Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ-9


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ.


ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ || 9 ||

74) ಈಶ್ವರಃ

ಈಶ್ವರ  ಎಂದರೆ ಜಗತ್ತನ್ನು ನಿಯಂತ್ರಿಸುವ ಎಲ್ಲಾ ಶಕ್ತಿಗಳ ಈಶ ಎಂದರ್ಥ.

75) ವಿಕ್ರಮೀ

ಈ ನಾಮದ ವಿಶ್ಲೇಷಣೆ ಮಾಡಲು ನಾವು ಭಗವಂತನ ವಾಮನ ಅವತಾರದ ಕಥೆಯನ್ನು ಒಮ್ಮೆ ಮೆಲುಕು ಹಾಕಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು  ಹೆಜ್ಜೆ  ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ  ದಾನ ಮಾಡಲು ಮುಂದಾಗುತ್ತಾನೆ . ಆಗ  ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ  ಮತ್ತು  ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು  ಅರ್ಪಿಸಿ ಪಾತಳವನ್ನು ಸೇರಿ ಉದ್ಧಾರವಾಗುತ್ತಾನೆ. ಈ ಕಾರಣಕ್ಕಾಗಿ ಭಗವಂತನನ್ನು  'ತ್ರಿವಿಕ್ರಮ'  ಎನ್ನುತ್ತಾರೆ.

ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಈ ರೀತಿ  ಅರ್ಥೈಸಬಹುದು. ಸಂಸಾರ  ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ   ಪ್ರಮುಖವಾಗಿ ಮೂರು ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾಧಿಸುವುದು, ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ  ತಲೆ ಬಾಗುವುದು.  ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ,  ಹಾಗೂ ಭಗವಂತ    ನಮ್ಮನ್ನು  ಉದ್ಧರಿಸುತ್ತಾನೆ. ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ಧರಿಸುವ ಭಗವಂತ ವಿಕ್ರಮೀ.

76) ಧನ್ವೀ

ಧನ್ವೀ ಎಂದರೆ ಧನುರ್ಧಾರಿ. ಅಂದರೆ  ಧನುಸ್ಸನ್ನು ಕೈಯಲ್ಲಿ ಹಿಡಿದಿರುವವನು. ಇಲ್ಲಿ ಧನುಸ್ಸು ದುಷ್ಟ ನಿಗ್ರಹದ ಸಂಕೇತ. ಧರ್ಮದ ಸಂಸ್ಥಾಪನೆಗಾಗಿ ಕೈಯಲ್ಲಿ ಆಯುಧ ಹಿಡಿದಿರುವ ಭಗವಂತ- ಧನ್ವೀ. ಭಗವಂತನಿಗೆ ಯಾವುದೇ  ವಿಶೇಷ ಆಯುಧದ ಅಗತ್ಯವಿಲ್ಲ. ಇಲ್ಲಿ   ದುಷ್ಕರ್ಮದ ನಾಶಕನಾಗಿರುವ   ಭಗವಂತನನ್ನು  ಧನ್ವೀ ಎನ್ನುತ್ತಾರೆ.

77) ಮೇಧಾವೀ

ಮೇಧಾ ಎಂದರೆ ಸ್ಮರಣಶಕ್ತಿ. ಯಾವುದನ್ನು ಕೇಳುತ್ತೆವೋ, ಯಾವುದನ್ನೂ ಓದುತ್ತೇವೋ, ಅದನ್ನು ಶಾಶ್ವತವಾಗಿ  ಮಸ್ತಕದಲ್ಲಿಟ್ಟುಕೊಳ್ಳುವುದು. ಮನಸ್ಸು ಬಯಸುತ್ತದೆ, ಬುದ್ಧಿ ನಿಶ್ಚಯವಾಗಿ ಗ್ರಹಿಸುತ್ತದೆ, ಚಿತ್ತ ನೆನಪಿಡುತ್ತದೆ. ಗ್ರಹಿಸಿದ ವಿಷಯವನ್ನು ಶಾಶ್ವತವಾಗಿ ನೆನಪಿನಲ್ಲಿಡುವವರು ಮೇಧಾವಿಗಳು. ಭಗವಂತ ಸ್ವತಃ ಮೇಧಾವಿ ಹಾಗೂ ನಮಗೆ  ಚಿತ್ತವನ್ನು  ಕರುಣಿಸುವವ.

78) ವಿಕ್ರಮಃ

ವಿಕ್ರಮ ಎಂದರೆ ಕ್ರಮವಿಲ್ಲದವನು! ಅಂದರೆ ಭಗವಂತನು ಯಾವುದೇ ಕ್ರಮದ ನಿರ್ಭಂಧಕ್ಕೆ ಒಳಗಾಗಿಲ್ಲ. ಅವನು ನಡೆದ ದಾರಿಯೆಲ್ಲವೂ ನಮಗೆ ಕ್ರಮ.

79) ಕ್ರಮಃ

ಮೇಲೆ ಹೇಳಿದಂತೆ ಭಗವಂತ ವಿಕ್ರಮ, ಆತ ನಿರ್ಮಿಸಿರುವ ಈ ಸೃಷ್ಟಿ ಸಂಪೂರ್ಣ ಕ್ರಮಬದ್ಧವಾಗಿದೆ. ಪ್ರತಿಯೊಂದು ಗ್ರಹದ ಚಲನೆ ಗಣಿತಬದ್ಧವಾಗಿದೆ. ಯಾವಾಗ ಗ್ರಹಣವಾಗಿದೆ, ಯಾವಾಗ ಗ್ರಹಣವಾಗುತ್ತದೆ ಎನ್ನುವುದನ್ನು ಕರಾರುವಾಕ್ಕಾಗಿ ಗಣಿತದಿಂದ ತಿಳಿಯಬಹುದು. ಇಂತಹ ಕ್ರಮಬದ್ಧವಾದ ಸೃಷ್ಟಿಯ ಕರ್ತನಾದ ಭಗವಂತ ಕ್ರಮಃ

80) ಅನುತ್ತಮಃ

ಭಗವಂತನ ಹೆಜ್ಜೆ ಆನೆಯ ಹೆಜ್ಜೆಯಂತೆ. ಇತರ ಎಲ್ಲಾ ಹೆಜ್ಜೆಗಳು ಅದರ ವ್ಯಾಪ್ತಿಯ ಒಳಗೆ ಸೀಮಿತ.
ಅನುತ್ತಮ ಎಂದರೆ ಉತ್ತಮರಲ್ಲಿ ಉತ್ತಮ. ಅವನಿಂದ ಉತ್ತಮರು ಯಾರೂ ಇಲ್ಲ. ಅದ್ದರಿಂದ ಆತ ಅನುತ್ತಮ.

81) ದುರಾಧರ್ಷಃ

ಧರ್ಷಣೆಗೆ ನಿಲುಕದೇ ಇರುವುದು ದುರಾಧರ್ಷ. ಭಗವಂತನನ್ನು ನಲುಗಿಸುವುದು, ವಿಚಲಿತಗೊಳಿಸುವುದು ಅಸಾಧ್ಯ. ಆತ ತನ್ನ ಕ್ರಮದಿಂದ, ತನ್ನ ತೀರ್ಮಾನದಿಂದ, ತನ್ನ ಸ್ಥಾನದಿಂದ ವಿಚಲಿತಗೊಳ್ಳಲಾರ. ಇಂತಹ ಭಗವಂತ ದುರಾಧರ್ಷ.

82) ಕೃತಜ್ಞಃ

ಮೇಲಿನ ಕೆಲವು ನಾಮಗಳಲ್ಲಿ ನಾವು ಭಗವಂತನಿಗೆ ಕ್ರಮವಿಲ್ಲ, ಅವನ ಕ್ರಮವನ್ನು ಯಾರೂ ಮೀರಲಾರರು, ಅವನು ಅನುತ್ತಮ, ದುರಾಧರ್ಷ, ಇತ್ಯಾದಿ ಅರ್ಥಗಳನ್ನು ನೋಡಿದೆವು. ಈಗ  ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಭಗವಂತ ಏಕೆ ಪಕ್ಷಪಾತಿ? ಒಬ್ಬ ಬಡವ, ಒಬ್ಬ ಶ್ರೀಮಂತ, ಒಬ್ಬರಿಗೆ ಸುಖ, ಇನ್ನೊಬ್ಬರಿಗೆ ಕಷ್ಟ. ಏಕೆ ಹೀಗೆ? ಈ ಪ್ರಶ್ನೆಗೆ ಉತ್ತರವೇ ಕೃತಜ್ಞ ನಾಮದ ಅರ್ಥ. ಕೃತಜ್ಞ ಎಂದರೆ ಏನನ್ನೂ ಮರೆಯದೆ ಮರಳಿ ಕೊಡುವವನು ಎಂದರ್ಥ. ನಾವು ಏನನ್ನು ಮಾಡಿದ್ದೆವೂ, ಆ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುವ ಭಗವಂತ ಕೃತಜ್ಞ. 

83) ಕೃತಿಃ

ಭಗವಂತನ ಜ್ಞಾನ, ಬಲ, ಕ್ರಿಯೆ ಎಲ್ಲವೂ ಆತನ ಸ್ವರೂಪ. ವಿಶ್ವವನ್ನೆಲ್ಲಾ ನಿರ್ಮಿಸಿದ ಕ್ರಿಯಾಸ್ವರೂಪ ಭಗವಂತ ಕೃತಿ.

84) ಆತ್ಮವಾನ್

ಆತ್ಮದ ಸ್ಥೂಲವಾದ ಅರ್ಥ ಶರೀರ. ಭಗವಂತನಿಗೆ ಮಣ್ಣು, ನೀರು ಮತ್ತು ಬೆಂಕಿಯಿಂದಾದ, ಒಂದು ದಿನ ಬಿದ್ದು ಹೋಗುವ ಶರೀರ ಅಥವಾ  ಆಕಾರವಿಲ್ಲ. ಅವನು ವಿಶ್ವಾಕಾರ. ಆತ ಯಾವ ರೂಪದಲ್ಲಿ ಕೂಡ ಕಾಣಿಸಿಕೊಳ್ಳಬಲ್ಲ. ಜ್ಞಾನ ಆತನ ಸ್ವರೂಪ. ಎಲ್ಲಾ ಆತ್ಮರ ತಂದೆಯಾದ ಭಗವಂತ ಆತ್ಮವಾನ್.

ಮುಂದುವರೆಯುವುದು...

No comments:

Post a Comment