Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಶ್ಲೋಕ - 8


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ 

ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ  |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ  || 8 ||

64) ಈಶಾನಃ

ಈಶ ಎಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು. ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ.

65) ಪ್ರಾಣದಃ

ಪ್ರಾಣ+ದಃ=ಪ್ರಾಣದಃ. ಇಲ್ಲಿ ದಃ ಅನ್ನುವ ಪದಕ್ಕೆ "ಕೊಡುವವನು"  ಮತ್ತು "ಕಸಿದುಕೊಳ್ಳುವವನು"  ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ. ಪ್ರಾಣದಃ  ಅಂದರೆ ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು  ಕೊಟ್ಟು , ಬದುಕಿಗೆ ಬೇಕಾದ ಕಲೆಯನ್ನು ಕೊಡುವವನು; ಕೊನೆಗೆ ಬೌದ್ಧಿಕ ಶರೀರವನ್ನು ಕಸಿದುಕೊಂಡು, ಮುಕ್ತಿಯನ್ನು ದಯಪಾಲಿಸುವವನು ಪ್ರಾಣದಃ.

66) ಪ್ರಾಣಃ

ಪ್ರ+ಆ+ಣ= ಪ್ರಾಣ. ‘ಪ್ರ’ ಎಂದರೆ ಪ್ರಕ್ರುಷ್ಟವಾದ, ದುಃಖ ಸ್ಪರ್ಶವಿಲ್ಲದ, ನಿರ್ದಿಷ್ಟವಾದ. ‘ಆ’ ಎಂದರೆ ಪರಿಪೂರ್ಣನಾದ; ‘ಣ’ ಎಂದರೆ ಅನಂದಮಯನಾದ ಎಂದರ್ಥ. ಆದ್ದರಿಂದ ಭಗವಂತ ಪ್ರಾಣ. ಇನ್ನು ‘ಆಣ’ ಅಂದರೆ ವಾಗ್ದೇವಿ. ಅದ್ದರಿಂದ  ವಾಗ್ದೇವಿಯಲ್ಲಿ ನೆಲೆಸಿ, ಎಲ್ಲಾ ವೇದವಾಣಿಗಳಲ್ಲಿ ಸನ್ನಿಹಿತನಾಗಿದ್ದು , ಜಗತ್ತಿನ ಎಲ್ಲಾ ಚೇಷ್ಟೆಗಳನ್ನೂ ನಿಯಂತ್ರಿಸುವ ಭಗವಂತ ಪ್ರಾಣಃ .

67) ಜ್ಯೇಷ್ಠಃ

ಜ್ಯೇಷ್ಠಃ ಎಂದರೆ ಹಿರಿಯ. ಎಲ್ಲಾ ಪ್ರಾಣ ತತ್ವಗಳನ್ನು ಸೃಷ್ಟಿ ಮಾಡಿ ನಿಯಂತ್ರಿಸುವ ಭಗವಂತ-ಜ್ಯೇಷ್ಠ.

68) ಶ್ರೇಷ್ಠಃ

ಶ್ರೇಷ್ಠತೆ ವಯಸ್ಸಿನಿಂದ ಬರುವುದಲ್ಲ. ಕೆಲವರು ಜ್ಞಾನದಲ್ಲಿ ಶ್ರೇಷ್ಠರು, ಕೆಲವರು ಹಣದಲ್ಲಿ ಶ್ರೇಷ್ಠರು, ಇನ್ನು ಕೆಲವರು ಬಲದಲ್ಲಿ ಶ್ರೇಷ್ಠರು. ಈ ರೀತಿ ಎಲ್ಲಿ  ಭಗವಂತನ ವಿಶಿಷ್ಟವಾದ ತೇಜಸ್ಸಿನ ಸನ್ನಿಧಾನವಿದೆಯೋ  ಅಲ್ಲಿ ಶ್ರೇಷ್ಠತೆ ಇರುತ್ತದೆ. ಇಂತಹ ಶ್ರೇಷ್ಠತೆಯನ್ನು ದಯಪಾಲಿಸುವ ತಂದೆ  ಶ್ರೇಷ್ಠಃ

69) ಪ್ರಜಾಪತಿಃ

ಚತುರ್ಮುಖನಿಗೆ  ಪ್ರಜಾಪತಿ ಎನ್ನುವ ಹೆಸರಿದೆ. ಅಂತಹ ಚತುರ್ಮುಖನೊಳಗಿದ್ದು  ಸಮಸ್ತ ಜೀವಕೋಟಿಯ ಪಾಲನೆ  ಮಾಡುವ ಭಗವಂತ ಪ್ರಜಾಪತಿ.

70) ಹಿರಣ್ಯಗರ್ಭಃ

ಇಲ್ಲಿ ಹಿರಣ್ಯ ಎಂದರೆ ಚಿನ್ನ ಅಥವಾ ಬಂಗಾರ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಹಿಂದೆ ಬ್ರಹ್ಮಾಂಡವನ್ನು ಕಮಲ ರೂಪದ ಬ್ರಹ್ಮನ ಮೊಟ್ಟೆ ಎಂದು ವರ್ಣಿಸಿರುವುದನ್ನು ನೋಡಿದ್ದೇವೆ.  ಈ ಬ್ರಹ್ಮಾಂಡ ಭಗವಂತನ  ಉದರದಿಂದ  ನಿರ್ಮಾಣವಾಯಿತು  ಎನ್ನುವುದನ್ನು  "ನಾಭಿ-ಕಮಲ"  ರೂಪದಲ್ಲಿ ಕಲ್ಪಿಸಲಾಗಿದೆ.

ಕವಿಯ  ಕಲ್ಪನೆಯಂತೆ, ಈ ಬ್ರಹ್ಮಾಂಡವನ್ನು ದೂರದಲ್ಲಿ ನಿಂತು ನೋಡಿದರೆ - ನೂರು ಸೂರ್ಯರು ಒಮ್ಮೆಲೇ ಉದಯಿಸಿದರೆ ಹೇಗೆ ಕಾಣಬಹುದೋ ಹಾಗೆ ಚಿನ್ನದ ಮೊಟ್ಟೆಯಂತೆ ಕಾಣಬಹುದು. ಇಂತಹ ಅಪೂರ್ವವಾದ ಸೃಷ್ಟಿಯನ್ನು ತನ್ನ ಉದರಲ್ಲಿ ದರಿಸಿರುವವನು ಹಿರಣ್ಯಗರ್ಭ.

71) ಭೂಗರ್ಭಃ

ಇಲ್ಲಿ ಭೂ  ಎಂದರೆ ಪ್ರಕೃತಿ ಹಾಗೂ ಭೂಮಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ  ಪ್ರಕೃತಿಯನ್ನು ಹಾಗೂ ಅದರ ಒಂದು ಭಾಗವಾದ ಭೂಮಿಯನ್ನು ತನ್ನ ಒಡಲಲ್ಲಿ ಹೊತ್ತವನು ಭೂಗರ್ಭ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಸಂಕರ್ಷಣ ಶಕ್ತಿ ಎನ್ನುತ್ತಾರೆ. ಸಂಕರ್ಷಣ ಆದಿಶೇಷನ ಅನ್ವರ್ಥ ನಾಮ. ಸಂಕರ್ಷಣನೊಳಗಿರುವ ಭಗವಂತ ಈ ಭೂಮಿಯನ್ನು ನಿಯಮಬದ್ಧವಾಗಿ ಹಿಡಿದಿಟ್ಟು ಕಾಪಾಡುತ್ತಿದ್ದಾನೆ. ಈ ಭೂಮಿಯ ಸೃಷ್ಟಿಕರ್ತ ಹಾಗೂ ಸಂರಕ್ಷಕನಾದ ಭಗವಂತ ಭೂಗರ್ಭ.

72) ಮಾಧವಃ

'ಮಾ' ಎಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಎಂದರೆ ಲಕ್ಷ್ಮೀಪತಿ ಭಗವಂತ. ಇನ್ನು 'ಮಾ' ಎಂದರೆ ಜ್ಞಾನ ಕೂಡ ಹೌದು.  ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾಧವ. ಶ್ರೀಕೃಷ್ಣ ಅವತಾರದಲ್ಲಿ ಭಗವಂತ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದೂ ಕರೆಯುತ್ತಾರೆ. ವೇದದಲ್ಲಿ  ಮಾತೃ ಎನ್ನುವ  ಪದವನ್ನು ಮಾತು ಅಥವಾ ವಾಙ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ.  ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ , ರಾಮಾಯಣ, ಮಹಾಭಾರತ ಹಾಗೂ ಪುರಾಣಗಳನ್ನು ಮಾತೃ ಎನ್ನುತ್ತಾರೆ. ಅದ್ದರಿಂದ ಸಮಸ್ತ  ವೈದಿಕ  ವಾಙ್ಮಯ  ಪ್ರತಿಪಾದ್ಯನಾದ  ಭಗವಂತ ಮಾಧವ.

73) ಮಧುಸೂದನಃ

ಮಧು ಎಂದರೆ ಕಾಮ (Sex), ಬಯಕೆ (Desire), ಆನಂದ (Ultimate bliss) ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ. ಕಾಮ(ಮಧು)ವೇ ಕ್ರೋಧ(ಕೈತಪ)ಕ್ಕೆ ಕಾರಣ. ಈ ಮಧು-ಕೈತಪರು  ನಮ್ಮೊಳಗಿದ್ದು ನಮ್ಮೆಲ್ಲ ಕಷ್ಟ-ಕಾರ್ಪಣ್ಯಕ್ಕೆ ಮೂಲ ಕಾರಣಕರ್ತರಾಗಿದ್ದಾರೆ. ಈ ಮಧು-ಕೈತಪರಿಂದ  ನಮಗೆ  ಮುಕ್ತಿ  ದೊರೆಯಬೇಕಿದ್ದರೆ  ನಾವು ಭಗವಂತನ ಮೊರೆ ಹೋಗಬೇಕು. ಆತನೊಬ್ಬನೇ ಈ ಮಧುವನ್ನು ಸೂದಿಸಬಲ್ಲ (ನಾಶಮಾಡಬಲ್ಲ) .  ಇಂತಹ ಭಗವಂತ ಮಧುಸೂದನ.

ಇನ್ನು ಮಧು ಎಂದರೆ  ಆನಂದ ಎನ್ನುವ ಅರ್ಥವನ್ನು ವಿಶ್ಲೇಷಿಸಿದಾಗ, ಮಧುಸೂದನ ಎಂದರೆ  ಆನಂದ ನಾಶಕ ಎಂದಾಗುತ್ತದೆ! ಇದೇನಿದು -ಆನಂದ ಸ್ವರೂಪನಾದ ಭಗವಂತ ಆನಂದ ನಾಶಕ ಅನ್ನುತ್ತಾರಲ್ಲಪ್ಪಾ ಎಂದು ಗಾಬರಿಯಾಗಬೇಡಿ!  ಧರ್ಮ ಮಾರ್ಗವನ್ನು ಬಿಟ್ಟು, ಅಧರ್ಮಿಯಾಗಿ, ಮದ(ಆಹಂಕಾರ)ದಿಂದ  ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ ಮಾಡುವ ಆನಂದರೂಪಿ ಭಗವಂತ ಮಧುಸೂದನ.

ಮುಂದುವರೆಯುವುದು....

No comments:

Post a Comment