಕಷ್ಟಕ್ಕೆ ಕರಗು, ಒಳ್ಳೆಯವರ ಸಹವಾಸ ಮಾಡು, ದುಷ್ಟರಿಂದ ದೂರವಿರು. ಈ ಮನೋವೃತ್ತಿ ಅಳವಡಿಸಿಕೊಂಡವರು ನಿಜವಾದ ಆಚಾರ್ಯರು. ಭಗವಂತ ಶ್ರೀರಾಮನಾಗಿ ಬಂದು ಎಲ್ಲವನ್ನೂ ಮಾಡಿತೋರಿಸಿದ.  ಕಪಿಲ ಎಂದರೆ ಕಂ+ಪಾಯನ್+ಲಯ; ಇಡೀ ಪ್ರಪಂಚವನ್ನು ತನ್ನಲ್ಲಿ ಲೀನಗೊಳಿಸುವ ಸರ್ವಸಂಹಾರಕ. ಆನಂದ ರೂಪನಾಗಿ ಲಯಗೊಳಿಸುವವನು. ಕಪಿಲ ಮುನಿಯಾಗಿ ಅವತರಿಸಿದವನು. ಆನಂದವನ್ನು ಪಾನಮಾಡುವವನು ಹಾಗೂ ಈಯುವವನು ಆದ ಲೋಕಗುರು ಭಗವಂತ ಕಪಿಲಾಚಾರ್ಯಃ.

೫೩೬) ಕೃತಜ್ಞಃ

ನಾವು ಹೇಳುವುದುಂಟು, 'ತಾವು ಮಾಡಿದ ಉಪಕಾರಕ್ಕೆ ನಾವು ಕೃತಜ್ಞನಾಗಿದ್ದೇವೆ' ಎಂದು. ಇಲ್ಲಿ ಕೃತಜ್ಞತೆ  ಎಂದರೆ ಇನ್ನೊಬ್ಬರು ಮಾಡಿದ ಸಹಾಯವನ್ನು ಮರೆಯದೆ ತಿಳಿದಿರುವುದು ಅಥವಾ ನೆನಪಿಟ್ಟುಕೊಳ್ಳುವುದು. 'ಕೃತ' ಎಂದರೆ 'ನಡೆದದ್ದು' ನಮಗೋಸ್ಕರ ಪ್ರಪಂಚದಲ್ಲಿ ಪರೋಕ್ಷವಾಗಿ ನಡೆಯುವ ಉಪಕಾರವನ್ನು ತಿಳಿಯುವುದು ಕೃತಜ್ಞತೆ. ಒಬ್ಬ ಮನುಷ್ಯನ ಅಸ್ತಿತ್ವಕ್ಕೆ ಸಾವಿರಾರು ಬಂಧಗಳಿರುತ್ತವೆ ಹಾಗೂ ಋಣಿಗಳಾಗಿ ನಾವು ಬದುಕುತ್ತಿರುತ್ತೇವೆ. ನಮಗಾಗಿ ಈ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ ಎಂದು ನಮಗೇ ತಿಳಿದಿರುವುದಿಲ್ಲ. ಅದನ್ನು ತಿಳಿದಿರುವವನು ಭಗವಂತನೊಬ್ಬನೇ. ಆದ್ದರಿಂದ ಎಲ್ಲವನ್ನೂ ಬಲ್ಲ ಭಗವಂತ ಕೃತಜ್ಞಃ.

೫೩೭) ಮೇದಿನೀಪತಿಃ

ಮೇದಿನೀಪತಿ ಎಂದರೆ ಮೇದಿನಿಗೆ ಒಡೆಯ ಅಥವಾ ಭೂಪತಿ. ಸಾಮಾನ್ಯವಾಗಿ ರಾಜರಿಗೆ ಭೂಪತಿ ಎನ್ನುವುದುಂಟು. ಆದರೆ ನಾವು ಎಂದೂ ಈ ಭೂಮಿಗೆ ಒಡೆಯರಲ್ಲ. ಯಾರು  ಈ ಭೂಮಿಯನ್ನು ಸೃಷ್ಟಿ ಮಾಡಿದನೋ ಅವನು ನಿಜವಾದ ಮೇದಿನೀಪತಿ. ಆದ್ದರಿಂದ ಈ ಭೂಮಿಯನ್ನು ನಿರ್ಮಿಸಿ, ಪಾಲನೆ ಮಾಡುವ ಭಗವಂತ ಮೇದಿನಮಹಾಶೃಂಗಃ

೫೩೮) ತ್ರಿಪದಃ

ಮೂರು  ವಿಶೇಷ ಹೆಜ್ಜೆಯುಳ್ಳವನು, ಓಂಕಾರದ ಮೂರು ಅಕ್ಷರಗಳಿಂದ(ಅ, ಉ, ಮ್), ಈ ಮೂರು ಅಕ್ಷರದಿಂದಾದ  ಮೂರು ಪದಗಳುಳ್ಳ ವ್ಯಾಹೃತಿಯಿಂದ(ಭೂಃ, ಭುವಃ ಸ್ವಃ), ಈ ಪದಗಳಿಂದಾದ ಗಾಯತ್ರಿಯ ಮೂರು ಪಾದಗಳಿಂದ (ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್) ವಾಚ್ಯನಾದ ಭಗವಂತ ತ್ರಿಪದಃ.

೫೩೯) ತ್ರಿದಶಾಧ್ಯಕ್ಷಃ

'ತ್ರಿದಶರು' ಎಂದರೆ ದೇವತೆಗಳು, ದೇವತೆಗಳ, ಸ್ವರ್ಗದ ಹಾಗೂ ಅಲ್ಲಿರುವ ದೇವಾದಿ ದೇವತೆಗಳ ಒಡೆಯ ಭಗವಂತ ತ್ರಿದಶಾಧ್ಯಕ್ಷಃ. ತ್ರಿದಶ ಎಂದರೆ ಮೂರು ಅವಸ್ಥೆಗಳು(ಎಚ್ಚರ-ಕನಸು-ನಿದ್ದೆ); ಇದೇ 'ಓಂ(ಅ, ಉ, ಮ್);'ಅ' ಅಂದರೆ ಆಪ್ತಿ, ಹೊರಗಿನ ಪ್ರಪಂಚದೊಂದಿಗೆ ನಮಗಿರುವ ಸಂಬಂಧ. ಇದಿರುವುದು ಎಚ್ಚರದಲ್ಲಿ ಮಾತ್ರ. 'ಉ' ಅಂದರೆ ಉತ್ಕರ್ಷ, ಹೊರಗಿನ ಪ್ರಪಂಚದ ಸಂಪರ್ಕ ಕಡಿದುಕೊಂಡು, ಒಳ ಪ್ರಪಂಚದಲ್ಲಿ ಕಾಣುವ ಕನಸಿನ ಪ್ರಪಂಚ. 'ಮ್' ಅಂದರೆ ಭಗವಂತನಲ್ಲಿ ಅಂತರ್ಗತನಾಗಿ ಒಳ-ಹೊರ ಪ್ರಪಂಚದ ಅರಿವಿಲ್ಲದೆ, ಇರುವ ನಿದ್ರಾಸ್ಥಿತಿ. ಈ ಮೂರೂ ದಶಗಳಲ್ಲಿ ನಾವು ಸ್ವತಂತ್ರರಲ್ಲ, ಮೂರು ದಶಗಳೊಂದಿಗೆ ನಿರಂತರ ನಮ್ಮನ್ನು ನಡೆಸುವ ಭಗವಂತ ತ್ರಿದಶಾಧ್ಯಕ್ಷಃ.

೫೪೦) ಮಹಾಶೃಂಗಃ

ಮೇಲ್ನೋಟಕ್ಕೆ ಮಹಾಶೃಂಗಃ ಎನ್ನುವುದು ಭಗವಂತನ ಮತ್ಸ್ಯಾವತಾರಕ್ಕೆ ಸಂಬಂಧಪಟ್ಟ ಹೆಸರು. ಮತ್ಸ್ಯ ರೂಪದಲ್ಲಿ ತನ್ನ ಒಂದು ಶೃಂಗಕ್ಕೆ ಭೂಮಿಯನ್ನು ನಾವೆಯಾಗಿ ಕಟ್ಟಿ, ಪ್ರಳಯಜಲದಲ್ಲಿ ವೈವಸ್ವತ ಮನುವನ್ನು ಪಾರು ಮಾಡಿದ ರೂಪ. ಉನ್ನತವಾದ ಶೃಂಗದಿಂದ  ಭೂಮಿಯನ್ನು ಉದ್ದಾರ ಮಾಡಿ ಋಷಿಗಳನ್ನು ಮುಂದಿನ ಮನ್ವಂತರಕ್ಕೆ, ಪ್ರಳಯದ ಆಚೆಗಿನ ಬದುಕು ಕೊಟ್ಟವ.
ಶೃಂಗ ಎಂದರೆ ಪರ್ವತ ಕೂಡಾ ಹೌದು.  ಹಿಮಾಲಯ ಒಂದು ಮಹಾಶೃಂಗ . ಇಂತಹ ಹಿಮಾಲಯದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮಹಾಶೃಂಗಃ.

೫೪೧) ಕೃತಾಂತಕೃತ್

ಎಲ್ಲಾ ಕಾಲದಲ್ಲಿ ಎಲ್ಲಾ ಜನರು ಮಾಡುವ ಅಥವಾ ಮಾಡಿದ ಕರ್ಮ ಕೊನೆಗಾಣಬೇಕಾದರೆ ಭಗವಂತನ ಕೃಪೆ ಬೇಕು."ನಾಹಂ  ಕರ್ತಾ  ಹರಿ  ಕರ್ತಾ" ಎಂಬಂತೆ ಕರ್ಮವನ್ನು ಅವನೇ ನಮ್ಮೊಳಗಿದ್ದು ಮಾಡಿಸುತ್ತಾನೆ. ಇಂತಹ ಭಗವಂತ ಕೃತಾಂತಕೃತ್.

ಯಮನನ್ನು ಸೃಷ್ಟಿ ಮಾಡಿದ ಹಾಗೂ ಕೊನೆಗೆ ಅವನನ್ನೂ ಸಂಹಾರ ಮಾಡುವ ಭಗವಂತ ಎಲ್ಲಾ ಸಂಹಾರ ಶಕ್ತಿಗಳನ್ನು ಮೀರಿ ನಿಂತ ಮಹಾ ಸಂಹಾರ ಶಕ್ತಿ. ಆದ್ದರಿಂದ ಆತ ಕೃತಾಂತಕೃತ್.

ಮುಂದುವರೆಯುವುದು....

No comments:

Post a Comment